ಬಳ್ಳಾರಿ

ಆಸ್ಪತ್ರೆ ಸುತ್ತ ಕೊಳಚೆ ನೀರು: ಜನತೆಯಿಂದ ಹಿಡಿಶಾಪ

Published On :

ಕೂಡ್ಲಿಗಿ: ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಶುಕ್ರವಾರ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಮಾಧವರಾವ್ ಪಾಟೀಲ್ ಭೇಟಿ ಮಾಸಿಕ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.
ಆದರೆ ಜಿಲ್ಲಾ ಆರೋಗ್ಯಾಧಿಕಾರಿ ಬರುತ್ತಾರೆಂದು ಗೊತ್ತಿದ್ದರೂ ಸಭೆ ನಡೆಸುವ ಕೊಠಡಿ ಪಕ್ಕದಲ್ಲೇ ದುರ್ವಾಸನೆ ಬೀರುವ ಕೊಚ್ಚೆ ನೀರನ್ನು ಸ್ವಚ್ಛ ಮಾಡಲು ಮುಂದಾಗಿಲ್ಲ ಎಂದರೆ ಹಿರಿಯ ಅಧಿಕಾರಿಗಳ ಭಯ ಇಲ್ಲದೆ ಸಿಬ್ಬಂದಿ ಕೆಲಸ ಮಾಡುತ್ತಾರೆ ಎಂಬುದು ಕಣ್ಣಿಗೆ ಕಟ್ಟುವಂತಿತ್ತು.
ಕಾಳಜಿ ಅಣಕಿಸಿತು: ಸಿಬ್ಬಂದಿ ಸಭೆಯಲ್ಲಿ ಕೇವಲ ಅಂಕಿ, ಅಂಶಗಳನ್ನು ಲೆಕ್ಕಹಾಕಿ ಸಭೆ ಮುಗಿಸಿದರೆ ವಿನಃ ಆಸ್ಪತ್ರೆಯ ದುರ್ನಾತ ಬೀರುವ ದೃಶ್ಯ ಮಾತ್ರ ಡಿಎಚ್‌ಒ ಕಣ್ಣಿಗೆ ಬೀಳದಿರುವುದು ಆಡಳಿತ ವೈಖರಿಗೆ ಹಿಡಿದ ಕನ್ನಡಿಯಂತಿತ್ತು. ಸಭೆ ನಂತರ ಆಸ್ಪತ್ರೆ ಅವ್ಯವಸ್ಥೆ, ಸ್ವಚ್ಛತೆ ಮರೀಚಿಕೆ ಮತ್ತು ವೈದ್ಯರ ಕೊರತೆ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಸರಿಪಡಿಸುತ್ತೇನೆ ಎಂದರು. ಇತ್ತ  ಕೊಠಡಿ ಒಳಗೆ ಸಭೆ ನಡೆಯುತ್ತಿದ್ದರೆ ಅತ್ತ ಕೊಠಡಿ ಹೊರಗೆ ಆವರಣದಲ್ಲಿ ನಾಲ್ಕಾರು ಕಡೆ ಕೊಚ್ಚೆ ನೀರಿನಲ್ಲಿ ಹಂದಿಗಳು ಮಾತ್ರ ಮೂತಿ ಇಟ್ಟು ಹೊರಳಾಡುತ್ತಿರುವ ದೃಶ್ಯ ಸ್ವಚ್ಛತೆಯ ಕಾಳಜಿ ಅಣಕಿಸುವಂತಿತ್ತು.
ಕೊಚ್ಚೆ ನೀರಿನ ಪಕ್ಕದಲ್ಲಿ ರೋಗಿಗಳು ಬಿಸಿಲಿನಲ್ಲೇ ಊಟ ಮಾಡುತ್ತಿದ್ದ ದೃಶ್ಯವಂತೂ ನಿತ್ಯ  ಮರುಕ ಹುಟ್ಟಿಸುತ್ತದೆ. ಆಸ್ಪತ್ರೆ ಸುತ್ತಮುತ್ತಲ ಪ್ರದೇಶ ಕಲುಷಿತಗೊಂಡಿದ್ದರಿಂದ ಆಸ್ಪತ್ರೆಯಲ್ಲಿ ಸೊಳ್ಳೆಗಳು, ಕ್ರಿಮಿಕೀಟಗಳಿಂದ ರೋಗಗಳ ತಾಣವಾಗಿದ್ದರೂ ಹಿರಿಯ ಆರೋಗ್ಯ ಅಧಿಕಾರಿಗಳಿಗೆ ಇದು ಕಾಣಿಸುತ್ತಿಲ್ಲವೇ ಎಂದು ಸಿಪಿಎಂನ ಎಚ್. ವೀರಣ್ಣ ಡಿಎಚ್‌ಒರನ್ನು ಪ್ರಶ್ನಿಸಿದರು.
ವೈದ್ಯರ ನೇಮಕ: ತಾಲೂಕಿನ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಕಾಡುತ್ತಿದೆಯಲ್ಲಾ ಎಂದು ವೀರಣ್ಣ ಕೇಳಿದಾಗ,   ಗುತ್ತಿಗೆ ಆಧಾರದಲ್ಲಿ ವೈದ್ಯರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಹಲವು ಆಸ್ಪತ್ರೆಗಳಲ್ಲಿ ವೈದ್ಯರನ್ನು ಈಗಾಗಲೆ ನೇಮಿಸಿ ಸಾರ್ವಜನಿಕರ ಆರೋಗ್ಯ ಸೇವೆಗೆ ಮುಂದಾಗಿದ್ದಾರೆ. ವೈದ್ಯ ಶಿಕ್ಷಣ ಪೂರೈಸಿದ ಯಾರೇ ಅರ್ಜಿ ಹಾಕಲಿ, ಇಲ್ಲವೆ ನೇರವಾಗಿ ಬಂದರೂ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗುವುದು ಎಂದರು.
ಸ್ವಚ್ಛತೆ ಯಾಕೆ ಇಲ್ಲ ಎನ್ನುವ ಪ್ರಶ್ನೆಗೆ, ನೈರ್ಮಲ್ಯ ಇಲ್ಲದ ಆಸ್ಪತ್ರೆಗಳಲ್ಲಿ ಅಲ್ಲಿನ ಸಿಬ್ಬಂದಿ ಮೂಲಕ ಸ್ವಚ್ಛತೆ ಕಾಪಾಡುವಂತೆ ಎಲ್ಲ ತಾಲೂಕು ವೈದ್ಯಾಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ತಿಳಿಸಿದರು.
ತಾಲೂಕು ಆರೋಗ್ಯಾಧಿಕಾರಿ ಡಾ. ವಿನಯ್, ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಬಸವರಾಜ್, ಡಿಪಿಎಂ ಅಧಿಕಾರಿ ನಿಂಗಪ್ಪ, ತಾಲೂಕಿನ ಎಲ್ಲಾ ವೈದ್ಯಾಧಿಕಾರಿಗಳು, ಹಿರಿ, ಕಿರಿಯ ಆರೋಗ್ಯ ಸಹಾಯಕರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.