ಬಳ್ಳಾರಿ

ವೈ. ಕಗ್ಗಲ್ ಏತನೀರಾವರಿಗೆ ಕಾಯಕಲ್ಪ

Published On :

ಕನ್ನಡಪ್ರಭ ವಾರ್ತೆ, ಬಳ್ಳಾರಿ, ಅ. 1
ಬಳ್ಳಾರಿ ತಾಲೂಕಿನ ವೈ. ಕಗ್ಗಲ್ ಏತನೀರಾವರಿ ಯೋಜನೆಗಿರುವ ತಾಂತ್ರಿಕ ಸಮಸ್ಯೆ ಕುರಿತು ರಾಜ್ಯ ನೀರಾವರಿ ತಾಂತ್ರಿಕ ಸಮಿತಿ ಸಭೆಯಲ್ಲಿ ಚರ್ಚೆ ನಡೆದಿದ್ದು, ಸಮಸ್ಯೆಗೆ ಇತಿಶ್ರೀ ಹಾಡಿ, ಯೋಜನೆಗೆ ಹಸಿರು ನಿಶಾನೆ ತೋರಿಸಿರುವುದು 16 ವರ್ಷಗಳಿಂದ ನೆನಗುದಿಗೆ ಬಿದ್ದಿರುವ ಯೋಜನೆಗೆ ಕಾಯಕಲ್ಪ ಒದಗಿಸಿದಂತಾಗಿದೆ.
16 ವರ್ಷಗಳ ಹಿಂದೆ ಕಾಮಗಾರಿ ಆರಂಭವಾಗಿದ್ದರೂ ಒಂದಲ್ಲ ಒಂದು ಕಾರಣದಿಂದ ಸ್ಥಗಿತಗೊಳ್ಳುತ್ತಿತ್ತು. ಯಾವೊಂದು ರಾಜಕೀಯ ಪಕ್ಷಗಳೂ ಯೋಜನೆ ಪೂರ್ಣಗೊಳಿಸಲು ಆಸಕ್ತಿ ತೋರಿದ್ದಿಲ್ಲ. ಇದೀಗ ಯೋಜನೆ ಅನುಷ್ಠಾನಕ್ಕೆ ತಾಂತ್ರಿಕ ಸಮಿತಿ ತನ್ನ ಒಪ್ಪಿಗೆ ಸೂಚಿಸಿ, 0.63 ಟಿಎಂಸಿ ನೀರನ್ನು ನಿಗದಿ ಮಾಡಿರುವುದು ಈ ಭಾಗದ ರೈತರ ಸಂತಸಕ್ಕೆ ಕಾರಣವಾಗಿದೆ.
ನೀರಾವರಿ ಕನಸು: ಬಳ್ಳಾರಿ ತಾಲೂಕಿನ ವೈ. ಕಗ್ಗಲ್ ಗ್ರಾಮದಲ್ಲಿರುವ ಏತನೀರಾವರಿ ಯೋಜನೆಗೆ  ಫೆ. 14, 1997ರಂದು ನಡೆದ ತಂತ್ರಿಕ ಸಲಹಾ ಸಮಿತಿ ಸಭೆ ಒಪ್ಪಿಗೆ ಸೂಚಿಸಿತ್ತು. 2003ರಲ್ಲಿ ಇದಕ್ಕಾಗಿ ರು. 13 ಕೋಟಿ ತಾಂತ್ರಿಕ ಆಡಳಿತಾತ್ಮಕ ಅನುಮೋದನೆ ನೀಡಿತ್ತು. ವೈ. ಕಗ್ಗಲ್ ಬಳಿ ಇರುವ ಹಗರಿ (ವೇದಾವತಿ) ನದಿಯಿಂದ 60 ಕ್ಯುಸೆಕ್ ನೀರನ್ನು ಪಂಪ್ ಮೂಲಕ ಎತ್ತಿ ತಾಲೂಕಿನ ಲಿಂಗದೇವನಹಳ್ಳಿ, ಯಾಳ್ಪಿ, ಚೇಳ್ಳಗುರ್ಕಿ, ವೈ. ಕಗ್ಗಲ್, ಪರಮದೇವಹನಳ್ಳಿ, ಜೋಳದರಾಶಿ ಗ್ರಾಮಗಳ ಮೂಲಕ ತಂದು ಸುಮಾರು 6,643 ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ ಉದ್ದೇಶವನ್ನು ಯೋಜನೆ ಹೊಂದಿತ್ತು. ಆದರೆ ಯೋಜನೆ ನಿಗದಿ ಅವಧಿಯಲ್ಲಿ ಪೂರ್ಣಗೊಳ್ಳದೆ, ರೈತರ ಆಸೆಯನ್ನು ಹುಸಿಗೊಳಿಸಿತ್ತು.
ಸೆ. 23ರ ಸಭೆಯಲ್ಲಿ ಒಪ್ಪಿಗೆ: ಅಂತು, ಇಂತು ಬಳ್ಳಾರಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸಿದ ನೀರಾವರಿ ತಜ್ಞ ರುದ್ರಸ್ವಾಮಿ ಅವರು ನೀರಾವರಿ ತಾಂತ್ರಿಕ ಸಲಹಾ ಸಮಿತಿ ಸದಸ್ಯರಾಗಿ ಆಯ್ಕೆಯಾಗಿದ್ದರ ಫಲವಾಗಿ ಯೋಜನೆ ಕಾರ್ಯಗತವಾಗಿದೆ ಎಂದರೂ ತಪ್ಪಾಗಲಿಕ್ಕಿಲ್ಲ. ಹಲವು ದಶಕಗಳ ಅನಂತರ ಈ ಭಾಗದಲ್ಲಿ ಕೆಲಸ ನಿರ್ವಹಿಸಿದ ನಿವೃತ್ತ ಅಧಿಕಾರಿಗಳ ಸಮಿತಿಗೆ ಸದಸ್ಯರಾಗಿ ಅವರು ಆಯ್ಕೆಯಾಗಿದ್ದಾರೆ. ಸೆ.  23ರಂದು ಬೆಂಗಳೂರಿನಲ್ಲಿ ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ದೇಸಾಯಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ರುದ್ರಸ್ವಾಮಿ ಅವರು, ವೈ. ಕಗ್ಗಲ್ ಏತನೀರಾವರಿ ಯೋಜನೆ ಕುರಿತು ಗಮನ ಸೆಳೆದಿದ್ದಾರೆ. ನೆನೆಗುದಿಗೆ ಬಿದ್ದಿರುವ ಯೋಜನೆ ಕುರಿತು ಸಮಿತಿ ಸಭೆಯಲ್ಲಿ ಚರ್ಚಿಸಿ, ಯೋಜನೆಗೆ ತಾಂತ್ರಿಕ ಸಮಸ್ಯೆಗಳನ್ನು ಚರ್ಚಿಸಿ, ಸಮಿತಿ ಹಸಿರು ನಿಶಾನೆ ತೋರಿಸಿದೆ. ಈ ಮೂಲಕ ಯೋಜನೆ ಪೂರ್ಣಗೊಳಿಸುವ ನಿರೀಕ್ಷೆ ಹೆಚ್ಚಿಸಿದೆ.
ಹೆಚ್ಚಿದ ಯೋಜನಾ ವೆಚ್ಚ: 1997ರಲ್ಲಿ ಯೋಜನೆಗೆ ಒಪ್ಪಿಗೆ ನೀಡಿ, ಆರಂಭದಲ್ಲಿ ರು. 1300 ಲಕ್ಷ ನಿಗದಿಯಾಗಿತ್ತು. ಆದರೆ ವರ್ಷದಿಂದ ವರ್ಷಕ್ಕೆ ಯೋಜನೆಯ ವೆಚ್ಚ ಹೆಚ್ಚುತ್ತಾ ಬಂದಿದ್ದು, ಇದೀಗ ರು. 63.24 ಕೋಟಿಗೆ ಬಂದು ನಿಂತಿದೆ. ಇನ್ನೇನು ಯೋಜನೆ ಕಾರ್ಯಗತಗೊಳ್ಳುವುದು ಕಷ್ಟಸಾಧ್ಯ ಎಂದು ತಿಳಿದಾಗ, ಇದೀಗ ನೀರಾವರಿ ಸಲಹಾ ಸಮಿತಿ ಕೃಷ್ಣಾ ಬಿ ಸ್ಕೀಮ್ ಅಡಿಯಲ್ಲಿ ಏತನೀರಾವರಿಗೆ 0.63 ಟಿಎಂಸಿ ನೀರು ಹಂಚಿಕೆ ಮಾಡಲು ನಿರ್ಧರಿಸುವುದರಿಂದ ತಾಂತ್ರಿಕವಾಗಿ ಯೋಜನೆಗೆ ಚಾಲನೆ ಸಿಕ್ಕಿದೆ. ಈ ನಿಟ್ಟಿನಲ್ಲಿ ಕಾಮಗಾರಿ ಆರಂಭವಾಗಬೇಕಾಗಿದೆ ಅಷ್ಟೆ. ರಾಜಕೀಯ ಜನಪ್ರತಿನಿಧಿಗಳು ಆಸಕ್ತಿವಹಿಸಿದ್ದೆಯಾದಲ್ಲಿ ಶೀಘ್ರದಲ್ಲಿಯೇ ಯೋಜನೆ ಪೂರ್ಣಗೊಳಲು ಸಾಧ್ಯ ಎಂಬುದು ತಜ್ಞರ ಮಾತು.
ಯೋಜನೆ ಶೀಘ್ರ ಪೂರ್ಣಗೊಳಿಸುವುದು ಅಗತ್ಯ: ಪ್ರಗತಿಪರ ರೈತ ವೈ.ಎಸ್. ಎರ್ರೆಣ್ಣ ಅವರು 'ಕನ್ನಡಪ್ರಭ'ದೊಂದಿಗೆ ಮಾತನಾಡಿ, ನೆನಗುದಿಗೆ ಬಿದ್ದಿದ್ದ ವೈ. ಕಗ್ಗಲ್ ಏತನೀರಾವರಿ ಯೋಜನೆಗೆ ನೀರಾವರಿ ತಾಂತ್ರಿಕ ಸಮಿತಿ ನೀರು ಹಂಚಿಕೆ ಮಾಡಲು ಸೇರಿದಂತೆ ಇತರ ವಿಷಯಗಳಿಗೆ ಇರುವ ತಾಂತ್ರಿಕ ಸಮಸ್ಯೆ ನಿವಾರಿಸಿರುವುದು ಈ ಭಾಗದ ರೈತರ ಸಂತೋಷಕ್ಕೆ ಕಾರಣವಾಗಿದೆ. ಜಿಲ್ಲೆಯಲ್ಲಿ ತುಂಗಭದ್ರಾ ಜಲಾಶಯವಿದ್ದರೂ, ಕೆಲ ಗ್ರಾಮಗಳಿಗೆ ನೀರಾವರಿ ಸೌಲಭ್ಯ ಇರಲಿಲ್ಲ. ಇದೀಗ ಈ ಏತನೀರಾವರಿ ಮೂಲಕ ನೀರಾವರಿ ಕನಸು ಕಂಡ ರೈತರು, ನನಸಾಗುತ್ತಿರುವುದು ಸಂತೋಷ. ಇದಕ್ಕೆ ಕಾರಣೀಭೂತರಾದ ಸಮಿತಿ ಸದಸ್ಯ ರುದ್ರಸ್ವಾಮಿ, ಜನಪ್ರತಿನಿಧಿಗಳಿಗೆ ಧನ್ಯವಾದ ಸಲ್ಲಿಸುತ್ತೇವೆ. ಆದಷ್ಟು ಬೇಗನೆ ಯೋಜನೆ ಪೂರ್ಣಗೊಳಿಸುವುದಕ್ಕೆ ಆಸಕ್ತಿ ತೋರಬೇಕಾಗಿದೆ ಎನ್ನುತ್ತಾರೆ.
ಎರಡು ಹಂತದಲ್ಲಿ ಕಾರ್ಯಗತ: ಎರಡು ಹಂತಗಳಲ್ಲಿ ಯೋಜನೆ ಪೂರ್ಣಗೊಳ್ಳಲಿದ್ದು, ಮೊದಲನೆ ಹಂತದಲ್ಲಿ ಪರಮದೇವನಹಳ್ಳಿ, ಲಿಂಗದೇವನಹಳ್ಳಿ, ಯಾಳ್ಪಿ, ವೈ. ಕಗ್ಗಲ್ ಗ್ರಾಮದ 3,091.90 ಎಕರೆ ಪ್ರದೇಶಕ್ಕೆ ಯೋಜನೆ ಮೂಲಕ ನೀರಾವರಿ ಸೌಲಭ್ಯ ಕಲ್ಪಿಸುವ ಉದ್ದೇಶವಿದೆ. ಎರಡನೇ ಹಂತದಲ್ಲಿ ಚೇಳ್ಳಗುರ್ಕಿ, ಜೋಳದರಾಶಿ ಗ್ರಾಮಗಳ 3,551.10 ಎಕರೆ ಪ್ರದೇಶದಲ್ಲಿ ನೀರಾವರಿ ಸೌಲಭ್ಯವಾಗಲಿದೆ. 2 ವರ್ಷಗಳಲ್ಲಿ ಯೋಜನೆ ಪೂರ್ಣವಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳ ಮೂಲಗಳು ತಿಳಿಸಿವೆ.
ವೈ. ಕಗ್ಗಲ್ ಏತನೀರಾವರಿ ಯೋಜನೆಗೆ ಸಂಬಂಧಿಸಿದಂತೆ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಚರ್ಚೆಯಾಗಿದ್ದು, ನೀರಿನ ಹಂಚಿಕೆ ಕುರಿತು ನಿರ್ಧರಿಸಲಾಗಿದೆ. ಶೀಘ್ರದಲ್ಲೇ ಈ ಯೋಜನೆ ಕಾರ್ಯಾಗತವಾಗಲಿದೆ. ಆ ಮೂಲಕ ರೈತರ ಒಣ ಭೂಮಿಗೆ ನೀರೊದಗಲಿದೆ.
- ರುದ್ರಸ್ವಾಮಿ, ನೀರಾವರಿ ಸಲಹಾ ಸಮಿತಿ ಸದಸ್ಯ

 ಎರಡು ಹಂತ...
ಎರಡು ಹಂತಗಳಲ್ಲಿ ಯೋಜನೆ ಪೂರ್ಣಗೊಳ್ಳಲಿದ್ದು, ಮೊದಲನೆ ಹಂತದಲ್ಲಿ ಪರಮದೇವನಹಳ್ಳಿ, ಲಿಂಗದೇವನಹಳ್ಳಿ, ಯಾಳ್ಪಿ, ವೈ. ಕಗ್ಗಲ್ ಗ್ರಾಮದ 3,091.90 ಎಕರೆ ಪ್ರದೇಶಕ್ಕೆ ಯೋಜನೆ ಮೂಲಕ ನೀರಾವರಿ ಸೌಲಭ್ಯ ಕಲ್ಪಿಸುವ ಉದ್ದೇಶವಿದೆ. ಎರಡನೇ ಹಂತದಲ್ಲಿ ಚೇಳ್ಳಗುರ್ಕಿ, ಜೋಳದರಾಶಿ ಗ್ರಾಮಗಳ 3,551.10 ಎಕರೆ ಪ್ರದೇಶದಲ್ಲಿ ನೀರಾವರಿ ಸೌಲಭ್ಯವಾಗಲಿದೆ. 2 ವರ್ಷಗಳಲ್ಲಿ ಯೋಜನೆಯ ಪೂರ್ಣವಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.


-ಶಶಿಧರ ಮೇಟಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.