ಬಳ್ಳಾರಿ

ನಕಲಿ ಚಿನ್ನ ಮಾರಾಟ: 15 ತಿಂಗಳು ಜೈಲು

Published On :

ಹೂವಿನಹಡಗಲಿ: ಹಣ ಪಡೆದು ನಕಲಿ ಬಂಗಾರ ನೀಡಿ ಮೋಸ ಮಾಡಿರುವ ಆರೋಪಿ ಪೀರ್ಯಾನಾಯ್ಕ ಎಂಬುವವರಿಗೆ ಇಲ್ಲಿನ ಸಿವಿಲ್ ನ್ಯಾಯಾಲಯ 15 ತಿಂಗಳ ಜೈಲು ಶಿಕ್ಷೆ ಹಾಗೂ ರು. 2 ಸಾವಿರ ದಂಡ ವಿಧಿಸಿದೆ. ನರಸಿಂಹ ಪೈ ಎಂಬುವವರಿಗೆ ಪೀರ್ಯಾ ನಾಯ್ಕ ಅಸಲಿ ಬಂಗಾರವೆಂದು ನಂಬಿಸಿ, ಅವರಿಂದ ಹಣ ಪಡೆದು ನಕಲಿ ಬಂಗಾರ ನೀಡಿ ಮೋಸ ಮಾಡಿದ್ದಾನೆ ಎಂದು ತಾಲೂಕಿನ ಹಿರೇಹಡಗಲಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೀರ್ಯಾನಾಯ್ಕ ವಿರುದ್ಧ ಆರೋಪ ಸಾಬೀತಾಗಿರುವುದರಿಂದ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶ ಸುದೇಶ ರಾಜಾರಾಮ ಪರದೇಶಿ ಶಿಕ್ಷೆ ವಿಧಿಸಿದ್ದಾರೆ. ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ಜಗದೀಶ ಬಿಸಿರೊಟ್ಟಿ ವಾದ ಮಂಡಿಸಿದ್ದರು.
ಮನೆ ಬೀಗ ಮುರಿದು ಕಳ್ಳತನ
ಹೊಸಪೇಟೆ: ಮನೆಯ ಬೀಗ ಮುರಿದು ಮನೆಯಲ್ಲಿದ್ದ 4 ತೊಲೆ ಬಂಗಾರದ ಆಭರಣಗಳನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗಿರುವ ಘಟನೆ ತಾಲೂಕಿನ ಮರಿಯಮ್ಮನಹಳ್ಳಿ ಹೋಬಳಿಯ ಗಾಳೆಮ್ಮನಗುಡಿ ಗ್ರಾಮದಲ್ಲಿ ನಡೆದಿದೆ. ಗಾಳೆಮ್ಮನಗುಡಿ ನಿವಾಸಿ ವಿರೂಪಾಕ್ಷಿ ಎಂಬುವವರ ಮನೆಯಲ್ಲಿ ಸುಮಾರು ರು. 50 ಸಾವಿರ ಮೌಲ್ಯದ 4 ತೊಲೆ ಬಂಗಾರದ ಆಭರಣಗಳನ್ನು ಕಳ್ಳತನ ಮಾಡಲಾಗಿದೆ.
ಅಪರಿಚಿತ ಶವ ಪತ್ತೆ
ಬಳ್ಳಾರಿ: ಬಳ್ಳಾರಿಯ ಕುರುಗೋಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೊಟ್ಟಾಲ ಗ್ರಾಮದ ಮುಖ್ಯರಸ್ತೆಯಲ್ಲಿರುವ ಬಸ್ ನಿಲ್ದಾಣದ ಕಟ್ಟಡದ ಒಳಗಡೆ ಅ. 2ರಂದು ಅಪರಿಚಿತ ವೃದ್ದನೋಬ್ಬನ ಶವ ಪತ್ತೆಯಾಗಿದೆ.
ಮೃತನು ಅಂದಾಜು 55ರಿಂದ 60 ವರ್ಷ ವಯಸ್ಸುಳ್ಳವನಾಗಿದ್ದು, 5.8 ಅಡಿ ಎತ್ತರ, ತೆಳುವಾದ ಮೈಕಟ್ಟು, ಕಪ್ಪು ಮೈ ಬಣ್ಣ, ಮೈಮೇಲೆ ಕೆಂಪು ಬಣ್ಣದ ಕಾವಿ ಧರಿಸಿದ್ದಾನೆ.
ಈ ಬಗ್ಗೆ ಯಾರಿಗಾದರೂ ಮಾಹಿತಿ ದೊರೆತಲ್ಲಿ ಕೂಡಲೇ ಕುರುಗೋಡು ಪೊಲೀಸ್ ಠಾಣೆ ದೂ: 08392-263433, ಮೊ: 9480803051-9480803033ಗೆ ಸಂಪರ್ಕಿಸಬಹುದೆಂದು ಠಾಣೆಯ ಆರಕ್ಷಕ ಉಪ ನಿರೀಕ್ಷಕರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
ಇಂದು ನಾಟಕ ಪ್ರದರ್ಶನ
ಹೊಸಪೇಟೆ: ಕರ್ನಾಟಕ ಕಲಾಭಿಮಾನಿ ಸಂಘ ಹಾಗೂ ಬಳ್ಳಾರಿಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ನಗರದಲ್ಲಿ ತಿಂಗಳ ಕಾಲ ಹಮ್ಮಿಕೊಂಡಿದ್ದ ಮಕ್ಕಳ ನಾಟಕ ತರಬೇತಿ ಶಿಬಿರ ಸಮಾರೋಪ ಹಾಗೂ ನಾಟಕ ಪ್ರದರ್ಶನ ಕಾರ್ಯಕ್ರಮವು ನಗರದ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಅ. 5ರಂದು ಸಂಜೆ 7ಕ್ಕೆ ನಡೆಯಲಿದೆ. ಸಮಾಜ ಸೇವಕ ಹಾಗೂ ಕಾಂಗ್ರೆಸ್ ಮುಖಂಡ ದೀಪಕ್ ಕುಮಾರ್ ಸಿಂಗ್ ಕಾರ್ಯಕ್ರಮ ಉದ್ಘಾಟಿಸುವರು. ಕರ್ನಾಟಕ ಕಲಾಭಿಮಾನಿ ಸಂಘದ ಅಧ್ಯಕ್ಷ ಆರ್.ಪಿ. ಗುರುರಾಜ್ ಅಧ್ಯಕ್ಷತೆ ವಹಿಸುವರು. ಥಿಯೋಸಾಫಿಕಲ್ ಮಹಿಳಾ ಕಾಲೇಜಿನ ನಿವೃತ್ತ ಪ್ರಾಚಾರ್ಯ ಪ್ರೊ. ಯು. ರಾಘವೇಂದ್ರರಾವ್ ಸಮಾರೋಪ ಭಾಷಣ ಮಾಡುವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ. ನಾಗರಾಜ, ನಗರಸಭಾ ಸದಸ್ಯರಾದ ಕೆ. ನಾಗಲಕ್ಷ್ಮಮ್ಮ, ಚಂದ್ರಕಾಂತ ಕಾಮತ್, ಎಂ.ಕೆ. ಮತ್ತಾಯಿ, ಡಾ. ಮೋಹನ ಕುಂಟಾರ್, ಪಿ. ಸುಂದರನ್ ಭಾಗವಹಿಸುವರು. ಶೀನಾ ನಾಡೋಳಿ ನಿರ್ದೇಶನದ ಪುಣ್ಯಕೋಟಿ ಮಕ್ಕಳ ನಾಟಕ ಪ್ರದರ್ಶನ ನಡೆಯಲಿದೆ ಎಂದು ಕರ್ನಾಟಕ ಕಲಾಭಿಮಾನಿ ಸಂಘದ ಕಾರ್ಯದರ್ಶಿ ಡಾ. ಮೋಹನ್ ಕುಂಟಾರ್ ತಿಳಿಸಿದ್ದಾರೆ.
ಕಳ್ಳತನ: ಆರೋಪಿ ಬಂಧನ
ಹೊಸಪೇಟೆ: ಮನೆ ಮುಂದೆ ನಿಲ್ಲಿಸಿದ್ದ ಇಂಡಿಕಾ ಕಾರಿನ ಬಿಡಿ ಭಾಗಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದ ಆರೋಪಿಯನ್ನು ನಗರ ಪೊಲೀಸರು ಬಂಧಿಸಿ ಬಂಧಿತನಿಂದ ಸುಮಾರು ರು. 25 ಸಾವಿರ ಮೌಲ್ಯದ ಕಾರಿನ ಬಿಡಿ ಭಾಗಗಳನ್ನು ವಶಪಡಿಸಿಕೊಂಡಿದ್ದಾರೆ. ಇಲ್ಲಿನ ರಾಣಿಪೇಟೆಯ ನಿವಾಸಿ ಚನ್ನೇಗೌಡ ಮನೆ ಮುಂದೆ ನಿಲ್ಲಿಸಲಾಗಿದ್ದ ಇಂಡಿಕಾ ಕಾರಿನ ಟೆಪರಿಕಾರ್ಡರ್, ಸ್ಪೀಕರ್ ಸೇರಿದಂತೆ ಇತರೆ ಬಿಡಿ ಭಾಗಗಳನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದು, ನಗರ ಪೊಲೀಸ್ ಠಾಣೆಯಲ್ಲಿ ಚನ್ನೇಗೌಡ ದೂರು ದಾಖಲಿಸಿದ್ದರು. ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಡಿವೈಎಸ್ಪಿ ಡಿ.ಡಿ. ಮಾಳಿಗಿ ಮಾರ್ಗದರ್ಶನದಲ್ಲಿ ನಗರ ಪೊಲೀಸ್ ಠಾಣೆ ಪಿ.ಐ. ಶ್ರೀಧರ ದೊಡ್ಡಿ ನೇತೃತ್ವದಲ್ಲಿ ಪಿಎಸ್‌ಐ ವಿ.ಡಿ. ಜೋಷಿ, ಧನ್ಯನಾಯ್ಕ, ಪೇದೆಗಳಾದ ರಾಘವೇಂದ್ರ, ತಿಪ್ಪೇಸ್ವಾಮಿ, ಫಯಾಜ್ ಮತ್ತು ಸಿಬ್ಬಂದಿ ಬಂಧಿಸಿದ್ದಾರೆ.
ವಿಜ್ಞಾನ ವಸ್ತು ಪ್ರದರ್ಶನ: ಆಯ್ಕೆ
ಹೂವಿನಹಡಗಲಿ:  ತಾಲೂಕಿನ ಇಟಿಗಿ ಗ್ರಾಮದ ತವನಿಧಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿ ಎಚ್. ಕಾವ್ಯ ಬಳ್ಳಾರಿಯಲ್ಲಿ ನಡೆದ ರಾಜ್ಯ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.
ವಿದ್ಯುತ್ ಉತ್ಪಾದನೆಯಲ್ಲಿ ಹೊಸ ಪ್ರಯೋಗ ಮಾಡಿದ್ದಾಳೆ. ಬಾಗಿಲು ತೆಗೆಯುವ ಮತ್ತು ಮುಚ್ಚುವ ಕ್ರಿಯೆಯಿಂದ ಸ್ವಯಂ ವಿದ್ಯುತ್ ಉತ್ಪಾದನೆ ಇದರ ಗುಣವಾಗಿದೆ. ಈ ವಿದ್ಯಾರ್ಥಿಯ ಹೊಸ ಪ್ರಯೋಗಕ್ಕೆ ಮಾರ್ಗದರ್ಶನ ನೀಡಿದ ಶಿಕ್ಷಕರಾದ ಎನ್.ಎಸ್. ಹಾಲಪ್ಪ ಹಾಗೂ ಎಂ. ಕೊಟ್ರೇಶ್ ಮಾರ್ಗದರ್ಶನದಲ್ಲಿ ಪ್ರಯೋಗ ರೂಪಿಸಿದ್ದು, ಗ್ರಾಮೀಣ ಪ್ರತಿಭೆಯೊಂದು ಗುರುತಿಸಲ್ಪಟ್ಟಿದೆ.
ವಿಶೇಷ ಸಾದನೆಯನ್ನು ಮಾಡಿರುವ ವಿದ್ಯಾರ್ಥಿನಿಗೆ ಹಾಗೂ ಮಾರ್ಗದರ್ಶಕ ಶಿಕ್ಷಕರಿಗೆ ಶಾಲೆಯ ಮುಖ್ಯ ಗುರುಗಳಾದ ಎಂ. ಮಂಜುನಾಥಸ್ವಾಮಿ, ಶಿಕ್ಷಕರಾದ ಕೆ. ಶಿವನಗೌಡ, ಎ.ಎಂ. ವಿಶ್ವನಾಥಯ್ಯ, ಎಸ್. ಪ್ರಾಣಲಿಂಗನಗೌಡ, ಎ. ಬಸವರಾಜಪ್ಪ, ಸಿ. ಕೊಟ್ರೇಶ್, ಮಾರುತಿ, ಗ್ರಾಮಾಂತರ ವಿದ್ಯಾವರ್ಧಕ ಸಂಘದ ಆಡಳಿತಾಧಿಕಾರಿ ಬಿ.ಜಿ. ಶಾಂತನಗೌಡ, ಆಡಳಿತ ಮಂಡಳಿ ಸದಸ್ಯರು ಹಾಗೂ ಗ್ರಾಮಸ್ಥರು ಅಭಿನಂದಿಸಿದ್ದಾರೆ.
ಗೃಹರಕ್ಷಕರಿಗೆ ಮುಖ್ಯಮಂತ್ರಿ ಪದಕ
ಬಳ್ಳಾರಿ: ಜಿಲ್ಲಾ ಗೃಹರಕ್ಷಕ ದಳದಲ್ಲಿ ಸೇವೆ ಸಲ್ಲಿಸುತ್ತಿರುವ ಪ್ಲಟೂನ್ ಕಮಾಂಡರ್‌ಗಳಾದ ಜೆ. ಸುರೇಶ್ ಹಾಗೂ ಬಿ.ಕೆ. ಬಸವಲಿಂಗ ಅವರಿಗೆ ಮುಖ್ಯಮಂತ್ರಿಗಳ ಪದಕ ಲಭಿಸಿದೆ. ಈಚೆಗೆ ಬೆಂಗಳೂರಿನ ಆರ್.ಎ. ಮುಂಡ್ಕೂರ್ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಅಕಾಡೆಮಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಪದಕ ಸ್ವಿಕರಿಸಿದ್ದಾರೆ. ಈ ಸಂದರ್ಭದಲ್ಲಿ ಗೃಹ ಸಚಿವ ಕೆ.ಜೆ. ಜಾರ್ಜ್ ಉಪಸ್ಥಿತರಿದ್ದರು. ಪದಕ ಪುರಸ್ಕೃತರನ್ನು ಕಮಾಡೆಂಟ್ ಎಂ.ಎ. ಷಕೀಬ್, ಉಪ ಸಮಾದೇಷ್ಟ ಎಸ್.ಎ. ವಾಹೀದ್, ಜಿಲ್ಲಾ ಸಹಾಯಕ ಬೋಧಕ ಎಚ್. ತಿಪ್ಪೇಸ್ವಾಮಿ, ಘಟಕಾಧಿಕಾರಿ ಜಿ. ಬಸವರಾಜ್, ಸೆಕೆಂಡ್ ಇನ್ ಕಮಾಂಡ್ ಎನ್.ಎಸ್. ಲಕ್ಷ್ಮಿನರಸಿಂಹ, ಸಿಬ್ಬಂದಿ, ಎಲ್ಲ ಗೃಹರಕ್ಷಕರು ಅಭಿನಂದಿಸಿದ್ದಾರೆ.
ಮಾಜಿ ಶಾಸಕ ಯು. ಭೂಪತಿ ನೇಮಕ
ಬಳ್ಳಾರಿ:  ಕೇಂದ್ರ ಸಲಹಾ ಗುತ್ತಿಗೆ ಕಾರ್ಮಿಕ ಮಂಡಳಿಗೆ ಅಧ್ಯಕ್ಷರಾಗಿ ಕೆಪಿಸಿಸಿ ಕಾರ್ಯದರ್ಶಿ, ಮಾಜಿ ಶಾಸಕ ಯು. ಭೂಪತಿ ಅವರನ್ನು ನೇಮಕ ಮಾಡಲಾಗಿದೆ. ಕೇಂದ್ರ ಸಲಹಾ ಗುತ್ತಿಗೆ ಕಾರ್ಮಿಕ ಮಂಡಳಿಗೆ ಅಧ್ಯಕ್ಷರಾಗಿ ಆಯ್ಕೆ ಮಾಡಿ, ಕಾರ್ಮಿಕ ವಲಯದಲ್ಲಿ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಿದ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ, ಉಪಾಧ್ಯಕ್ಷ ರಾಹುಲ್‌ಗಾಂಧಿ, ಸಚಿವ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಾ. ಜಿ.ಪರಮೇಶ್ವರ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾಜಿ ಶಾಸಕ ಯು. ಭೂಪತಿ ಅಭಿನಂದನೆ ಸಲ್ಲಿಸಿದ್ದಾರೆ.
ಯುವತಿ ಶವಪತ್ತೆ: ಕೊಲೆ ಶಂಕೆ
ಬಳ್ಳಾರಿ: ಸಂಡೂರು ತಾಲೂಕಿನ ತೋರಣಗಲ್‌ನ ಕುರೆಕುಪ್ಪ ಸಮೀಪದ ಎಚ್‌ಎಲ್‌ಸಿ ಕಾಲುವೆಯಲ್ಲಿ 15ರಿಂದ 20 ವರ್ಷದ ಯುವತಿ ಶವ ಪತ್ತೆಯಾಗಿದೆ. ತೋರಣಗಲ್ ಪೊಲೀಸರು ಪರಿಶೀಲಿಸಿದ್ದು, ಶವ ನೀರಿನಲ್ಲಿ ಕೊಳೆತಿದೆ. ಕತ್ತಿಗೆ ವೇಲ್‌ನಿಂದ ಬಿಗಿದು, ಎರಡು ಕಾಲುಗಳನ್ನು ಮತ್ತೊಂದು ವೇಲ್‌ನಿಂದ ಕಟ್ಟಿ ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. 4 ಅಡಿ ಎತ್ತರದ, ಕೆಂಪು ಬಣ್ಣ, ಮೈ ಮೇಲೆ ಹಳದಿ ಬಣ್ಣದ ಗಾಗ್ರಾ(ಲಂಗಾ ಜಾಕೇಟ್), ದುಂಡು ಮುಖ, ಹಸಿರು ಬಣ್ಣದ ಬಳೆಗಳು ಮತ್ತು ಕಾಲಿನಲ್ಲಿ ಚೈನ್‌ಗಳಿವೆ.  ಮೇಲ್ಕಂಡ ಚಹರೆಯ ಯುವತಿ ಬಗ್ಗೆ ಮಾಹಿತಿ ಇದ್ದಲ್ಲಿ ತೋರಣಗಲ್ ಪೊಲೀಸ್ ಠಾಣೆ 08395-250100, ಪಿಎಸ್‌ಐ 9480803062ಗೆ ಸಂಪರ್ಕಿಸಬಹುದು ಎಂದು ಪೊಲೀಸ್ ಇಲಾಖೆ ಪ್ರಕಟಣೆ ತಿಳಿಸಿದೆ.
ಜೂಜಾಟ: 8 ಜನರ ಬಂಧನ
ಬಳ್ಳಾರಿ: ಇಸ್ಪೀಟ್ ಜೂಜಾಟ ಅಡ್ಡೆಯ ಮೇಲೆ ಕುಡಿತಿನಿ ಪೊಲೀಸರು ದಾಳಿ ಮಾಡಿ, 8 ಜನರನ್ನು ಬಂಧಿಸಿದ್ದಾರೆ. ಬಂಧಿತರಿಂದ ರು. 7300 ವಶಪಡಿಸಿಕೊಂಡಿರುವ ಘಟನೆ ಶುಕ್ರವಾರ ಸಂಜೆ ವೇಣಿವೀರಾಪುರದಲ್ಲಿ ನಡೆದಿದೆ. ವೇಣಿ ವೀರಾಪುರ ಗ್ರಾಮದಲ್ಲಿ ಇಸ್ಪೀಟ್ ಜೂಜಾಟ ಆಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಕುರುಗೋಡು ಸಿಪಿಐ ಲಕ್ಷ್ಮೀ ಕಾಂತಯ್ಯ ಮಾರ್ಗದರ್ಶನ, ಕುಡಿತಿನಿ ಪಿಎಸ್‌ಐ ವಾಸುಕುಮಾರ್ ನೇತೃತ್ವದಲ್ಲಿ ಪೊಲೀಸರು ದಾಳಿ ಮಾಡಿದ್ದರು. ಈ ಕುರಿತು ಕುಡಿತಿನಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಂದಿನಿಂದ ಪ್ರವಚನ
ಬಳ್ಳಾರಿ: ನಗರದ ಕಮ್ಮರಚೇಡು ಕಲ್ಯಾಣಸ್ವಾಮಿ ಮಠದಲ್ಲಿ ಅ. 5ರಿಂದ 13ರ ವರೆಗೆ ಶ್ರೀ ಚಿದಾನಂದಾವಧೂತ ವಿರಚಿತ ಶ್ರೀದೇವಿ ಮಹಾತ್ಮೆ ಪುರಾಣ ಪ್ರವಚನ ಹಾಗೂ ದಸರಾ ಮಹೋತ್ಸವದ ಕಾರ್ಯಕ್ರಮಗಳು ಜರುಗಲಿವೆ. ಅ. 5ರಂದು ಸಂಜೆ ಶ್ರೀ ಬನ್ನಿ ಮಹಾಕಾಳಿ ದೇವಿಗೆ ಪೂಜೆ ಸಲ್ಲಿಸಿದ ನಂತರ ದೇವಿ ಮಹಾತ್ಮೆ ಪುರಾಣ ಪ್ರವಚನ ನಡೆಯಲಿದೆ. ಸಂಸ್ಕೃತ ಉಪನ್ಯಾಸಕ ಚಂದ್ರಶೇಖರ ಶಾಸ್ತ್ರಿ ಪ್ರವಚನ ನೀಡುವರು. ಶಿಡಿಗಿನಮೊಳ ಸಾರಂಗ ಮಠದ ಸಿ.ಎಂ. ಚನ್ನವೀರಯ್ಯ ವಾಚನ ಮಾಡುವರು. ಬಳ್ಳಾರಿಯ ರಾಘವೇಂದ್ರ ತಬಲಾ ಸಾಥ್ ನೀಡುವರು. ಅ. 11ರಂದು ಸಂಜೆ 6ಕ್ಕೆ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಜರುಗಲಿದೆ. ಅ. 14ರಂದು ಪಲ್ಲಕ್ಕಿ ಉತ್ಸವ, ಬನ್ನಿ ಮುಡಿಯುವ, ವಿನಿಮಯ ಮಾಡಿಕೊಳ್ಳುವ ಕಾರ್ಯಕ್ರಮ ಜರುಗಲಿದೆ ಪ್ರಕಟಣೆ ತಿಳಿಸಿದೆ.
ನಾಳೆ ಕಾರ್ಯಾಗಾರ
ಹೊಸಪೇಟೆ: ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಮತ್ತು ಇಲ್ಲಿನ ಷಾ. ಭವರ್‌ಲಾಲ್ ಬಾಬುಲಾಲ್ ನಾಹರ್ ಬಿ.ಇಡಿ. ಕಾಲೇಜು ಸಂಯುಕ್ತಾಶ್ರಯದಲ್ಲಿ ಎರಡು ದಿನಗಳ ಬಿ.ಇಡಿ. ಪಠ್ಯಕ್ರಮ ಪರಿಷ್ಕರಣ ಕಾರ್ಯಾಗಾರ ಉದ್ಘಾಟನಾ ಸಮಾರಂಭ ಇಲ್ಲಿನ ವಿಜಯನಗರ ಮಹಾವಿದ್ಯಾಲಯ ಸಭಾಂಗಣದಲ್ಲಿ ಅ. 6ರಂದು ಬೆಳಗ್ಗೆ 10.30ಕ್ಕೆ ನಡೆಯಲಿದೆ. ವಿಜಯನಗರ ಶ್ರೀಕೃಷ್ಣದೇವರಾಯ ವಿವಿ ಕುಲಪತಿ ಪ್ರೊ. ಮಂಜಪ್ಪ ಹೊಸಮನಿ ಕಾರ್ಯಕ್ರಮ ಉದ್ಘಾಟಿಸುವರು. ಬಳ್ಳಾರಿಯ ವೀ.ವಿ. ಸಂಘದ ಅಧ್ಯಕ್ಷ ಅಲ್ಲಂ ಗುರುಬಸವರಾಜ ಅಧ್ಯಕ್ಷತೆ ವಹಿಸುವರು. ವಿಶ್ವವಿದ್ಯಾಲಯದ ಅಧ್ಯಯನ ಮಂಡಳಿ ಅಧ್ಯಕ್ಷ ನಾಗಪ್ಪ ಶಹಪುರ, ವೀವಿ ಸಂಘದ ಕಾರ್ಯದರ್ಶಿ ಗುರುಸಿದ್ದಸ್ವಾಮಿ, ಕೋಶಾಧಿಕಾರಿ ಸಂಗನಕಲ್ಲು ಹೀಮಂತರಾಜ, ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಡಾ.ಜಿ. ಸಿದ್ದಲಿಂಗಮೂರ್ತಿ, ಆಡಳಿತ ಮಂಡಳಿ ಸದಸ್ಯ ಶರಣಸ್ವಾಮಿ, ಎನ್.ಎಸ್. ರೇವಣಸಿದ್ದಪ್ಪ ಭಾಗವಹಿಸುವರು. ಅ. 7ರಂದು ಸಂಜೆ 4.30ಕ್ಕೆ ನಡೆಯಲಿರುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವೀವಿ ಸಂಘದ ಉಪಾಧ್ಯಕ್ಷ ಕೆ.ಎಂ. ಮಹೇಶ್ವರಸ್ವಾಮಿ, ಸಹ ಕಾರ್ಯದರ್ಶಿ ಜೆ.ಎಸ್. ನೇಪಾಕ್ಷಪ್ಪ, ವಿಜಯನಗರ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಸಾಲಿ ಸಿದ್ದಯ್ಯಸ್ವಾಮಿ, ಪ್ರಾಚಾರ್ಯ ಪ್ರೊ. ಎಸ್.ಎಸ್. ಪೊಲೀಸ್‌ಪಾಟೀಲ್ ಭಾಗವಹಿಸುವರು ಎಂದು ವಿವಿ ಅಧ್ಯಯನ ಮಂಡಳಿ ಅಧ್ಯಕ್ಷ ನಾಗಪ್ಪ ಶಹಾಪುರ ಹಾಗೂ ಬಿ.ಇಡಿ. ಕಾಲೇಜು ಪ್ರಾಚಾರ್ಯ ವಿ.ಎಂ. ರಾಜಶೇಖರ್ ತಿಳಿಸಿದ್ದಾರೆ.
ತುಟ್ಟಿಭತ್ಯೆ ಹೆಚ್ಚಳ: ಸ್ವಾಗತ
ಬಳ್ಳಾರಿ: ರಾಜ್ಯ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ಹೆಚ್ಚಿಸಿದ ರಾಜ್ಯ ಸರ್ಕಾರದ ಆದೇಶವನ್ನು ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕ ಸ್ವಾಗತಿಸಿದೆ. ದಸರಾ ಹಬ್ಬದ ಕೊಡುಗೆಯಾಗಿ ಸರ್ಕಾರ ಶೇ. 6ರಷ್ಟು ಹೆಚ್ಚಿಸಿ, 2013ರ ಜುಲೈ ತಿಂಗಳಿನಿಂದ ಜಾರಿಗೆ ಬರುವಂತೆ ಆದೇಶಿಸಿರುವುದು ಹರ್ಷದಾಯಕ ಎಂದು ಸಂಘದ ಜಿಲ್ಲಾಧ್ಯಕ್ಷ ಎಂ.ಟಿ. ಮಲ್ಲೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.