ಬಳ್ಳಾರಿ

ಶ್ರದ್ಧಾ, ಭಕ್ತಿಯ ಬಕ್ರೀದ್ ಆಚರಣೆ

Published On :

ಕೊಟ್ಟೂರು: ತ್ಯಾಗ ಬಲಿದಾನಗಳ, ದಾನ, ಧರ್ಮದ ಪ್ರತೀಕವಾದ ಬಕ್ರೀದ್ ಹಬ್ಬವನ್ನು ಪಟ್ಟಣದ ಮುಸ್ಲಿಂ ಬಾಂಧವರು ಬುಧವಾರ ಶ್ರದ್ಧಾ, ಭಕ್ತಿಯಿಂದ ಆಚರಿಸಿದರು.
ಪಟ್ಟಣದ ಪ್ರತಿಯೊಬ್ಬ ಮುಸ್ಲಿಂ ಬಾಂಧವ ಹೊಸ ಬಟ್ಟೆ ಧರಿಸಿ ಇಲ್ಲಿನ ನಾಲ್ಕು ಮಸೀದಿಗಳಿಂದ ಮೆರವಣಿಗೆ ಮೂಲಕ ಆಗಮಿಸಿ ಈದ್ಗಾ ಮೈದಾನದಲ್ಲಿ ಜಮಾವಣೆಗೊಂಡರು. ಮುಸ್ಲಿಮರ ಸ್ಥಳೀಯ ಧರ್ಮಗುರು ಶಾಜೀದ್ ಅಫೀಜ್ ಮುಸ್ಲಿಂ ಬಾಂಧವರಿಗೆ ಈ ಸಂದರ್ಭದಲ್ಲಿ ಧರ್ಮೋಪದೇಶದ ಸಂದೇಶ ನೀಡಿ ಪ್ರಾರ್ಥನೆ ಬೋಧಿಸಿದರು. ಗುರುಗಳ ಪ್ರಾರ್ಥನೆಯನ್ನು ಏಕಕಂಠದೊಂದಿಗೆ ಅನುಕರಿಸಿ ಕಿಕ್ಕಿರಿದು ಸೇರಿದ್ದ ಮುಸ್ಲಿಂ ಬಾಂಧವರು ಅಲ್ಲಾಹನನ್ನು ನೆನೆದರು.
ಈ ಸಂದರ್ಭದಲ್ಲಿ ನೆರೆದಿದ್ದವರನ್ನು ಉದ್ದೇಶಿಸಿ ಮಾತನಾಡಿದ ಸಮಾಜದ ಮುತುವಲ್ಲಿ ಕೆ. ಹಮೀದ್‌ಸಾಬ್, ಸಕಲರಿಗೂ ಲೇಸು ಮಾಡುವುದನ್ನೇ ಬಯಸುವ ಖುರಾನ್‌ನ ತತ್ವ ಧ್ಯೇಯಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಮಸೀದಿಯ ಸಹ ಧರ್ಮಗುರು ಹಮೀದ್‌ಸಾಬ್, ಹಾಜಿ ಅಲಾಮ್‌ಸಾಬ್, ಹಾಜಿ ಅಲ್ಲಾಭಕ್ಷಿ, ಕೆ. ನಜೀರ್‌ಸಾಬ್, ಹೆಗಡೆ ಮಾಬುಸಾಬ್, ಫಕೃದ್ದೀನ್‌ಸಾಬ್, ಇನಾಯತ್, ಹೂವಿನಹಡಗಲಿ ಪುರಸಭೆ ಮುಖ್ಯಾಧಿಕಾರಿ ನೂರುಲ್ಲಾಖಾನ್, ಅಬ್ಬಾಸ್, ಹುಸೇನ್, ಕೆಇಬಿ ದಾದಾಸಾಬ್ ಮತ್ತಿತರ ಪ್ರಮುಖರು ಭಾಗವಹಿಸಿದ್ದರು.
ಹೊಸಪೇಟೆಯಲ್ಲೂ ಬಕ್ರೀದ್: ನಗರ ಹಾಗೂ ತಾಲೂಕಿನಾದ್ಯಂತ ಮುಸ್ಲಿಂ ಬಾಂಧವರು ಬುಧವಾರ ಬಕ್ರೀದ್ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿದರು.
ತಾಲೂಕಿನ ಕಮಲಾಪುರ, ಮರಿಯಮ್ಮನಹಳ್ಳಿ, ಕಂಪ್ಲಿ ಸೇರಿದಂತೆ ಹಲವು ಗ್ರಾಮದಲ್ಲಿ ಮುಸ್ಲಿಂಮರು ಈದ್ಗಾ ಮೈದಾನಗಳಿಗೆ ತೆರಳಿ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿದ್ದರು. ಬಕ್ರೀದ್ ನಿಮಿತ್ತ ನಗರದ ಹೊರವಲಯದ ಹರಿಹರ ರಸ್ತೆಯಲ್ಲಿರುವ, ಬಳ್ಳಾರಿ ರಸ್ತೆಯ ಡಿಪೋ ಬಳಿಯ, ಅಂಬೇಡ್ಕರ್ ವೃತ್ತದ ಬಳಿಯ ಹಾಗೂ ಚಿತ್ತವಾಡ್ಗಿಯ ಈದ್ಗಾ ಮೈದಾನದಲ್ಲಿ ಸಾವಿರಾರು ಮುಸ್ಲಿಂ ಬಾಂಧವರು ಪ್ರಾರ್ಥನೆ ಸಲ್ಲಿಸಿದರು.
ಹಬ್ಬದ ನಿಮಿತ್ತ ಹೊಸ ಬಟ್ಟೆಗಳನ್ನು ಧರಿಸಿ ತಮ್ಮ ಮಕ್ಕಳೊಂದಿಗೆ ಹಾಗೂ ಕುಟುಂಬದ ಸದಸ್ಯರೊಂದಿಗೆ ಈದ್ಗಾ ಮೈದಾನಕ್ಕೆ ಪ್ರಾರ್ಥನೆಯಲ್ಲಿ ಭಾಗವಹಿಸಲು ತೆರಳುತ್ತಿರುವುದು ಕಂಡುಬಂದಿತು. ಕೇವಲ ಮುಸ್ಲಿಂ ಬಾಂಧವರಿಗಷ್ಟೇ ಅಲ್ಲದೆ ತಮ್ಮ ಆತ್ಮೀಯ ಸ್ನೇಹಿತರಿಗೂ, ಅಕ್ಕಪಕ್ಕದ ಮನೆಯವರೊಂದಿಗೆ ಬಕ್ರೀದ್ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಡಿವೈಎಸ್ಪಿ ಡಿ.ಡಿ. ಮಾಳಿಗಿ ನೇತೃತ್ವದಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾರಿ ಬಂದೋಬಸ್ತ್ ಏರ್ಪಡಿಸಿದ್ದರು. ನಗರದ ಬಹುತೇಕ ಅಂಗಡಿಗಳು, ಹೋಟೆಲ್‌ಗಳು ಬಂದ್ ಇದ್ದವು. ತಾಲೂಕಿನ ಮರಿಯಮ್ಮನಹಳ್ಳಿ, ಕಮಲಾಪುರ, ಕಂಪ್ಲಿಯಲ್ಲೂ ಹಬ್ಬವನ್ನು ಆಚರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.