ಪ್ರತಿಭಟನೆ: ಸಂಡೂರು ಸಂಪೂರ್ಣ ಸ್ತಬ್ಧ
ಕನ್ನಡಪ್ರಭ ವಾರ್ತೆ, ಸಂಡೂರು, ಅ. 21
ಅರಣ್ಯ ಮತ್ತು ಕಂದಾಯ ಜಮೀನುಗಳಲ್ಲಿ ಹಲವು ವರ್ಷಗಳಿಂದ ಸಾಗುವಳಿ ಮಾಡುತ್ತಿದ ರೈತರನ್ನು ಒಕ್ಕಲೆಬ್ಬಿಸಬಾರದು ಹಾಗೂ ಇತ್ತೀಚೆಗೆ ರೈತರು ಪ್ರತಿಭಟನೆ ನಡೆಸುತ್ತಿದ್ದಾಗ ಮೃತಪಟ್ಟ ರೈತ ಕುಟುಂಬಗಳಿಗೆ ಪರಿಹಾರ ನೀಡಬೇಕೆಂದು ಆಗ್ರಹಿಸಿ ರೈತ ಸಂಘ, ಹಸಿರು ಸೇನೆ ಹಾಗೂ ವಿವಿಧ ಕನ್ನಡಪರ ಸಂಘಟನೆಗಳು ಕರೆ ನೀಡಿದ ಸಂಡೂರು ಬಂದ್ ಸಂಪೂರ್ಣ ಯಶಸ್ವಿಯಾಗಿದೆ.
ಸಂಘಟನೆಗಳು ಕರೆ ನೀಡಿದ್ದ ಸಂಡೂರು ಬಂದ್ ಹಿನ್ನೆಲೆಯಲ್ಲಿ ಬೆಳಗ್ಗೆ 6 ಗಂಟೆಯಿಂದಲೆ ಬಸ್ ಸಂಚಾರ ಸೇರಿದಂತೆ ಭಾರಿ ವಾಹನಗಳ ಸಂಚಾರ ಸ್ಥಗಿತಗೊಂಡಿತ್ತು. ಬಂದ್ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ. ನಗರದ ಎಪಿಎಂಸಿಯಿಂದ ರೈತರು ಸೇರಿದಂತೆ ವಿವಿಧ ಸಂಘಟನೆಗಳ ಸಾವಿರಾರು ಕಾರ್ಯಕರ್ತರು ವಿಜಯ್ ಸರ್ಕಲ್ ವರೆಗೆ ಪ್ರತಿಭಟನೆ ನಡೆಸಿ, ಸರ್ಕಲ್ ಸಮೀಪದಲ್ಲಿಯೇ ವೇದಿಕೆ ನಿರ್ಮಿಸಿದರು. ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಚಾಮರಸ ಮಾಲೀಪಾಟೀಲ್ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದರು.
ಬಿಕೋ ಎಂದ ರಸ್ತೆಗಳು: ಬಂದ್ ಕರೆ ನೀಡಿದ್ದರಿಂದ ನಗರದ ಅಂಗಡಿ ಮುಂಗಟ್ಟಗಳು, ಪೆಟ್ರೊಲ್ ಬಂಕ್, ಸಿನಿಮಾ ಮಂದಿರ, ವಿವಿಧ ವಾಣಿಜ್ಯ ಬ್ಯಾಂಕ್‌ಗಳು ಸೇರಿದಂತೆ ಸರ್ಕಾರಿ ಕಚೇರಿಗಳು ಸಂಪೂರ್ಣ ಬಂದ್ ಆಗಿದ್ದವು. ನಗರದ ವಸತಿ ಬಡಾವಣೆಗಳಲ್ಲಿ ಕೆಲ ಅಂಗಡಿಗಳು ಮಾತ್ರ ತೆರೆದಿದ್ದವು. ಪಟ್ಟಣದ ಜನತೆ ಬಂದ್‌ಗೆ ಸ್ವಯಂಪ್ರೇರಿತವಾಗಿ ಸಹಕರಿಸಿದರು. ಬೆಳಗ್ಗೆ 6 ಗಂಟೆಯಿಂದ ಆರಂಭವಾದ ಬಂದ್ ಸಂಜೆ 4 ಗಂಟೆ ವರೆಗೆ ನಡೆಯಿತು. ಅನಂತರ ವಾಹನಗಳ ಸಂಚಾರ ಆರಂಭವಾಯಿತು. ಬಂದ್ ಹಿನ್ನೆಲೆಯಲ್ಲಿ ಕೆಲ ರಸ್ತೆಗಳು ಬಿಕೋ ಎನ್ನುತ್ತಿದ್ದವು.
ಪ್ರತಿಭಟನಾಕಾರರ ಬೇಡಿಕೆಗಳು: ಅರಣ್ಯ, ಕಂದಾಯ ಜಮೀನುಗಳಲ್ಲಿ ಸಾಗುವಳಿ ಮಾಡುತ್ತಿದ್ದ ರೈತರನ್ನು ಒಕ್ಕಲೆಬ್ಬಿಸಬಾರದು. ಕೂಡಲೆ ಅಧಿಕಾರಿಗಳು ಜಂಟಿ ಸರ್ವೇ ಮಾಡುವ ಮೂಲಕ ಗಡಿರೇಖೆ ಗುರುತಿಸಿ, ರೈತರಿಗೆ ಹಕ್ಕುಪತ್ರ ನೀಡಬೇಕು. ಇತ್ತೀಚೆಗೆ ಅರಣ್ಯ ಇಲಾಖೆ ರೈತರ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದ್ದನ್ನು ಖಂಡಿಸಿ ಅ. 7ರಂದು ಪ್ರತಿಭಟನೆ ವೇಳೆ ಮೃತಪಟ್ಟ ರೈತ ಹುಸೇನ್ ಪೀರಾಸಾಬ್ ಕುಟುಂಬಕ್ಕೆ ರು. 5 ಲಕ್ಷ ಪರಿಹಾರ ನೀಡಬೇಕು. ಸಂಡೂರು ತಾಲೂಕಿಗೆ ತುಂಗಭದ್ರಾ ಜಲಾಶಯದಿಂದ ಕುಡಿಯುವ ನೀರು ಪೂರೈಕೆ ಮಾಡುವ ಯೋಜನೆ ಶೀಘ್ರ ಕಾರ್ಯಗತಗೊಳ್ಳಬೇಕು. ಭೂಮಿಯನ್ನು ಅತಿಕ್ರಮಿಸಿಕೊಂಡಿದ್ದಾರೆ ಎಂದು ರೈತರಿಗೆ ಜಿಲ್ಲಾಧಿಕಾರಿ ನೋಟಿಸ್ ನೀಡಿ ಕ್ರಿಮಿನಲ್ ಪ್ರಕರಣ ಹೂಡುವುದು ಸರಿಯಲ್ಲ. ತುಂಗಭದ್ರಾ ಜಲಾಶಯ ನೀರಿನ ಸಂಗ್ರಹ ಪ್ರಮಾಣವನ್ನು ಪರ್ಯಾಯವಾಗಿ ಹೆಚ್ಚಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಸೇರಿದಂತೆ ಇತರ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣಶೆಟ್ಟಿ ಬಣ), ಕರ್ನಾಟಕ ರಕ್ಷಣಾ ಸೇನೆ ಸೇರಿದಂತೆ ಇತರ ಸಂಘಟನೆಗಳು ಒಟ್ಟುಗೂಡಿ ಬಂದ್‌ಗೆ ಕರೆ ನೀಡಿದ್ದವು. ಪ್ರತಿಭಟನಾಕಾರರು ತಮ್ಮ ಬೇಡಿಕೆಗಳ ಮನವಿಯನ್ನು ಸಂಡೂರು ತಹಸೀಲ್ದಾರ್ ಆರ್. ತಿಮ್ಮಯ್ಯ ಮೂಲಕ ರಾಜ್ಯ ಸರ್ಕಾರಕ್ಕೆ ಸಲ್ಲಿಸಿದರು.
ಅರಣ್ಯ ಇಲಾಖೆಯ ಎಸಿಎಫ್ ಬಸವರಾಜಪ್ಪ, ಆರ್‌ಎಫ್‌ಒ ಭಾಸ್ಕರ್, ಜೆಸ್ಕಾಂ ಎಇಇ ನಜೀಮುನ್ನಿಸ್ ಇತರರು ಇದ್ದರು. ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಗೇಂದ್ರ, ಜಿಲ್ಲಾಧ್ಯಕ್ಷ ಬಿ. ರಾಜಶೇಖರಗೌಡ, ಕಾರ್ಯಾಧ್ಯಕ್ಷ ಪುರುಷೋತ್ತಮಗೌಡ, ತಾಲೂಕಾಧ್ಯಕ್ಷ ವಿ.ಜೆ. ಶ್ರೀಪಾದಸ್ವಾಮಿ, ಪ್ರಧಾನ ಕಾರ್ಯದರ್ಶಿ ಧರ್ಮನಾಯ್ಕ, ಕೂಡ್ಲಿಗಿ ಅಧ್ಯಕ್ಷ ಬಸವರಾಜ, ಸಿರುಗುಪ್ಪ ಅಧ್ಯಕ್ಷ ವಿರೂಪನಗೌಡ, ಕರವೇ ಅಧ್ಯಕ್ಷ ಕೆ.ಆರ್. ಕುಮಾರಸ್ವಾಮಿ, ಕರ್ನಾಟಕ ರಕ್ಷಣಾ ಸೇನಾ ಅಧ್ಯಕ್ಷ ಸತೀಶ್, ಕನ್ನಡಪರ ಸಂಘಟನೆ ಕುಂದಾಪುರ ನಾಗರಾಜ್ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ರೈತರು ಬಂದ್‌ನಲ್ಲಿ ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

