ನಾಳೆಯಿಂದ ವಿದ್ಯಾರ್ಥಿ ನಾಟಕೋತ್ಸವ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಅ. 23
ವಿದ್ಯಾರ್ಥಿ-ಯುವಜನಾಂಗದಲ್ಲಿ ರಂಗ ಚಟುವಟಿಕೆಗಳ ಬಗ್ಗೆ ಆಸಕ್ತಿ ಮೂಡಿಸುವುದರ ಜತೆಗೆ ನಾಟಕಗಳಲ್ಲೂ ಅಭಿನಯಿಸುವಂತೆ ಪ್ರೇರೇಪಿಸುತ್ತಿರುವ ರಂಗತೋರಣ ಅ. 25ರಿಂದ ಮೂರು ದಿನಗಳ ಕಾಲ ರಾಜ್ಯ ಮಟ್ಟದ ವಿದ್ಯಾರ್ಥಿ ನಾಟಕೋತ್ಸವವನ್ನು ನಗರದ ಡಾ. ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಹಮ್ಮಿಕೊಂಡಿದೆ.
ರಂಗತೋರಣ 9ನೇ ರಾಜ್ಯಮಟ್ಟದ ವಿದ್ಯಾರ್ಥಿ ನಾಟಕೋತ್ಸವದ ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಸುರೇಶ್ ಪಿ. ಶೆಟ್ಟಿ ಅವರು, ಬುಧವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದರು. ಕನ್ನಡದ ಖ್ಯಾತ ಚಿತ್ರ ನಟ, ರಂಗಭೂಮಿ ನಟ-ನಿರ್ದೇಶಕ ಮಂಡ್ಯ ರಮೇಶ್ ಸರ್ವಾಧ್ಯಕ್ಷತೆಯಲ್ಲಿ ನಡೆಯುತ್ತಿರುವ ಈ ವಿದ್ಯಾರ್ಥಿ ನಾಟಕೋತ್ಸವವನ್ನು ಕನ್ನಡ ಚಿತ್ರರಂಗದ ಪ್ರಖ್ಯಾತ ನಿರ್ದೇಶಕ ಕೆ.ಎಸ್.ಎಲ್. ಸ್ವಾಮಿ ಅವರು ಅ. 25ರಂದು ಸಂಜೆ 6 ಗಂಟೆಗೆ ಉದ್ಘಾಟಿಸುವರು. ರಾಜ್ಯದ ವಿವಿಧ ಜಿಲ್ಲೆಗಳಿಂದ 15 ವಿದ್ಯಾರ್ಥಿ ತಂಡಗಳು ನಾಟಕೋತ್ಸವದಲ್ಲಿ ಭಾಗವಹಿಸಲಿವೆ. ಪ್ರತಿನಿತ್ಯ 5 ನಾಟಕಗಳ ಪ್ರದರ್ಶನದ ಜೊತೆಗೆ ಕಲಾತೋರಣ ಪ್ರದರ್ಶಿನಿ, ನುಡಿತೋರಣ ರಂಗಪತ್ರಿಕೆ ಬಿಡುಗಡೆ, ವಿಚಾರ ತೋರಣ, ರಂಗಶೋಭಾಯಾತ್ರೆ, ವಿಶೇಷ ಭಾಷಣ ಹಾಗೂ ರಂಗಚಾವಡಿ-ಸಂವಾದ, ರಂಗಬೆಳಂದಿಗಳು ಸೇರಿದಂತೆ ಇತರೆ ಅನೇಕ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದರು.
ರಂಗತೋರಣ ಕಾರ್ಯದರ್ಶಿ ಪ್ರಭುದೇವ ಕಪ್ಪಗಲ್ ಮಾತನಾಡಿ, ಅ. 25ರಂದು ಮಧ್ಯಾಹ್ನ ನಡೆಯುವ ಕಲಾತೋರಣ ಪ್ರದರ್ಶಿನಿ ಕಾರ್ಯಕ್ರಮವನ್ನು ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷ ಬಿ. ನಾಗಭೂಷಣ ಗೌಡ ಉದ್ಘಾಟಿಸಲಿದ್ದು, ರಂಗಭೂಮಿ ಚಟುವಟಿಕೆಗಳ ಬಗ್ಗೆ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿರುವ ರಂಗಸುದ್ದಿಗಳ ಸಂಗ್ರಾಹಕರಾದ ಅಜ್ಜಂಪುರ ಕೃಷ್ಣಮೂರ್ತಿ, ಕಮಸಂ ಇಲಾಖೆಯ ಸಹಾಯಕ ನಿರ್ದೇಶಕ ಬಿ. ನಾಗರಾಜ್ ಇತರರು ಪಾಲ್ಗೊಳ್ಳುವರು ಎಂದ ಅವರು, ಸಂಜೆ 4.30ಕ್ಕೆ ನಡೆಯಲಿರುವ ನುಡಿತೋರಣದಲ್ಲಿ ರಂಗಪತ್ರಿಕೆ ಬಿಡುಗಡೆ ಸಮಾರಂಭ ಜರುಗಲಿದೆ ಎಂದು ತಿಳಿಸಿದರು.
ನಾಟಕೋತ್ಸವದ ಎರಡನೇ ದಿನವಾದ ಅ. 26ರಂದು ಬೆಳಗ್ಗೆ 11.30ಕ್ಕೆ ಖ್ಯಾತ ರಂಗಭೂಮಿ ನಿರ್ದೇಶಕ ಸುರೇಶ ಅನಗಳ್ಳಿ ಅಧ್ಯಕ್ಷತೆಯಲ್ಲಿ 'ಪರಿವರ್ತನೆಗಾಗಿ ರಂಗಭೂಮಿ' ಬಗ್ಗೆ ವಿಚಾರ ಮಂಥನ ನಡೆಯಲಿದ್ದು, ರಂಗನಿರ್ದೇಶಕ ಹೂಲಿ ಶೇಖರ, ಬೀದಿ ನಾಟಕ ತಜ್ಞ ಹೊಸಪೇಟೆಯ ಪಿ.ಅಬ್ದುಲ್ ಸಾಬ್ ಸೇರಿದಂತೆ ಇತರರು ಪಾಲ್ಗೊಳ್ಳಲಿದ್ದಾರೆ ಎಂದರು.
ಅನಂತರ ಅಂದು ಸಂಜೆ 4 ಗಂಟೆಗೆ ನಡೆಯಲಿರುವ ಅತ್ಯಾಕರ್ಷಕ ರಂಗಶೋಭಾಯಾತ್ರೆಗೆ ನಾಡೋಜ ಪುರಸ್ಕೃತ, ಹಿರಿಯ ಕಲಾವಿದೆ ಸುಭದ್ರಮ್ಮ ಮನ್ಸೂರು ಚಾಲನೆ ನೀಡಲಿದ್ದು, ಬೀಚಿ, ದೊಡ್ಡನಗೌಡರು, ಬಳ್ಳಾರಿ ರಾಘವರ ಭಾವಚಿತ್ರಗಳೊಂದಿಗೆ ಆನೆಯೊಂದಿಗೆ ಮೆರವಣಿಗೆ ನಡೆಯಲಿದೆ ಎಂದರು.
ಅ. 27ರಂದು ಬೆಳಗ್ಗೆ ಮಂಡ್ಯ ರಮೇಶ್ ಸಮ್ಮುಖದಲ್ಲಿ ರಂಗಚಾವಡಿ ಸಂವಾದ ನಡೆಯಲಿದ್ದು, ಮೈಸೂರಿನ ರಂಗಕರ್ಮಿ ಕು. ಭಾವನಾ ಚಾವಡಿಯ ಕಾರಣಿಕರಾಗಿ ಪಾಲ್ಗೊಳ್ಳಲಿದ್ದಾರೆ. ಅನಂತರ ಸಂಜೆ 5.30ಕ್ಕೆ ನಾಟಕೋತ್ಸವದ ಸಮಾರೋಪ, ಪ್ರಶಸ್ತಿ ಪುರಸ್ಕಾರ ಸಮಾರಂಭ ಜರುಗಲಿದೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಕೆ. ಚೆನ್ನಪ್ಪ, ರಾಘವ ಮೆಮೋರಿಯಲ್ ಅಸೋಸಿಯೇಷನ್ ಅಧ್ಯಕ್ಷ ಬಿ. ಸಿದ್ದನಗೌಡ, ಅಡವಿಸ್ವಾಮಿ, ಬಿ.ಎಂ. ಸಿದ್ದೇಶ್ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

