ಬಳ್ಳಾರಿ

ರಾಜ್ಯ ಹೆದ್ದಾರಿಗಳಿಗೆ ಬಂತು ಶುಭಕಾಲ

Published On :

ಹೂವಿನಹಡಗಲಿ: ಡಾ. ನಂಜುಂಡಪ್ಪ ವರದಿ ಅನ್ವಯ ತೀರಾ ಹಿಂದುಳಿದ ಪ್ರದೇಶವೆಂಬ ಹಣೆಪಟ್ಟಿ ಹೊತ್ತಿರುವ ಹೂವಿನಹಡಗಲಿ, ಹಗರಿಬೊಮ್ಮನಹಳ್ಳಿ, ಕೂಡ್ಲಿಗಿ ತಾಲೂಕುಗಳ ರಾಜ್ಯ ಹೆದ್ದಾರಿಗಳಿಗೆ ಈಗ ಶುಭಕಾಲ ಕೂಡಿ ಬಂದಿದೆ.
ಮೈಲಾರ-ತೋರಣಗಲ್ಲು, ಅರಬಾವಿ - ಚಳಕೇರಿ, ಹೂವಿನಹಡಗಲಿ - ಮಂಡ್ಯ, ಎಕ್ಕುಂಬಿ - ಮೊಣಕಾಲ್ಮೂರು, ಹೊಸಪೇಟೆ - ಮಂಗಳೂರು ರಸ್ತೆಗಳು ಹೂವಿನಹಡಗಲಿ ತಾಲೂಕಿನಲ್ಲಿ ಹಾಯ್ದು ಹೋಗಿವೆ. ಆದರೆ, ಇವು ಹೆಸರಿಗೆ ಮಾತ್ರ ರಾಜ್ಯ ಹೆದ್ದಾರಿಗಳಾಗಿದ್ದವು. ಅನುದಾನದ ಕೊರತೆಯಿಂದ ಬಹುತೇಕ ರಸ್ತೆಗಳ ಸ್ಥಿತಿ ಹಳ್ಳಿಗಾಡಿನ ರಸ್ತೆಗಿಂತ ಭಿನ್ನವಾಗಿರಲಿಲ್ಲ.
ಗದಗ, ಬಳ್ಳಾರಿ, ಚಿತ್ರದುರ್ಗಕ್ಕೆ ಸಂಪರ್ಕ ಕಲ್ಪಿಸುವ ಅರಬಾವಿ-ಚಳಕೇರಿ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೇರಿಸಲು ಹಸಿರು ನಿಶಾನೆ ಸಿಕ್ಕಿದೆ. ಈಗಾಗಲೇ, ಗದಗದಿಂದ ಮುಂಡರಗಿ ವರೆಗೂ ದ್ವಿಪಥ ರಸ್ತೆ ಅಭಿವೃದ್ಧಿ ಕಾರ್ಯ ಪ್ರಗತಿಯಲ್ಲಿದೆ.
129 ಕೋಟಿ ಬಿಡುಗಡೆ: ಮುಂಡರಗಿ, ಹೂವಿನಹಡಗಲಿ, ಹರಪನಹಳ್ಳಿಯ ಸುಮಾರು 57 ಕಿ.ಮೀ. ದ್ವಿಪಥ ರಸ್ತೆ ಅಭಿವೃದ್ಧಿಗಾಗಿ ಸರ್ಕಾರ ರು. 129 ಕೋಟಿ ಬಿಡುಗಡೆ ಮಾಡಿದೆ. ಈ ರಸ್ತೆ ಹಾಯ್ದು ಹೋಗುವ ಗ್ರಾಮಗಳಲ್ಲಿ ರಸ್ತೆಗೆ ಅಗತ್ಯವಿರುವ ಭೂಮಿ ಪಡೆಯಲು ಭೂಸ್ವಾಧೀನಕ್ಕಾಗಿ ಸರ್ವೇ ಕಾರ್ಯ ಆರಂಭವಾಗಿದೆ ಎಂದು ರಾಜ್ಯ ಹೆದ್ದಾರಿ ಪ್ರಾಧಿಕಾರ ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಅರಬಾವಿ-ಚಳಕೇರಿ ರಾಜ್ಯ ಹೆದ್ದಾರಿ ಕಾಮಗಾರಿಯನ್ನು ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮ (ಕೆಆರ್ಡಿಸಿಎಲ್)ಗೆ ವಹಿಸಿದ್ದು, ಮುಂಡರಗಿ, ಹೂವಿನಹಡಗಲಿ, ಹರಪನಹಳ್ಳಿ ತಾಲೂಕಿನ ರಸ್ತೆ ಅಭಿವೃದ್ಧಿಗಾಗಿ ರು. 129 ಕೋಟಿ ಬಿಡುಗಡೆಯಾಗಿದೆ. 5-6 ತಿಂಗಳೊಳಗೆ ಟೆಂಡರ್ ಕರೆಯಬಹುದು ಎಂದು ತಿಳಿಸಿದ್ದಾರೆ.
18.78 ಕೋಟಿ ಬಿಡುಗಡೆ: ಮೈಲಾರ-ತೋರಣಗಲ್ಲು ರಾಜ್ಯ ಹೆದ್ದಾರಿಯ ಹೂವಿನಹಡಗಲಿ, ಹಗರಿಬೊಮ್ಮನಹಳ್ಳಿ ಮತ್ತು ಕೂಡ್ಲಿಗಿ ತಾಲೂಕಿನ 57 ಕಿ.ಮೀ. ರಸ್ತೆ ಅಭಿವೃದ್ಧಿಗಾಗಿ ರು. 18.78 ಕೋಟಿ ಬಿಡುಗಡೆಯಾಗಿ ಟೆಂಡರ್ ಪ್ರಕ್ರಿಯೆ ಮುಗಿದಿದೆ. ಕಾಮಗಾರಿ ಮಾಡಲು ಅನುಮತಿ ನೀಡುವ ಕೆಲಸ ಮಾತ್ರ ಬಾಕಿ ಉಳಿದಿದೆ.
ರು. 12.14 ಕೋಟಿ: ಇನ್ನು ಅರಬಾವಿ-ಚಳಕೇರಿ ರಾಜ್ಯ ಹೆದ್ದಾರಿಯ 25.06 ಕಿ.ಮೀ ರಸ್ತೆ ಅಭಿವೃದ್ಧಿಗಾಗಿ ರು. 12.14 ಕೋಟಿ ಬಿಡುಗಡೆಯಾಗಿದೆ. ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಏಜೆನ್ಸಿ ನಿಗದಿ ಮಾಡಬೇಕಿದೆ. ಇದರಿಂದ ಹೂವಿನಹಡಗಲಿ ತಾಲೂಕಿನ 18 ಕಿ.ಮೀ ರಸ್ತೆ ಅಭಿವೃದ್ಧಿಯಾಗಲಿದೆ.
ರು. 12.85 ಕೋಟಿ ಪ್ರಸ್ತಾವನೆ: ಪ್ರಕೃತಿ ವಿಕೋಪ ಬಂದಾಗ ನದಿ ತೀರದ ಮಾಗಳ, ಹೊಸಹಳ್ಳಿ, ಅಂಗೂರು, ಕೋಟಿಹಾಳು, ಮಕರಬ್ಬಿ, ಬ್ಯಾಲಹುಣ್ಸಿ, ನಂದಿಗಾವಿ ಸೇರಿದಂತೆ ಅನೇಕ ಗ್ರಾಮಗಳು ರಸ್ತೆ ಸಂಪರ್ಕ ಕಡೆದುಕೊಳ್ಳುತ್ತವೆ. ಇದರಿಂದ ಪ್ರಕೃತಿ ವಿಕೋಪದಡಿ ರು. 12.85 ಕೋಟಿ ಕ್ರಿಯಾ ಯೋಜನೆ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಶೀಘ್ರ ಅನುದಾನ ಬಿಡುಗಡೆಯಾಗುವ ನಿರೀಕ್ಷೆಯಲ್ಲಿದ್ದೇವೆ ಎನ್ನುತ್ತಾರೆ ರಾಜ್ಯ ಹೆದ್ದಾರಿ ಪ್ರಾಧಿಕಾರ ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಉನ್ನತ ಅಧಿಕಾರಿಗಳು.
ಜಿಲ್ಲಾ ಮುಖ್ಯ ರಸ್ತೆಗೆ ಪ್ರಸ್ತಾವನೆ: ಮೈಲಾರ-ತೋರಣಗಲ್ಲು ರಾಜ್ಯ ಹೆದ್ದಾರಿ ಸಂಪರ್ಕ ಕಲ್ಪಿಸುವ ಕತ್ತೆಬೆನ್ನೂರು- ಬನ್ನಿಮಟ್ಟಿ, ಶಿವಪುರ, ಶಿವಪುರತಾಂಡಾ-ಮಾಗಳ ಹಾಗೂ ಕಾಲ್ವಿತಾಂಡಾ, ಹಂಪಸಾಗರ, ಸೋವೇನಹಳ್ಳಿ-ಕೊಂಬಳಿ ಹಳ್ಳಿ ರಸ್ತೆಗಳನ್ನು ಜಿಲ್ಲಾ ಮುಖ್ಯ ರಸ್ತೆಯನ್ನಾಗಿ ಮೇಲ್ದರ್ಜೆಗೇರಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ರಾಜ್ಯ ಹೆದ್ದಾರಿಗೆ ಶುಭಕಾಲ ಕೂಡಿ ಬಂದಿದ್ದು, ಇದಕ್ಕಾಗಿ ಒಟ್ಟು ರು. 159.92 ಕೋಟಿ ಬಿಡುಗಡೆಯಾಗಿದೆ. ಶೀಘ್ರದಲ್ಲೇ ಕಾಮಗಾರಿ ಪ್ರಾರಂಭಿಸಿ ಸುಗಮ ಸಂಚಾರ ಕಲ್ಪಿಸಿಕೊಡಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.