ಬಳ್ಳಾರಿ

ಸಿನರ್ಜಿ-13 ಅಂತರ್ ಕಾಲೇಜು ಸ್ಪರ್ಧೆ

Published On :

ಬಳ್ಳಾರಿ: ನಗರದ ಬಳ್ಳಾರಿ ಇನ್ಸಿಟಿಟ್ಯೂಟ್ ಆಫ್ ಟೆಕ್ನಾಲಜಿ ಆಂಡ್ ಮ್ಯಾನೇಜ್‌ಮೆಂಟ್ ಸಂಸ್ಥೆಯು ಆಯೋಜಿಸಿದ್ದ ಸಿನರ್ಜಿ-13 ಅಂತರ ಕಾಲೇಜು ಸ್ಪರ್ಧೆಯಲ್ಲಿ ಸರಳಾದೇವಿ ಸರ್ಕಾರಿ ಪದವಿ ಕಾಲೇಜಿನ ಬಿಸಿಎ ವಿದ್ಯಾರ್ಥಿಗಳು ವಿವಿಧ ವಿಭಾಗಗಳಲ್ಲಿ 3 ಪ್ರಥಮ ಸ್ಥಾನ ಪಡೆದಿದ್ದಾರೆ.
ಬಿಐಟಿಎಂ ಕಾಲೇಜಿನ ಎಂಸಿಎ ವಿಭಾಗ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಟೆಕ್ನಿಕಲ್ ರಸಪ್ರಶ್ನೆ, ಟ್ರೆಜರ್ ಹಂಟ್ ಮತ್ತು ಕೋಡ್ ಬ್ರೇಕಿಂಗ್ ಸ್ಪರ್ಧೆಗಳಲ್ಲಿ ಸರಳಾದೇವಿ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ವಿದ್ಯಾರ್ಥಿಗಳಾದ ಜಿ.ಪಿ. ಭಾರತಿ, ಕೆ. ಸಫೀ ಉಲ್ಲಾ, ಜಿ. ರಾಜೇಶ್, ಎಚ್.ವೈ. ವಿನೋದ್ ಕುಮಾರ್, ಆರ್.ಕೆ. ಪದ್ಮಶ್ರೀ, ನಗ್ಮಾಸುಲ್ತಾನ, ಎಸ್. ದೇವಿಕಾ, ಎಸ್. ಕರೀಷ್ಮಾ, ವಿ.ಬಿ. ಸತ್ಯನಾರಾಯಣ, ಎಂ. ಜುಬೇದಾ ಬೇಗಂ ವಿದ್ಯಾರ್ಥಿಗಳು ಪ್ರತ್ಯೇಕ ಗುಂಪುಗಳಲ್ಲಿ ಪ್ರಥಮ ಬಹುಮಾನ ಗಳಿಸಿದ್ದಾರೆ.
ವಿಜೇತ ವಿದ್ಯಾರ್ಥಿಗಳನ್ನು ಕಾಲೇಜು ಪ್ರಾಚಾರ್ಯ ಪ್ರೊ.ಡಿ.ಗಂಗಣ್ಣ, ವಿಭಾಗದ ಮುಖ್ಯಸ್ಥ ಹರೀಶ್ ಎಸ್. ಗುಜ್ಜಾರ್, ಗಂಗಾ ಶಿರೀಷಾ, ಪಿ.ಎನ್. ಸುಮಲತಾ, ಎಸ್. ರೇಣುಕಾ, ಸಿಬ್ಬಂದಿ ಅಭಿನಂದಿಸಿದ್ದಾರೆ.
ಗ್ರಾಮಾಭಿವೃದ್ಧಿಗೆ ಯೋಜನೆ ಜಾರಿ
ಹಗರಿಬೊಮ್ಮನಹಳ್ಳಿ: ಮೂಲ ಸೌಲಭ್ಯ ವಂಚಿತ ಗಡಿಗ್ರಾಮಗಳು ಸೇರಿದಂತೆ ಕ್ಷೇತ್ರದ ಪ್ರತಿ ಗ್ರಾಮಗಳ ಅಭಿವೃದ್ಧಿಗೆ ಅಗತ್ಯ ಕಾರ್ಯಗಳ ನೀಲನಕ್ಷೆ ರೂಪಿಸಿದ್ದು, ಸುವರ್ಣಗ್ರಾಮ ಸೇರಿದಂತೆ ಅಭಿವೃದ್ಧಿಗೆ ಸಾಥ್ ನೀಡುವ ಯೋಜನೆಗಳನ್ನು ಹೆಚ್ಚೆಚ್ಚು ಜಾರಿಗೊಳಿಸಲಾಗುವುದು ಎಂದು ಶಾಸಕ ಎಸ್. ಭೀಮಾನಾಯ್ಕ ಭರವಸೆ ನೀಡಿದರು.
ಮಂಗಳವಾರ ಮಧ್ಯಾಹ್ನ ತಾಲೂಕಿನ ಮಾದೂರಿನಲ್ಲಿ 4ನೇ ಹಂತದ ಸುವರ್ಣಗ್ರಾಮ ಯೋಜನೆಗೆ ಚಾಲನೆ ಹಾಗೂ ನೂತನ ಸಮುದಾಯ ಭವನಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು. ತಾಲೂಕಿನ ಆನೆಕಲ್ಲು ತಾಂಡಾದಲ್ಲಿ ರು. 10 ಲಕ್ಷ ವೆಚ್ಚದ ನೂತನ ಸಿಸಿ ರಸ್ತೆ ಕಾಮಗಾರಿ, ಶಾಲಾ ಕೊಠಡಿ ಕಾಮಗಾರಿಗೆ ಚಾಲನೆ ನೀಡಿದರು. ಜಿಪಂ ಪ್ರಭಾರಿ ಅಧ್ಯಕ್ಷೆ ಮಮತಾ ಸುರೇಶ್, ಜಿಪಂ ಸದಸ್ಯರಾದ ರೋಗಾಣಿ ಹುಲುಗಪ್ಪ, ಹೇಮ್ಲವ್ವ ಕೃಷ್ಣನಾಯ್ಕ, ತಾಪಂ ಸದಸ್ಯರಾದ ಉಪ್ಪಾರ ಬಾಲಪ್ಪ, ಭಾರತಮ್ಮ ಬೆಲ್ಲದ, ಜೆಡಿಎಸ್ ತಾಲೂಕಾಧ್ಯಕ್ಷ ವೈ. ಮಲ್ಲಿಕಾರ್ಜುನ, ಹಂಚಿನಮನಿ ಹನುಮಂತಪ್ಪ, ತಾಪಂ ಮಾಜಿ ಸದಸ್ಯ ದೇವೇಂದ್ರಪ್ಪ ಇದ್ದರು.
ಕ್ರೀಡಾಳುಗಳಿಗೆ ಅಭಿನಂದನೆ
ಕೂಡ್ಲಿಗಿ: ಕೂಡ್ಲಿಗಿ ಪಟ್ಟಣದ ಮಹಾದೇವ ಮೈಲಾರ ಕ್ರಿಡಾಂಗಣದಲ್ಲಿ ನಡೆದ ಪದವಿಪೂರ್ವ ಕಾಲೇಜುಗಳ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಜ್ಞಾನಮಂಟಪ ಕಾಲೇಜಿನ ಬಾಲಕಿಯರ ಬಾಲ್‌ಬ್ಯಾಡ್ಮಿಂಟನ್ ವಿಭಾಗದಲ್ಲಿ ಹಾಗೂ ಬಾಲಕರು ಷಟಲ್ ಬ್ಯಾಡ್ಮಿಂಟನ್ ವಿಭಾಗದಲ್ಲಿ ಸತತ ಎರಡನೇ ಬಾರಿಗೆ ಜಯ ಸಾಧಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಅಲ್ಲದೇ ಬಾಲಕರ ಚೆಸ್ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಜಯ ಸಾಧಿಸಿದ ವಿದ್ಯಾರ್ಥಿಗಳನ್ನು ಸಂಸ್ಥೆ ಅಧ್ಯಕ್ಷ ಜಿ. ಉಮೇಶ್ ಹಾಗೂ ಕಾರ್ಯದರ್ಶಿ ಜಿ. ಶ್ರೀಧರ್ ಮತ್ತು ಕಾಲೇಜಿನ ಪ್ರಾಚಾರ್ಯರು, ಉಪನ್ಯಾಸಕ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.
ಗಣಿತ ಪರೀಕ್ಷೆ
ಕೊಟ್ಟೂರು: ಮಕ್ಕಳಿಗೆ ಗಣಿತ, ವಿಜ್ಞಾನಗಳು ಅಚ್ಚುಮೆಚ್ಚಿನವುಗಳಾಗಬೇಕು. ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಮತ್ತು ಅಧಿಕಾರಿಗಳು ಕಾರ್ಯರೂಪಕ್ಕೆ ತಂದಿರುವ ಗಣಿತ ವಿಜ್ಞಾನ ಒಲಂಪಿಯಾಡ್ ಪರೀಕ್ಷೆ ಈ ಎರಡೂ ವಿಷಯಗಳ ರಹಸ್ಯಗಳನ್ನು ಮಕ್ಕಳಿಗೆ ತಿಳಿಸಲು ಸಹಕಾರಿಯಾಗುತ್ತದೆ ಎಂದು ಇಲ್ಲಿನ ಗುರುಬಸವೇಶ್ವರ ಸರ್ಕಾರಿ ಹಿ.ಪ್ರಾ. ಶಾಲೆಯ ಮುಖ್ಯಗುರು ಎಚ್.ಎಂ. ಗುರುಬಸವರಾಜ ಹೇಳಿದರು. ತಮ್ಮ ಶಾಲೆಯಲ್ಲಿ 6ನೇ ತರಗತಿ ಮಕ್ಕಳಿಗೆ ಇತ್ತೀಚೆಗೆ ಏರ್ಪಡಿಸಲಾಗಿದ್ದ ಒಲಂಪಿಯಾಡ್ ಗಣಿತ ಪರೀಕ್ಷೆಯಲ್ಲಿ ಯಶಸ್ವಿಯಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಮಾತನಾಡಿದ ಅವರು, ಇಂತಹ ಒಲಂಪಿಯಾಡ್‌ಗಳು ಮಕ್ಕಳಲ್ಲಿ ಅಡಗಿರುವ ಪ್ರತಿಭೆಗಳಿಗೆ ವೇದಿಕೆಗಳಾಗುತ್ತವೆ. ಶಾಲೆಗಳಲ್ಲಿ ಕಲಿಕೆಯ ಅರ್ಥಪೂರ್ಣತೆ ಇದರಿಂದ ಖಂಡಿತಾ ನೆರವೇರುತ್ತದೆ ಎಂದರು. ಶಿಕ್ಷಕಿಯರಾದ ಎಸ್.ಎಂ. ನಳಿನಿ, ಎನ್.ಎಂ.ಸಿ ಓಂಕಾರಮ್ಮ, ಶಶಿಕಲಾ ಮತ್ತಿತರರು ಈ ಒಲಂಪಿಯಾಡ್ ಪರೀಕ್ಷೆಯಲ್ಲಿ ತೊಡಗಿಸಿಕೊಂಡಿದ್ದರು.
ಅರ್ಜಿ ಆಹ್ವಾನ
ಬಳ್ಳಾರಿ:  ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ ಹಾಗೂ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡದ ನಿಗಮದ ವತಿಯಿಂದ ಪರಿಶಿಷ್ಟ ಜಾತಿ-ವರ್ಗದ ನಿರುದ್ಯೋಗಿ ಯುವಕ-ಯುವತಿಯರಿಗೆ ವಿವಿಧ ಯೋಜನೆಗಳಡಿ ಸಾಲ ಸೌಲಭ್ಯ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಸ್ವಯಂ ಉದ್ಯೋಗ-ಐಎಸ್‌ಬಿ, ಸಫಾಯಿ ಕರ್ಮಚಾರಿ, ಗಂಗಾ ಕಲ್ಯಾಣ, ನೇರ ಸಾಲ, ಮೈಕ್ರೋ ಕ್ರೆಡಿಟ್ ಕಿರುಸಾಲ, ವೈಯಕ್ತಿಕ ನೀರಾವರಿ ಕೊಳವೆ ಬಾವಿ, ಭೂ ಒಡೆತನ ಯೋಜನೆಯಡಿ ಸಾಲ ಸೌಲಭ್ಯ ನೀಡಲಾಗುವುದು.  ಈಗಾಗಲೇ ಈ ಸೌಲಭ್ಯ ಪಡೆದವರು ಮತ್ತೆ ಅರ್ಜಿ ಸಲ್ಲಿಸಲು ಅವಕಾಶವಿಲ್ಲ ಹಾಗೂ ಈ ಹಿಂದೆ ಅರ್ಜಿ ಸಲ್ಲಿಸಿ ಸವಲತ್ತು ಪಡೆಯದೇ ಇರುವವರು ಮತ್ತೆ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ. ಬಳ್ಳಾರಿ ತಾಲೂಕು ಹೊರತುಪಡಿಸಿ ಉಳಿದಂತೆ ಆಯಾ ತಾಲೂಕು ಸಮಾಜ ಕಲ್ಯಾಣ ಇಲಾಖೆ ಅಥವಾ ತಾಲೂಕು ಪಂಚಾಯತಿಯಲ್ಲಿರುವ ನಿಗಮದ ತಾಲೂಕು ಅಭಿವೃದ್ಧಿ ಅಧಿಕಾರಿಗಳಿಂದ ನಿಗದಿತ ಅರ್ಜಿ ಪಡೆದು ಸೆಪ್ಟೆಂಬರ್ 16ರೊಳಗಾಗಿ ಸಲ್ಲಿಸಬೇಕೆಂದು ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.