ಬಳ್ಳಾರಿ

ಅಪಘಾತ ಸ್ಥಳಕ್ಕೆ ಬರಲಿದೆ ಮೊಬೈಲ್ ಆಸ್ಪತ್ರೆ

Published On :

ಕನ್ನಡಪ್ರಭ ವಾರ್ತೆ, ಬಳ್ಳಾರಿ, ಸೆ. 6
ಬಳ್ಳಾರಿ ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಹಲವು ಜನಪರ ಹೊಸ ಪ್ರಯೋಗಗಳು ನಡೆಯುತ್ತಿವೆ. ಭಾರಿ ಅಪಘಾತಕ್ಕೆ ಒಳಗಾದವರ ಪ್ರಾಣ ರಕ್ಷಣೆಗೆ ಅಪಘಾತ ಸ್ಥಳದಲ್ಲೇ ಚಿಕಿತ್ಸೆ ನೀಡಲು ರು. 66 ಲಕ್ಷ ವೆಚ್ಚದಲ್ಲಿ ಸಂಚಾರಿ ಆಸ್ಪತ್ರೆಯನ್ನು ಜಿಲ್ಲಾಡಳಿತ ಹಾಗೂ ವಿಮ್ಸ್ ಜಂಟಿಯಾಗಿ ವ್ಯವಸ್ಥೆ ಮಾಡುತ್ತಿವೆ.
ಅಪಘಾತ ಸ್ಥಳದಲ್ಲೇ ಮೈನರ್ ಓಟಿ, ವೆಂಟಿಲೇಟರ್ ವ್ಯವಸ್ಥೆ, ಆರು ಬೆಡ್‌ಗಳ ಸೌಲಭ್ಯವನ್ನು ಈ ವಾಹನ ಹೊಂದಿರುತ್ತದೆ. ಅಪಘಾತಕ್ಕೊಳಗಾದವರಿಗೆ ಹೆಚ್ಚಿನ ಚಿಕಿತ್ಸೆ ನೀಡಲು ಈ ಸಂಚಾರಿ ಆಸ್ಪತ್ರೆ ಬರುತ್ತದೆ. ಇತ್ತೀಚಿನ ದಿನಗಳಲ್ಲಿ ಭಾರಿ ಅಪಘಾತಗಳು ಸಂಭವಿಸುತ್ತಿರುವುದರಿಂದ ಅಪಘಾತ ಸ್ಥಳದಿಂದ ಆಸ್ಪತ್ರೆಗೆ ಕರೆದೊಯ್ಯುವ ಹೊತ್ತಿಗೆ ಅನೇಕರು ಪ್ರಾಣತೆತ್ತ ಸಾಕಷ್ಟು ಉದಾಹರಣೆಗಳಿಗವೆ. ಅವುಗಳನ್ನು ತಡೆದು, ಜನತೆ ಪ್ರಾಣ ರಕ್ಷಿಸಲು ಜಿಲ್ಲಾಡಳಿತ ಹೊಸ ಪ್ರಯೋಗಕ್ಕೆ ಕೈ ಹಾಕಿದೆ.
ರು. 66 ಲಕ್ಷ: ಅಪಘಾತ ಸ್ಥಳದಲ್ಲಿ ಅಪಘಾತಕ್ಕೀಡಾದವರ ಶಸ್ತ್ರಚಿಕಿತ್ಸೆಗೆ ಸಂಚಾರಿ ಆಸ್ಪತ್ರೆಯಲ್ಲಿ ಮೈನರ್ ಓಟಿ ವ್ಯವಸ್ಥೆ ಇರುತ್ತದೆ. ಅಪಘಾತವಾದ ಕೂಡಲೇ ಟೋಲ್ ಫ್ರೀ ನಂಬರ್‌ಗೆ ಕರೆ ಮಾಡಿದರೆ ಈ ಸಂಚಾರಿ ಆಸ್ಪತ್ರೆಗೆ ಸ್ಥಳಕ್ಕೆ ಧಾವಿಸಿ ಗಾಯಾಳುಗಳಿಗೆ ಲಘು ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ. ಇದರ ವ್ಯವಸ್ಥೆಗಾಗಿ ಈಗಾಗಲೇ ಜಿಲ್ಲಾಧಿಕಾರಿ ಅಮ್ಲಾನ್ ಆದಿತ್ಯ ಬಿಸ್ವಾಸ್ ತಮ್ಮ ಇನೋವೇಷನ್ ಫಂಡ್‌ನಲ್ಲಿ ರು. 60 ಲಕ್ಷ ಹಾಗೂ ವಿಮ್ಸ್‌ನವರು ರು. 6 ಲಕ್ಷ ನೀಡಿದ್ದಾರೆ. ಒಟ್ಟು ರು. 66 ಲಕ್ಷದಲ್ಲಿ ಮೊಬೈಲ್ ಆಸ್ಪತ್ರೆ ಸಿದ್ಧವಾಗುತ್ತಿದೆ.
ಸೌಲಭ್ಯ: ಆಸ್ಪತ್ರೆಯಲ್ಲಿ ಇರುವ ಎಲ್ಲ ಸೌಲಭ್ಯಗಳು ಈ ಸಂಚಾರಿ ಆಸ್ಪತ್ರೆಯಲ್ಲಿ ಇರುತ್ತವೆ. ಎರಡು ವೆಂಟಿಲೇಟರ್, 1 ಮೈನರ್ ಓಟಿ, 6 ಬೆಡ್‌ಗಳು, ಜನರೇಟರ್ ವ್ಯವಸ್ಥೆ, ಟಾಯ್ಲೆಟ್, ವಾಶ್‌ಬೇಸಿನ್, ಮೊಬೈಲ್ ಎಕ್ಸ್‌ರೇ, ಏರಿಯಾ ಲೈಟ್ ವ್ಯವಸ್ಥೆ ಇರುತ್ತದೆ. ಅಲ್ಲದೇ ಮಾನಸಿಕ ತಜ್ಞ, ಕೀಲು, ಮೂಳೆ ವೈದ್ಯ, ಶಸ್ತ್ರಚಿಕಿತ್ಸಾ ತಜ್ಞರು, ಪಿಜಿಷಿಯನ್, ಓರ್ವ ಅಳವಳಿಕೆ ವೈದ್ಯ, ನರ್ಸ್‌ಗಳು ಇಲ್ಲಿರುತ್ತಾರೆ. ಅಪಘಾತಕ್ಕೊಳಗಾದವರಿಗೆ ಗಂಭೀರ ಗಾಯವಾಗದಿದ್ದರೂ, ಮಾನಸಿಕವಾಗಿ ಕುಗ್ಗಿರುತ್ತಾರೆ. ಅಂಥವರನ್ನು ಮಾನಸಿಕ ತಜ್ಞರು ಕೌನ್ಸೆಲಿಂಗ್ ಮಾಡಿ ಅವರಲ್ಲಿ ಧೈರ್ಯ ತುಂಬುವ ಕೆಲಸ ಮಾಡುತ್ತಾರೆ. ಅದಕ್ಕಾಗಿ ಮಾನಸಿಕ ತಜ್ಞರ ವ್ಯವಸ್ಥೆ ಇಲ್ಲಿರುತ್ತದೆ. ಇದಲ್ಲದೇ ಅಪಘಾತ ಸ್ಥಳದಲ್ಲಿ ಟೆಂಟ್ ಹಾಕಲು ವ್ಯವಸ್ಥೆ ಮಾಡಲಾಗಿದೆ. ಅಲ್ಲಿ ಬೆಡ್‌ಗಳು ಇರುತ್ತವೆ. ಲಘು ಶಸ್ತ್ರಚಿಕಿತ್ಸಾ ಕೊಠಡಿ ಆ್ಯಂಬುಲೆನ್ಸ್‌ನಲ್ಲೇ ಇರುತ್ತದೆ.
ಮೂರು ಕಾರಣಕ್ಕಿದು ಸಹಕಾರಿ: ಅಪಘಾತ ಸಂದರ್ಭದಲ್ಲಿ ವೈದ್ಯಕೀಯ ಭಾಷೆಯಲ್ಲಿ ಬಿಳಿ, ಹಳದಿ, ಕೆಂಪು, ಕಪ್ಪು ಎಂದು ಗುರುತಿಸುವ ಮೂಲಕ ಅಪಘಾತಕ್ಕೆ ಚಿಕಿತ್ಸೆಗೆ ಅಣಿಯಾಗುತ್ತಾರೆ. ಗಾಯಾಳುಗಳನ್ನು ಕಪ್ಪು ಎಂದು ಗುರುತಿಸಿದರೆ ಮೃತಪಟ್ಟವರು, ಬಿಳಿಯೆಂದು ಗುರುತಿಸಿದರೆ ಅವರಿಗೆ ಯಾವುದೇ ಪ್ರಾಣಾಪಾಯವಿಲ್ಲವೆಂದು, ಹಳದಿ ಎಂದರೆ ಸ್ವಲ್ಪ ಗಂಭೀರ ಗಾಯವೆಂದು, ಕೆಂಪು ಎಂದು ಗುರುತಿಸಿದರೆ ಅವರು ಸಾವು ನೋವಿನ ಮಧ್ಯೆ ಹೋರಾಡುತ್ತಿರುತ್ತಾರೆ. ಇದರಿಂದಾಗಿ ಅಪಘಾತ ಸ್ಥಳದಲ್ಲಿ ವೈದ್ಯರಿದ್ದು ಕೆಂಪು ಮತ್ತು ಹಳದಿ ಸ್ಥಿತಿಯಲ್ಲಿರುವವರ ಶುಶ್ರೂಷೆ ಮಾಡುತ್ತಾರೆ. ವಾಹನಗಳ ಮಧ್ಯೆ ಕೈ ಕಾಲು ಹಾಕಿಕೊಂಡಿರುತ್ತವೆ. ಆಗ ಅಂತಹವರನ್ನು ಹೇಗೆ ರಕ್ಷಣೆ ಮಾಡಬಹುದು ಎಂದು ವೈದ್ಯರಿಗೆ ತಿಳಿಯುತ್ತದೆ. ಜನಸಾಮಾನ್ಯರು ಅಪಘಾತವಾದ ತಕ್ಷಣ ಮೃತರ ಶವಗಳನ್ನು ಸಾಗಿಸಲು ಮುಂದಾಗುತ್ತಾರೆ. ಆದರೆ ವೈದ್ಯರು ಸ್ಥಳದಲ್ಲಿದ್ದರೆ, ಕೆಂಪು ಸ್ಥಿತಿಯಲ್ಲಿರುವ ಗಾಯಾಳುಗಳ ಚಿಕಿತ್ಸೆಗೆ ಆದ್ಯತೆ ನೀಡುತ್ತಾರೆ. ಇಂತಹ ಎಲ್ಲ ಸೌಲಭ್ಯಗಳಿಂದ ಮೊಬೈಲ್ ಆಸ್ಪತ್ರೆ ಅನುಕೂಲಕಾರಿಯಾಗುತ್ತದೆ.
ಜಿಲ್ಲಾಧಿಕಾರಿಯವರ ಮಹತ್ವಾಕಾಂಕ್ಷಿ ಯೋಜನೆ ಇದಾಗಿದ್ದು, ರು. 60 ಲಕ್ಷ ಇದಕ್ಕಾಗಿ ನೀಡಿದ್ದಾರೆ. ವಿಮ್ಸ್‌ನಿಂದ ರು. 6 ಲಕ್ಷ ಸೇರಿ ಒಟ್ಟು ರು. 66 ಲಕ್ಷ ವೆಚ್ಚದಲ್ಲಿ ಮೊಬೈಲ್ ಆಸ್ಪತ್ರೆ ವ್ಯವಸ್ಥೆ ಮಾಡಲಾಗಿದೆ. ಇನ್ನು ನಾಲ್ಕು ವಾರಗಳಲ್ಲಿ ಮೊಬೈಲ್ ಆಸ್ಪತ್ರೆ ಸಿದ್ಧಗೊಳ್ಳಲಿದೆ ಎನ್ನುತ್ತಾರೆ ವಿಮ್ಸ್ ನಿರ್ದೇಶಕ ಲಕ್ಷ್ಮಿ ನಾರಾಯಣ ರೆಡ್ಡಿ, ಪ್ರಾಚಾರ್ಯ ವಿದ್ಯಾಧರ ಕಿನ್ನಾಳ. ಕೆಟ್ಟ ಹೆಸರಿನಿಂದ ಹೆಸರಾಗಿದ್ದ ಬಳ್ಳಾರಿಯಲ್ಲಿ ಜಿಲ್ಲಾಡಳಿತದ ಮೂಲಕ ನಡೆಯುತ್ತಿರುವುದು ಶ್ಲಾಘನೀಯ ಕೆಲಸ ಎಂದೇ ಜನತೆ ಮಾತನಾಡಿಕೊಳ್ಳುತ್ತಿದ್ದಾರೆ.
-ಶಶಿಧರ ಮೇಟಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.