ಗಣೇಶ ಮೂರ್ತಿ ಸ್ಥಾಪನೆಗೆ ನಿಷೇಧ
ಕನ್ನಡಪ್ರಭ ವಾರ್ತೆ, ಕೊಟ್ಟೂರು, ಸೆ. 6
ಪಟ್ಟಣದ ಅಂಬೇಡ್ಕರ್ ಮತ್ತು ವಾಲ್ಮೀಕಿ ನಗರದ ಸ್ಥಳಗಳಲ್ಲಿ ಈ ಬಾರಿಯೂ ಗಣೇಶ ಮೂರ್ತಿ ಪ್ರತಿಷ್ಠಾಪಿಸುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿಗಳ ಆದೇಶ ಹೊರಬೀಳಲಿದೆ. ಈಗಾಗಲೇ ಈ ಸಂಬಂಧ ಪ್ರಸ್ತಾವನೆ ಸಲ್ಲಿಕೆಯಾಗಿದೆ ಎಂದು ಕೂಡ್ಲಿಗಿ ಡಿವೈಎಸ್ಪಿ ಪಿ.ಡಿ. ಗಜಕೋಶ ತಿಳಿಸಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಗೌರಿ-ಗಣೇಶ ಹಬ್ಬದ ನಿಮಿತ್ತ ಕರೆದಿದ್ದ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ಕಿಡಿಗೇಡಿಗಳು ಗುಂಪು ಕಟ್ಟಿಕೊಂಡು ಗಣೇಶೋತ್ಸವದ ನೆಪದಲ್ಲಿ ದಾಂದಲೆ ಎಬ್ಬಿಸುವ ಸಾಧ್ಯತೆಗಳ ಸೂಚನೆ ಇರುವ ಹಿನ್ನೆಲೆಯಲ್ಲಿ ಈ ಕ್ರಮ ಜರುಗಿಸಲಾಗಿದೆ. ಯಾವುದೇ ಹಂತದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಬಾರದಂತೆ ಗಮನಹರಿಸುವುದು ಇಲಾಖೆಯ ಜವಾಬ್ದಾರಿ. ಗಣೇಶೋತ್ಸವ ನೆಪದಲ್ಲಿ ತೊಂದರೆ ಕೊಡುವುದು ಕಂಡುಬಂದರೆ ತಕ್ಷಣ ಕ್ರಮ ಜರುಗಿಸುತ್ತೇವೆ ಎಂದರು.
ಎಚ್ಚರ ವಹಿಸಿ: ಸಾರ್ವಜನಿಕ ಗಣೇಶೋತ್ಸವಗಳಿಗಾಗಿ ಈಗಾಗಲೇ ಅರ್ಜಿ ಸಲ್ಲಿಸಿರುವ ಸಮಿತಿಯವರು ಹಬ್ಬದ ನಿಮಿತ್ತ ಪೊಲೀಸ್ ಇಲಾಖೆ ವಿಧಿಸಿರುವ ಎಲ್ಲ ಬಗೆಯ ಷರತ್ತುಗಳಿಗೆ ಬದ್ಧರಾಗಿರಬೇಕು. ವಿದ್ಯುತ್, ಅಗ್ನಿಶಾಮಕ ಠಾಣೆ, ಪೊಲೀಸ್ ಠಾಣೆ, ಪಪಂಯಿಂದ ಧ್ವನಿವರ್ಧನಕ ಬಳಕೆಗೆ ಪರವಾನಗಿ ಪಡೆದುಕೊಳ್ಳಬೇಕು. ಗಣೇಶ ಮೂರ್ತಿಯನ್ನು ಕೂರಿಸಿದ ದಿನದಿಂದ ವಿಸರ್ಜನೆ ಮಾಡುವವರೆಗೂ ಯಾವುದೇ ಬಗೆಯ ಅತಿರೇಖಗಳು ಜರುಗದಂತೆ ಸಂಘ ಸಂಸ್ಥೆಗಳವರು ನೋಡಿಕೊಳ್ಳಬೇಕು ಎಂದು ಸೂಚಿಸಿದರು.
ಠಾಣೆಗೆ ವಿವರ ತಿಳಿಸಿ: ಪಿಎಸ್ಐ ಗುರುರಾಜ್ ಮೈಲಾರ ಮಾತನಾಡಿ, ಎಲ್ಲ ಸಂಘ ಸಂಸ್ಥೆಗಳವರು ವಿಸರ್ಜನೆ ದಿನಾಂಕ ಮುಂಚಿತವಾಗಿ ತಿಳಿಸತಕ್ಕದ್ದು, ಪಟ್ಟಣದ ಬನಶಂಕರಿ ದೇವಸ್ಥಾನದ ಮುಂಭಾಗದಲ್ಲಿ ಹಳೇ ಬಾವಿಯಲ್ಲಿ ಗಣೇಶ ವಿಸರ್ಜನೆಗೆ ಪಪಂ ನೆರವಿನಿಂದ ಕ್ರಮ ಕೈಗೊಳ್ಳಲಾಗುವುದು. ವಿಸರ್ಜಿಸುವ ದಿನ ಮೆರವಣಿಗೆ ಮತ್ತು ಮತ್ತಿತರ ಕಾರ್ಯಕ್ರಮಗಳ ಸಮಗ್ರ ವಿವರ ತಿಳಿಸಬೇಕು ಎಂದರು.
ಅಪರಾಧ ವಿಭಾಗದ ಪಿಎಸ್ಐ ದಶರಥ, ಅಗ್ನಿ ಶಾಮಕ ಠಾಣಾಧಿಕಾರಿ ರೇವಣಸಿದ್ದಯ್ಯ, ಎ.ಎಸ್.ಐ. ಕೊಟ್ರಯ್ಯ, ಎಚ್. ಗುರುಬಸವರಾಜ, ದುರುಗೇಶ್, ಹನುಮಂತಪ್ಪ, ಶ್ರೀನಿವಾಸ, ತೋಟದ ರಾಮು, ಪೋರಜ್ಜ, ವಿಜಯಕುಮಾರ್, ಬಿ. ಪ್ರಕಾಶ್, ಅರಮನಿ ರಾಜಪ್ಪ, ಹುಸೇನ್ಸಾಬ್, ರೇವಣ್ಣ ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

