12ರಂದು ಏತ ನೀರಾವರಿ ಯೋಜನೆ ಉದ್ಘಾಟನೆ
ಬಳ್ಳಾರಿ: ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿಗಮದ ವತಿಯಿಂದ ರಾಜರಾಜೇಶ್ವರಿ ಏತನೀರಾವರಿ ಯೋಜನೆ ಹಾಗೂ ತಾಯಮ್ಮ ದೇವಿ ಏತನೀರಾವರಿ ಯೋಜನೆಯ ಉದ್ಘಾಟನಾ ಕಾರ್ಯಕ್ರಮ ಸೆ. 12ರಂದು ಬೆಳಗ್ಗೆ 11 ಗಂಟೆಗೆ ಸಿರುಗುಪ್ಪದಲ್ಲಿ ಏರ್ಪಡಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ ನಿರ್ದೇಶಕ ಚೊಕ್ಕ ಬಸವನಗೌಡ ತಿಳಿಸಿದ್ದಾರೆ.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇಲ್ಲಿವರೆಗೆ ಬ್ಯಾಂಕ್ ವತಿಯಿಂದ 6 ಏತನೀರಾವರಿ ಯೋಜನೆಗೆ ಆರ್ಥಿಕ ನೆರವು ನೀಡಲಾಗಿದೆ. ಇದೀಗ 7 ಮತ್ತು 8ನೇ ಏತನೀರಾವರಿ ಯೋಜನೆಗೆ ಆರ್ಥಿಕ ಸಹಕಾರ ನೀಡಲಾಗುತ್ತಿದೆ. ನಬಾರ್ಡ್ ಮುಖ್ಯ ಪ್ರಧಾನ ವ್ಯವಸ್ಥಾಪಕ ಬಿ.ಆರ್. ಚಿಂತಾಲ ಕಾರ್ಯಕ್ರಮ ಉದ್ಘಾಟಿಸಲಿದ್ದು, ಸಿರುಗುಪ್ಪ ಶಾಸಕ ಬಿ.ಎಂ. ನಾಗರಾಜ್ ಅಧ್ಯಕ್ಷತೆ ವಹಿಸುವರು. ರಾಜರಾಜೇಶ್ವರಿ ಏತ ನೀರಾವರಿ ಯೋಜನೆಯ ಮೊದಲ ಹಂತದ ಯೋಜನೆಯನ್ನು ತಿಪಟೂರಿನ ಶಾಸಕ ಕೆ. ಷಡಕ್ಷರಿ ಉದ್ಘಾಟಿಸಿದ್ದಾರೆ. ಇನ್ನು ತಾಯಮ್ಮದೇವಿ ಏತನೀರಾವರಿ ಯೋಜನೆಯನ್ನು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಎ.ಆರ್. ಶಿವರಾಮ್, ರಾಜರಾಜೇಶ್ವರಿ ಏತನೀರಾವರಿ ಯೋಜನೆ 2ನೇ ಹಂತದ ಯೋಜನೆಯನ್ನು ಸಹಕಾರ ಸಂಘಗಳ ನಿಬಂಧಕ ಎನ್.ಎಸ್. ಚನ್ನಪ್ಪಗೌಡ ಉದ್ಘಾಟಿಸಲಿದ್ದಾರೆ ಎಂದರು.
ವಿವಿಧೆಡೆ ಅರ್ಥಿಕ ಸಹಾಯ: ಬ್ಯಾಂಕ್ ವತಿಯಿಂದ ಸುಮಾರು 7,700 ಎಕರೆ ಪ್ರದೇಶಕ್ಕೆ ಏತನೀರಾವರಿ ಯೋಜನೆಯ ಆರ್ಥಿಕ ಸಹಾಯ ನೀಡಿದ್ದು, ಈ ಪೈಕಿ ಸಿರುಗುಪ್ಪ ತಾಲೂಕಿನ ಇಬ್ರಾಂಪುರದಲ್ಲಿ ರು. 1.12 ಕೋಟಿ, ಬಾಗೇವಾಡಿಯಲ್ಲಿ ರು. 1.37 ಕೋಟಿ, ನಡವಿ ಗ್ರಾಮದಲ್ಲಿ ರು. 1.26 ಕೋಟಿ, ಹಚ್ಚೊಳ್ಳಿ ಗ್ರಾಮದ ಯೋಜನೆಗೆ ರು. 66.39 ಲಕ್ಷ ಆರ್ಥಿಕ ನೆರವು ನೀಡಲಾಗಿದೆ. ಬ್ಯಾಂಕ್ 2013-14ನೇ ಸಾಲಿಗೆ ರು. 1.58 ಕೋಟಿ ಸಾಲ ವಿತರಿಸುವ ಗುರಿ ಹೊಂದಿದೆ. ಇನ್ನು 2012-13ರಲ್ಲಿ ರು. 1.52 ಕೋಟಿ ಬೆಳೆಸಾಲ ನೀಡಲಾಗಿದೆ. ಸರ್ಕಾರದ ಸಾಲಮನ್ನಾದಿಂದ 210 ಫಲಾನುಭವಿ ರೈತರಿಗೆ ರು. 59,74,205 ಅನುಕೂಲವಾಗಿದೆ ಎಂದರು.
ನಬಾರ್ಡ್ ಬ್ಯಾಂಕಿನ ಕೆಲವೊಂದು ಜಾರಿಗೆ ತಂದಿರುವ ಹೊಸ ನಿಯಮಗಳು ಸಹಕಾರಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ಗಳನ್ನು ಏಜೆಂಟರಂತೆ ಮಾಡಲು ಹೊರಟಿವೆ. ಇದರಿಂದಾಗಿ ಸಹಕಾರ ಬ್ಯಾಂಕ್ಗಳ ಅಸ್ತಿತ್ವಕ್ಕೆ ಧಕ್ಕೆಯಾಗಿದ್ದು, ಕೂಡಲೇ ಇಂತಹ ನಿಯಮಗಳನ್ನು ಹಿಂದಕ್ಕೆ ಪಡೆಯಬೇಕೆಂದು ಅವರು ಒತ್ತಾಯಿಸಿದರು.
ಬ್ಯಾಂಕಿನ ನಿರ್ದೇಶಕರಾದ ಕೆ. ಭೀಮ ರೆಡ್ಡಿ, ಪಿ. ತಿಮ್ಮಪ್ಪ, ಟಿ. ನರಸಿಂಹನಾಯ್ಕ, ಶಾಂತನಗೌಡ, ಬ್ಯಾಂಕಿನ ವ್ಯವಸ್ಥಾಪಕ ಷಣ್ಮುಖಗೌಡ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

