ಬಳ್ಳಾರಿ

ರತ್ನಮ್ಮ ಮನವೊಲಿಕೆ: ಜಿನಗಾ ವಿಫಲ

Published On :

ಕೊಟ್ಟೂರು: ಬಳ್ಳಾರಿ ಜಿಪಂ ಅಧಿಕಾರವನ್ನು ಉಳಿಸಿಕೊಳ್ಳುವ ಬಿಜೆಪಿಯ ಕೊನೆ ಪ್ರಯತ್ನ ಕೈಕೊಟ್ಟಿದ್ದು, ಸೆ. 10ರಂದು ನಡೆಯುವ ಅಧ್ಯಕ್ಷ ಸ್ಥಾನ ಕಾಂಗ್ರೆಸ್ ಪಾಲಾಗುವುದು ನಿಶ್ಚಿತವಾಗಿದ್ದು, ಇತ್ತೀಚೆಗೆ ನಡೆದ ಜಿಪಂ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಪರ ಮತ ಚಲಾಯಿಸಿದ ಬಿಜೆಪಿ ಸದಸ್ಯೆ ರತ್ನಮ್ಮ ಸಿದ್ದಲಿಂಗನಗೌಡ ಅವರನ್ನು ಬಿಜೆಪಿಯತ್ತ ಸೆಳೆದುಕೊಳ್ಳುವ ಪ್ರಯತ್ನ ಕೊಟ್ಟೂರಿನಲ್ಲಿ ನಡೆಯಿತು. ಇದರ ನೇತೃತ್ವವನ್ನು ವಿಧಾನಪರಿಷತ್ ಸದಸ್ಯ ಮೃತ್ಯುಂಜಯ ಜಿನಗಾ ವಹಿಸಿದ್ದರು.
ಶಾಸಕ ಜಿನಗಾ ಜಿಪಂ ಬಿಜೆಪಿ ಸದಸ್ಯ ಪಿ. ಚನ್ನಬಸವನಗೌಡ ಜತೆಗೂಡಿ ಕೊಟ್ಟೂರಿನಲ್ಲಿ ವಾಸವಾಗಿರುವ ಸದಸ್ಯೆ ರತ್ನಮ್ಮ ಸಿದ್ದಲಿಂಗನಗೌಡ ಅವರ ಮೈದುನನ್ನು ಸಂಪರ್ಕಿಸಿ ಗಂಟೆಗಳ ಕಾಲ ಮನವೊಲಿಸುವ ಪ್ರಯತ್ನ ನಡೆಸಿದರು. ಈ ಸಂದರ್ಭದಲ್ಲಿ ರತ್ನಮ್ಮ ಸಿದ್ದಲಿಂಗನಗೌಡ ಕಾಂಗ್ರೆಸ್ಸಿನ 17 ಸದಸ್ಯರೊಂದಿಗೆ ದೂರದ ಕೊಲ್ಲೂರಿಗೆ ಪ್ರವಾಸ ತೆರಳಿದ್ದರು. ಜಿನಗಾ ಅವರು ಹಿಂದಿನ ಕಹಿ ಘಟನೆಗಳನ್ನು ಮರೆತು ಬಿಜೆಪಿಗೆ ಮರಳಿ ಜಿಪಂ ಅಧ್ಯಕ್ಷರ ಆಯ್ಕೆ ಚುನಾವಣೆ ಕಾಲಕ್ಕೆ ಬೆಂಬಲಿಸುವಂತೆ ಮನವಿ ಮಾಡಿದರು. ಇದಕ್ಕೆ ಉತ್ತರಿಸಿದ ರತ್ನಮ್ಮ ಅವರ ಸಂಬಂಧಿ, ಕಾಂಗ್ರೆಸ್ ಬೆಂಬಲಿಸುವ ನಿರ್ಧಾರ ಮಾಡಿದ್ದೇವೆ. ಇದನ್ನು ಮರು ಪರಿಶೀಲಿಸುವ ಅಗತ್ಯ ಇಲ್ಲ ಎಂದು ಹೇಳಿದ್ದಾರೆಂದು ತಿಳಿದು ಬಂದಿದೆ.
ಅಚಲ ನಿರ್ಧಾರ: ಈ ಹಿಂದೆ ನಡೆದ ಬಿಎಸ್ಸಾರ್-ಬಿಜೆಪಿ ಹೊಂದಾಣಿಕೆ ಅವಧಿಯಲ್ಲೇ ಬಿಜೆಪಿ ಬಿಡುವ ನಿರ್ಧಾರ ಕೈಗೊಂಡಿದ್ದೆ. ಕಾಂಗ್ರೆಸ್ ತಮ್ಮ ಮಾತೃ ಪಕ್ಷವಾಗಿದ್ದು, ಇತ್ತೀಚೆಗೆ ನಡೆದ ಅವಿಶ್ವಾಸ ನಿರ್ಣಯದಲ್ಲಿ ಕಾಂಗ್ರೆಸ್ ಪರ ಈ ಕಾರಣಕ್ಕಾಗಿ ಮತ ಚಲಾಯಿಸಿದ್ದೆ. ವಿಧಾನಪರಿಷತ್ ಸದಸ್ಯ ಮೃತ್ಯುಂಜಯ ಜಿನಗಾ, ಜಿಪಂ ಸದಸ್ಯ ಚನ್ನಬಸವನಗೌಡ್ರು ತಮ್ಮನ್ನು ಸಂಪರ್ಕಿಸುವ ಪ್ರಯತ್ನ ಸಾಗಿಸಿದ್ದು ನಿಜ. ಆದರೆ ತಾವು ಕಾಂಗ್ರೆಸ್ನಲ್ಲೆ ಉಳಿಯುವ ನಿರ್ಧಾರವನ್ನು ಅಚಲವಾಗಿ ತಿಳಿಸಿರುವೆ. ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರದಂತೆ ತಾವು ಮುಂದಿನ ಹೆಜ್ಜೆಗಳನ್ನು ಇರಿಸುತ್ತೇನೆ ಎಂದು ಜಿಪಂ ಕೋಗಳಿ ಸದಸ್ಯೆ ರತ್ನಮ್ಮ ಸಿದ್ದಲಿಂಗನಗೌಡ ಈ ಕುರಿತು ಪ್ರತಿಕ್ರಿಯಿಸಿದರು.
ನಿರ್ದೇಶನ ನೀಡಿದ್ದರು: ತಮ್ಮನ್ನು ಸಂಪರ್ಕಿಸಿದ ಪತ್ರಿಕೆಯೊಂದಿಗೆ ಜಿನಗಾ ಮಾತನಾಡಿ, ಬಿಜೆಪಿ ನಾಯಕರು ಈ ಪ್ರಯತ್ನ ಮಾಡುವಂತೆ ತಮಗೆ ನಿರ್ದೇಶನ ನೀಡಿದ್ದರು. ಈ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಕೊಟ್ಟೂರಿಗೆ ಆಗಮಿಸಿದೆ. ರತ್ನಮ್ಮರನ್ನು ಮನವೊಲಿಸುವ ಪ್ರಯತ್ನ ಸಾಕಷ್ಟು ತಡವಾಗಿದೆ. ನಮ್ಮ ಪ್ರಯತ್ನ ನಾವು ಮಾಡಿದರೂ ಯಶ ಕಾಣಲಿಲ್ಲ. ಹೀಗಾಗಿ ಕಾಂಗ್ರೆಸ್ಗೆ ಜಿಪಂ ಅಧಿಕಾರ ಪಡೆಯುವುದು ಸುಲಭವಾಗುವ ಸಾಧ್ಯತೆ ಬಹುತೇಕ ಇದೆ ಎಂದರು.
ರತ್ನಮ್ಮ ಸಿದ್ದಲಿಂಗನಗೌಡರನ್ನು ಬಿಜೆಪಿಗೆ ಕರೆ ತರುವ ಪ್ರಯತ್ನ ಫಲಕೊಡದ ಹಿನ್ನೆಲೆಯಲ್ಲಿ ಬಂದ ದಾರಿಗೆ ಸುಂಕವಿಲ್ಲದಂತೆ ವಿಧಾನಪರಿಷತ್ ಸದಸ್ಯ ಮೃತ್ಯುಂಜಯ ಜಿನಗಾ ಬಳ್ಳಾರಿಯತ್ತ ಪ್ರಯಾಣ ಬೆಳೆಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.