ಬಳ್ಳಾರಿ

ಕಬ್ಬು ಸಾಗಿಸಲು ಅನುಮತಿಗೆ ಆಗ್ರಹ

Published On :

ಹೂವಿನಹಡಗಲಿ: ಹಗರಿಬೊಮ್ಮನಹಳ್ಳಿ ತಾಲೂಕಿನ ಕಬ್ಬು ಬೆಳೆಗಾರರು ಬೆಳೆದ ಕಬ್ಬನ್ನು ಹೊಸಪೇಟೆಯ ಐಎಸ್‌ಆರ್ ಕಾರ್ಖಾನೆ ಹೊರತುಪಡಿಸಿ ಬೇರೆ ಕಾರ್ಖಾನೆ ಮುಕ್ತವಾಗಿ ಪೂರೈಕೆ ಮಾಡಲು ಪರವಾನಗಿ ಕೊಡಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಅವರಿಗೆ ಮನವಿಪತ್ರ ನೀಡಿ ಒತ್ತಾಯಿಸಿದರು.
ಪಟ್ಟಣದ ಸಚಿವರ ನಿವಾಸದಲ್ಲಿ ಹಗರಿಬೊಮ್ಮನಹಳ್ಳಿ ತಾಲೂಕಿನ ನೂರಾರು ಕಬ್ಬು ಬೆಳೆಗಾರರು ಶನಿವಾರ ಸಚಿವರನ್ನು ಭೇಟಿ ಮಾಡಿ, ಹೊಸಪೇಟೆ ಐಎಸ್‌ಆರ್ ಸಕ್ಕರೆ ಕಾರ್ಖಾನೆ ಮಾಲೀಕರು ರೈತರಿಗೆ ಸರಿಯಾದ ಸಮಯಕ್ಕೆ ಹಣ ನೀಡದೆ, ತಮಗೆ ಇಷ್ಟ ಬಂದಾಗ ಕಾರ್ಖಾನೆ ಆರಂಭಿಸುವ ಮೂಲಕ ರೈತರಿಗೆ ಅಪಾರ ಪ್ರಮಾಣದಲ್ಲಿ ನಷ್ಟ ಉಂಟು ಮಾಡುತ್ತಿದ್ದಾರೆ ಎಂದು ಕಾರ್ಖಾನೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಇಷ್ಟ ಬಂದಾಗ ಕೊಡುತ್ತಾರೆ: ಹೊಸಪೇಟೆ ಐಎಸ್‌ಆರ್ ಸಕ್ಕರೆ ಕಾರ್ಖಾನೆಗೆ ಈ ಭಾಗದ ರೈತರು ಕಬ್ಬು ಪೂರೈಸ ತಕ್ಕದ್ದು ಎಂದು ಈ ಹಿಂದೆ ಸುಪ್ರೀಂ ಕೋರ್ಟ್ ಆದೇಶ ತಂದು ಕಬ್ಬು ಬೆಳೆಗಾರರ ಮೇಲೆ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಿಸಿ ರೈತರಿಗೆ ವಿನಾ ಕಾರಣ ತೊಂದರೆ ಮಾಡುತ್ತಿದ್ದಾರೆ. 20 ವರ್ಷಗಳಿಂದ ಕಾರ್ಖಾನೆ ತಮಗೆ ಇಷ್ಟ ಬಂದಾಗ ಕಬ್ಬು ಖರೀದಿ ಮಾಡುತ್ತದೆ. ಉಳಿದ ದಿನಗಳಲ್ಲಿ ಖರೀದಿ ಮಾಡದೆ ರೈತರನ್ನು ಸಂಕಷ್ಟಕ್ಕೆ ಸಿಲುಕಿಸುತ್ತಾರೆಂದು ತಮ್ಮ ನೋವನ್ನು ಮನವಿಪತ್ರದಲ್ಲಿ ತಿಳಿಸಿದ್ದಾರೆ.
ವ್ಯವಸ್ಥೆ ಇಲ್ಲ: ಕಾರ್ಖಾನೆ ಮಾಲೀಕರು ಹಳೆಯ ರು. 9 ಕೋಟಿ ರೈತರ ಬಾಕಿಯನ್ನು ಇಂದಿಗೂ ಪಾವತಿ ಮಾಡಿಲ್ಲ, ಬೇರೆ ಬೇರೆ ಕಾರ್ಖಾನೆಗಳಿಗಿಂತ ಕಡಿಮೆ ಬೆಲೆ ನಿಗದಿ ಮಾಡುತ್ತಾರೆ. ಕಬ್ಬು ಸಾಗಾಣಿಕೆಯಲ್ಲಿ ಲಾರಿ ವ್ಯವಸ್ಥೆ ಇಲ್ಲ, ರೈತರಿಗೆ ರಿಯಾಯ್ತಿ ದರದಲ್ಲಿ ಕಬ್ಬಿನ ಬೀಜ, ರಸಗೊಬ್ಬರ ನೀಡುವುದಿಲ್ಲ. ಆದರೆ ಇತರೆ ಕಾರ್ಖಾನೆಯವರು ರೈತರಿಗೆ ಸಾಲ, ಉಚಿತ ಕಬ್ಬಿನ ಬೀಜ, ಸುಲಭ ದರದಲ್ಲಿ ರಸಗೊಬ್ಬರ, ಔಷಧಿ ಪೂರೈಕೆ ಮಾಡುತ್ತಾರೆಂದು ತಿಳಿಸಿದ್ದಾರೆ.
ಈ ಐಎಸ್‌ಆರ್ ಸಕ್ಕರೆ ಕಾರ್ಖಾನೆ ವ್ಯಾಪ್ತಿಯಲ್ಲಿ 8 ಲಕ್ಷ ಟನ್ ಕಬ್ಬು ಬೆಳೆಯುತ್ತಾರೆ. ಕಾರ್ಖಾನೆಯ ಸಾಮರ್ಥ್ಯ ಕೇವಲ 3 ಲಕ್ಷ ಟನ್ ಮಾತ್ರ, ಉಳಿದ ಕಬ್ಬನ್ನು ಕಟಾವು ಮಾಡುವುದು ಯಾವಾಗ? ಹೀಗೆ ಹಲವಾರು ತೊಂದರೆಗಳನ್ನು ಅನುಭವಿಸಿರುವ ರೈತರಿಗೆ ತಾವು ಬೆಳೆದ ಕಬ್ಬನ್ನು ಬೇರೆ ಕಾರ್ಖಾನೆಗೆ ಪೂರೈಕೆ ಮಾಡಲು ಮುಕ್ತ ಅವಕಾಶ ದೊರಕಿಸಿಕೊಡಬೇಕೆಂದು ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ. ಗೋಣಿಬಸಪ್ಪ, ಆರ್. ಹುಲುಗಪ್ಪ, ಎ. ನಾಗರಾಜ, ಎಲ್. ಚಂದ್ರನಾಯ್ಕ, ಕೆ. ಪ್ರಕಾಶ, ಕೆ. ಕೆಂಗಪ್ಪ, ಸಿ. ಹುಲುಗಪ್ಪ, ಭರಮಪ್ಪ, ಹನುಮಂತರಾಯ ಸೇರಿದಂತೆ ನೂರಾರು ರೈತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.