ಐಗಳ ಮಲ್ಲಾಪುರ ಶಾಲೆಗೆ ಹೆಚ್ಚುವರಿ ಶಿಕ್ಷಕರ ನೇಮಕ
ಕನ್ನಡಪ್ರಭ ವಾರ್ತೆ, ಕೂಡ್ಲಿಗಿ, ಸೆ. 22
ತಾಲೂಕಿನ ಐಗಳ ಮಲ್ಲಾಪುರ ಗ್ರಾಮದಲ್ಲಿ ಶನಿವಾರ ಗ್ರಾಮಸ್ಥರು ಶಿಕ್ಷಕರ ಕೊರತೆಗೆ ಬೇಸತ್ತು ಶಾಲೆಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದ್ದರು. ಇದಕ್ಕೆ ಮನವಿಗೆ ಸ್ಪಂದಿಸಿದ ತಾಲೂಕು ಶಿಕ್ಷಣಾಧಿಕಾರಿ ಮಂಜುನಾಥ್ ಸೋಮವಾರವೇ ಹೆಚ್ಚುವರಿಯಾಗಿ ಒಬ್ಬ ಶಿಕ್ಷಕರನ್ನು ಎರವಲು ಸೇವೆಯಲ್ಲಿ ನಿಯೋಜಿಸುವುದಾಗಿ ತಿಳಿಸಿದ್ದಾರೆ.
'ಕನ್ನಡಪ್ರಭ'ದಲ್ಲಿ ಭಾನುವಾರ 2ನೇ ಪುಟದಲ್ಲಿ 'ಶಾಲೆಗೆ ಬೀಗ- ಪ್ರತಿಭಟನೆ' ಎಂಬ ಶೀರ್ಷಿಕೆಯಡಿ ವರದಿ ಪ್ರಕಟಿಸಲಾಗಿತ್ತು. ಈ ವರದಿಗೆ ಸ್ಪಂದಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥ ಅವರು, ಭಾನುವಾರವೇ ದೂರವಾಣಿ ಮೂಲಕ 'ಕನ್ನಡಪ್ರಭ'ದೊಂದಿಗೆ ಮಾತನಾಡಿ, ಐಗಳ ಮಲ್ಲಾಪುರ ಗ್ರಾಮದಲ್ಲಿ 142 ಮಕ್ಕಳ ದಾಖಲಾತಿ ಇದ್ದು ಶಾಲೆಗೆ ನಿತ್ಯ 120 ಮಕ್ಕಳು ಹಾಜರಿರುತ್ತಾರೆ. ಹೀಗಾಗಿ ಇಬ್ಬರು ಅತಿಥಿ ಶಿಕ್ಷಕರು ಹಾಗೂ ಇಬ್ಬರು ಕಾಯಂ ಶಿಕ್ಷಕರಿದ್ದರು, ಒಬ್ಬ ಶಿಕ್ಷಕ ವೈಯಕ್ತಿಕ ಕಾರಣಗಳಿಂದ ಪೊಲೀಸ್ ಪ್ರಕರಣದಲ್ಲಿ ಸಿಲುಕಿದ್ದರಿಂದ ಈಗ ಒಬ್ಬ ಸರ್ಕಾರಿ ಶಿಕ್ಷಕ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಜೊತೆಗೆ ಇಬ್ಬರು ಅತಿಥಿ ಶಿಕ್ಷಕರು ಪಾಠ ಮಾಡುತ್ತಿದ್ದಾರೆ.
ಕಚೇರಿ ಕೆಲಸ ಇತರೆ ಕೆಲಸಗಳಿಗೆ ಅನುಕೂಲವಾಗಲೆಂದು ಪಕ್ಕದ ಕ್ಯಾಸನಕೆರೆ ಸರ್ಕಾರಿ ಶಾಲೆಯಿಂದ ಕೆ.ಚೌಡಪ್ಪ ಎನ್ನುವ ಶಿಕ್ಷಕರನ್ನು ಸೋಮವಾರದಿಂದಲೇ ಎರವಲು ಶಿಕ್ಷಕರನ್ನಾಗಿ ಐಗಳ ಮಲ್ಲಾಪುರ ಶಾಲೆಗೆ ನಿಯೋಜಿಸಲಾಗಿದೆ. ಈಗಾಗಲೇ ಆ ಶಿಕ್ಷಕನಿಗೆ ಆದೇಶ ಕಳುಹಿಸಲಾಗಿದೆ ಎಂದು ಬಿಇಒ ಮಂಜುನಾಥ ಸ್ಪಷ್ಟಪಡಿಸಿದರು.
140 ವಿದ್ಯಾರ್ಥಿಗಳಿಗೆ ಈಗ ಐಗಳ ಮಲ್ಲಾಪುರ ಶಾಲೆಯಲ್ಲಿ ಅನುಪಾತ ಪ್ರಕಾರ ಶಿಕ್ಷಕರ ಸಂಖ್ಯೆ ಸರಿ ಇದೆ. ಅತಿಥಿ ಶಿಕ್ಷಕರನ್ನು ಸಹ ಶಿಕ್ಷಕರೆಂದು ಗ್ರಾಮಸ್ಥರು ಪರಿಗಣಿಸಬೇಕು, ಅವರನ್ನು ವಿದ್ಯಾರ್ಹತೆ ಹಾಗೂ ಗುಣಮಟ್ಟದ ಮೇಲೆ ಆಯ್ಕೆ ಮಾಡಿದ್ದು ಅವರಿಂದಲೂ ನಾವು ಶಿಕ್ಷಣದ ಗುಣಮಟ್ಟ ನಿರೀಕ್ಷಿಸಲಾಗುತ್ತಿದೆ.
ಆದರೆ, ಶಾಲಾಭಿವೃದ್ಧಿ ಸಮಿತಿ ಹಾಗೂ ಗ್ರಾಮಸ್ಥರಿಗೆ ಸರಿಯಾದ ಮಾಹಿತಿ ಇಲ್ಲದ ಕಾರಣ ಗೊಂದಲ ಉಂಟಾಗಿ ಶಾಲೆಗೆ ಬೀಗ ಹಾಕಲಾಗಿದೆ. ಆದರೆ, ನಮ್ಮ ಇಲಾಖೆ ಪ್ರಕಾರ ಈಗ ಶಿಕ್ಷಕರ ಕೊರತೆ ಇಲ್ಲವಾಗಿದೆ ಎಂದು ಬಿಇಒ ಮಂಜುನಾಥ ತಿಳಿಸಿದ್ದಾರೆ. ಒಟ್ಟಿನಲ್ಲಿ ಮಾಧ್ಯಮಗಳ ವರದಿಯಿಂದ ಐಗಳ ಮಲ್ಲಾಪುರ ಶಾಲೆಗೆ ಶಿಕ್ಷಕರ ಕೊರತೆ ನೀಗಿದಂತಾಗಿದೆ. ಗ್ರಾಮಸ್ಥರು ಸಹ ಸಂತಸ ವ್ಯಕ್ತಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

