30ರಂದು ಹಗರಿಬೊಮ್ಮನಹಳ್ಳಿ ಬಂದ್
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಸೆ. 26
ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿಗೆ ಮಂಜೂರಾಗಿದ್ದ ಜೆಸ್ಕಾಂ ವಿಭಾಗೀಯ ಕಚೇರಿ, ಐಎಸ್ಆರ್ ಕಾರ್ಖಾನೆಯಿಂದ ಕಬ್ಬು ಬೆಳೆಗಾರರಿಗೆ ಕಿರಿಕಿರಿ, ಕೆಐಎಡಿಬಿಯಿಂದ ರೈತರಿಗೆ ಆಗುವ ಅನ್ಯಾಯ, ಜಮೀನು ವಶಪಡಿಸಿಕೊಳ್ಳಲು ಕೈಗೊಳ್ಳುತ್ತಿರುವ ಕ್ರಮಗಳ ಕುರಿತು ಸೆ. 30ರಂದು ಹ.ಬೊ.ಹಳ್ಳಿಯಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಡಿ. ರಾಜಶೇಖರಗೌಡ ಹೇಳಿದರು.
ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಗರಿಬೊಮ್ಮನಹಳ್ಳಿ ತಾಲೂಕಿಗೆ ಮಂಜೂರಾಗಿದ್ದ ಜೆಸ್ಕಾಂ ವಿಭಾಗೀಯ ಕಚೇರಿಯನ್ನು ಹಡಗಲಿಗೆ ಯಾವುದೇ ಕಾರಣಕ್ಕೂ ವರ್ಗಾಯಿಸಬಾರದು. ಕಬ್ಬು ಬೆಳೆಗಾರರು ತಮ್ಮ ಕಾರ್ಖಾನೆಗೇ ಕಬ್ಬು ನೀಡಬೇಕು, ಬೇರೆಡೆಗೆ ಸಾಗಿಸಬಾರದು ಎಂದು ಐಎಸ್ಆರ್ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯವರು ಹೇಳುತ್ತಿದ್ದು, ಕೆಲ ಅಧಿಕಾರಿಗಳೂ ಅವರ ಜತೆ ಸೇರಿ ಕಬ್ಬು ಬೆಳೆಗಾರರಿಗೆ ಕಿರಿಕಿರಿ ನೀಡುತ್ತಿರುವುದನ್ನು ಖಂಡಿಸಿ ಹಾಗೂ ಕೆಐಎಡಿಬಿಯಿಂದ ರೈತರಿಗೆ ಆಗುವ ಅನ್ಯಾಯ, ಜಮೀನು ವಶಪಡಿಸಿಕೊಳ್ಳಲು ಕೈಗೊಳ್ಳುತ್ತಿರುವ ಕ್ರಮಗಳನ್ನು ವಿರೋಧಿಸಿ, ಸೆ. 30ರಂದು ಹಗರಿಬೊಮ್ಮನಹಳ್ಳಿ ಬಂದ್ಗೆ ಕರೆ ನೀಡಲಾಗಿದೆ ಎಂದರು.
ಪಟ್ಟಾ ವಿತರಿಸಿ: ಜಿಲ್ಲೆಯ ಸಂಡೂರು ತಾಲೂಕಿನ ಕೃಷ್ಣನಗರದ ತಿಮ್ಮಪ್ಪನಗುಡಿಯ ಸುಮಾರು 29 ದಲಿತ ರೈತರು 1961ರಿಂದ ಅರಣ್ಯ ಭೂಮಿಯಲ್ಲಿ ವ್ಯವಸಾಯ ಮಾಡಿಕೊಂಡು ಬರುತ್ತಿದ್ದಾರೆ. ಆದರೆ, ಸಂಡೂರು ಅರಣ್ಯ ಇಲಾಖೆ ಅಧಿಕಾರಿಗಳು ಈಚೆಗೆ ರೈತರ ಕೃಷಿ ಭೂಮಿಯನ್ನೆಲ್ಲ ರಾತ್ರೋರಾತ್ರಿ ನೆಲಸಮಗೊಳಿಸಿ, ರೈತರನ್ನು ಒಕ್ಕಲೆಬ್ಬಿಸಲು ಮುಂದಾಗಿರುವುದು ರೈತರನ್ನು ಕೆರಳುವಂತೆ ಮಾಡಿದೆ. ಕೂಡಲೇ ರೈತರ ಜಮೀನುಗಳಿಗೆ ಪಟ್ಟ ವಿತರಿಸುವಂತೆ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಬಳ್ಳಾರಿ ಜಿಲ್ಲೆಯ ಎಲ್ಲ ತಾಲೂಕುಗಳ ಅರಣ್ಯ, ಕಂದಾಯ ಇಲಾಖೆಗೆ ಸೇರಿದ ಜಮೀನನ್ನು ಸಾಗುವಳಿ ಮಾಡುತ್ತಿರುವ ರೈತರನ್ನು ಒಕ್ಕಲೆಬ್ಬಿಸದೇ ಈಗಾಗಲೇ ಸಾಗುವಳಿ ಮಾಡುತ್ತಿರುವ ಈ ರೈತರಿಗೆ ಪಟ್ಟಾ ನೀಡಬೇಕು ಹಾಗೂ ರೈತರ ಜಮೀನನ್ನು ಕಾರ್ಖಾನೆಗಳಿಗಾಗಿ ಒತ್ತಾಯಪೂರ್ವಕವಾಗಿ ಸ್ವಾಧೀನಪಡಿಸಿಕೊಳ್ಳಬಾರದು ಎಂದು ಆಗ್ರಹಿಸಿ ಈ ಬಂದ್ ನಡೆಸಲಾಗುತ್ತಿದೆ ಎಂದರು.
ಕಾರ್ಯಾಧ್ಯಕ್ಷರಾಗಿ ಪುರುಷೋತ್ತಮಗೌಡ: ರೈತಪರ ಹೋರಾಟಗಾರ ದರೂರು ಜಿ. ಪುರುಷೋತ್ತಮ ಗೌಡ ಅವರನ್ನು ಸಂಘದ ಜಿಲ್ಲಾ ಕಾರ್ಯಾಧ್ಯಕ್ಷರನ್ನಾಗಿ ನೇಮಿಸಲಾಗಿದೆ ಎಂದ ಅವರು, ಸೆ. 24ರಂದು ನಗರದಲ್ಲಿ ರಾಜ್ಯಾಧ್ಯಕ್ಷ ಚಾಮರಸ ಮಾಲೀಪಾಟೀಲ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸದಸ್ಯರ ಒಪ್ಪಿಗೆ ಮೇರೆಗೆ ಅವರನ್ನು ನೇಮಿಸಲಾಗಿದೆ. ಸಂಘಟನಾ ಕಾರ್ಯದರ್ಶಿಯಾಗಿ ಸಂಡೂರಿನ ಗೋಣಿಬಸಪ್ಪ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.
ಅನಂತರ ಸಂಘದ ಕಾರ್ಯಾಧ್ಯಕ್ಷ ಜಿ. ಪುರುಷೋತ್ತಮಗೌಡ ಮಾತನಾಡಿ, ಕಳೆದ ಹಲವು ವರ್ಷಗಳಲ್ಲಿ ಸಾಕಷ್ಟು ರಾಜಕೀಯ ಪಕ್ಷಗಳಲ್ಲಿದ್ದು, ರೈತಪರ ಸೇವೆಯನ್ನೇ ಮಾಡಿಕೊಂಡು ಬಂದಿದ್ದೇನೆ. ಆದರೆ, ಯಾವೊಂದು ಪಕ್ಷವೂ ರೈತರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುತ್ತಿಲ್ಲ. ಹೀಗಾಗಿ ರೈತ ಸಂಘಕ್ಕೆ ಸೇರ್ಪಡೆಯಾಗಿದ್ದು, ರೈತಪರ ಹೋರಾಟ, ಚಳವಳಿಗಳನ್ನು ಹಮ್ಮಿಕೂಳ್ಳಲಾಗುವುದು. ಮುಂದಿನ ದಿನಗಳಲ್ಲಿ ಯಾವುದೇ ರಾಜಕೀಯ ಪಕ್ಷಗಳನ್ನು ಸೇರುವುದಿಲ್ಲ ಎಂದು ತಿಳಿಸಿದರು.
ದರೂರು ಶಾಂತನಗೌಡ, ಕುಂದಾಪುರ ನಾಗರಾಜ್, ಕೆ. ಲೋಕೇಶ್, ಎಂ.ಎಲ್.ಕೆ. ನಾಯ್ಡು, ಎಚ್. ಅರ್ಜುನ್ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

