ಸಾರಿಗೆ ಬಸ್ಗೆ ಆಗ್ರಹಿಸಿ ಮನವಿ
ಹಗರಿಬೊಮ್ಮನಹಳ್ಳಿ: ಸಾರಿಗೆ ಬಸ್ ಸೌಲಭ್ಯ ವಂಚಿತ ತಾಲೂಕಿನ ಗ್ರಾಮಾಂತರ ಪ್ರದೇಶಗಳಿಗೆ ತಕ್ಷಣ ಬಸ್ ಓಡಾಟ ಕಲ್ಪಿಸುವಂತೆ ಆಗ್ರಹಿಸಿ ಎಸ್ಎಫ್ಐ ಕಾರ್ಯಕರ್ತರು ಹಗರಿಬೊಮ್ಮನಹಳ್ಳಿ ಘಟಕದ ವ್ಯವಸ್ಥಾಪಕರಿಗೆ ಮನವಿಪತ್ರ ಸಲ್ಲಿಸಿದರು. ರಾಮನಗರದ ಈಶ್ವರ ದೇವಸ್ಥಾನದ ಆವರಣದಿಂದ ಬಸ್ ಡಿಪೋ ವರೆಗೂ ಮೆರವಣಿಗೆಯಲ್ಲಿ ಬಂದು ಹಳ್ಳಿಗಳ ರಸ್ತೆ ಮೇಲೆ ಸಾರಿಗೆ ಬಸ್ ಸಂಚಾರ ಆರಂಭಿಸುವಂತೆ ಒತ್ತಾಯಿಸಿದರು. ಸಂಬಂಧಿಸಿದ ಮಾರ್ಗಗಳಲ್ಲಿ ಸಂಚಾರ ದಟ್ಟಣೆ ಪರಿಶೀಲಿಸಿದ ಅನಂತರ ವಾರದೊಳಗೆ ಈ ಬಗ್ಗೆ ಪರಿಶೀಲನೆ ನಡೆಸಿ ಬಸ್ ಸಂಚಾರ ಆರಂಭಿಸುವುದಾಗಿ ಡಿಪೋ ವ್ಯವಸ್ಥಾಪಕರು ಭರವಸೆ ನೀಡಿದರು. ಎಸ್ಎಫ್ಐ ಕಾರ್ಯದರ್ಶಿ ಎ.ಕೆ. ಬಸವರಾಜ ಮಾತನಾಡಿ, ಹಗರಿಬೊಮ್ಮನಹಳ್ಳಿಯಲ್ಲಿಯೇ ಬಸ್ ಡಿಪೋ ಆರಂಭವಾಗಿದ್ದರೂ ತಾಲೂಕಿನ ಹಲವಾರು ಗ್ರಾಮಗಳಿಗೆ ಬಸ್ ಸಂಚಾರವಿಲ್ಲ. ಹೀಗಾಗಿ ಗ್ರಾಮೀಣ ಪ್ರದೇಶಗಳಿಂದ ಉನ್ನತ ಶಿಕ್ಷಣಕ್ಕಾಗಿ ಪಟ್ಟಣಕ್ಕೆ ಆಗಮಿಸುತ್ತಿರುವ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಕೂಡಲೆ ಸಾರಿಗೆ ಸಂಸ್ಥೆಯಿಂದ ಬಸ್ ಓಡಾಟ ಆರಂಭಿಸಿ ಹಳ್ಳಿಗಾಡಿನ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡಬೇಕೆಂದು ಆಗ್ರಹಿಸಿದರು.
ತಾಲೂಕಿನ ಗಡಿಭಾಗದ ಮಾಗಿಮಾವಿನಹಳ್ಳಿ, ಹಲಗಾಪುರ, ಓಬಾಳಪುರ, ಕಟ್ಟೆಹೊಲ ತಾಂಡಾ, ವ್ಯಾಸಪುರ, ಏಣಿಗಿ, ಏಣಿಗಿ ಬಸಾಪುರ, ಸಾಲಮೂರಹಳ್ಳಿ, ಲೊಕಪ್ಪನ ಹೊಲ ಸೇರಿದಂತೆ ಹಲವಾರು ಹಳ್ಳಿಗಳಿಗೆ ಬಸ್ಗಳು ಸಂಚರಿಸುತ್ತಿಲ್ಲ. ಈ ಗ್ರಾಮಗಳಿಗೆ ಸೇರಿದ ನೂರಾರು ವಿದ್ಯಾರ್ಥಿಗಳು ಕಾಲೇಜು ಶಿಕ್ಷಣಕ್ಕಾಗಿ ಹಗರಿಬೊಮ್ಮನಹಳ್ಳಿಯನ್ನೆ ಅವಲಂಬಿಸಿದ್ದಾರೆ. ಬಸ್ ಸಂಚಾರ ಇಲ್ಲದಿರುವುದು ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ನಿತ್ಯ ಅನಾನುಕೂಲವಾಗಿ ಪರಿಣಾಮಿಸಿದೆ ಎಂದು ವಿವರಿಸಿ, ಕೂಡಲೆ ಬಸ್ ಸಂಚಾರವಿಲ್ಲದ ಹಳ್ಳಿಗಳಿಗೆ ಬಸ್ ಆರಂಭಿಸುವಂತೆ ಮನವಿ ಮಾಡಿದರು.
ಎಸ್ಎಫ್ಐ ಉಪಾಧ್ಯಕ್ಷ ಎಂ. ಲಕ್ಷ್ಮಣ, ಮುಖಂಡ ಶ್ರೀನಿವಾಸ, ಗಂಗಾಧರ, ಶ್ರೀಕಾಂತ್, ಹುಲಿಗೇಶ್, ಮೈಲಾರಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

