ಬಳ್ಳಾರಿ

ಸುದ್ದಿ ಸಂಕ್ಷೇಪ

Published On :

ಇಂದು ರಕ್ತದಾನ ಶಿಬಿರ
ಬಳ್ಳಾರಿ: ರಾಷ್ಟ್ರೀಯ ಸ್ವಯಂ ಪ್ರೇರಿತ ರಕ್ತದಾನ ದಿನಾಚರಣೆ ಪ್ರಯುಕ್ತ ಅ. 1ರಂದು ಬೆಳಗ್ಗೆ 10 ಗಂಟೆಗೆ ನಗರದ ವಿಮ್ಸ್‌ನ ಮಿಣಿಜೀವಿಶಾಸ್ತ್ರ ವಿಭಾಗದ ಬಳಿಯಿರುವ ಶಿಕ್ಷಕರ ಭವನದಲ್ಲಿ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ.  ಈ ಸಂದರ್ಭದಲ್ಲಿ ಅತಿಹೆಚ್ಚು ರಕ್ತಚೀಲಗಳನ್ನು ಸಂಗ್ರಹ ಮಾಡಲು ಸಹಕರಿಸಿದ ಆಯೋಜಕ ಸಂಸ್ಥೆಯನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದು ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ನಿರ್ವಾಹಕ ಘಟಕದ ಜಿಲ್ಲಾ ಕಾರ್ಯಕ್ರಮಾಧಿಕಾರಿ ಡಾ. ನರಸಿಂಹಮೂರ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೊಲೆ ಮಾಡಲು ಯತ್ನಿಸಿದ್ದ ವ್ಯಕ್ತಿಗೆ ಶಿಕ್ಷೆ
ಬಳ್ಳಾರಿ: ಬಳ್ಳಾರಿ ಕೇಂದ್ರ ಕಾರಾಗೃಹದ ಇಬ್ಬರು ಬೆಂಗಾವಲುಗಾರರನ್ನು ಕರ್ತವ್ಯದ ಮೇಲಿದ್ದಾಗ ಕೊಲೆ ಮಾಡಲು ಯತ್ನಿಸಿದ ಅಪರಾಧದ ಮೇಲೆ ಶಂಕರ ತಿಪ್ಪಣ್ಣ ಕೊರವರ ಎನ್ನುವವನಿಗೆ 1ನೇ ಅಧಿಕ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರಾದ ಎಂ.ಎಸ್. ಪಾಟೀಲ್ ಅವರು 2 ವರ್ಷ ಶಿಕ್ಷೆ ವಿಧಿಸಿ ಸೆ. 28ರಂದು ತೀರ್ಪು ನೀಡಿದ್ದಾರೆ. ಕೇಂದ್ರ ಕಾರಾಗೃಹದ ಬೆಂಗಾವಲುಗಾರರಾದ ಸಿಪಿಸಿ 461 ಲಕ್ಷ್ಮಿಪತಿ ಹಾಗೂ ಸಿಎಚ್‌ಸಿ 109ಸಿ ಮಹೇಶ್ವರಪ್ಪ ಅವರು ನ್ಯಾಯಾಂಗ ಬಂಧನದಲ್ಲಿದ್ದ ಶಂಕರ ತಿಪ್ಪಣ್ಣ ಕೊರವರನನ್ನು ದಾವಣಗೆರೆ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಎಸ್.ಸಿ. ನಂ. 38, 11ರಲ್ಲಿ ಹಾಜರುಪಡಿಸಿ ಅನಂತರ 2012ರ ಮೇ 10ರಂದು ರಾತ್ರಿ 10.30 ಗಂಟೆಗೆ ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಒಪ್ಪಿಸಲು ವಾಪಸಾಗುತ್ತಿದ್ದಾಗ ನಗರದ ಅಂಡರ್ ಬ್ರಿಡ್ಜ್ ಮೇಲ್ಭಾಗದಲ್ಲಿರುವ ಕಾಲುದಾರಿಯಲ್ಲಿ ರೇಲ್ವೆ ಟ್ರಾಕ್ ಕೇಂದ್ರ ಕಾರಾಗೃಹದ ಬಳಿ ಕರ್ತವ್ಯದ ಮೇಲಿದ್ದ ಬೆಂಗಾವಲುಗಾರರ ಮೇಲೆ ಹಲ್ಲೆ ಮಾಡಿ ಗಾಯಗೊಳಿಸಿ ಕೊಲೆ ಮಾಡಲು ಪ್ರಯತ್ನಿಸಿ ನ್ಯಾಯಾಂಗ ಬಂಧನದಿಂದ ಪರಾರಿಯಾಗಲು ಪ್ರಯತ್ನಿಸಿರುವುದು ವಿಚಾರಣೆಯಿಂದ ರುಜುವಾತಾಗಿದೆ. ಗಾಂಧಿನಗರ ಪೊಲೀಸರು ತನಿಖೆ ಪೂರೈಸಿ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಸರ್ಕಾರಿ ಅಭಿಯೋಜಕ ಆರ್.ಎಲ್. ರಾಠೋಡ್ ವಾದ ಮಂಡಿಸಿದ್ದರು.
ತುಪ್ಪಳ್ಳಿ ಗಂಗಮ್ಮ ನಿಧನ
ಕೂಡ್ಲಿಗಿ: ಪಟ್ಟಣದ 16ನೇ ವಾರ್ಡ್‌ನ ತುಪ್ಪಳ್ಳಿ ಗಂಗಮ್ಮ ನಿಧನರಾಗಿದ್ದಾರೆ. ಮೃತರಿಗೆ ಮೂವರು ಸಹೋದರಿಯರು, ಓರ್ವ ಸಹೋದರ, ಮೂವರು ಪುತ್ರರು, ಓರ್ವ ಪುತ್ರಿ ಹಾಗೂ  ಬಂಧು ಬಳಗ ಇದ್ದಾರೆ.
ಇಸ್ಪೀಟ್ ಜೂಜಾಟ: ಬಂಧನ
ಬಳ್ಳಾರಿ: ಜಿಲ್ಲೆಯ ಸಿರುಗುಪ್ಪ ಪಟ್ಟಣದ ಬಯಲು ಜಾಗದಲ್ಲಿ ಅಂದರ್, ಬಾಹರ್ ಇಸ್ಪೀಟ್ ಜೂಜಾಟದ ಅಡ್ಡೆ ಮೇಲೆ ದಾಳಿ ನಡೆಸಿದ ಪೊಲೀಸರು ನಗದು ಮತ್ತು ಇತರ ಸಾಮಗ್ರಿ ವಶಪಡಿಸಿಕೊಂಡಿದ್ದಾರೆ. ಸಿಪಿಐ, ಪಿಎಸ್‌ಐ ಹಾಗೂ ಸಿಬ್ಬಂದಿ ದಾಳಿ ಮಾಡಿ ಆರೋಪಿಗಳನ್ನು ಬಂಧಿಸಿ, ಅವರಿಂದ ರು. 4888 ನಗದು, ಇಸ್ಪೀಟ್ ಎಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಕುರಿತು ಸಿರುಗುಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮದ್ಯ ಮಾರಾಟ: ಬಂಧನ
ಬಳ್ಳಾರಿ: ಜಿಲ್ಲೆಯ ಸಂಡೂರು ಠಾಣಾ ವ್ಯಾಪ್ತಿಯ ಸುಶೀಲಾನಗರ ಗ್ರಾಮದ ಸಂಡೂರು- ಹೊಸಪೇಟೆ ರಸ್ತೆ ಪಕ್ಕದ ಸ್ಥಳದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯೋರ್ವನನ್ನು ಬಂಧಿಸಿ, ಆತನಿಂದ ಮದ್ಯದ ಬಾಕ್ಸ್‌ಗಳು ಹಾಗೂ ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ. ಅಶೋಕ್ (42) ಎಂಬವನೇ ಬಂಧಿತ ವ್ಯಕ್ತಿ. ಈತನು ಮದ್ಯದ ಬಾಕ್ಸ್‌ಗಳನ್ನು ಇಟ್ಟುಕೊಂಡು ಜನರನ್ನು ಕರೆಯುತ್ತಾ ಮದ್ಯ ಮಾರಾಟ ಮಾಡುತ್ತಿದ್ದಾಗ ಡಿಎಸ್‌ಪಿ ಮಾರ್ಗದರ್ಶನದಲ್ಲಿ ಎಎಸ್‌ಐ ಹಾಗೂ ಸಿಬ್ಬಂದಿ ದಾಳಿ ಮಾಡಿ, ಆನತನನ್ನು ಬಂಧಿಸಿ, ರು. 6,912 ಮೌಲ್ಯದ 3 ಬಾಕ್ಸ್ ಹಾಗೂ ರು. 180 ನಗದು ವಶಪಡಿಸಿಕೊಂಡಿದ್ದಾರೆ. ಈ ಕುರಿತು ಸಂಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣದಲ್ಲಿ ದಾಖಲಾಗಿದೆ.
ವಿದ್ಯಾರ್ಥಿಗಳಿಗೆ ಸ್ವಾಗತ
ಹೊಸಪೇಟೆ: ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಾಹಿತ್ಯ, ಚಿತ್ರಕಲೆ, ಸಂಗೀತ ವಿಭಾಗದ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ, ದ್ವಿತೀಯ ವರ್ಷದ ವಿದ್ಯಾರ್ಥಿಗಳು ವಿವಿಯ ಭುವನವಿಜಯ ಸಭಾಂಗಣದಲ್ಲಿ ಗುರುವಾರ ಸ್ವಾಗತ ಕಾರ್ಯಕ್ರಮ ನಡೆಸಿದರು.
ವಿಶ್ವವಿದ್ಯಾಲಯದ ಕುಲಪತಿ ಡಾ. ಹಿ.ಚಿ. ಬೋರಲಿಂಗಯ್ಯ ಅಧ್ಯಕ್ಷತೆ ವಹಿಸಿದ್ದರು. ವಿವಿ ಕುಲಸಚಿವ ಡಾ. ವಿಜಯ ಪೂಣಚ್ಚ ತಂಬಂಡ, ಅಧ್ಯಯನಾಂಗದ ನಿರ್ದೇಶಕ ಡಾ. ಅಶೋಕಕುಮಾರ ರಂಜೇರ, ಲಲಿತಕಲಾ ನಿಕಾಯದ ಡೀನ್ ಡಾ. ಕರೀಗೌಡ ಬೀಚನಹಳ್ಳಿ, ಎಂಎ ಪಿಎಚ್‌ಡಿ ಸಂಚಾಲಕ ಡಾ. ಪಿ. ಮಹಾದೇವಯ್ಯ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ಚಲುವರಾಜು, ಹಿರಿಯ ಪ್ರಾಧ್ಯಾಪಕರು, ವಿದ್ಯಾರ್ಥಿಗಳ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

--------

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.