ಶ್ರೀರಾಮುಲುಗೆ ಬಡವರ ಕಾಳಜಿಯಿಲ್ಲ
ಹಗರಿಬೊಮ್ಮನಹಳ್ಳಿ: ಬಳ್ಳಾರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ. ಶ್ರೀರಾಮುಲುಗೆ ರೈತರ, ಬಡವರ ಬಗ್ಗೆ ಬದ್ಧತೆಯಿಲ್ಲ. ಅವರು ಜಿಲ್ಲೆ ಅಭಿವೃದ್ಧಿ, ರೈತರ ಸಮಸ್ಯೆ ನಿವಾರಿಸಲು ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡದೆ, ತಮ್ಮ ರಾಜಕೀಯ ತೆವಲಿಗೋಸ್ಕರ ನೀಡಿದ್ದಾರೆಂದು ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಆರೋಪಿಸಿದರು.
ಬುಧವಾರ ಮಧ್ಯಾಹ್ನ ತಾಲೂಕಿನ ವರದಾಪುರದಲ್ಲಿ ಬಿಜೆಪಿ ಮುಖಂಡ ಮಾದೇಗೌಡ ಮತ್ತವರ ಬೆಂಬಲಿಗರನ್ನು ಪಕ್ಷಕ್ಕೆ ಸೇರಿಸಿಕೊಂಡು ಮಾತನಾಡಿದ ಸಚಿವರು, ಹೊಸಪೇಟೆ ಐಎಸ್ಆರ್ ಸಕ್ಕರೆ ಕಾರ್ಖಾನೆ, ತುಂಗಭದ್ರಾ ಜಲಾಶಯ ಹೂಳಿನ ಸಮಸ್ಯೆಗಳ ಬಗ್ಗೆ ಈಗ ಹೋರಾಟ, ಧರಣಿ ನಡೆಸುವ ಬಿ. ಶ್ರೀರಾಮುಲುಗೆ ಅವರು, ರೆಡ್ಡಿ ಸಹೋದರರು ಸಚಿವರಾಗಿ ಮೆರೆಯುತ್ತಿದ್ದಾಗ ಈ ಎಲ್ಲ ಸಮಸ್ಯೆಗಳೇಕೆ ಕಣ್ಣಿಗೆ ಬೀಳಲಿಲ್ಲ? ಮಂತ್ರಿ ಸ್ಥಾನದಿಂದ ಕೆಳಗಿಯುತ್ತಿದ್ದಂತೆ ಅವೆಲ್ಲ ಸಮಸ್ಯೆಗಳೀಗ ಅರಿವಿಗೆ ಬಂದಿವೆ. ಈ ಸಮಸ್ಯೆಗಳ ನಿವಾರಣೆಗಾಗಿ ಜನ್ಮತಾಳಿದವರಂತೆ ಶ್ರೀರಾಮುಲು ಫೋಸು ಕೊಡುತ್ತಿದ್ದಾರೆ ಎಂದರು.
ಪ್ರಕೃತಿ ಮೇಲೆ ದಾಳಿ ಮಾಡಿ ಅತಿಕ್ರಮದಲ್ಲಿ ಆಸ್ತಿ ಸಂಪಾದಿಸಿದವರೆಲ್ಲರೂ ಈಗ ಎಲ್ಲಿದ್ದಾರೆಂಬುವುದು ಜಗತ್ತಿಗೆ ತಿಳಿದ ವಿಚಾರ ಎಂದು ಅಕ್ರಮ ಗಣಿಗಾರಿಕೆಯಲ್ಲಿ ಜೈಲು ಸೇರಿದ್ದಾರೆಂದು ಪರೋಕ್ಷವಾಗಿ ಹೇಳಿದರು.
ಅಧಿಕಾರಿ ಭ್ರಷ್ಟರಾದರೆ ಅಮಾನತು ಮಾಡಿ ವ್ಯವಸ್ಥೆ ಶುದ್ಧ ಮಾಡಬಹುದು. ರಾಜಕಾರಣಿ ಕೆಟ್ಟರೆ ಚುನಾವಣೆಯಲ್ಲಿ ಸೋಲಿಸಿ ಪಾಠ ಕಲಿಸಬಹುದು. ಮತದಾರ ಭ್ರಷ್ಟರಾದರೆ ಇಡಿ ವ್ಯವಸ್ಥೆ ಹದಗೆಟ್ಟು ಪ್ರಜಾಪ್ರಭುತ್ವ ವ್ಯವಸ್ಥೆ ಅಧೋಗತಿಗೆ ಇಳಿಯುತ್ತದೆ. ನೋಟಿಗಾಗಿ ಓಟು ಮಾರಿಕೊಳ್ಳಬಾರದು ಎಂದು ಮತದಾರರಲ್ಲಿ ವಿನಂತಿಸಿಕೊಂಡರು.
ತಾಲೂಕಿನ ಮರಬ್ಬಿಹಾಳು ಗ್ರಾಪಂ ಅಧ್ಯಕ್ಷೆ, ಬಿಜೆಪಿ ಬೆಂಬಲಿತ ಗಂಗಮ್ಮ ಮಾದೇಗೌಡ, ಹಿರಿಯ ಮುಖಂಡ ಮಾದೇಗೌಡ ಸೇರಿದಂತೆ ಗ್ರಾಪಂ ಹಲವು ಸದಸ್ಯರು ಜಿಲ್ಲಾ ಉಸ್ತುವಾರಿ ಸಚಿವರ ಸಮ್ಮುಖ ಕಾಂಗ್ರೆಸ್ ಸೇರಿದರು. ಅವರಿಗೆ ಸಚಿವರು ಪಕ್ಷದ ಧ್ವಜ ನೀಡಿ, ಹಸ್ತದ ಚಿಹ್ನೆಯುಳ್ಳ ಶಾಲು ಹಾಕಿ ಸ್ವಾಗತಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುಟುಗನಹಳ್ಳಿ ಕೊಟ್ರೇಶ್, ಮುಖಂಡರಾದ ಬಿ.ವಿ. ಶಿವಯೋಗಿ, ಡಿ. ಶಿವಾನಂದಪ್ಪ, ಪಟ್ಟಣ ಭೀಮಣ್ಣ, ಎಚ್. ರಾಮಣ್ಣ, ಸಿ. ಬಸವರಾಜ, ತಾಪಂ ಸದಸ್ಯ ಶಿವಕುಮಾರ, ಮಾಜಿ ಸದಸ್ಯ ಎಚ್. ಕೃಷ್ಣಾ ನಾಯ್ಕ, ಎಚ್.ಪಿ. ಶಿವಶಂಕರಗೌಡ, ಎಪಿಎಂಸಿ ಸದಸ್ಯರಾದ ಪಿ. ಛತ್ರಪ್ಪ, ಅಂಬಾಡಿ ನಾಗರಾಜ, ಎಣ್ಣಿ ಬಾಷಾ, ಎಚ್. ಶಿವಾನಂದ, ನಾಣಿಕೇರಿ ಶ್ರೀನಿವಾಸ, ಅಂಕಸಮುದ್ರ ಉಮೇಶ ಇತರರಿದ್ದರು. ಬುಡ್ಡಿ ಬಸವರಾಜ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

