ಹೂವಿನಹಡಗಲಿ ಹಳೇ ತಹಸೀಲ್ದಾರ್ ಕಚೇರಿ ಕತೆಯಿದು ಬ್ರಿಟಿಷರ ಕಾಲದ ಕಟ್ಟಡವೀಗ ಶಿಥಿಲ
ಹೂವಿನಹಡಗಲಿ: ಗತಕಾಲದ ನೆನಪುಗಳನ್ನು ಸ್ಮರಿಸುವುದೊಂದೆ ನನಗೀಗ ಉಳಿದಿರುವ ಆಸ್ತಿ. ದೇಶವಾಳಿದ ಬ್ರಿಟಿಷರು ತಮ್ಮ ಆಡಳಿತದ ಅನುಕೂಲಕ್ಕಾಗಿ ತೆರೆದ ಕಚೇರಿಗಳಲ್ಲಿ ನಾನೂ ಒಬ್ಬಳು. ಆಗಿನ ಮದ್ರಾಸ್ ಸರ್ಕಾರಕ್ಕೆ ಒಳಪಟ್ಟಿದ್ದ ಬಳ್ಳಾರಿ ಜಿಲ್ಲೆ ಪಶ್ಚಿಮಭಾಗದ ಕೊನೆ ತಾಲೂಕಾದ ಹೂವಿನಹಡಗಲಿಯಲ್ಲಿ ನಿರ್ಮಿಸಿದ್ದ ಕೇಂದ್ರ ಕಚೇರಿ ನಾನಾಗಿದ್ದೆ.
ಹೂವಿನಹಡಗಲಿ ಹಳೇ ತಹಸೀಲ್ದಾರ್ ಕಚೇರಿಯಾದ ನನ್ನನ್ನಾಗ ಇಲ್ಲಿನ ವಾಸ್ತುಶಿಲ್ಪಿಗಳು ಗಾರೆಗಚ್ಚಿನಿಂದ ಸುಂದರವಾಗಿ ಸ್ಮಾರಕದಂತೆ ನಿರ್ಮಿಸಿದ್ದರು. ದೊಡ್ಡ ಪ್ರಮಾಣದ ಸುಂದರ ಗೋಡೆಗಳು, ಸಾಕಷ್ಟು ಕಡೆ ಕಿಟಕಿ ಬಾಗಿಲುಗಳು, ಹತ್ತಾರು ಕೋಣೆಗಳನ್ನು ನಿರ್ಮಿಸಿ ಅರಮನೆಯಂತೆ ಒಪ್ಪಗೊಳಿಸಿದ್ದರು. ಇಲ್ಲಿಗೆ ಬಂದವರಿಗೆ ತಂಪಾದ ಸುಳಿಗಾಳಿ ಬೀಸುವಂತೆ ಪಟ್ಟಣಕ್ಕೆ ಕಳಶಪ್ರಾಯದಂತೆ ಕಂಗೊಳಿಸುವಂತೆ ಮಾಡಿದ್ದರು. ಅಂದು ತಮ್ಮ ಆಡಳಿತದ ಅನುಕೂಲಕ್ಕಾಗಿ ಬಳಸಿಕೊಂಡ ಬ್ರಿಟಿಷರ ಕಾಲದ ಕಚೇರಿಯನ್ನು ತಹಸೀಲ್ದಾರ್ ಕಚೇರಿಯಾಗಿ ಪರಿವರ್ತಿಸಿ ಕೈದಿಗಳನ್ನು ಕೂಡಿ ಹಾಕಲು ಜೈಲಿನ ವ್ಯವಸ್ಥೆ ಸಹ ಮಾಡಲಾಗಿತ್ತು. ಅಂದು ಬಳಸಿದ ಕಬ್ಬಿಣದ ಸಲಾಕೆಗಳು, ಕಿಟಕಿಗಳು, ಬಾಗಿಲುಗಳು ಇಂದಿಗೂ ಗಟ್ಟಿಯಾಗಿವೆ.
ಬ್ರಿಟಿಷರ ಆಧಿಪತ್ಯ ಮುಗಿದ ಬಳಿಕ ತಹಸೀಲ್ದಾರ್ ಕಚೇರಿ, ಪೊಲೀಸ್ ಇಲಾಖೆ ಕಚೇರಿಗಳನ್ನಾಗಿ ನನ್ನನ್ನು ಬಳಸಿಕೊಂಡಿದ್ದಾರೆ. ಕೆಲವೆಡೆ ಆಡಳಿತ ಅನುಕೂಲಕ್ಕಾಗಿ ಮರು ನಿರ್ಮಿಸಿದ್ದು, ವಿನ್ಯಾಸ ಮಾತ್ರ ಬದಲಾಗಿಲ್ಲ. ಆದರೀಗ ನನ್ನ ಮೇಲೆ ಅಧಿಕಾರಿಗಳ ಕಾಳಜಿ ಕಡಿಮೆಯಾಗಿ ಅಳಿನಂಚಿಗೆ ತಲುಪಿದ್ದೇನೆ. ಬ್ರಿಟಿಷರ ಕಾಲದಲ್ಲಿ ನನ್ನನ್ನು ನೋಡಿ ಜನ ಹೆದರುತ್ತಿದ್ದರು (ಬ್ರಿಟಿಷರ ಕಿರುಕುಳ). ಆದರೀಗ ಸುತ್ತಲಿನ ಜನರು ಇಲ್ಲಿಗೆ ಬಂದು ಮದ್ಯ ಸೇವನೆ, ಇಸ್ಪೀಟ್, ಶೌಚಾಲಯ ಮುಂತಾದ ಅಕ್ರಮಗಳ ತಾಣವಾಗಿಸಿದ್ದಾರೆ. ನನ್ನ ಸುತ್ತ ಆಲದ ಗಿಡಗಂಟಿಗಳು ಬೆಳೆದಿದ್ದು, ನಿರ್ಮಾಣಕ್ಕೆ ಬಳಸಿದ್ದ ಗಾರೆ ಗಚ್ಚು ಉದುರುತ್ತಿದೆ.
ನನ್ನನ್ನು ಅಬಕಾರಿ ಮತ್ತು ಲಾಟರಿ ನಿಷೇಧ ಇಲಾಖೆ, ಗೃಹ ರಕ್ಷಕ ದಳ, ನಿವೃತ್ತ ನೌಕರರ ಸಂಘ, ಸಹಕಾರ ಕಚೇರಿ, ಕಂದಾಯ ಇಲಾಖೆಯ ಗ್ರಾಮಲೆಕ್ಕಿಗರ ಕಚೇರಿಯನ್ನಾಗಿ ಬಳಸಿಕೊಂಡಿದ್ದಾರೆ. ನನ್ನನ್ನು ಬಳಸಿಕೊಳ್ಳುವ ಇವರಿಗೆ ಈ ಎಲ್ಲ ಅಕ್ರಮಗಳನ್ನು ತಡೆಯಲು ಏಕೆ ಆಗುತ್ತಿಲ್ಲ? ಅಧಿಕಾರಿಗಳ ವರ್ಗ ಬ್ರಿಟಿಷರ ಕಾಲದಲ್ಲಿದ್ದ ಗೌರವ, ಘನತೆ ಹಾಳು ಮಾಡಿದ್ದು, ಇನ್ನಾದರೂ ಸಂಬಂಧಪಟ್ಟವರು ನನ್ನನ್ನು ಮರು ನಿರ್ಮಿಸಿ ಸುಂದರಗೊಳಿಸಲೆಂಬ ನಿರೀಕ್ಷೆಯಲ್ಲಿದ್ದೇನೆ.
ಇಂತಿ ನಿಮ್ಮ ಮನೆಮಗಳು
ಹೂವಿನಹಡಗಲಿ ಹಳೇ ತಹಸೀಲ್ದಾರ್ ಕಚೇರಿ
ಬ್ರಿಟಿಷರ ಆಧಿಪತ್ಯ ಮುಗಿದ ಬಳಿಕ ಈ ಕಟ್ಟಡ ಹೂವಿನಹಡಗಲಿ ತಹಸೀಲ್ದಾರ್ ಕಚೇರಿ, ಪೊಲೀಸ್ ಇಲಾಖೆ ಕಚೇರಿಗಳನ್ನಾಗಿ ಬಳಸಿಕೊಂಡಿದ್ದಾರೆ. ಕೆಲವೆಡೆ ಆಡಳಿತ ಅನುಕೂಲಕ್ಕಾಗಿ ಮರು ನಿರ್ಮಿಸಿದ್ದು, ವಿನ್ಯಾಸ ಮಾತ್ರ ಬದಲಾಗಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಈಗ ಅಳಿವಿನಂಚಿನಲ್ಲಿದೆ. ಸುತ್ತಮುತ್ತಲಿನ ಕೆಲ ಜನರು ಈ ಕಟ್ಟಡವನ್ನು ಮದ್ಯ ಸೇವನೆ, ಇಸ್ಪೀಟ್, ಶೌಚಾಲಯ ಮುಂತಾದ ಅಕ್ರಮಗಳಿಗೆ ಬಳಸಿಕೊಳ್ಳುತ್ತಿದ್ದಾರೆ. ಕಟ್ಟಡದ ಸುತ್ತ ಆಲದ ಮರಗಳು ಬೆಳೆದಿದ್ದು, ಕಟ್ಟಡದ ನಿರ್ಮಾಣಕ್ಕೆ ಬಳಸಿದ್ದ ಗಾರೆ ಗಚ್ಚು ಉದುರುತ್ತಿದೆ.
ನಿರೂಪಣೆ: ಚಂದ್ರು ಕೊಂಚಿಗೇರಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

