ಶ್ರೀರಾಮುಲುಗೆ ಆಪ್ 18 ಪ್ರಶ್ನೆ
ಬಳ್ಳಾರಿ: ಶ್ರೀರಾಮುಲು ಅವರಿಗೆ 18 ಪ್ರಶ್ನೆಗಳನ್ನು ಹಾಕಿದ್ದು, ಅವರು ನನ್ನ ಪ್ರಶ್ನೆಗೆ ಬಹಿರಂಗ ಚರ್ಚೆ ಮೂಲಕ ಉತ್ತರ ಕೊಡುವುದು ಸೂಕ್ತ. ಸಮಯ, ಸ್ಥಳ ನಿಗದಿಯನ್ನು ಅವರೇ ಮಾಡಲಿ. ಅದಕ್ಕೆ ಸಿದ್ಧನಿದ್ದೇನೆ ಎಂದು ಆಮ್ ಆದ್ಮಿ ಅಭ್ಯರ್ಥಿ ಶಿವಕುಮಾರ್ ಮಾಳಗಿ ತಿಳಿಸಿದ್ದಾರೆ.
ಭಾನುವಾರ ನಗರದ ಪತ್ರಿಕಾ ಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಾವು ಜಿಲ್ಲಾದ್ಯಂತ ಪ್ರಚಾರ ನಡೆಸಿದ ಸಂದರ್ಭದಲ್ಲಿ ಶ್ರೀಸಾಮಾನ್ಯರು ಪ್ರಶ್ನೆ ಕೇಳಿದ್ದು, ಅದನ್ನು ಪ್ರಶ್ನೆ ರೂಪದಲ್ಲಿ ಮಾಧ್ಯಮಗಳ ಮೂಲಕ ಶ್ರೀರಾಮುಲು ಅವರಿಗೆ ಕೇಳಿದ್ದೇನೆ. ಶ್ರೀರಾಮುಲು ಅವರು ತಮ್ಮ ಪ್ರಶ್ನೆಗಳಿಗೆ ಉತ್ತರ ಕೊಡಬೇಕು, ತಮ್ಮ ಪ್ರಶ್ನೆಗಳಿಗೆ ಉತ್ತರ ಕೊಡದಿದ್ದರೆ, ಶ್ರೀರಾಮುಲು ಚುನಾವಣೆ ಎದುರಿಸಲು ನೈತಿಕತೆ ಉಳಿಸಿಕೊಂಡಿಲ್ಲ ಎಂಬುದು ತಿಳಿಯುತ್ತದೆ ಎಂದರು.
ಬಳ್ಳಾರಿಯ ಮೋಕಾದಿಂದ ಆರಂಭವಾಗಿ, ಹೂವಿನಹಡಗಲಿಯ ಮೈಲಾರದವರೆಗೆ ಪ್ರಚಾರ ಕಾರ್ಯ ನಡೆಸಲಾಗಿದೆ. ಗ್ರಾಮೀಣ ಭಾಗದಲ್ಲಿ ಪ್ರಚಾರ ನಡೆಸಲಾಗುತ್ತಿದೆ. ಎಎಪಿಯ ಗುರಿ, ಉದ್ದೇಶ ಹಾಗೂ ಪ್ರಣಾಳಿಕೆಯನ್ನು ಜನರಿಗೆ ಮನವರಿಕೆ ಮಾಡಿಕೊಡಲಾಗಿದೆ. ಬಿಜೆಪಿ ಮತ್ತು ಕಾಂಗ್ರೆಸ್‌ಗಿಂತ ಭಿನ್ನವಾದ ಪಕ್ಷ ನಮ್ಮದಾಗಿದೆ. ಕಾಂಗ್ರೆಸ್‌ನ ಎನ್.ವೈ. ಹನುಮಂತಪ್ಪನವರು ತಮ್ಮ ಪ್ರಶ್ನೆಗಳಿಗೆ ಉತ್ತರ ಕೊಟ್ಟಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಿಜಕ್ಕೂ ಉತ್ತಮ ಬೆಳೆವಣಿಗೆಯಾಗಿದೆ. ಈ ಉತ್ತರಗಳಿಗೆ ಏ. 17ರಂದು ಜನರೇ ಉತ್ತರಿಸುತ್ತಾರೆ ಎಂದರು.
ಜೈಲಿಗೆ ಹೋಗಿರುವ ಜನಾರ್ದನ ರೆಡ್ಡಿ ಅವರ ಓಎಂಸಿ ಕಂಪನಿಯಲ್ಲಿ ನೀವೊಬ್ಬ (ಶ್ರೀರಾಮುಲು) ಪಾಲುದಾರರಾಗಿದ್ದು, ಕಂಪನಿ ಲಾಭ, ನಷ್ಟ, ಹೊಣೆಗಾರಿಕೆಯಲ್ಲಿ ನೀವು ಕೂಡ ಒಬ್ಬರಾಗುತ್ತೀರಾ? ಕಂಪನಿ ಮೇಲೆ ಇರುವ ಆರೋಪಕ್ಕೆ ನೀವು ಕೂಡ ಜವಾಬ್ದಾರರು? ನೀವು ಯಾವ ನೈತಿಕತೆಯಿಂದ ಚುನಾವಣೆ ಎದುರಿಸುತ್ತೀರಾ? ನಿಮ್ಮ ದೈವದತ್ತ ತಾಯಿಯಾದ ಸುಷ್ಮಾ ಸ್ವರಾಜ್‌ಗೆ ಬೇಡವಾದವರು?, ಇನ್ನು ಬಳ್ಳಾರಿ ಜಿಲ್ಲೆ ಜನರಿಗೆ ಹೇಗೆ ಬೇಕಾಗುತ್ತೀರಾ? ತಾಯಿ ಸುಷ್ಮಾ ಸ್ವರಾಜ್ ಅವರನ್ನು ಮುಂದಿನ ಪ್ರಧಾನಿಯನ್ನಾಗಿ ಮಾಡುತ್ತೇವೆ ಎಂದು ಹೇಳಿದವರು?, ತಮ್ಮ ಪಕ್ಷದಲ್ಲಿ ತಾಯಿಯನ್ನು ಮೂಲೆಗುಂಪು ಮಾಡಿದ್ದಾರೆ?. ನಿಮ್ಮಿಂದ ನಿಮ್ಮ ದೈವದತ್ತ ತಾಯಿಗೆ ನ್ಯಾಯ ಕೊಡಲು ಸಾಧ್ಯವಾಗದೆ ಇರುವಾಗ, ಬಳ್ಳಾರಿಯ ತಾಯಂದಿರು ನಿಮ್ಮಿಂದ ಯಾವ ನ್ಯಾಯ ನಿರೀಕ್ಷಿಸಲು ಸಾಧ್ಯ? ಎಂದು ಪ್ರಶ್ನಿಸಿದ್ದಾರೆ.
ನೀನು ಶ್ರೀರಾಮುಲು ಮನಿಷಿನಿ: ನಾನು ಶ್ರೀರಾಮುಲು ರಿಲೇಟಿವ್ ಎಂದು ತಮ್ಮ ನಾಮಬಲದಿಂದ ಕೆಲವು ಅಹಂಕಾರಿ ಪುಂಡ ಪುರುಷರು ಸಮಾಜದ ಜನಗಳ ಮೇಲೆ, ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಕ್ಕೆ ನಿಮ್ಮ ಉತ್ತರವೇನು? ಬಡವ, ಶ್ರಮಿಕ, ರೈತರ ಪಕ್ಷ ಕಟ್ಟಿಕೊಂಡಿದ್ದ ನಿಮಗೆ, ಭವ್ಯ ಬಂಗಲೆ, ಐಷಾರಾಮಿ ಕಾರು, ಹೆಲಿಕಾಪ್ಟರ್‌ನಲ್ಲಿ ಹಾರಾಡುತ್ತೀರಾ?, ನಿಮ್ಮ ಐಷಾರಾಮಿ ಜೀವನದ ಆದಾಯದ ಮೂಲ ಯಾವುದು? ಇದು ಅಕ್ರಮ ಗಣಿಗಾರಿಕೆ ಆದಾಯದ ಮೂಲವಲ್ಲದೇ ಮತ್ತೇನು? ಹಣಕಾಸಿನ ವಿಷಯದಲ್ಲಿ ಬಲಿತುಕೊಂಡಿರುವ ನಿಮ್ಮಂತಹ ಬಲಿದ ದಲಿತರಿಂದ ನೈಜ ದಲಿತರಾಗಿರುವವರಿಗೆ ಅನ್ಯಾಯವಾಗುವುದಿಲ್ಲವೇ? ಸಂಸದೆಯಾಗಿರುವ ನಿಮ್ಮ ಸಹೋದರಿ ಅವರು ಕಳಪೆ ಸಂಸದೆ ಎಂದು ಲೋಕಸಭೆಯ ಕಚೇರಿಯ ಅನುದಾನ ಬಳಕೆಯ ವರದಿಯಲ್ಲಿ ಗುರುತಿಸಿಕೊಂಡಿದ್ದಾರೆ? ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲ ಎನ್ನುವಂತೆ, ಇದೇ ಚಾಳಿ ನಿಮಗೆ ಇರುವುದಿಲ್ಲವೇ? ಅಧಿಕಾರದಲ್ಲಿದ್ದಾಗ ಹೂಳೆತ್ತುವುದರ ಬಗ್ಗೆ ಮಾತನಾಡದ ನೀವು, ಇದೀಗ ತುಂಗಭದ್ರಾ ಹೂಳೆತ್ತುವುದು ಓಟ್‌ಬ್ಯಾಂಕ್ ರಾಜಕಾರಣದ ತಂತ್ರವಲ್ಲವೇ? ಎಂಬ 18 ಪ್ರಶ್ನೆಗಳನ್ನು ಆಮ್ ಶ್ರೀರಾಮುಲುಗೆ ಹಾಕುತ್ತಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಆಮ್ ಆದ್ಮಿಯ ವಿಜಯ ಮಹಾಂತೇಶ್, ಕುಮಾರಸ್ವಾಮಿ, ಕಾಳಿದಾಸ, ಸುರೇಂದ್ರ ಛೋಪ್ರಾ, ಎನ್. ನಾಗರಾಜ್, ಪದ್ಮಾವತಿ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

