ಶ್ರೀರಾಮುಲು ವಿರುದ್ಧ ಪ್ರಕರಣ ದಾಖಲಿಸಲು ಸೂಚಿಸಿದ್ದು ಸಿಎಂ
ಬಳ್ಳಾರಿ: ಮುಖ್ಯಮಂತ್ರಿಗಳು ಫೋನ್ ಮೂಲಕವೇ ಹೇಳಿ ಶ್ರೀರಾಮುಲು ವಿರುದ್ಧ ಮೋಸ, ವಂಚನೆ, ಕೊಲೆ ಬೆದರಿಕೆ ಪ್ರಕರಣ ದಾಖಲಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿದ್ದಾಗಿ ಕೆಎಂಎಫ್ ರಾಜ್ಯಾಧ್ಯಕ್ಷ, ಬಿಜೆಪಿ ಮುಖಂಡ ಜಿ. ಸೋಮಶೇಖರ್ ರೆಡ್ಡಿ ನೇರ ಆರೋಪ ಮಾಡಿದ್ದಾರೆ.
ಸೋಮವಾರ ನಗರದ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೋದಿ, ಶ್ರೀರಾಮುಲು ಅಲೆ ನೋಡಿ ಕಾಂಗ್ರೆಸ್ಗೆ ಭೀತಿಯುಂಟಾಗಿದೆ. ಶ್ರೀರಾಮುಲುಗೆ ಅನಗತ್ಯ ಕಿರುಕುಳ ನೀಡುತ್ತಿದ್ದಾರೆ. ಮುಖ್ಯಮಂತ್ರಿಗಳೇ ಖುದ್ದಾಗಿ ಒತ್ತಡ ಹೇರಿ, ಶ್ರೀರಾಮುಲು ಮೇಲೆ ಕೊಲೆ, ಬೆದರಿಕೆ, ಚೆಕ್ ಬೌನ್ಸ್ ದೂರನ್ನು ದಾಖಲಿಸಿದ್ದಾರೆ. ಶ್ರೀರಾಮುಲು ಅವರನ್ನು ತುಳಿಯುವ ಈ ಪ್ರಯತ್ನವನ್ನು ಮತದಾರರೂ ಗಮನಿಸುತ್ತಿದ್ದು, ಅವರೇ ತಕ್ಕ ಉತ್ತರ ನೀಡಲಿದ್ದಾರೆ ಎಂದರು.
ಡಿಸಿ ಸರ್ವಾಧಿಕಾರ ಧೋರಣೆ: ಪ್ರಚಾರ ಮಾಡುವಾಗ ಮನೆ ಮನೆಗೆ ತೆರಳಿ ನಾವು ಬಿಜೆಪಿ ಕರಪತ್ರಗಳನ್ನು ಕೊಟ್ಟಿದ್ದೇವೆ. ಬಾಬುಲಾಲ್ ಮನೆಯಲ್ಲಿ ಒಂದೆರಡು ಕರಪತ್ರ ಕಂಡು, ಸಿಕ್ಕ ಹಣ ಬಿಜೆಪಿಗೆ ಸೇರಿದ್ದೆಂಬ ಮಾಹಿತಿ ಸಿಕ್ಕಿದೆ ಎಂದು ಹೇಳುತ್ತಿರುವುದು ಕುತಂತ್ರ. ಎರಡು ದಿನಗಳ ಹಿಂದೆ ಮಾಜಿ ಉಪಮೇಯರ್ ಶಶಿಕಲಾ ಅವರ ಮನೆಗೆ ರಾತ್ರಿ 1.30ರ ವರೆಗೆ ಹೋಗಿ, ಪರಿಶೀಲನೆ ಮಾಡಿದ್ದಾರೆ. ಸಂಗನಕಲ್ ಗ್ರಾಮದಲ್ಲಿ ನಮ್ಮ ಕಾರ್ಯಕರ್ತ ತಿಮ್ಮನಗೌಡ ಮನೆಗೆ ಹೋಗಿ, ಗೃಹಪ್ರವೇಶಕ್ಕೆ ತಂದಿದ್ದ ಸೀರೆಗಳನ್ನು ಮತದಾರರಿಗೆ ಹಂಚಲಿಕ್ಕೆ ಸಂಗ್ರಹಿಸಲಾಗಿದೆ ಎಂದು ಹೇಳಿ ವಶಪಡಿಸಿಕೊಂಡಿದ್ದಾರೆ. ಜಿಲ್ಲಾಧಿಕಾರಿಗಳು ಸರ್ವಾಧಿಕಾರಿಯಾಗಿ ವರ್ತಿಸುತ್ತಿದ್ದಾರೆ. ಕಡುಬಡವರ ಹೊಟ್ಟೆ ಮೇಲೆ ಹೊಡೆಯುತ್ತಿದ್ದಾರೆ ಎಂದು ಆರೋಪಿಸಿದರು.
ಕಾರ್ಯಕರ್ತರ ಟಾರ್ಗೆಟ್: ಸಿಟಿಯಲ್ಲಿ ನಾನು (ಡಿಸಿ) ನೋಡಿಕೊಳ್ಳುತ್ತೇನೆ. ರೂರಲ್ನಲ್ಲಿ ನೀವು (ಕಾಂಗ್ರೆಸ್ ಮುಖಂಡರು) ನೋಡಿಕೊಳ್ಳಿ ಎಂದು ಜಿಲ್ಲಾಧಿಕಾರಿಗಳು ಹೇಳಿದ್ದಾರೆ ಎಂದು ಡಿಸಿ ಕಚೇರಿ ಮೂಲಗಳು ತಿಳಿಸಿವೆ. ಬಿಜೆಪಿ ಅಭ್ಯರ್ಥಿ ಗೆಲವಿಗೆ ಶ್ರಮ ವಹಿಸಿ ಕೆಲಸ ಮಾಡುವ ಕಾರ್ಯಕರ್ತರನ್ನು ಗುರಿ ಮಾಡಿಕೊಂಡು ದಾಳಿ ಮಾಡಲಾಗುತ್ತಿದೆ. ನಮ್ಮವರು ಕಾಂಗ್ರೆಸ್, ಇತರ ಪಕ್ಷಗಳ ಮೇಲೆ ದೂರು ಕೊಟ್ಟರೂ ದಾಳಿ ಮಾಡುವುದಿಲ್ಲ ಎಂದು ರೆಡ್ಡಿ ಗುಡುಗಿದರು. ಕಾಂಗ್ರೆಸ್ ಸರ್ಕಾರ ಜನರಲ್ಲಿ ಬೇಸರ ಮೂಡಿಸಿದೆ. ಈವರೆಗೆ ಒಂದು ಅಭಿವೃದ್ಧಿ ಕೆಲಸಕ್ಕೂ ಅಡಿಗಲ್ಲು ಹಾಕಿಲ್ಲ. ವಿರೋಧ ಪಕ್ಷದ ಕೆಲ ಮುಖಂಡರು ಈಗ ಬಿಜೆಪಿ ಬೆಂಬಲಿಸುತ್ತಿದ್ದಾರೆ. ಬಿಜೆಪಿಗೆ ಬಳ್ಳಾರಿ ನಗರದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಎಚ್. ಹನುಮಂತಪ್ಪ, ರಾಮಚಂದ್ರಪ್ಪ, ವೇಮಣ್ಣ, ಶಿವಕುಮಾರ್, ದತಾತ್ತೇಯ ರೆಡ್ಡಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

