ಥಿಯರಿಗಳು ಪುರುಷ ಕೇಂದ್ರಿತ ಅಭಿವ್ಯಕ್ತಿ ಚಿಂತನೆಗಳಾಗಿವೆ
ಕನ್ನಡಪ್ರಭ ವಾರ್ತೆ, ಹೊಸಪೇಟೆ, ಫೆ. 7
ಪ್ರತಿಯೊಂದು ಥಿಯರಿಗಳು ಎಲ್ಲೋ ಒಂದು ಕಡೆ ಪುರುಷ ಕೇಂದ್ರಿತ ಅಭಿವ್ಯಕ್ತಿಯ ಚಿಂತನೆಗಳಾಗಿಯೆ ಮೂಡಿ ಬಂದಿವೆ. ಮಹಿಳೆಯ ವ್ಯಕ್ತಿತ್ವ, ಅವಳ ಅಸ್ಮಿತೆ, ಚಹರೆಯ ಪುನರ್ ನಿರ್ಮಾಣ, ಪುನರ್ ವ್ಯಾಖ್ಯಾನ ಮುಖ್ಯವಾಗುತ್ತದೆ ಎಂದು ಮೈಸೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಡಾ. ಪ್ರೀತಿ ಶುಭಚಂದ್ರ ಅಭಿಪ್ರಾಯಿಸಿದರು.
ಹಂಪಿ ಕನ್ನಡ ವಿಶ್ವವಿದ್ಯಾಲಯ ಮಹಿಳಾ ಅಧ್ಯಯನ ವಿಭಾಗದ ಅಲ್ಲಂ ಸುಮಂಗಲಮ್ಮ ದತ್ತಿನಿಧಿ ಹಮ್ಮಿಕೊಂಡಿದ್ದ ಲಿಂಗೀಯ ಅಧ್ಯಯನಗಳ ವೈಧಾನಿಕತೆಗಳು ಎನ್ನುವ ವಿಷಯ ಕುರಿತು ಎರಡು ದಿನಗಳ ಕಮ್ಮಟ ಉದ್ಘಾಟಿಸಿ ಅವರು ಮಾತನಾಡಿದರು.
ವಾಚಕ ಕೇಂದ್ರಿತ ವಿಮರ್ಶೆಯಲ್ಲಿ ಕೃತಿ ಮತ್ತು ಕತೃ ಕೇಂದ್ರಿತ ಅಧ್ಯಯನ ವಿಮರ್ಶೆ, ಕೃತಿ ಮತ್ತು ಸಮಾಜ ಕೇಂದ್ರಿತ ವಿಮರ್ಶೆ, ಕೃತಿ ಮತ್ತು ಓದುಗ ಕೇಂದ್ರಿತ ಹಾಗೂ ಕೃತಿ ಮತ್ತು ರಚನೆ ಈ ನಾಲ್ಕು ಆಯಾಮಗಳಲ್ಲಿ ಕೃತಿಯನ್ನು ಅಧ್ಯಯನ ಮಾಡುವ ಸಾಹಿತ್ಯ ಮೀಮಾಂಸೆ ರೂಪಿಸಿಕೊಳ್ಳುವ ಪ್ರಯತ್ನಗಳು ನಡೆಯುತ್ತಿವೆ. ಓದುಗರ ಪರಿಗ್ರಹಿಕೆಯ ಸ್ವಾತಂತ್ರ್ಯದಲ್ಲಿ ಸೃಷ್ಟಿಯಾಗುವ ಅರ್ಥವನ್ನು ಮುಖ್ಯವಾಗಿಟ್ಟುಕೊಂಡ ವಾಚಕ ಕೇಂದ್ರಿತ ಥಿಯರಿಗಳು ಸ್ತ್ರೀವಾದಿ ಓದು ಈ ನಾಲ್ಕು ಆಯಾಮಗಳ ಪರಿಮಿತಿಗಳನ್ನು ಒಡೆದು ಆಚೆ ಬರುವ ಒಂದು ಮಹಾನ್ ಪ್ರಯತ್ನವಾಗಿದೆ. ಈ ಹಿನ್ನೆಲೆಯಲ್ಲಿ ಒಂದು ಕೃತಿಯ ಅಧ್ಯಯನಕ್ಕೆ ಕವಿಯ ಜತೆಗೆ ಕವಿಯ ಪರಿಸರವೂ ಬಹಳ ಮುಖ್ಯವಾಗುತ್ತದೆ ಎಂದು ವಿವರಿಸಿದರು.
ಲಿಂಗ ಲೈಂಗಿಕತೆಯ ಭಾಗ: ಸಂಶೋಧನೆಯಲ್ಲಿ ಲಿಂಗ ಪರಿಕಲ್ಪನೆಯ ಬಳಕೆ ಸಮಸ್ಯೆ, ಸವಾಲುಗಳು ಕುರಿತು ಹೈದರಾಬಾದ್ನ ಇಂಗ್ಲಿಷ್ ಮತ್ತು ವಿದೇಶಿ ಭಾಷೆಗಳ ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕ ಡಾ.ವಿ.ಬಿ. ತಾರಕೇಶ್ವರ ಮಾತನಾಡಿ, ಲಿಂಗವನ್ನು ಜೈವಿಕವಾಗಿ ಮತ್ತು ಸಾಮಾಜಿಕವಾಗಿ ಗುರುತಿಸುವುದು ಸ್ಪಷ್ಟವಾಗಿ ಬಳಕೆಯಲ್ಲಿದೆ. ಜತೆಗೆ ಲಿಂಗವನ್ನು ಲೈಂಗಿಕತೆಯ ಒಂದು ಭಾಗವಾಗಿ ನೋಡಲಾಗುತ್ತದೆ. ಮಹಿಳಾ ವಾದದಲ್ಲಿ ಲಿಂಗ ಮತ್ತು ಲೈಂಗಿಕತೆ ಬೇರೆ ಬೇರೆ ಎಂದು ಹೇಳಲಾಗಿದೆ. ಲಿಂಗಗಳಲ್ಲಿ ಎಷ್ಟು ವಿಧಗಳಿವೆ ಎನ್ನುವುದರಲ್ಲಿ ಸಹಮತವಿಲ್ಲ. ಲಿಂಗದ ಪರಿಕಲ್ಪನೆ ಕಾಲದಿಂದ ಕಾಲಕ್ಕೆ, ಸಮಾಜದಿಂದ ಸಮಾಜಕ್ಕೆ, ದೇಶದಿಂದ ದೇಶಕ್ಕೆ ಬದಲಾಗುತ್ತಿರುತ್ತದೆ ಎಂದು ಹೇಳಿದರು.
ಹಂಪಿ ಕನ್ನಡ ವಿಶ್ವವಿದ್ಯಾಲಯದ ಮಹಿಳಾ ಅಧ್ಯಯನ ವಿಭಾಗದ ಸಹ ಪ್ರಾಧ್ಯಾಪಕ ಡಾ. ಶಿವಾನಂದ ವಿರಕ್ತಮಠ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿಶ್ವವಿದ್ಯಾಲಯದ ಮಹಿಳಾ ಅಧ್ಯಯನ ವಿಭಾಗದ ಮುಖ್ಯಸ್ಥೆ ಡಾ. ಶೈಲಜಾ ಹಿರೇಮಠ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಸಂಶೋಧನಾ ವಿದ್ಯಾರ್ಥಿ ಪಂಪಾಪತಿ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

