ಸುದ್ದಿ ಸಂಕ್ಷೇಪ
ಅವಿರೋಧ ಆಯ್ಕೆ
ಗಂಗಾವತಿ: ತಾಲೂಕಿನ ಮಲ್ಲಾಪುರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ವೈ. ರಜನಿಕಾಂತ್ ಸಂಗಪುರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಭಾನುವಾರ ಜರುಗಿದ ಅಧ್ಯಕ್ಷ ಸ್ಥಾನದ ಆಯ್ಕೆ ಚುನಾವಣೆಯಲ್ಲಿ ವೈ. ರಜನಿಕಾಂತ ಒಬ್ಬರೆ ನಾಮಪತ್ರ ಸಲ್ಲಿಸಿದ್ದರು. ಚುನಾವಣಾಧಿಕಾರಿಯಾದ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಹುಸೇನಪ್ಪ ಅಧ್ಯಕ್ಷ ಸ್ಥಾನಕ್ಕೆ ರಜನಿಕಾಂತ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದರು.
ಇಂದು ಸಿಎಂ ಬಳಿ ನಿಯೋಗ
ಹಗರಿಬೊಮ್ಮನಹಳ್ಳಿ: ಮಾಲ್ವಿಡ್ಯಾಂಗೆ ಶಾಶ್ವತ ನೀರೊದಗಿಸುವ ಯೋಜನೆಯನ್ನು ಈ ಸಲದ ಬಜೆಟ್ನಲ್ಲಿ ಸೇರ್ಪಡೆಗೊಳಿಸುವಂತೆ ಒತ್ತಾಯಿಸಿ ಜಲಾಶಯದ ಅಚ್ಚುಕಟ್ಟು ವ್ಯಾಪ್ತಿಯ ರೈತರು ಹಾಗೂ ಕಾಂಗ್ರೆಸ್ ಮುಖಂಡರ ನಿಯೋಗ ಫೆ. 10ರಂದು ಬೆಳಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಲಿದೆ ಎಂದು ಮಾಜಿ ಸಚಿವ ಎನ್.ಎಂ. ನಬಿ ತಿಳಿಸಿದ್ದಾರೆ. ಭಾನುವಾರ ಮಧ್ಯಾಹ್ನ ಹಗರಿಬೊಮ್ಮನಹಳ್ಳಿ ಪ್ರವಾಸಿ ಮಂದಿರದಲ್ಲಿ ತಮ್ಮ ನೇತೃತ್ವದಲ್ಲಿ ಜರುಗಿದ ಅಚ್ಚುಕಟ್ಟು ವ್ಯಾಪ್ತಿಯ ರೈತರು ಹಾಗೂ ಕಾಂಗ್ರೆಸ್ ಮುಖಂಡರ ಸಭೆ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮಾಲ್ವಿ ಡ್ಯಾಂಗೆ ಶಾಶ್ವತ ನೀರೊದಗಿಸುವ ಯೋಜನೆ ಸಂಬಂಧವಾಗಿ ರೈತ-ಮುಖಂಡರ ನಿಯೋಗ ಫೆ. 10ರಂದು ಬೆಳಗ್ಗೆ 9-30ಕ್ಕೆ ಖುದ್ದು ಸಿಎಂ ಅವರೇ ಸಮಯ ನೀಡಿದ್ದಾರೆ. ನನ್ನ ನೇತೃತ್ವದಲ್ಲಿ ಈ ಭಾಗದ ಸುಮಾರು ನೂರಕ್ಕೂ ಅಧಿಕ ಸಂಖ್ಯೆಯಲ್ಲಿ ರೈತ ಮುಖಂಡರ ನಿಯೋಗ ಸಿಎಂ ಅವರನ್ನು ಭೇಟಿಯಾಗಲಿದೆ ಎಂದರು.
ಬಾಧೆ: ಮಹಿಳೆ ಆತ್ಮಹತ್ಯೆ
ಬಳ್ಳಾರಿ: ಹೊಟ್ಟೆನೋವಿನ ಬಾಧೆ ತಾಳಲಾರದೆ ಮಹಿಳೆಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಬಾದನಹಟ್ಟಿ ಗ್ರಾಮದಲ್ಲಿ ನಡೆದಿದೆ. ಬಾದನಹಟ್ಟಿ ಗ್ರಾಮದ ಮುತ್ತಮ್ಮ (50) ಆತ್ಮಹತ್ಯೆ ಮಾಡಿಕೊಂಡ ಮಹಿಳೆಯಾಗಿದ್ದಾಳೆ. ಹೊಟ್ಟೆನೋವಿನ ಬಾಧೆ ತಾಳಲಾರದೆ ಮುತ್ತಮ್ಮ ಫೆ. 6ರಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಕೂಡಲೇ ಚಿಕಿತ್ಸೆಗಾಗಿ ವಿಮ್ಸ್ಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಮೃತಪಟ್ಟಿದ್ದಾಳೆ. ಕುರುಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ: ಇಬ್ಬರು ಸಾವು
ಬಳ್ಳಾರಿ: ಲಾರಿ ಮತ್ತು ಬೈಕ್ ಮಧ್ಯೆ ಅಪಘಾತ ಸಂಭವಿಸಿ ಇಬ್ಬರು ಬೈಕ್ ಸವಾರರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ತಾಲೂಕಿನ ಸಿರುಗುಪ್ಪ ರಸ್ತೆಯ ಗೋಪಾಲಪುರ ಕ್ಯಾಂಪಿನ ಸಮೀಪದಲ್ಲಿ ಭಾನುವಾರ ಮಧ್ಯಾಹ್ನ ನಡೆದಿದೆ. ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಕಡದರಕಲ್ಲು ಗ್ರಾಮದ ಬಸವರಾಜ್ (24), ಗುರುಮೂರ್ತಿ (26) ಎಂಬುವವರೆ ಮೃತಪಟ್ಟಿದ್ದಾರೆ. ಅವರು ಬಳ್ಳಾರಿ ಕಡೆಯಿಂದ ಸಿರುಗುಪ್ಪ ಕಡೆಗೆ ಬೈಕ್ನಲ್ಲಿ ತೆರಳುತ್ತಿರುವಾಗ ಬಳ್ಳಾರಿಯ ಕಡೆಗೆ ಬರುತ್ತಿರುವ ಲಾರಿ ಮಧ್ಯೆ ಅಪಘಾತ ಸಂಭವಿಸಿ, ಇಬ್ಬರು ಸ್ಥಳದಲ್ಲಿಯೇ ಮೃತ ಪಟ್ಟಿದ್ದಾರೆ.
ಎಂ.ಪಿ. ಪ್ರಕಾಶ ಕುಟುಂಬದಿಂದ ಕಲಾಸಕ್ತಿ ಜೀವಂತ
ಹೂವಿನಹಡಗಲಿ: ಮಾಜಿ ಉಪ ಮುಖ್ಯಮಂತ್ರಿ ಎಂ.ಪಿ. ಪ್ರಕಾಶ ಕಲಾನಿಕೇತನ ಮತ್ತು ರಂಗಭಾರತಿ ಮೂಲಕ ಎಂ.ಪಿ. ಪ್ರಕಾಶರ ಕಲಾಸಕ್ತಿಯನ್ನು ಅವರ ಕುಟುಂಬದವರು ಜೀವಂತವಾಗಿದ್ದಾರೆಂದು ಎಂದು ಹಂಪಿ ಕನ್ನಡ ವಿವಿ ಕುಲಪತಿ ಡಾ. ಹಿ.ಚಿ. ಬೋರಲಿಂಗಯ್ಯ ಅಭಿಪ್ರಾಯಪಟ್ಟರು.
ಎಂ.ಪಿ. ಪ್ರಕಾಶಯವರ 3ನೇ ಪುಣ್ಯಸ್ಮರಣೆ ಅಂಗವಾಗಿ ಪಟ್ಟಣದ ರಂಗಭಾರತಿಯಲ್ಲಿ ಶನಿವಾರ ಪ್ರಾರಂಭವಾಗಿರುವ ಎಂ.ಪಿ. ಪ್ರಕಾಶ ಕಲಾನಿಕೇತನ ಉದ್ಘಾಟಿಸಿ ಮಾತನಾಡಿದರು.
ಪ್ರಕಾಶ ಕಲೆ, ಸಾಹಿತ್ಯ, ರಂಗಭೂಮಿ, ಜನಪದ ಪ್ರಕಾರಗಳು ಸೇರಿದಂತೆ ನಾನಾ ಕ್ಷೇತ್ರಗಳಲ್ಲಿ ವಿಶಿಷ್ಟ ಆಸಕ್ತಿ ಬೆಳೆಸಿಕೊಂಡಿರುವ ಅವರು ಬಹುಮುಖಿ ವ್ಯಕ್ತಿತ್ವದ ರಾಜಕಾರಣಿಯಾಗಿದ್ದರು ಎಂದರು.
ಅಂತಹ ಮಹಾನ್ ವ್ಯಕ್ತಿ ಹೆಸರಿನಲ್ಲಿ ಕಲಾಸಕ್ತಿ ಉಳಿಸಿ ಬೆಳೆಸುವ ಅವರ ಕುಟುಂಬದವರ ಕಾಳಜಿ ಶ್ಲಾಘನೀಯ ಎಂದ ಅವರು, ರಂಗಭಾರತಿಯಲ್ಲಿ ಆರಂಭವಾಗಿರುವ ಕಲಾನಿಕೇತನದಲ್ಲಿ ಸಂಗೀತ, ಚಿತ್ರಕಲೆ, ಯೋಗ, ಭರತನಾಟ್ಯ, ಸಂಗೀತ ಕಚೇರಿ, ನಾಟಕಗಳ ತರಬೇತಿ ನೀಡಲಾಗುತ್ತಿದೆ ಎಂದರು.
ಇದೇ ಎಂ.ಪಿ. ಪ್ರಕಾಶ ಕುರಿತಾಗಿ ಪತ್ರಕರ್ತ ಎಸ್. ನಿಂಗರಾಜ ಅವರ ಅಸ್ತಂಗತ ಪುಸ್ತಕ ಖ್ಯಾತ ಸಾಹಿತಿ ಡಾ. ಮರಳಸಿದ್ದಪ್ಪ ಬಿಡುಗಡೆ ಮಾಡಿದರು. ಈ ಕಲಾನಿಕೇತನದ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ಸಾಂಸ್ಕೃತಿಕ ಚಟುವಟಿಕೆಗಳು ನಿರಂತರ ನಡೆದು, ಗ್ರಾಮೀಣ ಪ್ರತಿಭೆಗಳಿಗೆ ಉತ್ತಮ ತರಬೇತಿ ನೀಡಿ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಪ್ರತಿಭೆಗಳು ಅನಾವರಣಗೊಳ್ಳಲಿ ಎಂದು ಶುಭ ಕೋರಿದರು. ಕಾರ್ಮಿಕ ಸಚಿವ ಪಿ.ಟಿ. ಪರಮೇಶ್ವರನಾಯ್ಕ, ಎಂ.ಪಿ. ರುದ್ರಮ್ಮ ಪ್ರಕಾಶ, ಶಾಸಕರಾದ ಎಂ.ಪಿ. ರವೀಂದ್ರ, ಈ ತುಕಾರಾಂ, ಜಯಂತಿ ಮರುಳಸಿದ್ದಪ್ಪ, ಮತ್ತಿತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

