ಗಮನ ಸೆಳೆದ ಕಂಚಿವೀರ, ಗೊರವರ ಪವಾಡ
ಕನ್ನಡಪ್ರಭ ವಾರ್ತೆ, ಹೂವಿನಹಡಗಲಿ, ಫೆ. 17
ಮೈಲಾರದ ಡೆಂಕಣ ಮರಡಿಯಲ್ಲಿ ರಾಕ್ಷಸರನ್ನು ಸಂಹಾರ ಮಾಡಿ ಜಯಗಳಿಸಿದ ಶುಭ ಸಂಕೇತವಾಗಿ ಕಾರ್ಣಿಕ ನುಡಿದ ನಂತರ ಫೆ. 17ರಂದು ಸಂಜೆ 4.30ಕ್ಕೆ ದೇವಸ್ಥಾನ ಆವರಣದಲ್ಲಿ ಕಂಚಿವೀರರು ಹಾಗೂ ಗೊರವರಿಂದ ಸರಪಳಿ ಮತ್ತು ಭಗಣಿ ಗೂಟ ಪವಾಡಗಳು ಭಕ್ತರ ಜನರ ಗಮನ ಸೆಳೆದವು.
ಮೈಲಾರಲಿಂಗೇಶ್ವರ ಸ್ವಾಮಿಯ ಕಾರ್ಣಿಕ ನುಡಿಯುವ ಪುಣ್ಯಸ್ಥಳ ಡೆಂಕಣ ಮರಡಿ (ಮಣಿಕಾಚೂಲ ಪರ್ವತ) ಯಲ್ಲಿ ಅಡಗಿ ಕುಳಿತಿದ್ದ ಮಣಿಕಾಸುರ, ಮಲ್ಲಾಸುರ ಸೇರಿದಂತೆ ಸಾವಿರಾರು ರಾಕ್ಷಸರನ್ನು ಸಂಹರಿಸಿರುವ ಹಿನ್ನೆಲೆಯಲ್ಲಿ ದೇವಸ್ಥಾನದ ಕಂಚವೀರರು, (ಪಂಚವೀರರು) ಇಂದಿಗೂ ಭಗಣಿ ಗೂಟ, ಸರಪಳಿ ಪವಾಡಗಳು ನಡೆದುಕೊಂಡು ಬಂದಿವೆ.
ಪವಾಡ ನಡೆಯುವಾಗ ಕಂಚವೀರರು (ಪಂಚವೀರರು) ಒಟ್ಟು 5 ವೇಷಗಳನ್ನು ಧರಸಿರುತ್ತಾರೆ. ಇದರಲ್ಲಿ ಪ್ರಮುಖವಾಗಿ ವೀರಭದ್ರನ ಅವತಾರವಿದೆ. ಕಾಲಿಗೆ ಭಗಣಿ ಗೂಟ ಬಡಿದುಕೊಳ್ಳುವುದು, ಕಾಲಿಗೆ ರಂಧ್ರ ಕೊರೆದು ಅದರಲ್ಲಿ ಮುಳ್ಳುಗಳನ್ನು ದಾಟಿಸುವುದು, ಮುಂಗೈಗೆ ಕಬ್ಬಿಣ ಆರತಿಯನ್ನು ಚುಚ್ಚಿಕೊಂಡು ದೀಪ ಹಚ್ಚುವುದು, ಗ್ವಾರಪ್ಪ ಕಬ್ಬಿಣದ ಸರಪಳಿಯನ್ನು ಹರಿಯುವುದು ಸೇರಿದಂತೆ ಅನೇಕ ಪವಾಡಗಳು ನೆರೆದಿದ್ದ ಭಕ್ತರನ್ನು ಬೆರಗುಗೊಳಿಸಿದವು.
ದೇವಸ್ಥಾನದ ಆವರಣದಲ್ಲಿ ವಂಶಪಾರಂಪರ್ಯವಾಗಿ ಮೈಲಾರಲಿಂಗೇಶ್ವರನಿಗೆ ಪವಾಡಗಳ ಮೂಲಕ ತಮ್ಮ ಸೇವೆ ಸಲ್ಲಿಸುತ್ತ ಬಂದಿರುವ ಕಂಚಿವೀರರು ಮತ್ತು ಗೊರವರು ಮಾಡಿದ ಪವಾಡಗಳಾದ ಭಗಣಿ ಗೂಟ, ಸರಪಳಿ ಪವಾಡಗಳು ನೆರೆದಿದ್ದ ಭಕ್ತರನ್ನು ಬೆಚ್ಚಿ ಬೀಳಿಸಿದವು. ಕಂಚಿವೀರರನ್ನು ಮೆರವಣಿಗೆ ಮೂಲಕ ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್ ಸೇರಿದಂತೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಕರೆತಂದು ಗಂಗಿಮಾಳಮ್ಮ ದೇವಸ್ಥಾನದ ಮುಂದಿರುವ ಸರಪಳಿ ಪವಾಡ ಕಟ್ಟೆ ಮುಂದೆ ಬಂದು ಪವಾಡಗಳಲ್ಲಿ ಬಳಕೆ ಮಾಡುವ ಆಯುಧಗಳನ್ನು ಕಂಚಿವೀರರು ಪೂಜೆ ಮಾಡಿದರು.
ಭಗಣಿ ಗೂಟ: ಕಟ್ಟಿಗೆಯಿಂದ ಮಾಡಿದ ಆಯುಧವನ್ನೆ ಭಗಣಿ ಗೂಟ ಎನ್ನುತ್ತಾರೆ, ಇದನ್ನು ಕಂಚಿವೀರರು ಬಲಗಾಲಿನ ಮೀನು ಗಂಡದ ಕೆಳಗೆ ದೇವರನ್ನು ನೆನೆಯುತ್ತ ಬಡಿದುಕೊಳ್ಳುತ್ತಾರೆ. ಆಗ ಕಾಲಿನಲ್ಲಿ ರಂಧ್ರದ ಮೂಲಕವಾಗಿ ಚರ್ಮದ ಮಿಣಿಗಳು, ಮುಳ್ಳುಗಳನ್ನು ದಾಟಿಸುವುದು, ಕಂಚಿವೀರರು ಮೈಲಾರಲಿಂಗ ದೇವರ ಕುರಿತು ಕೈಯಲ್ಲಿ ಖಡ್ಗಗಳನ್ನು ಹಿಡಿದು ಮಹಿಮೆ ಹೊಗಳುವ ಒಡಪುಗಳನ್ನು ಹೇಳುತ್ತಾರೆ.
ನಂತರ ಕಂಚಿವೀರರು ಮತ್ತು ಗೊರವರು ಕಟ್ಟೆ ಪಕ್ಕದ ಕಲ್ಲಿಗೆ ಕಬ್ಬಿಣದ ಸರಪಳಿಗಳನ್ನು ಕಟ್ಟಿಕೊಂಡು ದೇವರನ್ನು ನೆನೆಯುತ್ತ ಸರಪಳಿ ಹರಿಯುತ್ತಾರೆ. ಕಂಚಿವೀರರು ಮತ್ತು ಗೊರವರು ಸರಪಳಿ ಕಿತ್ತು ಹಾಕುವಾಗ ನೆರೆದಿದ್ದ ಭಕ್ತರು ಮತ್ತು ಗೊರವರ ಢಮರುಗದ ಶಬ್ದ ಪವಾಡ ಮಾಡುವವರಿಗೆ ಹುಮ್ಮಸ್ಸು ತರುತ್ತವೆ.
ಈ ಬಾರಿ ಮೂವರು ಯುವಕರು ಹೊಸದಾಗಿ ಪವಾಡಗಳನ್ನು ಮಾಡಿದರು. ಕಂಚಿವೀರರ ಕುಟುಂದ ಹಿರಿಯರು ಯುವಕರಿಗೆ ಮಾರ್ಗದರ್ಶನ ನೀಡಿ ಸಂಪ್ರದಾಯ ಮುಂದುವರಿಸುವಂತೆ ಮಾಡಿದರು. ಈ ಕಂಚಿವೀರರು ಈ ಪವಾಡಗಳನ್ನು ಮಾಡಿದಾಗ ಮಾತ್ರ ಅವರಿಗೆ ಮದುವೆ ಮಾಡಿಕೊಳ್ಳಲು ಅವಕಾಶವಿದೆ. ಆದರಿಂದ ಯುವಕರೂ ಪವಾಡಗಳನ್ನು ಮಾಡಬೇಕೆನ್ನುತ್ತಾರೆ ವೆಂಕಪ್ಪಯ್ಯ ಒಡೆಯರ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

