ಬಳ್ಳಾರಿ

ಸಿಎಂ ಹೈಕಕ್ಕೆ ಪ್ರತ್ಯೇಕ ಅನುದಾನ ನೀಡಿಲ್ಲ

Published On :

ಕನ್ನಡಪ್ರಭ ವಾರ್ತೆ, ಹೂವಿನಹಡಗಲಿ, ಫೆ. 19
ಸಿಎಂ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ಹೈಕ ಭಾಗದ ಅಭಿವೃದ್ಧಿಗೆ ಪ್ರತ್ಯೇಕ ಅನುದಾನ ನೀಡದೆ ಮೋಸ ಮಾಡಿದ್ದಾರೆ. ಕೇವಲ ಅಂಕಿ ಅಂಶಗಳನ್ನು ಬದಲಾವಣೆ ಮಾಡುವ ಮೂಲಕ ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆಂದು ಮಾಜಿ ವಿಧಾನಪರಿಷತ್ ಸದಸ್ಯ ಶಶಿಲ್ ನಮೋಶಿ ಆರೋಪಿಸಿದರು.
ಪಟ್ಟಣದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2007-08ರಿಂದ 2013-14ನೇ ಸಾಲಿನವರೆಗೂ ವಿಶೇಷ ಅಭಿವೃದ್ಧಿ ಯೋಜನೆಯಡಿ ರು. 12,2,848 ಕೋಟಿ, ಎಚ್‌ಕೆಆರ್‌ಡಿಪಿ ಯೋಜನೆಯಡಿ ರು. 16,3,740.87 ಕೋಟಿ ಸೇರಿ ರು. 28,6,588.87 ಕೋಟಿ ದಾಟಿತ್ತು. ಆದರೆ 371 (ಜೆ) ಗೆಜೆಟ್ ಅಧಿಸೂಚನೆ ಬಂದು ತಿಂಗಳು ಕಳೆದಿವೆ. ಈ ಬಜೆಟ್‌ನಲ್ಲಿ ಪ್ರತಿವರ್ಷ ವಿಶೇಷ ಅಭಿವೃದ್ಧಿ ಯೋಜನೆಯಡಿ ನೀಡಿದಷ್ಟೆ ಹಣ ನೀಡಿದ್ದಾರೆ ಹೊರತು, ಹೆಚ್ಚುವರಿ ಅನುದಾನ ನೀಡಿಲ್ಲ. ಒಂದು ರೀತಿಯಲ್ಲಿ ಹಳೆ ಬಾಟಲಿಗೆ ಹೊಸ ಮದ್ಯ ಎನ್ನುವಂತಾಗಿದೆ ಎಂದು ಲೇವಡಿ ಮಾಡಿದರು.
ಸಿಎಂ ಸಿದ್ದರಾಮಯ್ಯ ಅವರು ಉದ್ದೇಶಪೂರ್ವಕವಾಗಿ ಮಾಡಿದ್ದರೆ ಹೈಕ ಭಾಗಕ್ಕೆ ಬಜೆಟ್‌ನಲ್ಲಾಗಿರುವ ಅನ್ಯಾಯ ಸರಿಪಡಿಸಿ ಬದಲಾವಣೆ ತಂದು, ರು. 28,6,588 ಕೋಟಿ ಹೊರತುಪಡಿಸಿ ಹೈಕ ಭಾಗಕ್ಕೆ ಕನಿಷ್ಠ ರು. 2 ಸಾವಿರ ಕೋಟಿ ಹೆಚ್ಚುವರಿ ಅನುದಾನ ನೀಡದಿದ್ದರೆ ಈ ಭಾಗದಲ್ಲಿ ಉಗ್ರ ಹೋರಾಟ ಮಾಡಲಾಗವುದೆಂದು ಎಚ್ಚರಿಕೆ ನೀಡಿದರು.
371 (ಜೆ) ಅನ್ವಯ ಜಾರಿಯಾಗುವಂತೆ ಹೈಕ ಭಾಗದಲ್ಲಿ ನೇಮಕಾತಿ ಹಾಗೂ ಬಡ್ತಿಯನ್ನು ಶೀಘ್ರದಲ್ಲೆ ಜಾರಿಗೆ ತರಬೇಕು. ಅನುದಾನಿತ ಶಾಲಾ ಕಾಲೇಜುಗಳ ಶಿಕ್ಷಕರಿಗೆ ಕಾಲ್ಪನಿಕ ಬಡ್ತಿ ವಿಷಯದ ಮೇಲೆ ಸುರ್ಪ್ರೀಂ ಕೋರ್ಟ್ ಶಿಕ್ಷಕರ ಸೇವಾ ಅವಧಿ ಗಣನೆಗೆ ತೆಗೆದುಕೊಳ್ಳಬೇಕೆಂಬ ಆದೇಶ ನೀಡಿದೆ. ಫೆ. 18ರ ಒಳಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ 2 ತಿಂಗಳೊಳಗೆ ಬಗೆಹರಿಸುತ್ತೇವೆಂಬ ಮುಚ್ಚಳಿಕೆ ಪತ್ರವನ್ನು ಕೋರ್ಟ್‌ಗೆ ನೀಡಿದ್ದಾರೆ. ದಿನಾಂಕ ಮುಂದೂಡದೆ ರು. 285 ಕೋಟಿಯನ್ನು ಸಂಬಂಧಪಟ್ಟ ಶಿಕ್ಷಕರಿಗೆ ನೀಡದಿದ್ದರೆ ನ್ಯಾಯಾಲಯ ನಿಂದನೆ ದೂರು ದಾಖಲಿಸುತ್ತೇವೆಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ತಾರತಮ್ಯ: ರಾಜ್ಯದಲ್ಲಿ 10,500 ಅತಿಥಿ ಉಪನ್ಯಾಸಕರಿದ್ದು, ರಾಜ್ಯದ ಶೇ. 75ರಷ್ಟು ಪದವಿ ಕಾಲೇಜುಗಳು ಅತಿಥಿ ಉಪನ್ಯಾಸರಿಂದಲೆ ನಡೆಯುತ್ತಿದೆ. ಸಾಕಷ್ಟು ಹುದ್ದೆಗಳು ಖಾಲಿ ಇದ್ದರೂ ಸರ್ಕಾರ ನೇಮಕಾತಿ ಮಾಡುವ ಗೋಜಿಗೆ ಹೋಗಿಲ್ಲ. ಶೇ. 25ರಷ್ಟು ಇರುವ ಉಪನ್ಯಾಸಕರು ಯುಜಿಸಿ ಅಡಿಯಲ್ಲಿ ಲಕ್ಷಾಂತರ ರು. ವೇತನ ಪಡೆದರೆ, ಅತ್ತ ಅತಿಥಿ ಉಪನ್ಯಾಸಕರಿಗೆ ತಿಂಗಳಿಗೆ ರು. 8-10 ಸಾವಿರ ಸಂಬಳ ನೀಡಿ ಬಹುದೊಡ್ಡ ತಾರತಮ್ಯ ಎಸಗಿದ್ದಾರೆ. ಸದನದಲ್ಲಿ ಉನ್ನತ ಶಿಕ್ಷಣ ಸಚಿವ ದೇಶಪಾಂಡೆ ಅತಿಥಿ ಉಪನ್ಯಾಸಕರಿಗೆ ಸಂಬಳ ನೀಡುವ ಭರವಸೆ ನೀಡಿದ್ದಾರೆ. ಯುಜಿಸಿ ಹೇಳಿರುವಂತೆ ಸರ್ಕಾರ ತಿಂಗಳಿಗೆ ಕನಿಷ್ಠ ರು. 25 ಸಾವಿರ ವೇತನ ಪ್ರತಿ ತಿಂಗಳು ನೀಡಬೇಕೆಂದು ಒತ್ತಾಯಿಸಿದರು.
ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದರೆ ಶಿಷ್ಯ ವೇತನ ನೀಡುವುದಿಲ್ಲವೆಂಬ ಆದೇಶವನ್ನು ಕೂಡಲೆ ಸರ್ಕಾರ ಹಿಂಪಡೆಯಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೋರಾಟದ ಹಕ್ಕನ್ನು ಯಾರು ಕಿತ್ತುಕೊಳ್ಳುವಂತಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಮಾಜಿ ಶಾಸಕ ಬಿ. ಚಂದ್ರನಾಯ್ಕ, ಬಿಜೆಪಿ ಮುಖಂಡ ಎಲ್. ಮಧುನಾಯ್ಕ, ವಕ್ತಾರ ಎಂ.ಬಿ. ಬಸವರಾಜ ಸೋಗಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್. ಪೂಜಪ್ಪ, ತಾಲೂಕು ಪ್ರಧಾನ ಕಾರ್ಯದರ್ಶಿ ಸಂಜೀವರೆಡ್ಡಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.