ಬಳ್ಳಾರಿ

ಪೊಲೀಸ್ ಮನೆಗೇ ಕನ್ನ: ರು. 10 ಲಕ್ಷ ಮೌಲ್ಯದ ಚಿನ್ನಾಭರಣ ಕಳವು

Published On :

ಕೊಟ್ಟೂರು: ಪೊಲೀಸ್ ಪೇದೆಯೊಬ್ಬರ ಮನೆಗೆ ಹಾಡಹಗಲೆ ಕಳ್ಳರು ನುಗ್ಗಿ ರು. 10 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ, ರು. 5 ಸಾವಿರ ನಗದನ್ನು ಕ್ಷಣ ಮಾತ್ರದಲ್ಲಿ ದೋಚಿ ಪರಾರಿಯಾಗಿರುವ ಘಟನೆ ಪಟ್ಟಣದ ರೇಣುಕಾ ಬಡಾವಣೆಯಲ್ಲಿ ಬುಧವಾರ ಜರುಗಿದೆ.
ರೇಣುಕಾ ಬಡಾವಣೆಯಲ್ಲಿನ ಭೋವಿ ಶೆಟ್ಟೆಪ್ಪ ಎಂಬುವವರ ಆಶೀರ್ವಾದ ನಿವಾಸದ ಮೊದಲ ಮಹಡಿಯಲ್ಲಿ ಈ ಕಳ್ಳತನ ಜರುಗಿದೆ. ಮನೆ ಮಾಲೀಕನ ಪತ್ನಿ ಚೆನ್ನಮ್ಮ ಬೆಳಗ್ಗೆ 10.35ರ ಸುಮಾರಿಗೆ ಮನೆ ಬಾಗಿಲಿಗೆ ಚಿಲಕ ಎಳೆದು ಪಕ್ಕದ ಮನೆಗೆ ತೆರಳಿದ್ದರು. ಈ ಸಂದರ್ಭದಲ್ಲಿ ಮನೆಯೊಳಗೆ ಯಾರೂ ಇರಲಿಲ್ಲ. ಇದನ್ನು ಪೂರ್ಣ ಪ್ರಮಾಣದಲ್ಲಿ ಅರಿತ ಕಳ್ಳರು ಸೀದಾ ಮನೆಯೊಳಗೆ ನುಗ್ಗಿ ಮನೆಯ ಎರಡು ಕೊಠಡಿಗಳಲ್ಲಿದ್ದ ಬೀರುಗಳನ್ನು ತೆರೆದು ಒಂದು ಕೋಣೆಯಲ್ಲಿದ್ದ ಚಿನ್ನಾಭರಣ, ಬೆಳ್ಳಿ ಮತ್ತು ಮತ್ತೊಂದು ಕೋಣೆಯ ಬೀರುವಿನಲ್ಲಿದ್ದ ರು. 5 ಸಾವಿರ ನಗದನ್ನು ದೋಚಿ ಪರಾರಿಯಾಗಿದ್ದಾರೆ. ಬೆಳಗ್ಗೆ 10.30ರಿಂದ 11.15ರ ಮಧ್ಯ ಈ ಕೃತ್ಯ ನಡೆದಿರಬಹುದು ಎಂದು ಚೆನ್ನಮ್ಮ ಹೇಳಿದರು.
ಚಿನ್ನಾಭರಣಗಳ ಪೈಕಿ 40 ಗ್ರಾಂನ ಅವಲಕ್ಕಿ ಸರ, 40 ಗ್ರಾಂನ ಲಾಂಗ್ ಚೈನ್, 90 ಗ್ರಾಂನ ಮಾಂಗಲ್ಯ ಸರ, 8 ಬಳೆ, 10ಕ್ಕೂ ಹೆಚ್ಚು ಉಂಗುರ, 17 ಜೊತೆ ಕಿವಿಯೋಲೆ, 2 ನೆಕ್ಲೆಸ್  ಸೇರಿದಂತೆ ಒಟ್ಟು ಅರ್ಧ ಕೆ.ಜಿ. ಪ್ರಮಾಣದ್ದಾಗಿದ್ದೂ, 40 ತೊಲೆ ಬೆಳ್ಳಿ ಆಭರಣಗಳು ಕಳುವಾಗಿವೆ ಎಂದು ಚೆನ್ನಮ್ಮ ತಿಳಿಸಿದ್ದಾರೆ.
ಈ ಕೃತ್ಯವನ್ನು ಎಸಗಿದ್ದನ್ನು ನೋಡಿ ಕೂಡಲೇ ಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಪೇದೆಯಾಗಿರುವ ತಮ್ಮ ಪುತ್ರ ವೆಂಕಟೇಶ್‌ಗೆ ದೂರವಾಣಿ ಮೂಲಕ ತಿಳಿಸಿ ಕರೆಯಿಸಿಕೊಂಡೆ ಎಂದು ಅವರು ಹೇಳಿದರು. ಸ್ಥಳಕ್ಕೆ ಸಿಪಿಐ ಎನ್. ಲಾಲ್ಯನಾಯ್ಕ, ಪಿಎಸ್‌ಐ ಗುರುರಾಜ್ ಮೈಲಾರ, ಅಪರಾಧ ವಿಭಾಗದ ಪಿಎಸ್‌ಐ ದಶರಥ ಅವರು ಭೇಟಿ ನೀಡಿ ಪರಿಶೀಲಿಸಿದರು. ಕಳ್ಳರನ್ನು ಪತ್ತೆಹಚ್ಚಲು ಬಳ್ಳಾರಿಯಿಂದ ಶ್ವಾನದಳ ಮತ್ತು ಬೆರಳಚ್ಚು ತಜ್ಞರನ್ನು ಕರೆಯಿಸಿಕೊಳ್ಳಲಾಗಿದೆ. ಮನೆಯ ಸಂಪೂರ್ಣ ಮಾಹಿತಿ ಇದ್ದವರೆ ಈ ಕೃತ್ಯ ಎಸಗಿರುವ ಸಾಧ್ಯತೆ ಇದೆ ಎಂದು ಸಿಪಿಐ ಲಾಲ್ಯನಾಯ್ಕ ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.