ಬಳ್ಳಾರಿ-ಹಾವೇರಿ ವರ್ಗಾವಣೆ ನಂಟು
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಫೆ. 23
ಜಿಲ್ಲಾ ಮಟ್ಟದ ಅಧಿಕಾರಿಗಳ ವರ್ಗಾವಣೆಯಲ್ಲಿ ಅದರಲ್ಲೂ ಎಸ್ಪಿ, ಡಿಸಿ ವರ್ಗಾವಣೆಯಲ್ಲಿ ಬಳ್ಳಾರಿ ಮತ್ತು ಹಾವೇರಿಯೊಂದಿಗೆ ಬಲುನಂಟು. ಈ ನಂಟು ಹಾವೇರಿ ಡಿಸಿ ಹಾಗೂ ಬಳ್ಳಾರಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯ ವರ್ಗಾವಣೆಯಲ್ಲಿ ಕಾಕತಾಳೀಯ ಎಂಬಂತೆ ಸಾಬೀತಾದಂತಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ಗಾವಣೆ, ಮೇಲ್ಪಟ್ಟ ಅಧಿಕಾರಿಗಳ ವರ್ಗಾ, ವರ್ಗಿಯಲ್ಲಿಯೂ ಇಂತಹ ಸಾಮ್ಯತೆಗಳನ್ನು ಎರಡು ಜಿಲ್ಲೆಗಳಲ್ಲಿ ಕಾಣುವಂತಾಗಿದೆ. ಬಳ್ಳಾರಿಗೆ ಬರುವ ಅಧಿಕಾರಿಗಳು ಹಾವೇರಿಯಿಂದ ವರ್ಗಾವಣೆಯಾಗಿರುವ 3-4 ನಿದರ್ಶನಗಳೇ ಇದಕ್ಕೆ ಸಾಕ್ಷಿ. 2011ರಲ್ಲಿ ಹಾವೇರಿ ಎಸ್ಪಿಯಾಗಿದ್ದ ಡಾ. ಚಂದ್ರಗುಪ್ತ ಅವರು ಬಳ್ಳಾರಿ ಎಸ್ಪಿಯಾಗಿ ವರ್ಗಾವಣೆಯಾದಾಗಿನಿಂದ ಇಂತಹ ಕಾಕತಾಳೀಯ ಹೆಚ್ಚಾಗಿ ಕಾಣುತ್ತೇವೆ. ಇನ್ನು 2013ರಲ್ಲಿ ಡಾ. ಚಂದ್ರಗುಪ್ತ ಅವರು ಬೆಳಗಾವಿ ಎಸ್ಪಿಯಾಗಿ ವರ್ಗಾವಣೆಯಾದರೆ, ಅವರ ಸ್ಥಾನಕ್ಕೆ ಬಳ್ಳಾರಿ ಎಸ್ಪಿಯಾಗಿ ಹಾವೇರಿ ಎಸ್ಪಿಯಾಗಿದ್ದ ಡಾ. ಚೇತನ್ಸಿಂಗ್ ರಾಥೋಡ್ ಬರುವ ಮೂಲಕ ಹಾವೇರಿ ಮತ್ತು ಬಳ್ಳಾರಿ ಅಧಿಕಾರಿಗಳ ವರ್ಗಾವಣೆಯ ನಂಟನ್ನು ಮುಂದುವರಿಸಿದ್ದರು. ಈ ಮೂಲಕ ಅಧಿಕಾರಿಗಳ ವರ್ಗಾವಣೆಯಲ್ಲಿ ಬಳ್ಳಾರಿ-ಹಾವೇರಿ ನಡುವೆ ಒಂದು ರೀತಿಯ ಸಂಬಂಧ ಕಾಣುತ್ತಿದೆ.
ಬಿಸ್ವಾಸ್ ಹಾವೇರಿ ಡಿಸಿಯಾಗಿದ್ದರು: ಇಷ್ಟಕ್ಕೆ ಅಧಿಕಾರಿಗಳ ವರ್ಗಾವಣೆಯ ಸಂಬಂಧ ಮುಗಿಯಲಿಲ್ಲ, ಇತ್ತೀಚೆಗೆ ರಾಜ್ಯ ಸರ್ಕಾರ ಬಳ್ಳಾರಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿರುವ ಮಂಜುನಾಥ್ ನಾಯಕ್ ಅವರನ್ನು ಹಾವೇರಿ ಜಿಲ್ಲಾಧಿಕಾರಿಯನ್ನಾಗಿ ವರ್ಗಾವಣೆ ಮಾಡಿದ್ದರೆ, ಹಾವೇರಿ ಜಿಲ್ಲಾಧಿಕಾರಿಯಾಗಿದ್ದ ಪಾಂಡುರಂಗ ಬೊಮ್ಮಯ್ಯ ನಾಯಕ್ ಅವರನ್ನು ಬಳ್ಳಾರಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯನ್ನಾಗಿ ವರ್ಗಾವಣೆ ಮಾಡಿದೆ. ಆ ಮೂಲಕ ಈ ಕಾಕತಾಳೀಯ ಸಂಬಂಧ ಮತ್ತೆ ಮುಂದುವರಿಸಿದ್ದಾರೆ. ಸದ್ಯ ಬಳ್ಳಾರಿ ಜಿಲ್ಲಾಧಿಕಾರಿಯಾಗಿರುವ ಅಮ್ಲಾನ್ ಆದಿತ್ಯ ಬಿಸ್ವಾಸ್ ಅವರು ಕೂಡ ಕೆಲ ವರ್ಷಗಳ ಹಿಂದೆ ಹಾವೇರಿ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು ಎಂಬುದು ಕುತೂಹಲದ ಸಂಗತಿ.
ಬೆಳಗಾವಿಯೊಂದಿಗೆ ಬಳ್ಳಾರಿ ನಂಟು: ಈ ಅಧಿಕಾರಿಗಳ ವರ್ಗಾವಣೆ ಬಳ್ಳಾರಿಯೊಂದಿಗೆ ಹಾವೇರಿ ನಂಟು ಮಾತ್ರ ಇಲ್ಲ, ಎಸ್ಪಿ ವರ್ಗಾವಣೆಯಲ್ಲಿ ಬಳ್ಳಾರಿ- ಬೆಳಗಾವಿಯೊಂದಿಗೆ ನಂಟು ಇದೆ.
ಈ ಹಿಂದೆ ಬಳ್ಳಾರಿ ಎಸ್ಪಿಯಾಗಿ ಕೆಲಸ ಮಾಡಿದ್ದ ಹೇಮಂತ್ ನಿಂಬಾಳ್ಕರ್ ಅವರು ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ವರ್ಗಾವಣೆಯಾಗಿದ್ದರು. ಇನ್ನು 2013ರಲ್ಲಿ ಬಳ್ಳಾರಿ ಎಸ್ಪಿ ಡಾ. ಚಂದ್ರಗುಪ್ತ ಅವರು ಕೂಡ ಬೆಳಗಾವಿ ಎಸ್ಪಿಯಾಗಿ ವರ್ಗಾವಣೆಯಾದರು. ಬಳ್ಳಾರಿಯಲ್ಲಿ ಪ್ರೊಬೆಷನರಿ ಹೆಚ್ಚುವರಿ ಎಸ್ಪಿಯಾಗಿ ಕೆಲಸ ಮಾಡಿದ್ದ ಸಂದೀಪ್ ಪಾಟೀಲ್ ಅವರು ದಾವಣಗೆರೆ ಎಸ್ಪಿಯಾಗಿ ವರ್ಗಾವಣೆಯಾಗಿ, ಅಲ್ಲಿಂದ ಬೆಳಗಾವಿಗೆ ಎಸ್ಪಿಯಾಗಿ ವರ್ಗಾವಣೆಯಾಗಿದ್ದಾರೆ. ಇದಲ್ಲದೆ ಬಳ್ಳಾರಿ ತಹಸೀಲ್ದಾರ್ ಶಶಿಧರ ಬಗಲಿ ಅವರು ಈ ಹಿಂದೆ ಬೆಳಗಾವಿ ಉಪ ವಿಭಾಗಾಧಿಕಾರಿಯಾಗಿ ವರ್ಗಾವಣೆಯಾಗಿದ್ದರು.
ಈಗಾಗಲೆ ಬಳ್ಳಾರಿ ಜಿಪಂ ಸಿಇಒ ಮಂಜುನಾಥ್ ನಾಯಕ್ ಅವರು ಬಳ್ಳಾರಿಯ ತಮ್ಮ ಸ್ಥಾನದಿಂದ ರಿಲೀವ್ ಆಗಿದ್ದು, ಸೋಮವಾರ ಹಾವೇರಿ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಇನ್ನೆರೆಡು ದಿನಗಳಲ್ಲಿ ಹಾವೇರಿ ಡಿಸಿ ಪಾಂಡುರಂಗ ಬೊಮ್ಮಯ್ಯ ನಾಯಕ್ ಅವರು ಬಳ್ಳಾರಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಪದಗ್ರಹಣವಾಗಲಿದ್ದಾರೆ.
ಅಧಿಕಾರಿಗಳ ವರ್ಗಾವಣೆಯು ಉದ್ದೇಶಪೂರ್ವಕವಾಗಿ ಇಲ್ಲದಿದ್ದರೂ ಕಾಕತಾಳೀಯ ವಿಷಯದಲ್ಲಿ ಅಧಿಕಾರಿಗಳ ವರ್ಗಾವಣೆಯಲ್ಲಿ ಬಳ್ಳಾರಿ- ಹಾವೇರಿಗೆ ಸಂಬಂಧಿಸಿದಂತೆ ಒಂದು ನಂಟನ್ನು ಕಾಣಬಹುದು. ಇಂತಹ ನಂಟು ಈ ಮೂರು ಜಿಲ್ಲೆಗಳ ಜನತೆಯಲ್ಲಿ ಕುತೂಹಲ ಕೆರಳಿಸುವಂತೆ ಮಾಡಿದೆ.
ಅಧಿಕಾರ ಸ್ವೀಕಾರ....
ಬಳ್ಳಾರಿ ಜಿಪಂ ಸಿಇಒ ಮಂಜುನಾಥ್ ನಾಯಕ್ ಅವರು ಬಳ್ಳಾರಿಯ ತಮ್ಮ ಸ್ಥಾನದಿಂದ ಬಿಡುಗಡೆ ಹೊಂದಿದ್ದು, ಸೋಮವಾರ ಹಾವೇರಿ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಇನ್ನೆರೆಡು ದಿನಗಳಲ್ಲಿ ಹಾವೇರಿ ಡಿಸಿ ಪಾಂಡುರಂಗ ಬೊಮ್ಮಯ್ಯ ನಾಯಕ್ ಅವರು ಬಳ್ಳಾರಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಅಧಿಕಾರ ಸ್ವೀಕಾರ ಮಾಡಲಿದ್ದಾರೆ.
-ಶಶಿಧರ ಮೇಟಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

