ಗಣಿ ಹಾನಿ ಭರ್ತಿಗೆ ಅರಣ್ಯ ಇಲಾಖೆ ರೆಡಿ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಜ. 1
ಗಣಿಗಾರಿಕೆಯಿಂದಾಗಿ ಬಳ್ಳಾರಿಯ ಅರಣ್ಯದಲ್ಲಿ ಆಗಿರುವ ಹಾನಿ ತುಂಬಲು ಹಾಗೂ ಜಿಲ್ಲೆಯಲ್ಲಿ ಅರಣ್ಯ ಅಭಿವೃದ್ಧಿಪಡಿಸುವ ಉದ್ದೇಶದಿಂದಾಗಿ ಅರಣ್ಯ ಇಲಾಖೆ ಅಧಿಕಾರ ವ್ಯವಸ್ಥೆಯಲ್ಲಿ ಬದಲಾವಣೆ ತಂದಿದೆ.
ಗಣಿಗಾರಿಕೆ ಎಂದರೆ ಅರಣ್ಯ ಇಲಾಖೆ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯತ್ತ ಬೆರಳು ತೋರಿಸುತ್ತಿದ್ದರು. ಈ ಹಿಂದೆ ಎರಡು ಇಲಾಖೆಗಳು ಕಟ್ಟುನಿಟ್ಟಿನಿಂದ ನಿಯಮ ಪಾಲಿಸಿದ್ದರೆ, ಗಣಿಯಲ್ಲಿ ಅಕ್ರಮ ಮಾಡಲು ಕಷ್ಟಸಾಧ್ಯವಾಗಿತ್ತು. ಹಿಂದಿನ ಈ ಇಲಾಖೆಗಳ ಅಧಿಕಾರಿಗಳು ಕೈಚೆಲ್ಲಿ ಕುಳಿತ ಹಿನ್ನೆಲೆಯಲ್ಲಿ ಅರಣ್ಯ ನಾಶ, ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆ, ಅರಣ್ಯ ಪ್ರದೇಶದ ಒತ್ತುವರಿ ಸೇರಿದಂತೆ ಇತರ ಕಾರಣಗಳಿಂದ ಬಳ್ಳಾರಿಯ ಅರಣ್ಯ ಪ್ರದೇಶಕ್ಕೆ ಸಾಕಷ್ಟು ಕುತ್ತು ಬಂದಿತ್ತು. ಇದೀಗ ಐಸಿಎಫ್ ಆರ್ಇ ತಂಡವು ಸಿಇಸಿ ಆದೇಶ ಮೂಲಕ ಆರ್ ಆಂಡ್ ಆರ್ ಯೋಜನೆ ಅನುಷ್ಠಾನಕ್ಕೆ ಮುಂದಾಗಿದ್ದು, ಇದಕ್ಕೆ ಅರಣ್ಯ ಇಲಾಖೆ ಹೆಚ್ಚಿನ ಕಾಳಜಿ ವಹಿಸಿ, ಜಿಲ್ಲೆಯಲ್ಲಿ ಅರಣ್ಯ ಇಲಾಖೆಯ ಕೆಲಸ ಕಾರ್ಯಗಳು ಸುಲಲಿತವಾಗಲು ಇಲಾಖೆಯಲ್ಲಿ ಕೆಲವೊಂದು ಬದಲಾವಣೆ ತಂದಿದೆ.
ವಲಯಗಳ ಸಂಖ್ಯೆಯಲ್ಲಿ ಹೆಚ್ಚಳ
ಬಳ್ಳಾರಿ ಜಿಲ್ಲೆಯಲ್ಲಿ ಸಂಡೂರು, ಹೊಸಪೇಟೆ, ಕೂಡ್ಲಿಗಿ ಇತರ ಕಡೆಗಳಲ್ಲಿ ಹೆಚ್ಚಿನ ಅರಣ್ಯ ಪ್ರದೇಶ ಹೊಂದಿರುವುದರಿಂದ, ಈ ಹಿಂದೆ ಗಣಿಗಾರಿಕೆಯಿಂದ ಅರಣ್ಯ ಹಾನಿಗೆ ಕಾರಣವಾಗಿದ್ದರಿಂದ ಜಿಲ್ಲೆಯಲ್ಲಿದ್ದ 6 ಅರಣ್ಯ ವಲಯಗಳನ್ನು ಇದೀಗ 8ಕ್ಕೆ ಏರಿಕೆ ಮಾಡಲಾಗಿದೆ. ಬಳ್ಳಾರಿ, ಹೊಸಪೇಟೆ, ಸಂಡೂರು, ಎಚ್ಬಿ ಹಳ್ಳಿ, ಕೂಡ್ಲಿಗಿ, ಹಡಗಲಿ ವಲಯಗಳಿದ್ದು, ಇದೀಗ ಬಳ್ಳಾರಿ, ಹೊಸಪೇಟೆ, ಕೂಡ್ಲಿಗಿ, ಹಡಗಲಿ, ಗುಡೇಕೋಟೆ, ಸಂಡೂರು ಉತ್ತರ, ಸಂಡೂರು ದಕ್ಷಿಣ, ದರೋಜಿ ವಲಯಗಳೆಂದು ವಿಂಗಡಿಸಲಾಯಿತು. ಕೂಡ್ಲಿಗಿಯ ಗೊಲ್ಲಲಿಂಗಮ್ಮನಹಳ್ಳಿ, ತುಂಬರಗುದ್ದಿ, ಸೋಮಲಾಪುರವನ್ನು ಸಂಡೂರು ದಕ್ಷಿಣ ವಲಯಕ್ಕೆ, ಹೊಸಪೇಟೆ ರೇಂಜ್ನ ಜೋಗ, ಬಿ ಮತ್ತು ಸಿ ಬ್ಲಾಕ್ಗಳನ್ನು ಸಂಡೂರು ಉತ್ತರ ವಲಯಕ್ಕೆ ಸೇರ್ಪಡೆ ಮಾಡಿ, ಆಡಳಿತದಲ್ಲಿ ಸರಳೀಕರಣ ಮಾಡಿದೆ.
ಅಧಿಕಾರ ವ್ಯವಸ್ಥೆಯಲ್ಲಿ ಬದಲಾವಣೆ
ದರೋಜಿ ಕರಡಿಧಾಮವನ್ನು ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗಕ್ಕೆ ವಹಿಸಲಾಗಿತ್ತು. ಇದೀಗ ಅರಣ್ಯ ಇಲಾಖೆ ನಿರ್ವಹಣೆಗೆ ಮುಂದಾಗಿದೆ. ದರೋಜಿ ಕರಡಿಧಾಮಕ್ಕೆ ಪ್ರತ್ಯೇಕ ವಲಯವನ್ನಾಗಿ ಘೋಷಣೆ ಮಾಡಿದೆ. ಇಲ್ಲಿದ್ದ ಎಸಿಎಫ್ ಅವರನ್ನು ಕೂಡ್ಲಿಗಿ ಎಸಿಎಫ್ ಆಗಿ ನೇಮಕ ಮಾಡಲಾಗಿದೆ. ಜಿಲ್ಲೆಯಲ್ಲಿ ಈ ಹಿಂದೆ ಅರಣ್ಯ ಇಲಾಖೆಯಲ್ಲಿ ಎರಡು ಎಸಿಎಫ್ ದರ್ಜೆ ಅಧಿಕಾರಿಗಳಿದ್ದು, ಇದೀಗ ಮೂರು ಎಸಿಎಫ್ ಅಧಿಕಾರಿಗಳ ವ್ಯವಸ್ಥೆ ಮಾಡಲಾಗಿದೆ. ಬಳ್ಳಾರಿ, ಹೊಸಪೇಟೆ ಎಸಿಎಫ್ಗಳ ಜತೆಗೆ ಕೂಡ್ಲಿಗಿಗೆ ಒಬ್ಬ ಎಸಿಎಫ್ ವ್ಯವಸ್ಥೆ ಮಾಡಲಾಗಿದೆ. ಇದರಿಂದಾಗಿ ಹೆಚ್ಚು ಪರಿಣಾಮಕಾರಿ ಅಧಿಕಾರ ನಿರ್ವಹಣೆ ಮಾಡಲು ಸಾಧ್ಯ ಎಂಬ ಉದ್ದೇಶದಿಂದಾಗಿ ಅರಣ್ಯ ಇಲಾಖೆ ಜಿಲ್ಲೆಯಲ್ಲಿ ಇಲಾಖೆ ವ್ಯವಸ್ಥೆಯಲ್ಲಿ ಬದಲಾವಣೆ ತಂದಿದೆ.
ಸಸ್ಯಕಾಶಿ ರಕ್ಷಣೆಗೆ ಆಡಳಿತ ಸುಧಾರಣೆ
ಜಿಲ್ಲೆಯ ಸಂಡೂರು ಅರಣ್ಯ ಪ್ರದೇಶದಲ್ಲಿ ಮಲೆನಾಡಿನಲ್ಲಿ ಇರುವಂಥ ಸಸ್ಯಕಾಶಿಯನ್ನು ಕಾಣಬಹುದು. ಮತ್ತಿ, ಹೊನ್ನೆ, ಬೀಟೆ, ಧೂಪ, ಮೆಸವಾಳ, ಸೋವೆ, ನಲ್ಲಿ, ಸೀತಾಫಲ, ಮೂತ್ಗ, ಶಿವನೆ, ಸಾಗವಾನಿ ಸೇರಿದಂತೆ ವಿವಿಧ ಜಾತಿಯ ಸಸ್ಯಗಳು ಕಂಡು ಬರುತ್ತವೆ. ಇಂತಹ ಸಸ್ಯ ಸಂಪತ್ತು ರಕ್ಷಣೆ ಜವಾಬ್ದಾರಿ ಅರಣ್ಯ ಇಲಾಖೆ ಮೇಲಿದೆ. ಜಿಲ್ಲೆ ವ್ಯಾಪ್ತಿಯಲ್ಲಿ 60ರಿಂದ 70 ಗಣಿ ಕಂಪನಿಗಳು ಬರುವುದರಿಂದ ಅವರು ಗಣಿ ಗುತ್ತಿಗೆ ನಿರ್ವಹಣೆ ಮಾಡುವುದು, ಒತ್ತುವರಿ ಸಮಸ್ಯೆಗಳಿಗೆ ಇತಿಶ್ರೀ ಹಾಡಲು, ಅರಣ್ಯೀಕರಣ ಮಾಡಲು, ಮೈನ್ಸ್ ರೆಗ್ಯುಲೇಷನ್ ಆ್ಯಕ್ಟ್ ಸರಿಯಾದ ರೀತಿ ಪಾಲನೆ ಮಾಡಲು, ಗಣಿ ಗುತ್ತಿಗೆ ನಿರ್ವಹಣೆ, ಅರಣ್ಯ ಸುಧಾರಣೆ ತರುವ ಉದ್ದೇಶದಿಂದಾಗಿ, ಅರಣ್ಯದ ಪುನರುಜ್ಜೀವನ ಹಾಗೂ ಪುನರ್ ನಿರ್ಮಾಣ (ಆರ್ ಆ್ಯಂಡ್ ಆರ್) ಯೋಜನೆ ಅನುಷ್ಠಾನದಿಂದಾಗಿ ಅರಣ್ಯ ಇಲಾಖೆಯು ಬಳ್ಳಾರಿ ಮಟ್ಟಿಗೆ ಇಲಾಖೆ ವ್ಯವಸ್ಥೆಯಲ್ಲಿ ಬದಲಾವಣೆ ತಂದಿದೆ ಎಂದು ಮೂಲಗಳು ತಿಳಿಸಿವೆ.
ಉತ್ತಮ ಬೆಳವಣಿಗೆ
ನೂರಾರು ವರ್ಷಗಳಿಂದ ಬೆಳೆದಿದ್ದ ಸಂಡೂರು ಸೇರಿದಂತೆ ಇತರ ಭಾಗದ ಅರಣ್ಯ ಪ್ರದೇಶಕ್ಕೆ ಕೆಂಧೂಳಿನ ಗಣಿ ಲಾಬಿಯು ಕುತ್ತು ತಂದಿತ್ತು. ಗಣಿ ಉದ್ಯಮಿಗಳು ತಮ್ಮ ಸ್ವ-ಹಿತಾಸಕ್ತಿಗಾಗಿ ಅರಣ್ಯದ ಹಾನಿಗೆ ಕಾರಣವಾಗಿದ್ದರೂ, ಇದೀಗ ಆಗಿರುವ ಹಾನಿ ತುಂಬಲು ಅರಣ್ಯ ಇಲಾಖೆ ಹೆಚ್ಚಿನ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಲು ರೇಂಜ್ಗಳ ಸಂಖ್ಯೆಯಲ್ಲಿ ಹೆಚ್ಚಳ, ಇಲಾಖೆ ವ್ಯವಸ್ಥೆಯಲ್ಲಿ ಬದಲಾವಣೆ ತಂದು, ಅರಣ್ಯ ಅಭಿವೃದ್ಧಿಪಡಿಸಲು ಮುಂದಾಗುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ.
-ಶಶಿಧರ ಮೇಟಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

