ಬಳ್ಳಾರಿ

ಚರ್ಚೆಯಾಗದ ವಿಷಯ: ಸಭೆ ಮುಂದೂಡಿಕೆ

Published On :

ಕೊಟ್ಟೂರು: ಸ್ಥಳೀಯ ಪಪಂಯಲ್ಲಿ ಅಧ್ಯಕ್ಷ ಸಮ್ಮುಖದಲ್ಲಿ ಕರೆದಿದ್ದ ಸಾಮಾನ್ಯ ಸಭೆ ಹಿಂದಿನ ಸಭೆಯ ನಡಾವಳಿಗಳನ್ನು ಓದುವುದಕ್ಕಷ್ಟೇ ಸೀಮಿತವಾಯಿತಲ್ಲದೆ ಪ್ರಮುಖ ವಿಷಯಗಳ ಕುರಿತು ಸರಿಯಾದ ಮಾಹಿತಿ ಇಲ್ಲದ ಕಾರಣ ಅಡಳಿತರೂಢ ಸದಸ್ಯರೇ ಜ. 10ರಂದು ಮತ್ತೊಮ್ಮೆ ಸಭೆ ಕರೆಯುವಂತೆ ಮುಖ್ಯಾಧಿಕಾರಿಗೆ ಸೂಚಿಸುವ ಮೂಲಕ ಸಭೆ ಮೊಟಕುಗೊಳಿಸಿದ ಸ್ವಾರಸ್ಯಕರ ಪ್ರಸಂಗ ಜರುಗಿತು.
ಇಲ್ಲಿನ ಪಟ್ಟಣ ಪಂಚಾಯಿತಿ ಸಭಾಭವನದಲ್ಲಿ ಅಧ್ಯಕ್ಷೆ ಅನಸೂಯ ಸೆರೆಗಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪಟ್ಟಣ ಪಂಚಾಯಿತಿ ಸಿಬ್ಬಂದಿ ಭಾಸ್ಕರ ಮುಖ್ಯಾಧಿಕಾರಿ ಪರ ಹಿಂದಿನ ಸಭೆಯ ನಡಾವಳಿಗಳನ್ನು ಓದಿ ಸ್ವೀಕರಿಸುವ ಬಗ್ಗೆ ಪ್ರಸ್ತಾಪ ಮಾಡುತ್ತಿದ್ದಂತೆ ತಗಾದೆ ತೆಗೆದ ಸದಸ್ಯ ಬಾವಿಕಟ್ಟಿ ಶಿವಾನಂದ, ಡಿ. 30ರಂದು ನಡೆದ ಸಾಮಾನ್ಯ ಸಭೆಯಲ್ಲಿ ಕೆ.ಬಿ. ಶಾಂತಕುಮಾರ್ ಎನ್ನುವವರು ಸಲ್ಲಿಸಿದ ಅರ್ಜಿ ಅಕ್ರಮವಾಗಿದ್ದು, ಅವರಿಗೆ ಖಾತಾ ಪುರವಣೆ ನೀಡದಂತೆ ಸಭೆ ಸರ್ವಾನುಮತದ ನಿರ್ಣಯ ಕೈಗೊಳ್ಳಲಾಗಿತ್ತೆಂದು ಸಭೆಯ ಗಮನ ಸೆಳೆದರು.
ಮುಖ್ಯಾಧಿಕಾರಿ ಹನುಮಂತಮ್ಮ ಉತ್ತರಿಸಿ, ಕೆ.ಬಿ. ಶಾಂತಕುಮಾರ್ ವಸತಿ ವಿನ್ಯಾಸದ ಖಾತಾ ಪುರವಣೆಗೆ ಕಾನೂನು ರೀತಿ ಕ್ರಮಕೈಗೊಳ್ಳಲೇಬೇಕಾದ ಅನಿವಾರ್ಯತೆ ಇದೆ. ಹಿಂದಿನ ಸಾಮಾನ್ಯ ಸಭೆಯಲ್ಲಿ ಈ ಸಂಬಂಧ ಅಜೆಂಡಾ ಇರಲಿಲ್ಲ. ಅದೊಂದು ಅಧ್ಯಕ್ಷರ ಅಪ್ಪಣೆ ಮೇರೆಗೆ ಪ್ರಸ್ತಾಪಿಸಿದ ವಿಷಯವಾಗಿದೆ ಎಂದರು.
ವಾದ-ಪ್ರತಿವಾದ-ಇದೇ ವಿಷಯಕ್ಕೆ ಸಂಬಂಧಿಸಿದಂತೆ ಸದಸ್ಯ ಬಾವಿಕಟ್ಟಿ ಶಿವಾನಂದ ಆಕ್ಷೇಪಣೆಗೆ ಸದಸ್ಯರಾದ ಬುಗ್ಗಳ್ಳಿ ಕೊಟ್ರೇಶ್, ಪ್ರಭುದೇವ್ ಮತ್ತಿತರರು ಬೆಂಬಲ ವ್ಯಕ್ತಪಡಿಸಿ, ಹಿಂದಿನ ಸಭೆಯಲ್ಲಿ ಖಾತಾ ವರ್ಗಾವಣೆ ಮಾಡದಂತೆ ತೀರ್ಮಾನ ಕೈಗೊಂಡಿದ್ದರೂ ಮುಖ್ಯಾಧಿಕಾರಿ ಈ ಸಂಬಂಧ ವರ್ಗಾವಣೆ ಪತ್ರಕ್ಕೆ ಅನುಮತಿ ನೀಡಲು ಮುಂದಾಗಿರುವುದು ಸರಿಯಲ್ಲ. ಈ ರೀತಿ ತಾವು ಮನಸೋ ಇಚ್ಛೆ ವರ್ತಿಸುವುದಾದರೆ ಸಾಮಾನ್ಯ ಸಭೆ ಏಕೆ ಕರೆಯುತ್ತೀರಿ ಎಂದು ಮುಖ್ಯಾಧಿಕಾರಿ ಹನುಮಂತಮ್ಮ ಅವರನ್ನು ತರಾಟೆಗೆ ತೆಗೆದುಕೊಂಡರು.
ಸದಸ್ಯರ ಜೋರು ಧ್ವನಿಗೆ ಮುಖ್ಯಾಧಿಕಾರಿ ಹನುಮಂತಮ್ಮ, ನಾನೇನು ಕಾನೂನು ಉಲ್ಲಂಘನೆ ಮಾಡಿಲ್ಲ. ಈ ಸಂಬಂಧ ಕಾಗದ ಪತ್ರಗಳು ಬೇಕಿದ್ದರೆ ಮುಂದಿನ ಸಭೆಯಲ್ಲಿ ಮಂಡಿಸುತ್ತೇನೆ. ಅನಗತ್ಯವಾಗಿ ನನ್ನ ಮೇಲೆ ಆರೋಪ ಮಾಡಬೇಡಿ ಎಂದರು.
ಹಿಂದಿನ ಸಾಮಾನ್ಯ ಸಭೆಯ ಲೆಕ್ಕಪತ್ರಗಳನ್ನು ಕೂಡಲೇ ಕೊಡುವಂತೆ ಸದಸ್ಯ ಡಿಶ್ ಮಂಜುನಾಥ ಒತ್ತಾಯಿಸಿದರು. ಇದಕ್ಕೆ ಮುಖ್ಯಾಧಿಕಾರಿ ಉತ್ತರಿಸಿ, ಮುಂದಿನ ಸಭೆಯಲ್ಲಿ ನೀಡುವುದಾಗಿ ಹೇಳುತ್ತಿದ್ದಂತೆ ಸದಸ್ಯ ಮಂಜುನಾಥ ಸಭೆಯಿಂದ ಹೊರ ನಡೆದರು.
ಈ ಹಂತದಲ್ಲಿ ಸದಸ್ಯ ಬಿ.ಎಸ್. ವೀರೇಶ್ ಪಟ್ಟಣ ಪಂಚಾಯಿತಿ ಲೆಕ್ಕಪತ್ರಗಳ ವಿವರಗಳನ್ನು ಇಂಗ್ಲಿಷ್‌ನಲ್ಲಿ ನೀಡಲಾಗುತ್ತಿದೆ. ಕನ್ನಡದಲ್ಲಿ ಕೊಡಬೇಕೆಂದು ಒತ್ತಾಯಿಸುತ್ತಿದ್ದಂತೆ ಮಧ್ಯೆ ಪ್ರವೇಶಿಸಿದ ಉಪಾಧ್ಯಕ್ಷ ಎಸ್. ಗುರುಶಾಂತಪ್ಪ ಲೆಕ್ಕಪತ್ರಗಳ ವಿವರಗಳನ್ನು ಕನ್ನಡದಲ್ಲಿ ಕೊಡಲು ತಮ್ಮಿಂದ ಸಾಧ್ಯವಾಗಿಲ್ಲವೆಂದ ಮೇಲೆ ಸಭೆ ಏಕೆ ನಡೆಯಬೇಕು ಎಂದು ಸದಸ್ಯರೆಲ್ಲರೂ ಸಭೆ ಮುಂದೂಡುವಂತೆ ಆಕ್ರೋಶಗೊಂಡರು. ಅನಿವಾರ್ಯವಾಗಿ ಅಧ್ಯಕ್ಷರು ಸಭೆಯನ್ನು ಜ. 10ಕ್ಕೆ ಸಭೆ ಕರೆಯಲಾಗುವುದು ಎಂದು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.