ಬಳ್ಳಾರಿ

ಭರವಸೆ: ಧರಣಿ ತಾತ್ಕಾಲಿಕ ಹಿಂತೆಗೆತ

Published On :

ಕನ್ನಡಪ್ರಭ ವಾರ್ತೆ, ಹೊಸಪೇಟೆ, ಜ. 1
ಸ್ಥಳೀಯ ಐಎಸ್‌ಆರ್ ಸಕ್ಕರೆ ಕಾರ್ಖಾನೆ ಹಳೆಯ ಕಾರ್ಖಾನೆಯಾಗಿದ್ದು, ಕಾಯ್ದಿಟ್ಟ ಪ್ರದೇಶದಲ್ಲಿ ಬೆಳೆದ ಕಬ್ಬನ್ನೆಲ್ಲಾ ಕಾರ್ಖಾನೆ ಕ್ರಷರ್ ಮಾಡಲು ಆಗದಿರುವುದರಿಂದ ಹೆಚ್ಚುವರಿ ಕಬ್ಬನ್ನು ಮುಕ್ತ ಮಾರಾಟಕ್ಕೆ ಅವಕಾಶ ಕಲ್ಪಿಸಿಕೊಡಬೇಕೆಂದು ಒತ್ತಾಯಿಸಿ ಶಾಸಕ ಹಾಗೂ ಬಿಎಸ್ಸಾರ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಬಿ. ಶ್ರೀರಾಮುಲು ನಾಲ್ಕು ದಿನಗಳಿಂದ ಐಎಸ್‌ಆರ್ ಸಕ್ಕರೆ ಕಾರ್ಖಾನೆ ಎದುರು ನಡೆಸುತ್ತಿದ್ದ ಧರಣಿಯನ್ನು ಬುಧವಾರ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದಾರೆ.
ಬಳ್ಳಾರಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ಕಬ್ಬು ಬೆಳೆದ ರೈತರು ಮತ್ತು ಐಎಸ್‌ಆರ್ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯೊಂದಿಗೆ ಜಿಲ್ಲಾಧಿಕಾರಿ ನಡೆಸಿದ ಸಭೆಯಲ್ಲಿ ಕೆಲ ವಿಷಯಗಳು ಸರ್ಕಾರದ ಉನ್ನತ ಮಟ್ಟದಲ್ಲಿ ಚರ್ಚೆಯಾಗಿರುವುದರಿಂದ ಮತ್ತು ಸರ್ಕಾರದಲ್ಲಿ ರೈತಪರ ನಿಲುವು ವ್ಯಕ್ತಪಡಿಸುತ್ತಿರುವುದರಿಂದ ಹಿನ್ನಲೆಯಲ್ಲಿ ರೈತರು ಮಂಗಳವಾರ ನಡೆದ ಸಭೆಯ ಎಲ್ಲ ವಿಷಯಗಳನ್ನು ಶಾಸಕ ಬಿ. ಶ್ರೀರಾಮುಲು ಅವರ ಮುಂದೆ ಸವಿವರವಾಗಿ ವಿವರಿಸಿದ್ದರು.
ಅಲ್ಲದೇ ಸಹಾಯಕ ಆಯುಕ್ತ ಪಿ. ಸುನೀಲ್‌ಕುಮಾರ್ ಹಾಗೂ ತಹಸೀಲ್ದಾರ್ ರಮೇಶ್ ಕೋನರೆಡ್ಡಿ ಧರಣಿ ಸತ್ಯಾಗ್ರಹ ನಡೆಸುತ್ತಿರುವ ಸ್ಥಳಕ್ಕೆ ಭೇಟಿ ನೀಡಿ ಶಾಸಕ ಬಿ. ಶ್ರೀರಾಮುಲು ಅವರೊಂದಿಗೆ ಮಾತುಕತೆ ನಡೆಸಿ ಈಗಾಗಲೇ ರೈತರಿಗೆ ಆಗುತ್ತಿರುವ ಸಮಸ್ಯೆಗಳನ್ನು ಹಾಗೂ ರೈತರ ಬಗ್ಗೆ ಸಕ್ಕರೆ ಕಾರ್ಖಾನೆಯವರು ನಡೆದುಕೊಳ್ಳುತ್ತಿರುವ ವರ್ತನೆ ಹಾಗೂ ಎಷ್ಟು ಪ್ರಮಾಣದಲ್ಲಿ ದಿನಕ್ಕೆ ಕಬ್ಬನ್ನು ನುರಿಸುತ್ತಾರೆ ಎನ್ನುವಂಥ ಎಲ್ಲ ವಿಷಯಗಳು ಸರ್ಕಾರದ ಗಮನಕ್ಕೆ ಹೋಗಿದ್ದು, ಇನ್ನೆರಡು ದಿನಗಳಲ್ಲಿ ರೈತಪರ ಸಕಾರಾತ್ಮಕ ಆದೇಶ ಹೊರಬರುವ ಸಾಧ್ಯತೆ ಇದೆ. ನಾಲ್ಕು ದಿನಗಳಿಂದ ನಡೆಸುತ್ತಿರುವ ಧರಣಿ ಸತ್ಯಾಗ್ರಹ ವಾಪಾಸು ತೆಗೆದುಕೊಳ್ಳುವಂತೆ ತಾಲೂಕು ಆಡಳಿತ ಅಧಿಕಾರಿಗಳು ಸೂಚಿಸಿದ್ದರಿಂದ ಶಾಸಕ ಬಿ. ಶ್ರೀರಾಮುಲು ತಾತ್ಕಾಲಿಕವಾಗಿ ಧರಣಿಯನ್ನು ವಾಪಾಸು ತೆಗೆದುಕೊಂಡಿದ್ದಾರೆ.
ಶಾಸಕ ಬಿ. ಶ್ರೀರಾಮುಲು ಮಾತನಾಡಿ, ರೈತರಿಗೆ ಅನ್ಯಾಯವಾದಾಗ ನಾವು ಸುಮ್ಮನೆ ಇರುವುದಿಲ್ಲ. ರೈತಪರ ಎಂಥದೇ ಹೋರಾಟಕ್ಕೆ ನಾವು ಸಿದ್ದವಾಗಿದ್ದೇವೆ. ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಸಿದ ಸಭೆಯಲ್ಲಿ ಕೂಲಂಕಷ ಚರ್ಚಿಸಲಾಗಿದೆ. ರೈತರ ಸಮಸ್ಯೆಗಳನ್ನು ಸರ್ಕಾರಕ್ಕೆ ಮುಟ್ಟಿಸಲಾಗಿದೆ. ಸರ್ಕಾರ ಸಹ ತಕ್ಷಣವೇ ಎಚ್ಚೆತ್ತುಕೊಂಡು ರೈತಪರ ನಿಲುವು ತಾಳಲಿದೆ ಎಂದು ತಾಲೂಕು ಆಡಳಿತ ಸೂಚಿಸಿರುವುದರಿಂದ ಈಗ ತಾತ್ಕಾಲಿಕವಾಗಿ ಧರಣಿ ಸ್ಥಗಿತಗೊಳಿಸಲಾಗಿದೆ. ರೈತಪರ ಯಾವುದೇ ನಿಲುವನ್ನು ಇನ್ನೆರಡು ದಿನಗಳಲ್ಲಿ ಬಾರದಿದ್ದರೆ ಮತ್ತೆ ಧರಣಿ ಸತ್ಯಾಗ್ರಹವನ್ನು ಉಗ್ರವಾಗಿ ನಡೆಸಲಾಗುತ್ತದೆ. ರೈತರು ನಾಲ್ಕು ದಿನಗಳ ಕಾಲ ನಮ್ಮೊಂದಿಗೆ ಸಹನೆಯಿಂದ ಧರಣಿಯಲ್ಲಿ ಭಾಗವಹಿಸಿದ್ದಕ್ಕಾಗಿ ನಾವು ರೈತರನ್ನು ಅಭಿನಂದಿಸುತ್ತೇನೆ. ಮುಂದಿನ ಹೋರಾಟದಲ್ಲಿ ಯಾವುದೇ ಕಾರಣಕ್ಕೂ ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಎಚ್ಚರಿಸಿದರು.
ಬೆಳಗಾವಿ ಜಿಲ್ಲೆಯ ಶಾಸಕ ರಾಜು ಉಡಚಿ, ರೈತ ಸಂಘದ ಅಧ್ಯಕ್ಷ ತಾರಿಹಳ್ಳಿ ಹುಲುಗಜ್ಜಪ್ಪ, ಮುಖಂಡರಾದ ಜಂಬಾನಹಳ್ಳಿ ವೆಂಕೋಬಣ್ಣ, ಬ್ಯಾಲಾಳ್ ಪಂಪಾಪತಿ, ಅರಳಿ ಕೊಟ್ರಪ್ಪ, ಜಂಬಾನಹಳ್ಳಿ ವಸಂತ, ದೇವರ ಮನಿ ಶ್ರೀನಿವಾಸ, ರಾಣಿ ಸಂಯುಕ್ತ, ಪಿ.ವಿ. ವೆಂಕಟೇಶ್, ಕೆ. ಜೈರುದ್ದೀನ್, ಟಿ. ವೆಂಕಟೇಶ್, ಕೆ. ಕಾರ್ತಿಕ್ ನೂರಾರು ರೈತರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.