ವಿಜೃಂಭಣೆಯ ಗಂಗೆ ಸ್ಥಳ ಮಹೋತ್ಸವ
ಕಂಪ್ಲಿ: ಪಟ್ಟಣಕ್ಕೆ ಸಮೀಪದ ನಂ.10. ಮುದ್ದಾಪುರ ಗ್ರಾಮ ದೇವತೆ ಶ್ರೀದೇವಮಾಂಬ ದೇವಿ ಮತ್ತು ಶ್ರೀ ಆಂಜನೇಯಸ್ವಾಮಿ ಗಂಗೆ ಸ್ಥಳ ಮಹೋತ್ಸವ ಎಳ್ಳು ಅಮಾವಾಸ್ಯೆಯ ದಿನವಾದ ಬುಧವಾರ ಬೆಳಗ್ಗೆ ಶ್ರದ್ಧಾ-ಭಕ್ತಿಯಿಂದ ಜರುಗಿತು. ಮಂಗಳವಾರ ಮಧ್ಯರಾತ್ರಿ ಭಕ್ತರೆಲ್ಲರೂ ಅರ್ಚಕರೊಂದಿಗೆ, ಡೊಳ್ಳು, ಭಜನೆ ಇತ್ಯಾದಿ ಮಂಗಳವಾದ್ಯಗಳೊಂದಿಗೆ ಗೌರಮ್ಮ ಕೆರೆಗೆ ತೆರಳಿ, ಕೆರೆ ದಂಡೆಯಲ್ಲಿ ಶ್ರೀದೇವಮಾಂಬ ದೇವಿ ಮತ್ತು ಶ್ರೀ ಆಂಜನೇಯಸ್ವಾಮಿ ಗಂಗೆ ಸ್ಥಳ ಪೂಜೆಯನ್ನು ಶ್ರದ್ಧಾ ಭಕ್ತಿಯಿಂದ ನೆರವೇರಿಸಿದರು. ಅಲ್ಲಿಂದ ಮರಳಿ ಗ್ರಾಮಕ್ಕೆ ಆಗಮಿಸಿ, ಆಯಾ ದೇವಸ್ಥಾನಗಳ ಗರ್ಭಗುಡಿಗಳಲ್ಲಿ ಆಯಾ ದೇವರ ಗಂಗೆ ಕೊಡವನ್ನು ಸ್ಥಾಪಿಸಿದರು. ಅರ್ಚಕರು ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ಜೀವಕಳೆ ತುಂಬಿ, ಮಹಾಮಂಗಳಾರತಿ ನೆರವೇರಿಸಿ, ತೀರ್ಥ, ಪ್ರಸಾದ ವಿತರಿಸಿದರು. ಸುತ್ತಮುತ್ತಲಿನ ವಿವಿಧ ಗ್ರಾಮಗಳ ಸದ್ಭಕ್ತರು ಉತ್ಸವಕ್ಕೆ ಆಗಮಿಸಿ, ದೇವಿಯ ದರ್ಶನ ಪಡೆದರು. ಗ್ರಾಮದ ಎಲ್ಲಡೆ ಉತ್ಸವದ ಸಡಗರ ಹಾಗೂ ಸಂಭ್ರಮ ಮನೆ ಮಾಡಿತ್ತು.
ಉತ್ಸವಕ್ಕೆ ಹಣಕಾಸಿನ ಅಡಚಣೆ ಇಲ್ಲ: ಸಚಿವಪರಮೇಶ್ವರ ನಾಯ್ಕ
ಹೂವಿನಹಡಗಲಿ: ಐತಿಹಾಸಿಕ ಹಂಪಿ ಉತ್ಸವದ ಸಿದ್ಧತೆಗಳು ಭರದಿಂದ ನಡೆದಿದ್ದು, ಹಣಕಾಸಿನ ಯಾವುದೇ ಅಡಚಣೆ ಉಂಟಾಗಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಹೇಳಿದರು. ತಾಲೂಕಿನ ದಾಸರಹಳ್ಳಿ ತಾಂಡಾದಲ್ಲಿ ಈಚೆಗೆ ಸುದ್ದಿಗಾರರೊಂದಿಗೆ ಮಾತನಾಡಿ, ಉತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲು ರು. 7 ಕೋಟಿಗಳ ಕ್ರಿಯಾ ಯೋಜನೆ ರೂಪಿಸಲಾಗಿದೆ. ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ತಲಾ ಒಂದೊಂದು ಕೋಟಿ ರು. ಬಿಡುಗಡೆಯಾಗಿದೆ. ಜಿಂದಾಲ್ನವರು ರು. 1 ಕೋಟಿ ದೇಣಿಗೆ ನೀಡಿದ್ದಾರೆ. ರು. 2.50 ಕೋಟಿ ಸಾರ್ವಜನಿಕರಿಂದ ವಂತಿಗೆ ಸಂಗ್ರಹಿಸಲಾಗುತ್ತಿದ್ದು, ಸ್ಥಳೀಯ ಸಂಸ್ಥೆಗಳಿಂದಲೂ ಸಂಪನ್ಮೂಲ ಕ್ರೋಡೀಕರಿಸಿ ಉತ್ಸವವನ್ನು ಅಚ್ಚುಕಟ್ಟಾಗಿ ನಡೆಸಲಾಗುವುದು ಎಂದರು. ಉತ್ಸವಕ್ಕೆ ಬರುವ ಸಾರ್ವಜನಿಕರಿಗೆ ಕಡಿಮೆ ದರದಲ್ಲಿ ಊಟದ ವ್ಯವಸ್ಥೆ ಮಾಡಲು ತೀರ್ಮಾನಿಸಲಾಗಿದ್ದು, ಸ್ಥಳೀಯ ಕಲಾವಿದರು, ರಾಜ್ಯ ಹಾಗೂ ಹೊರ ರಾಜ್ಯದ ಕಲಾವಿದರನ್ನು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳಲಾಗಿದೆ. ಅಂತಾರಾಷ್ಟ್ರ ಮಟ್ಟದ ಕಲಾವಿದರನ್ನೂ ಆಮಂತ್ರಿಸಲಾಗಿದೆ ಎಂದು ವಿವರಿಸಿದರು. ನಾಲ್ಕು ಪ್ರಮುಖ ವೇದಿಕೆಗಳು ನಿರ್ಮಾಣವಾಗಲಿದ್ದು, ಇದರಲ್ಲಿ ಪ್ರಮುಖ ವೇದಿಕೆಯೊಂದಕ್ಕೆ ಹಂಪಿ ಉತ್ಸವ ರೂವಾರಿ ಎಂ.ಪಿ. ಪ್ರಕಾಶರ ಹೆಸರಿಡಲು ತೀರ್ಮಾನಿಸಲಾಗಿದೆ. ಮಕ್ಕಳ ಹಾಗೂ ಅಂಗವಿಕಲರ ಕ್ರೀಡಾಕೂಟವನ್ನು ಈ ಬಾರಿ ವಿಶೇಷವಾಗಿ ಆಯೋಜನೆ ಮಾಡಿರುವುದಾಗಿ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

