ಬಳ್ಳಾರಿ

ಹಂಪಿ ಉತ್ಸವ: ಶಾಸಕರಿಗಿಲ್ಲ ಆನಂದ

Published On :

ಕನ್ನಡಪ್ರಭ ವಾರ್ತೆ, ಬಳ್ಳಾರಿ, ಜ. 7
ಜಿಲ್ಲೆಯ, ರಾಜ್ಯದ ಜನತೆಗೆ ವರ್ಷಕ್ಕೊಮ್ಮೆ ವಿಶ್ವವಿಖ್ಯಾತ ಪರಂಪರೆಯ ಹಂಪಿಯನ್ನು ನೆನಪಿಸಿಕೊಡುವ, ಅದ್ದೂರಿಯಾಗಿ ನಡೆಯುವ ಹಂಪಿ ಉತ್ಸವವನ್ನು ನೋಡುವ ಅವಕಾಶ ದೇಶ, ವಿದೇಶದ ಜನತೆಗೆ, ಪ್ರವಾಸಿಗಳಿಗೆ ಸಿಕ್ಕರೆ ಸ್ಥಳೀಯ ಹಾಗೂ ಜಿಲ್ಲೆಯ ಮೂವರು ಶಾಸಕರಿಗೆ ಮಾತ್ರ ಆ ವೈಭವವನ್ನು ಸವಿಯುವ ಭಾಗ್ಯವೆ ಇಲ್ಲದಂತಾಗಿದೆ.
ಬೇಲೆಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ವಿಜಯನಗರ ಕ್ಷೇತ್ರದ ಶಾಸಕ ಬಿ.ಎಸ್. ಆನಂದ್ ಸಿಂಗ್, ಕಂಪ್ಲಿ ಶಾಸಕ ಟಿ.ಎಚ್. ಸುರೇಶ್ಬಾಬು ಹಾಗೂ ಕೂಡ್ಲಿಗಿ ಶಾಸಕ ಬಿ. ನಾಗೇಂದ್ರ ಸಿಬಿಐ ಬಂಧನಕ್ಕೊಳಗಾಗಿದ್ದರೆ, ಇನ್ನೋರ್ವ ಶಾಸಕ ಅನಿಲ್ ಲಾಡ್ ತಮಗೆ ಉತ್ಸವದ ಪೂರ್ವಭಾವಿ ಸಭೆಗೆ ಆಹ್ವಾನಿಸಿಲ್ಲ, ಜನಪ್ರತಿನಿಧಿಗಳನ್ನು ಕಡೆಗಣಿಸಿದ್ದಾರೆ ಎಂದು ಅಪಸ್ವರ ತೆಗೆದು ಉತ್ಸವದಿಂದ ವಿಮುಖರಾದಂತೆ ಕಾಣುತ್ತಿದೆ. ಆ ಮೂಲಕ ಜಿಲ್ಲೆಯ 4 ಶಾಸಕರಿಗೆ ಹಂಪಿ ಉತ್ಸವದಲ್ಲಿ ಭಾಗವಹಿಸುವ ಅವಕಾಶ ತಪ್ಪಿದಂತಾಗಿದೆ.
ಆನಂದ್ ಸಿಂಗ್ಗಿಲ್ಲ ಭಾಗ್ಯ: ಶಾಸಕ ಆನಂದ್ ಸಿಂಗ್ ಜನಾರ್ದನ ರೆಡ್ಡಿ ನಂತರ ಪ್ರವಾಸೋದ್ಯಮ ಸಚಿವರಾದರೂ ತಮ್ಮ ಕ್ಷೇತ್ರ ವ್ಯಾಪ್ತಿಯ ಹಂಪಿ ಉತ್ಸವವನ್ನು ಆಚರಿಸುವ ಭಾಗ್ಯ ಅವರದಾಗಲಿಲ್ಲ. ಸಿಂಗ್ ಪ್ರವಾಸೋದ್ಯಮ ಸಚಿವರಾಗಿದ್ದಾಗ ಉತ್ಸವ ಆಚರಿಸಲು ಸರ್ಕಾರ ಮುಂದಾಗಲಿಲ್ಲ, ಹಂಪಿ ಉತ್ಸವ ನಡೆಸುವ ಅವರ ಆಸೆಯೂ ಕೈಗೂಡಲಿಲ್ಲ. ಆದರೆ ಈ ಬಾರಿ ಉತ್ಸವವನ್ನು ಆಚರಿಸಿದರೂ ಅದನ್ನು ಕಣ್ತುಂಬಿಕೊಳ್ಳುವ ಭಾಗ್ಯ ಅವರಿಗಿಲ್ಲ. ಇನ್ನು ಕೂಡ್ಲಿಗಿ ಶಾಸಕ ನಾಗೇಂದ್ರ, ಹಂಪಿ ಪಕ್ಕದ ಕಂಪ್ಲಿ ಶಾಸಕ ಸುರೇಶ್ಬಾಬು ವೇದಿಕೆಯಲ್ಲಿ ಕುಳಿತು ಉತ್ಸವ ಸವಿಯಬೇಕಾದವರು ಕೆಂಧೂಳಿನ ಹಿಂದೆ ಬಿದ್ದು, ಸಿಬಿಐ ವಶದಲ್ಲಿದ್ದು ಟಿವಿ ಹಾಗೂ ಪತ್ರಿಕೆಗಳಲ್ಲಿ ಪ್ರಸಾರವಾಗುವ ಉತ್ಸವದ ಸುದ್ದಿಗಳನ್ನು ನೋಡುವ ಪರಿಸ್ಥಿತಿ ಇದೆ.
ಶಿಷ್ಟಾಚಾರಕ್ಕೆ ಸೀಮಿತವಾದ ಶಾಸಕರು: ವಿಜಯನಗರ, ಕೂಡ್ಲಿಗಿ ಹಾಗೂ ಕಂಪ್ಲಿ ಕ್ಷೇತ್ರದ ಶಾಸಕರು ಸಿಬಿಐ ವಶದಲ್ಲಿದ್ದರೂ ಜನಪ್ರತಿನಿಧಿಗಳನ್ನಾಗಿ ಆಯಾ ಕ್ಷೇತ್ರಗಳ ಜನತೆ ಆಯ್ಕೆ ಮಾಡಿದ್ದರಿಂದ ಹಂಪಿ ಉತ್ಸವ ಸಮಿತಿ, ಅವರು ಶಾಸಕರು ಉತ್ಸವಕ್ಕೆ ಗೈರಾಗುವುದು ನಿಶ್ಚಿತ ಎಂದು ತಿಳಿದಿದ್ದರೂ ಶಿಷ್ಟಾಚಾರಕ್ಕೆ ಎಂಬಂತೆ ಉತ್ಸವದ ಆಹ್ವಾನ ಪತ್ರಿಕೆಯಲ್ಲಿ ಶಾಸಕರ ಹೆಸರು ಸೇರಿಸಿದೆ. ಆದರೆ ತಮ್ಮ ಸಮ್ಮುಖದಲ್ಲೇ ನಡೆಯಬೇಕಾದ ಉತ್ಸವವನ್ನು ಕಂಬಿ ಹಿಂದೆ ಕುಳಿತು ನೋಡಬೇಕಾದದ್ದು ದುರಂತವೆ ಸರಿ. ಆಯಾ ಕ್ಷೇತ್ರದ ಅದರಲ್ಲೂ ವಿಜಯನಗರ ಕ್ಷೇತ್ರದ ಜನತೆಗೆ ತಮ್ಮ ಕ್ಷೇತ್ರದ ಶಾಸಕರಿಲ್ಲದೆ ಉತ್ಸವ ಆಚರಿಸಬೇಕಾದ ಅನಿವಾರ್ಯತೆ ಬಂದೊದಗಿದೆ.
ಅನುದಾನಕ್ಕೆ ಸರ್ಕಸ್: ಹಲವು ಬಾರಿ ಹಂಪಿ ಉತ್ಸವಕ್ಕೆ ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಹಾಗೂ ವಾರ್ತಾ ಇಲಾಖೆಯಿಂದ ನಿರೀಕ್ಷಿತ, ಕೋಟ್ಯಂತರ ರು. ಅನುದಾನ ಹರಿದು ಬರುತ್ತಿತ್ತು. ಈ ಬಾರಿಯ ಉತ್ಸವಕ್ಕೆ ಅನುದಾನ ನೀಡಿದೆ. ಆದರೆ ನಿರೀಕ್ಷಿತ ಮಟ್ಟದಲ್ಲಿ ನೀಡದಿರುವುದರಿಂದ ಇದೀಗ ಅಧಿಕಾರಿಗಳು ಅನುದಾನಕ್ಕೆ ಏನೆಲ್ಲಾ ಸರ್ಕಸ್ ಮಾಡಬೇಕಾಗಿದೆ. ಉತ್ಸವಕ್ಕಾಗಿ ಜಿಪಂ, ತಾಪಂ, ಗ್ರಾಪಂಗಳಲ್ಲಿ ದೇಣಿಗೆ ಎತ್ತುವುದು, ಹಂಪಿ ಬೈ ಸ್ಕೈ, ಪ್ಲಾಟಿನಂ ಕಾರ್ಡ್, ಗೋಲ್ಡ್ ಕಾರ್ಡ್ ವ್ಯವಸ್ಥೆ ಮಾಡುವ ಮೂಲಕ ಅನುದಾನ ಸಂಗ್ರಹಕ್ಕೆ ಮುಂದಾಗಿದೆ.
ಅಬಕಾರಿ ಉದ್ದಿಮೆಯವರು ಸೇರಿದಂತೆ ವಿವಿಧ ಉದ್ದಿಮೆದಾರರ ಮೊರೆ ಹೋಗಿ ಉತ್ಸವವನ್ನು ಸರ್ಕಾರದ ಅಲ್ಪ ಅನುದಾನ ಹಾಗೂ ದೇಣಿಗೆ ಸಂಗ್ರಹಿಸಿ ರು. 7.30 ಕೋಟಿ ವೆಚ್ಚದಲ್ಲಿ ಉತ್ಸವವನ್ನು ಅದ್ದೂರಿಯಾಗಿ ಆಚರಿಸುವ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕಾರ್ಯೋನ್ಮುಖರಾಗಿದ್ದಾರೆ. ಇಷ್ಟೆಲ್ಲ ಸರ್ಕಸ್ಗಳ ಮಧ್ಯೆ ಅಪಸ್ವರದ ನಡುವೆಯೂ ಹಂಪಿ ಉತ್ಸವಕ್ಕೆ ವೇದಿಕೆಗಳು ಸಿದ್ಧವಾಗುತ್ತಿದ್ದು ಅಂತಿಮ ಹಂತದಲ್ಲಿದೆ.
ಹಂಪಿ ಉತ್ಸವಕ್ಕೆ ಇನ್ನೆರೆಡು ದಿನ ಬಾಕಿ ಉಳಿದಿರುವುದರಿಂದ ಈ ಬಾರಿ ಎಲ್ಲರನ್ನು ಉತ್ಸವಕ್ಕೆ ಸೆಳೆಯುವ ಮೂಲಕ ಜನಸಾಮಾನ್ಯರ ಉತ್ಸವವಾಗುವುದೋ ಎಂಬುದು ಕಾದುನೋಡಬೇಕು.
- ಶಶಿಧರ ಮೇಟಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.