ಬಳ್ಳಾರಿ

ಸುದ್ದಿ ಸಂಕ್ಷೇಪ

Published On :

ಶಿಲ್ಪಿಗಳನ್ನು ಕಡೆಗಣಿಸಿದ ಉತ್ಸವಕ್ಕೆ ಅರ್ಥವಿಲ್ಲ
ಹೂವಿನಹಡಗಲಿ: ವಿಜಯನಗರ ಅರಸರ ಕಾಲದ ಹಂಪಿ ಸೇರಿದಂತೆ ಸ್ಮಾರಕಗಳ ಶಿಲ್ಪಕಲೆ ಅರಳಿಸಿದ ಶಿಲ್ಪಿಗಳನ್ನು ಕಡೆಗಣಿಸಿ ಆಚರಿಸುತ್ತಿರುವ ಹಂಪಿ ಉತ್ಸವಕ್ಕೆ ಅರ್ಥವಿಲ್ಲ. ಉತ್ಸವ ಅರ್ಥಪೂರ್ಣವಾಗಿ ಯಶಸ್ಸು ಆಗಲಾರದು ಎಂದು ಜಕಣಾಚಾರಿ ಪ್ರಶಸ್ತಿಗೆ ಆಯ್ಕೆಯಾಗಿರುವ ಶಿಲ್ಪಿ ಜಿ.ಬಿ. ಹಂಸಾನಂದಾಚಾರ್ಯ ಅಭಿಪ್ರಾಯಪಟ್ಟರು. ಹಂಪಿಯಲ್ಲಿ ಸುಂದರವಾಗಿ ಅರಳಿ ನಿಂತಿರುವ ಕಲ್ಲು, ಬಂಡೆಗಳಲ್ಲಿ ಶಿಲ್ಪಿಗಳು ರಕ್ತ ಬಸಿದು ಕಲೆ ಅರಳಿಸಿದ್ದಾರೆ. ಇಂತಹ ಅದ್ಭುತ ಶಿಲ್ಪ ಶ್ರೀಮಂತಿಕೆ ಹೊಂದಿರುವುದರಿಂದ ಹಂಪಿ ಇಂದು ಯುನೆಸ್ಕೋ ಪಟ್ಟಿಯಲ್ಲಿ ಸೇರ್ಪಡೆಯಾಗಿ ದೇಶ, ವಿದೇಶಿ ಪ್ರವಾಸಿಗರನ್ನು ಕೈ ಬೀಸಿ ಕರೆಯುವ ಪ್ರವಾಸೋದ್ಯಮ ತಾಣವಾಗಿದೆ. ಆದರೆ, ಸರ್ಕಾರ ಮತ್ತು ಜಿಲ್ಲಾಡಳಿತ ಹಂಪಿ ಉತ್ಸವದಲ್ಲಿ ಶಿಲ್ಪಿಗಳಿಗೆ ಕನಿಷ್ಠ ಗೌರವ ಸಲ್ಲಿಸದೇ ಹಿಂದಿನಿಂದಲೂ ಕಡೆಗಣಿಸುತ್ತಲೇ ಬಂದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಹಂಪಿಯ ಕಲ್ಲಿನ ರಥದ ಪಕ್ಕದ ಪ್ರತಿಯೊಂದು ಕಂಬವೂ ಸಪ್ತಸ್ವರ ಸಂಗೀತ ಹೊರ ಹೊಮ್ಮಿಸುತ್ತವೆ. ಶಿಲೆಗಳೂ ಮಾತನಾಡುವಷ್ಟು ಕಲಾ ಸಿರಿವಂತಿಕೆಯನ್ನು ನಮ್ಮ ಪೂರ್ವಜರು ಬಿಟ್ಟು ಹೋಗಿದ್ದಾರೆ. ಎಷ್ಟೇ ಕೋಟಿಗಟ್ಟಲೆ ಹಣ ಸುರಿದು ಉತ್ಸವ ಆಚರಿಸಿದರೂ ದೇಶದ ನಾಗರಿಕತೆ ಕಟ್ಟಿ ಕೊಟ್ಟಿರುವ ಶಿಲ್ಪಿಗಳನ್ನು ಮರೆತರೆ ಉತ್ಸವ ಪರಿಪೂರ್ಣವಾಗಲಾರದು ಎಂದು ಬೇಸರ ವ್ಯಕ್ತಪಡಿಸಿದರು. ಶಿಲ್ಪಕಲೆ ಕ್ಷೇತ್ರದಲ್ಲಿನ ಸಾಧಕರಿಗೆ ನೀಡುವ ಅತ್ಯುನ್ನತ ರಾಜ್ಯ ಮಟ್ಟದ ಜಕಣಾಚಾರಿ ಪ್ರಶಸ್ತಿಗೆ ಜಿ.ಬಿ. ಹಂಸಾನಂದಾಚಾರ್ಯ ಆಯ್ಕೆಯಾಗುತ್ತಿದ್ದಂತೆ ಅವರಿಗೆ ಅಭಿನಂದನೆಗಳ ಮಹಾಪೂರ ಹರಿದು ಬಂದಿದೆ.
ಕಿಚನ್ ಕ್ವೀನ್ ಅಡುಗೆಸ್ಪರ್ಧೆ ಉದ್ಘಾಟನೆ
ಹಂಪಿ: ಬೆಂಗಳೂರಿನ ಪ್ರವಾಸೋದ್ಯಮ ಇಲಾಖೆ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಬಳ್ಳಾರಿ ಜಿಲ್ಲಾಡಳಿತ ಸಂಯುಕ್ತಾಶ್ರಯದಲ್ಲಿ ಬುಧವಾರ ಹಂಪಿಯಲ್ಲಿ ಹಂಪಿ ಉತ್ಸವ-2014ರ ಪ್ರಯುಕ್ತ ಆಹಾರ ಮೇಳದ ಕಿಚನ್ ಕ್ವೀನ್ ಸಾಂಪ್ರದಾಯಕ ಅಡುಗೆ ಸ್ಪರ್ಧೆ ಕಾರ್ಯಕ್ರಮದ ಉದ್ಘಾಟನೆಯನ್ನು ಬಳ್ಳಾರಿ ಜಿಪಂ ಅಧ್ಯಕ್ಷೆ ಶೋಭಾ ಬೆಂಡಿಗೇರಿ ಮತ್ತು ಉಪಾಧ್ಯಕ್ಷೆ ಮಮತಾ ಸುರೇಶ್ ಉದ್ಘಾಟಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕ ಬಿ.ಎಸ್. ಕಲಾದಗಿ ಸೇರಿದಂತೆ ಇತರೆ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಅಡುಗೆ ಸ್ಪರ್ಧೆಯಲ್ಲಿ 26 ಮಹಿಳೆಯರು ಭಾಗವಹಿಸಿ ಹಂಪಿ ಸಾಂಪ್ರದಾಯಕ ಅಡುಗೆಗಳನ್ನು ತಯಾರಿಸಿ ಪ್ರದರ್ಶಿಸಿದರು.
4 ವೇದಿಕೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ವಿವರ
ಶ್ರೀಕೃಷ್ಣದೇವರಾಯ ವೇದಿಕೆ (ಗಾಯಿತ್ರಿ ಪೀಠದ ಸಮೀಪದ ಮೈದಾನ):  ಸಂಜೆ 5ಕ್ಕೆ ಬಳ್ಳಾರಿಯ ಅಶ್ವಥ್ ಕಲಾ ಬಳಗದಿಂದ ನಾಡಗೀತೆ, ರೈತಗೀತೆ ನಂತರ ಉತ್ಸವದ ಉದ್ಘಾಟನೆ. 6 ಗಂಟೆಗೆ ಬೆಂಗಳೂರಿನ ಎಂ.ಡಿ. ಪಲ್ಲವಿ ಅವರಿಂದ ಕನ್ನಡ ಚಿತ್ರಗೀತೆಗಳು. 7ಕ್ಕೆ ಬೆಂಗಳೂರಿನ ಕು. ರೂಪಾ ಅಯ್ಯರ್ ಅವರಿಂದ ಸಾಂಪ್ರದಾಯಿಕ ಉಡುಪು ಪ್ರದರ್ಶನ. 8 ಗಂಟೆಗೆ ಬೆಂಗಳೂರಿನ ಕಸ್ತೂರಿ ಶಂಕರ್ ಅವರಿಂದ ಸುಗಮ ಸಂಗೀತ, 9ಕ್ಕೆ ಮುಂಬೈನ ಶಬರಿ ಬ್ರದರ್ಸ್ ಅವರಿಂದ ಖವ್ವಾಲಿ ಮತ್ತು ಗಜಲ್, 10 ಗಂಟೆಗೆ ಬೆಂಗಳೂರಿನ ಆಕ್ಸಿಜನ್ ತಂಡದಿಂದ ನೃತ್ಯ, 10.30ಕ್ಕೆ ಮುಂಬೈನ ಶಾನ್ ಅವರಿಂದ ಹಿಂದಿ, ಕನ್ನಡ ಗೀತೆಗಳ ಗಾಯನ.
ಎಂ.ಪಿ. ಪ್ರಕಾಶ್ ವೇದಿಕೆ (ಶ್ರೀಕೃಷ್ಣ ದೇವಸ್ಥಾನ ಹಿಂಭಾಗ): ಸಂಜೆ 6 ಗಂಟೆಗೆ ಕೋಳಲು ವಾದಕ ಪ್ರವೀಣ್ ಗೋಡ್ಖಿಂಡಿ ಅವರಿಂದ ಫ್ಯೂಜನ್ ಬ್ಯಾಂಡ್ ವ್ಯಾದ್ಯ, 6.45ಕ್ಕೆ ಬೆಂಗಳೂರಿನ ಫಯಾಜ್‌ಖಾನ್ ಅವರಿಂದ ಗಜಲ್, 7.30ಕ್ಕೆ ಬೆಂಗಳೂರಿನ ಆರ್ಟಿಕ್ಯೂಲೇಟ್ ಇಂಡಿಯಾದವರಿಂದ ನೃತ್ಯ ರೂಪಕ ಸಾಲ ಬಂಜಿಕ, 8.15ಕ್ಕೆ ಕೊಲ್ಕತ್ತಾದ ಅರ್ಪಿತಾ ವೆಂಕಟೇಶ್ ಅವರಿಂದ ಒಡಿಸ್ಸಿ ನೃತ್ಯ, 9.30ಕ್ಕೆ ಮುಂಬೈನ ಶುಭಾ ಮದ್ಗಲ್ ಅವರಿಂದ ಹಿಂದೂಸ್ತಾನಿ ಗಾಯನ, 10.30ಕ್ಕೆ ಬೆಂಗಳೂರಿನ ಡಾ. ಸುಮಾ ಸುಧೀಂದ್ರ ಅವರಿಂದ ಪಂಚ ವೀಣಾವಾದನ, 11.15ಕ್ಕೆ ಪ್ರಸನ್ನಗುಡಿ ಅವರಿಂದ ಹಿಂದೂಸ್ತಾನಿ ಗಾಯನ.
ವಿದ್ಯಾರಣ್ಯ ವೇದಿಕೆ (ಎದುರು ಬಸವಣ್ಣ ಮಂಟಪ): ಸಂಜೆ 6 ಗಂಟೆಗೆ ಬೆಂಗಳೂರಿನ ಆರಾಧನಾ ನೃತ್ಯ ಶಾಲೆಯವರಿಂದ ಸಮೂಹ ನೃತ್ಯ, 6.30ಕ್ಕೆ ಬೆಂಗಳೂರಿನ ಗೀತಾ ಎಸ್. ಅವರಿಂದ ಸುಗಮ ಸಂಗೀತ, 7 ಗಂಟೆಗೆ ಹೊಸಪೇಟೆಯ ಕಾಕುಬಾಳು ಕೆ. ಸಣ್ಣತಿಮ್ಮಪ್ಪ ಅವರಿಂದ ಕ್ಲಾರಿಯೋನೇಟ್ ವಾದನ, 7.30ಕ್ಕೆ ಹೊಸಪೇಟೆಯ ಗೊಲ್ಲರಹಳ್ಳಿಯ ಮಂಜಮ್ಮ ಜೋಗತಿ ಅವರಿಂದ ಜೋಗತಿ ನೃತ್ಯ, 8 ಗಂಟೆಗೆ ಹೂವಿನಹಡಗಲಿಯ ಕೆ. ವನಜಾಕ್ಷಿ ಅವರಿಂದ ಕನ್ನಡ ಗೀತೆಗಳು. 8.30ಕ್ಕೆ ಬಳ್ಳಾರಿಯ ನಾಡೋಜ ಬೆಳಗಲ್ ವೀರಣ್ಣ ಅವರಿಂದ ತೊಗಲು ಗೊಂಬೆ ಪ್ರದರ್ಶನ, 9ಕ್ಕೆ ಬೆಂಗಳೂರಿನ ರಾಘವೇಂದ್ರ ಸಂಗೀತ ಸೇವಾ ಪ್ರತಿಷ್ಠಾನದಿಂದ ನೃತ್ಯ ರೂಪಕ ಶ್ರೀರಾಮಚರಿತೆ, 9.30ಕ್ಕೆ ಹೊಸಪೇಟೆಯ ಯಲ್ಲಪ್ಪ ಭಂಡಾರದ ಅವರಿಂದ ಜಾನಪದ ಗೀತೆಗಳು, 10ಕ್ಕೆ ಬೆಂಗಳೂರಿನ ನೃತ್ಯ ದಿಶಾ ಟ್ರಸ್ಟ್‌ನವರಿಂದ ದರ್ಶನಿ ಮಂಜುನಾಥ ನಿರ್ದೇಶನದಲ್ಲಿ ನೃತ್ಯ ರೂಪಕ ಅಷ್ಟಲಕ್ಷ್ಮೀ, ಜಗನ್ ಮೋಹನನೆ ಕೃಷ್ಣ, ರಾತ್ರಿ 11ಕ್ಕೆ ಹಡಗಲಿ ತಾಲೂಕು ಉತ್ತಂಗಿ ಗೋಣಿಬಸಪ್ಪ ಅವರಿಂದ ಜಾನಪದ ಗೀತೆಗಳು. 12ಕ್ಕೆ ಹೂವಿನಹಡಗಲಿಯ ರಂಗಭಾರತಿಯವರಿಂದ ವಾರ್ಡ್ ನಂ. 6 ನಾಟಕ ಪ್ರದರ್ಶನ.
ಹಕ್ಕಬುಕ್ಕ ವೇದಿಕೆ (ವಿರೂಪಾಕ್ಷೇಶ್ವರ ದೇವಸ್ಥಾನ ಆವರಣ): ಮಹಿಳಾ ಉತ್ಸವ ನಡೆಯಲಿದ್ದು, ಮಧ್ಯಾಹ್ನ 3 ಗಂಟೆಗೆ ಮಹಿಳೆಯರಿಂದ ರಂಗೋಲಿ ಮತ್ತು ಮೆಹಂದಿ ಸ್ಪರ್ಧೆ, ಸಂಜೆ 4ಕ್ಕೆ ಬಳ್ಳಾರಿಯಯ ವೀಣಾ ಕಟಕನಹಳ್ಳಿಯವರಿಂದ ಹಿಂದೂಸ್ತಾನಿ ಗಾಯನ, 4.30ಕ್ಕೆ ಗದಗಿನ ಮೇಘಾ ಹುಕ್ಕೇರಿ ಅವರಿಂದ ಸುಗಮ ಸಂಗೀತ, 5ಕ್ಕೆ ಬೆಂಗಳೂರಿನ ಸ್ನೇಹಲತಾ ಅವರಿಂದ ಕರ್ನಾಟಕ ಸಂಗೀತ, 5.15ಕ್ಕೆ ಗದಗಿನ ಭಾರತಿ ಡಂಬಳ ಮತ್ತು ತಂಡದವರಿಂದ ಮಹಿಳಾ ನಾಟಕ, 5.30ಕ್ಕೆ ಕಂಪ್ಲಿಯ ಬಿ. ಲಕ್ಷ್ಮೀ ಅವರಿಂದ ಭರತ್ಯ ನಾಟ್ಯ, 5.45ಕ್ಕೆ ಬೆಂಗಳೂರಿನ ಗೌರಿ ಸಪ್ತಾನ ಮತ್ತು ತಂಡದವರಿಂದ ಮಹಿಳಾ ಯಕ್ಷಗಾನ, 6ಕ್ಕೆ ಹೊಸಪೇಟೆಯ ಸ್ವರ್ಣಮುಖಿ ಭರತನಾಟ್ಯ ಶಾಲೆಯವರಿಂದ ಭರತ್ಯನಾಟ್ಯ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.