ಚಿತ್ತಾರಗಳಲ್ಲಿ ಕಂಡ ಹಂಪಿ ಉತ್ಸವ
- ವೈ.ಎಂ. ಸಿದ್ಧಲಿಂಗಸ್ವಾಮಿ
ಕನ್ನಡಪ್ರಭ ವಾರ್ತೆ, ಹಂಪಿ, ಜ. 12
ವಿಜಯನಗರ ಅರಸರ ಕಾಲದ ಕ್ರೀಡೆ, ಸಂಗೀತ, ಸಾಹಿತ್ಯಗಳನ್ನು ಹಂಪಿ ಉತ್ಸವ ಕಟ್ಟಿಕೊಟ್ಟಿದೆ. 1998ರಿಂದ ಇಲ್ಲಿವರೆಗೆ ಹಂಪಿ ಉತ್ಸವದ ಮೆಲುಕು ಹಾಕಲು ಹಂಪಿ ಬಜಾರ್‌ನಲ್ಲಿ ಏರ್ಪಡಿಸಿದ್ದ ಹಂಪಿ ವಿಹಂಗಮ ದೃಶ್ಯ ಪ್ರದರ್ಶನ ವೇದಿಕೆ ನಿರ್ಮಿಸಿತ್ತು.
1998ರಿಂದ 2011ರ ವರೆಗೆ ನಡೆದ ಹಂಪಿ ಉತ್ಸವದ ಸಮಗ್ರ ಮಾಹಿತಿಯನ್ನು ಛಾಯಾಚಿತ್ರ ಪ್ರದರ್ಶನದಲ್ಲಿ ಕಟ್ಟಿ ಕೊಡಲಾಗಿದೆ. ಉತ್ಸವದ ವಿವಿಧ ವೇದಿಕೆಗಳಲ್ಲಿ ಹೆಸರಾಂತ ರಾಷ್ಟ್ರೀಯ, ಅಂತಾರಾಷ್ಟ್ರೀಯ ಕಲಾವಿದರು ಪ್ರದರ್ಶಿಸಿದ ಕಲೆ, ಜನತೆ ಕಲಾವಿದರ ಕಲೆ ಸವಿಯಲು, ಶೋತೃಗಳಾಗಿ ಹಾಡುಗಳನ್ನು ಕೇಳಲು, ವಿದೇಶದ ಕಲಾ ಪ್ರದರ್ಶನ ವೀಕ್ಷಿಸುವುದು ಕಾಣ ಸಿಗುತ್ತದೆ. ಇಂತಹ ಹಲವು ವಿಷಯಗಳು ಪ್ರದರ್ಶನದಲ್ಲಿ ತಿಳಿಯುತ್ತವೆ.
1998ರ ಉತ್ಸವದ ವಿಡಿಯೋ ಚಿತ್ರೀಕರಣದ ತುಣುಕುಗಳನ್ನು ಪ್ರಸಾರ ಮಾಡುವ ಮೂಲಕ ಎಲ್ಲರ ಗಮನ ಸೆಳೆಯುವಂತೆ ಮಾಡಿದೆ. ವಿವಿಧೆಡೆಯಿಂದ ಆಗಮಿಸಿರುವ ಜನತೆ ಇಲ್ಲಿವರೆಗೆ ನಡೆದ ಉತ್ಸವಗಳ ಹೋಲಿಕೆ ಮಾಡುತ್ತಾ, ಅಂದಿನ ಕಲಾವಿದರ ಬಗ್ಗೆ ಮಾತುಗಳನ್ನು ಆಡುತ್ತ ಛಾಯಾಚಿತ್ರಗಳನ್ನು ವೀಕ್ಷಿಸಿದರು. ಇನ್ನು 2010ರಲ್ಲಿ ನಡೆದ ಶ್ರೀಕೃಷ್ಣದೇವರಾಯರ 500ನೇ ವರ್ಷದ ಪಟ್ಟಾಭಿಷೇಕದ ಹಂಪಿ ಉತ್ಸವದಲ್ಲಿ ಹೆಸರಾಂತ ಕಲಾವಿದರು ನೀಡಿದ ಕಲಾ ಪ್ರದರ್ಶನಗಳನ್ನು ವಿವಿಧ ಛಾಯಾಚಿತ್ರಗಳಿಂದ ತಿಳಿದರು.
ಯಾವ ಯಾವ ಮುಖ್ಯಮಂತ್ರಿಗಳ ಅವಧಿಯಲ್ಲಿ ಉತ್ಸವ ನಡೆದಿದೆ, ಹೇಗೆ ನಡೆದಿದೆ ಎಂಬುದನ್ನು ಅಲ್ಲಿನ ಛಾಯಾಚಿತ್ರಗಳು ಸಾರಿ ಸಾರಿ ಹೇಳುತ್ತಿವೆ. ಸುಗಮ ಸಂಗೀತ, ಜಾನಪದ, ಭರತನಾಟ್ಯ, ಅಪರೂಪದ ಬೊಂಬೆಗಳ ನಾಟ್ಯ, ಲಂಬಾಣಿ ನೃತ್ಯ, ಹಿಂದುಸ್ತಾನಿ ಶಾಸ್ತ್ರೀಯ ಗಾಯನ, ವಾಯಲಿನ್ ವಾದನ, ಜೋಗಿ ಕುಣಿತ, ಗೊರವರ ಕುಣಿತ, ದಟ್ಟಿ ಕುಣಿತ, ಜನಪದ ಸೋಮನ ಕುಣಿತ, ವಿಜಯನಗರ ಸಾಮ್ರಾಜ್ಯ ನೆನಪಿಸಿಕೊಡುವ ಅಶ್ವದಳ ವ್ಯವಸ್ಥೆ, ಸಾಮೂಹಿಕ ಸಿತಾರ್ ವಾದನ, ಜೇಡರ ಕುಣಿತ, ನಂದಿ ಕುಣಿತ ಹೀಗೆ ಸಾವಿರಾರು ಕಲಾವಿದರಿಗೆ ವೇದಿಕೆ ಕಲ್ಪಿಸಿಕೊಡುವ ಜತೆಗೆ ಈ ಭಾಗದ ಜನತೆಗೆ ಸಾಂಸ್ಕೃತಿಕ ರಸದೌತಣ ನೀಡಿದ ಈ ಹಿಂದೆ ನಡೆದ ಹಂಪಿ ಉತ್ಸವದ ಛಾಯಾಚಿತ್ರಗಳನ್ನು ಇಲ್ಲಿ ನೋಡಬಹುದು.
ಉತ್ಸವದಲ್ಲಿ ಮಹನೀಯರು: 2003ರಲ್ಲಿ ಖ್ಯಾತ ಚಲನಚಿತ್ರ ಗಾಯಕ ಕೆ.ಜೆ. ಯೇಸುದಾಸ್ ಅವರ ಗಾಯನ, 2005ರಲ್ಲಿ ಹಾಡಿದ ಹೆಸರಾಂತ ಗಾಯಕ ಎಸ್.ಪಿ. ಬಾಲಸುಬ್ರಮಣ್ಯಂ, 2011ರ ಉತ್ಸವದಲ್ಲಿ ಡ್ರಮ್ ನುಡಿಸಿದ ಕೇಳುಗರ ಎದೆ ಬಡಿತ ಹೆಚ್ಚು ಮಾಡಿದ್ದ ಶಿವಮಣಿ ಅವರ ಕಾರ್ಯಕ್ರಮ, ಖ್ಯಾತ ಗಾಯಕಿ ಬಿ. ಜಯಶ್ರೀ ಮತ್ತು ತಂಡದ ರಂಗ ಗೀತೆಗಳ ಗಾಯನ ಸೇರಿದಂತೆ ಹಲವು ರಾಷ್ಟ್ರೀಯ ಮಟ್ಟದ ಪ್ರತಿಭೆಗಳು, ವಿದೇಶಿ ಕಲಾವಿದರು ಹಂಪಿಯ ಗತವೈಭವ ನೆನೆಪಿಸಿಕೊಡುವ ಉತ್ಸವದಲ್ಲಿ ಕಾರ್ಯಕ್ರಮ ನೀಡಿರುವ ಫೋಟೋಗಳ ಪ್ರದರ್ಶನ ಮಾಡಲಾಗಿದೆ. ವಿಶೇಷವಾಗಿ 2011ರ ಉತ್ಸವದಲ್ಲಿ ಎಲ್ಲರ ಗಮನ ಸೆಳೆದ, ಮೆಚ್ಚುಗೆಗೆ ಪಾತ್ರವಾಗಿದ್ದ ಆಸ್ಟ್ರೇಲಿಯಾದ ಲೇಜರ್ ಷೋದ ವಿವಿಧ ವರ್ಣರಂಜಿತ ಛಾಯಾಚಿತ್ರಗಳನ್ನು ಕಂಡು ಜನತೆ ಖುಷಿಪಟ್ಟರು.
ಹಂಪಿಯಲ್ಲಿರುವ ವಿವಿಧ ಐತಿಹಾಸಿಕ ಸ್ಮಾರಕಗಳನ್ನು ಹಲವು ಪ್ರಸಿದ್ಧ ಛಾಯಾಗ್ರಹಕರು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದ ಛಾಯಾಚಿತ್ರಗಳು, ಚಿತ್ರಕಲಾವಿದರ ಕಲಾ ಕುಂಚದಿಂದ ಬಿಡಿಸಿದ ಕಲ್ಲಿನ ಸ್ಮಾರಕಗಳ ಚಿತ್ರ ಪ್ರದರ್ಶನ ಎಲ್ಲರ ಚಿತ್ತವನ್ನು ತನ್ನತ್ತ ಸೆಳೆದವು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

