ಪರದೇಶಿಯರ ಪರದಾಟ, ಹಣ್ಣಾದ ವ್ಯಾಪಾರಿ
ಹಂಪಿ: ಮರೆಯಲಾಗದ ಸಾಮ್ರಾಜ್ಯ, ಬೆಳ್ಳಿ, ಬಂಗಾರ, ಮುತ್ತು ರತ್ನಗಳನ್ನು ಸೇರು, ಬಳ್ಳಗಳಲ್ಲಿ ಅಳೆದು ದಾನ ಧರ್ಮ ಮಾಡಿ ಪ್ರಪಂಚಕ್ಕೆ ಪರಿಚಯವಾಗಿರುವ ವಿಜಯನಗರ ಸಾಮ್ರಾಜ್ಯದ ಗತ ಕಾಲದ ವೈಭವವನ್ನು ನೋಡಲು ಬಂದಿರುವ ವಿದೇಶಿ ಪ್ರವಾಸಿಗರ ಕುತೂಹಲ ಹಾಗೂ ಅವರ ಕಾತುರಕ್ಕೆ ಮಾಹಿತಿ ಕೊರತೆಯಿಂದ ಪರದಾಡುವ ಪರಿಸ್ಥಿತಿ ಎದುರಾಗಿತ್ತು.
ಹೌದು, ಕೈಯಲ್ಲಿ ಬೆಲೆ ಬಾಳುವ ಕ್ಯಾಮೆರಾಗಳನ್ನು ಹಿಡಿದು ಸಂಜೆಯ ಇಳಿ ಹೊತ್ತು ಆರಂಭವಾಗುವ ಭಾರತೀಯ ಕಲೆ, ಸಂಸ್ಕೃತಿ, ಸಾಹಿತ್ಯ, ಸಂಗೀತ ಅನಾವರಣವನ್ನು ಕ್ಲಿಕ್ಕಿಸಲು ಅವರಿಗೆ ಅವಕಾಶವಿಲ್ಲದೆ ತೀರಾ ಬೇಸರಗೊಂಡು ಏನೋ ಕಳಕೊಂಡವರಂತೆ ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಓಡಾಡುವ ಅವರ ಸ್ಥಿತಿ ನೋಡಿ ಯಾರಿಗೂ ಕರುಣೆ ಬರಲಿಲ್ಲ.
ಬೆರಗಾದ ವಿದೇಶಿಗರು: ಸುಂದರ ಕೆತ್ತನೆಗಳು ಕಲ್ಲಿನಲ್ಲಿ ಅರಳಿನಿಂತಿರುವ ವಿಜಯನಗರ ಹಂಪಿ ಜಾತ್ರೆ, ಉತ್ಸವಕ್ಕೆ ಸಹಸ್ರಾರು ಸಂಖ್ಯೆಯ ಪ್ರವಾಸಿಗರನ್ನು ಗಮನಿಸಿದ ವಿದೇಶಿಯರು ಆಶ್ಚರ್ಯ ಚಕಿತರಾಗಿ ಎಷ್ಟೊಂದು ಕಲೆ ಶ್ರೀಮಂತಿಕೆ ಇದೆ ಎಂದು ಉದ್ಗರಿಸಿದರು. ಇಲ್ಲಿನ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ದೂರದಿಂದ ಗಮನಿಸುತ್ತ ವಿಜಯನಗರ ಶ್ರೀಕೃಷ್ಣದೇವರಾಯನ ಕಾಲದ ವೈಭವ ಹೀಗೆ ಇತ್ತು ಎನ್ನುವ ಭಾವನೆ ವಿದೇಶಿಯರಲ್ಲಿ ಮೂಡಿತ್ತು.
ಭಾರತದ ಪ್ರವಾಸಿ ತಾಣಗಳನ್ನು ವೀಕ್ಷಿಸಲು ಬರುವ ವಿದೇಶಿಯರಿಂದಲೆ ಸಾಕಷ್ಟು ತೆರಿಗೆ ಸಂಗ್ರಹಿಸುವ ಸರ್ಕಾರಗಳು, ಇಂತಹ ಉತ್ಸವಗಳಲ್ಲಿ ಅವರಿಗೆ ಕೆಲ ಆಸನಗಳನ್ನು ಮೀಸಲಿರಿಸಿಲ್ಲ. ಯಾವ ಅಧಿಕಾರಿಗಳು ಮಾಹಿತಿ ನೀಡಿಲ್ಲ. ಜನಪದ ವಾಹಿನಿ, ಶೋಭಾಯಾತ್ರೆ, ಜನಪದ ಜಾತ್ರೆಯ ಮೆರವಣಿಗೆಯಲ್ಲಿ ಭಾಗಹಿಸುವ ಜನಪದ ಕಲಾ ತಂಡಗಳ ಅನಾವರಣ, ವಿವಿಧ ನೃತ್ಯ, ಸಂಗೀತ, ವಾದ್ಯಗಳ ಕುಣಿತವನ್ನು ಸೆರೆ ಹಿಡಿದು ಖುಷಿಪಡುತ್ತಿದ್ದರು. ವೇದಿಕೆ ಕಾರ್ಯಕ್ರಮದಲ್ಲಿ ಹೆಚ್ಚು ಆಸನಗಳು ಸಿಗದೆ ಬೇಸರಗೊಂಡರು.
ಹಣ್ಣಾದ ಹಣ್ಣಿನ ವ್ಯಾಪಾರಿಗಳು: ಹಂಪಿ ಉತ್ಸವಕ್ಕೆ ಭಾರಿ ಬಿಗಿ ಭದ್ರತೆ ಒದಗಿಸಿರುವ ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತದ ಕಠಿಣ ಕ್ರಮದಿಂದ ಬೀದಿ ಬದಿಯ ವ್ಯಾಪಾರಿಗಳ ವ್ಯಾಪಾರಕ್ಕೆ ಬ್ರೇಕ್ ಬಿದ್ದಂತಾಗಿತ್ತು. ಉತ್ಸವಕ್ಕೆ ಹೆಚ್ಚು ಜನರ ಬರುವ ನಿರೀಕ್ಷೆ ಹೊಂದಿದ್ದ ವ್ಯಾಪಾರಿಗಳು, ಅಪಾರ ಪ್ರಮಾಣದ ವಿವಿಧ ಬಗೆಯ ಹಣ್ಣು, ತಿಂಡಿ ತಿನಿಸು, ಉಪಹಾರ, ಸಣ್ಣ ಮಕ್ಕಳ ಆಟಿಕೆ ಸಾಮಾನುಗಳನ್ನು ತಂದಿದ್ದರು. ಆದರೆ ಅವಕಾಶವಿಲ್ಲದೆ ಅಪಾರ ನಷ್ಟ ಅನುಭವಿಸುವಂತಾಯಿತು. ಉತ್ಸವ, ಜಾತ್ರೆ ಎಂದ ಮೇಲೆ ಎಲ್ಲ ರೀತಿ ವ್ಯಾಪಾರದ ಅಂಗಡಿ ಇರುತ್ತವೆಂದು ನಿರೀಕ್ಷೆ ಇಟ್ಟುಕೊಂಡು ಬಂದಿದ್ದ ಪ್ರವಾಸಿಗರು ಸಾಮಾನುಗಳನ್ನು ಖರೀದಿ ಮಾಡದೆ ನಿರಾಸೆಯಿಂದ ವಾಪಾಸಾದರು. ಪ್ರತಿವರ್ಷ ಹಂಪಿ ಬಜಾರ್ ಪ್ರದೇಶದಲ್ಲಿ ಕಿಕ್ಕಿರಿದು ವ್ಯಾಪಾರಿಗಳು ತುಂಬಿರುತ್ತಿದ್ದರು. ಪುರಾತತ್ವ ಇಲಾಖೆ ಮತ್ತು ಜಿಲ್ಲಾಡಳಿತದ ಕ್ರಮದಿಂದ ಎಲ್ಲವು ಸ್ಥಳಾಂತರವಾಗಿದ್ದು, ಬೀದಿ ಬದಿ ವ್ಯಾಪಾರಿಗಳು ವಸ್ತುಗಳನ್ನು ಹೊತ್ತು ತಿರುಗಲು ಪೊಲೀಸರು ಅವಕಾಶ ನೀಡಿಲ್ಲ. ವ್ಯಾಪಾರದ ವ್ಯವಸ್ಥೆ ಇಲ್ಲದ ಕಾರಣ ಏನೂ ಸಿಗದೇ ಪೊಲೀಸರೆ ಪರದಾಡಿದ್ದು ಉಂಟು.
- ಚಂದ್ರು ಕೊಂಚಿಗೇರಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

