ಬಳ್ಳಾರಿ

ಸುವರ್ಣಯುಗ ನೆನಪಿಸಿದ ಉತ್ಸವ

Published On :

ಕನ್ನಡಪ್ರಭ ವಾರ್ತೆ, ಹಂಪಿ, ಜ. 12
ಕಲ್ಲುಕರಗುವ ಸಮಯವದು ಬೆಲ್ಲವನು ಮೆದ್ದಂತೆ ಎನ್ನುವ ನುಡಿ ಹಂಪಿ ಉತ್ಸವದ ಮೂರು ದಿನಗಳ ಸಾಂಸ್ಕೃತಿಕ ವೈಭವ ಸಾಕ್ಷೀಕರಿಸಿತು. ಮೂರು ದಿನಗಳ ಉತ್ಸವದಲ್ಲಿ ಎಲ್ಲ ಭಾಗಗಳಲ್ಲೂ ಪ್ರವಾಸಿಗರಿಗೆ ಕಣ್ಮನ ತುಂಬಿಸಿಕೊಳ್ಳುವ ಸುಂದರ ನೋಟ. ಅಚ್ಚರಿಯ ಸಾಹಸ ಕ್ರೀಡೆ, ಮಕ್ಕಳಿಗೆ ಗಾಳಿಪಟ ಹಾರಾಟ, ಮಹಿಳೆಯರ ಉತ್ಸವ, ಗುಡ್ಡ ಹತ್ತುವ ಸ್ಪರ್ಧೆ, ಕುಸ್ತಿ, ಮಲ್ಲಕಂಬ ಮುಂತಾದ ಕ್ರೀಡೆಗಳು ವಿದೇಶಿಗರನ್ನು ಸೇರಿದಂತೆ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆದವು.
ಮೊದಲ ದಿನದ ಶೋಭಾಯಾತ್ರೆಯಲ್ಲಿ ನಮ್ಮ ನಾಡಿನ ಜಾನಪದ ತಂಡಗಳ ವಿವಿಧ ದೇಶಿಯ ವಾದ್ಯಗಳಿಗೆ ವಿದೇಶಿಗರು ಮೈಮರೆತು ಹೆಜ್ಜೆ ಹಾಕಿ ದೇಶಿ ಕಲೆಗೆ ವಿದೇಶಿ ಕುಣಿತದ ಸ್ಪರ್ಶ ನೀಡಿ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದ ನೋಟ ಹಂಪಿ ಉತ್ಸವದ ಪರಂಪರೆ ಬಿಂಬಿಸುವಂತಿತ್ತು. ವಿವಿಧ ಕಡೆಯಿಂದ ಆಗಮಿಸಿದ್ದ ಜಾನಪದ, ನೃತ್ಯ ತಂಡಗಳಿಗೆ ಸೂಕ್ತ ಸಮಯದಲ್ಲಿ ಊಟ ಸಿಗದೆ ಪರದಾಡಿದರೂ ಹೊಟ್ಟೆ ಹಸಿವಿನಲ್ಲಿಯೂ ಮೊದಲ ದಿನದ ಶೋಭಾಯಾತ್ರೆಯಲ್ಲಿ ನಮ್ಮ ಜಾನಪದ ಕಲಾವಿದರು ತಮ್ಮ ದೇಶಿ ಕಲೆಯ ಝಲಕ್‌ಗಳನ್ನು ವಿದೇಶಿಗರು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿದರು.
ಈ ಸಲದ ಹಂಪಿ ಉತ್ಸವಕ್ಕೆ ಉತ್ಸಾಹ ಕಡಿಮೆಯಾದರೂ ಕೆಲವು ಇತಿಮಿತಿಗಳ ಕೊರತೆಗಳ ನಡುವೆಯೂ ಕಲೆ, ಸಂಗೀತ, ಜಾನಪದ, ನೃತ್ಯ ಕಾರ್ಯಕ್ರಮಗಳಿಗೆ ಕೊರತೆಯೇನು ಕಾಣಲಿಲ್ಲ. ಹೊರಗಿನ ಮತ್ತು ಸ್ಥಳೀಯ ಕಲಾವಿದರಿಗೂ ಅವಕಾಶಗಳು ಸಿಕ್ಕಿದ್ದರಿಂದ ಉತ್ಸವಕ್ಕೆ ಮತ್ತಷ್ಟು ಕಳೆ ನೀಡಿತ್ತು. ಅವರಿಗೆ ಸೂಕ್ತ ವ್ಯವಸ್ಥೆ, ಊಟ, ಇತರೆ ಸೌಲಭ್ಯಗಳನ್ನು ಪಡೆಯಲು ಕಲಾವಿದರ ಪಡಿಪಾಟಲು ಮಾತ್ರ ಹೇಳತೀರದು. ಎರಡನೇ ದಿನದ ಕವಿಗೋಷ್ಠಿಯಲ್ಲಿ ಕುಂ.ವೀ. ಪುತ್ರ ಕೆ.ವಿ. ಪ್ರವರ, ನಿಷ್ಠಿ ರುದ್ರಪ್ಪ, ಮಂಜುನಾಥ ಬಳ್ಳಾರಿ, ಕೆ.ಬಿ. ಬ್ಯಾಳಿ, ಜಯಶ್ರೀ ಮುಂತಾದ ಸ್ಥಳೀಯ ಕವಿಗಳಿಗೆ, ಗಾಯಕರಿಗೆ ಅವಕಾಶ ದೊರೆತಿದ್ದು ಸಹ ಅರ್ಥಪೂರ್ಣವೆನ್ನುವಂತಿತ್ತು. ವಿವಿಧಕಡೆ ಸಮಯಕ್ಕೆ ಸರಿಯಾಗಿ ಕಾರ್ಯಕ್ರಮಗಳು ಪ್ರಾರಂಭವಾಗದಿದ್ದರಿಂದ ಪ್ರೇಕ್ಷಕರು ಬೇಸತ್ತರು. ಕಲಾವಿದರ ಪರದಾಟ ಆಯೋಜಕರ ಅವ್ಯವಸ್ಥೆ ಎತ್ತಿ ಹಿಡಿಯುವಂತಿತ್ತು.
ಝರಿ ಚಳಿಯಲ್ಲೂ ಬೆಚ್ಚನೆ ಸ್ಪರ್ಶ: ಹಂಪಿ ಉತ್ಸವದ ನಾಲ್ಕು ಪ್ರಮುಖ ವೇದಿಕೆಗಳಲ್ಲಿ ಮೂರು ದಿನಗಳ ಕಾಲ ನಡೆದ ಸಂಗೀತ, ಗಾಯನ, ಜಾನಪದ ನೃತ್ಯಗಳ ತಾಳಕ್ಕೆ ಹಂಪಿಯ ಗತವೈಭವ ಸಾರುವ ಕಲ್ಲುಗಳು ನಾಚಿ ನೀರಾದಂತೆ ಭಾಸವಾಯಿತು. ಚಳಿರಾಯನನನ್ನೇ ಹಾಸಿ ಹೊದ್ದು ಮಲಗಿದ್ದ ಹಂಪಿಯ ಕಲ್ಲುಕಲ್ಲುಗಳಿಗೆ ಬೆಚ್ಚನೆಯ ಸ್ಪರ್ಶ ನೀಡಿದ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರವಾಸಿಗರಿಗೂ ಚಳಿಯನ್ನು ಮರೆಸಿ ಬೆಚ್ಚನೆಯ ಅನುಭವ ನೀಡಿದವು. ವಿದೇಶಿಗರೂ ಸಹ ದೇಶಿ ಕಲೆಗಳ ರಸಸ್ವಾದವನ್ನು ಆಸ್ವಾದಿಸಿದರು. ಕಲೆಯ ಕಾಲ್ಗೆಜ್ಜೆಯನ್ನು ಹೊಂದಿರುವ ಹಂಪಿಯ ಕಲ್ಲು ಕಲ್ಲುಗಳಿಗೂ ಚೇತನ ತುಂಬಿದ ಸಂಗೀತ, ನಾಟ್ಯ ಸುಧೆಯ ಝರಿ ಚಳಿಯಲ್ಲೂ ಬೆಚ್ಚನೆ ಸ್ಪರ್ಶ ನೀಡಿತು.
ಹಂಪಿ ಉತ್ಸವಕ್ಕೆ ನಡೆಯಲು ಕಾರಣವಾಗಿದ್ದ ಎಂ.ಪಿ. ಪ್ರಕಾಶ್ ಈಗಿಲ್ಲವಾಗಿದ್ದರೂ ಹಂಪಿ ಉತ್ಸವದಲ್ಲಿ ಈ ಬಾರಿ ಕೃಷ್ಣ ದೇವಸ್ಥಾನದ ಹಿಂಭಾಗದಲ್ಲಿ ಎಂ.ಪಿ. ಪ್ರಕಾಶ್ ವೇದಿಕೆಯನ್ನಾಗಿ ಮಾಡಿದ್ದು ಸಹ ಔಚಿತ್ಯಪೂರ್ಣವಾಗಿತ್ತು. ಅಲ್ಲದೇ ವಿರೂಪಾಕ್ಷ ದೇವಸ್ಥಾನದಲ್ಲಿ ಹಕ್ಕ-ಬುಕ್ಕ ವೇದಿಕೆ, ಎದುರು ಬಸವಣ್ಣ ಮಂಟಪದಲ್ಲಿ ವಿದ್ಯಾರಣ್ಯ ವೇದಿಕೆ ಗಾಯತ್ರಿ ಪೀಠದ ಹತ್ತಿರ ಶ್ರೀ ಕೃಷ್ಣದೇವರಾಯ ಮುಖ್ಯವೇದಿಕೆಯನ್ನು ನಿರ್ಮಿಸಿದ ಜಿಲ್ಲಾಡಳಿತ ಹಂಪಿಯ ಮೂಲೆ ಮೂಲೆಯಲ್ಲಿಯೂ ಕುಸ್ತಿ, ಮಲ್ಲಕಂಬ, ಗ್ರಾಮೀಣ ಕ್ರೀಡೆಗಳು, ಜಾನಪದ ತಂಡಗಳು, ಅಂತಾರಾಷ್ಟ್ರೀಯ ಮಟ್ಟದ ಸಂಗೀತ ಕಲಾವಿದರ ನಾಟ್ಯದ ಝಲಕ್‌ಗಳು, ಸಾಹಸ ಕ್ರೀಡೆ, ಗಾಳಿಪಟ ಹಾರಾಟ ಸ್ಪರ್ಧೆ, ಗುಡ್ಡ ಹತ್ತುವ ಸ್ಪರ್ಧೆ, ಮಹಿಳಾ ಉತ್ಸವ, ಪುಸ್ತಕಮೇಳ, ವಿಜ್ಞಾನ ವಸ್ತುಪ್ರದರ್ಶನ, ದೋಣಿವಿಹಾರ, ಹಂಪಿ ಬೈ ಸ್ಕೈ ಎನ್ನುವ ಹೆಲಿಕ್ಯಾಪ್ಟರ್ ಮೂಲಕ ಪ್ರವಾಸಿಗರ ಹಾರಾಟ ಮುಂತಾದ ಉತ್ಸವಗಳು ಪ್ರವಾಸಿಗರನ್ನು ಪುಳಕಗೊಳಿಸಿತು.

ರಂಜಿಸಿದ ಗಾಯನ, ಭರತನಾಟ್ಯ
ಹಂಪಿ: ಉತ್ಸವದ ಎರಡನೇ ದಿನವಾದ ಶನಿವಾರ ಎಂ.ಪಿ. ಪ್ರಕಾಶ್ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ತಡವಾಗಿ ಆರಂಭಗೊಂಡಿತು. ನೆರೆದ ಕೆಲಪ್ರೇಕ್ಷಕರ ಎದುರಿನಲ್ಲಿ ಬೆಂಗಳೂರಿನ ಎಂ.ಎಸ್. ಶೀಲಾ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಅಂತಾರಾಷ್ಟ್ರೀಯ ಕಲಾವಿದ ಕೋಲ್ಕತಾದ ಪಂಡಿತ್ ಶುದ್ಧಶೀಲ್ ಚಟರ್ಜಿ ಅವರ ಸಂತೂರ್ ವಾದನ ಶ್ರೋತೃಗಳ ಮೈಮರೆಸಿತು. ಅಂತಾರಾಷ್ಟ್ರೀಯ ಕಲಾವಿದೆ, ನವದೆಹಲಿಯ ಪ್ರತಿಭಾ ಪ್ರಹ್ಲಾದ್ ಅವರ ಭರತನಾಟ್ಯ ವೀಕ್ಷಿಸಲು ಪ್ರೇಕ್ಷಕರು ಕಾದು ಕುಳಿತಿದ್ದರು. ಪ್ರತಿಭಾ ಪ್ರಹ್ಲಾದ್ ಹಲವು ವರ್ಷಗಳಿಂದ ಹಂಪಿ ಉತ್ಸವದಲ್ಲಿ ಕಾರ್ಯಕ್ರಮ ಪ್ರದರ್ಶಿಸುತ್ತಿದ್ದು, ಅಭಿಮಾನಿಗಳನ್ನು ಗಳಿಸಿದ್ದಾರೆ. ಬೆಂಗಳೂರಿನ ವಸುಂಧರದಾಸ್ ಅವರ ಸೂಫಿ, ಫ್ಯೂಜನ್ ಕಾರ್ಯಕ್ರಮ ರಂಜಿಸಿತು. ಮುಂಬೈನ ಅಂತಾರಾಷ್ಟ್ರೀಯ ಕಲಾವಿದ ತಲತ್ ಅಜೀತ್ ಅವರ ಗಜಲ್ ಕಾರ್ಯಕ್ರಮ ಆರಂಭವಾದಾಗ ಮಧ್ಯರಾತ್ರಿ 1 ಗಂಟೆ ಕಳೆದಿತ್ತು. ಅನಂತರ ಬೆಂಗಳೂರಿನ ಅನಿತಾ ಕುಲಕರ್ಣಿ ಅವರ ಸಿತಾರ್ ವಾದನ, ಬೆಂಗಳೂರಿನ ಪಂ. ರಾಜಶೇಖರ್ ಮನ್ಸೂರ್ ಅವರ ಹಿಂದೂಸ್ತಾನಿ ಗಾಯನ ಕಾರ್ಯಕ್ರಮ ನಡೆಯಿತು.
--
ಉತ್ಸವದಲ್ಲಿ ರು. 5ಕ್ಕೆ ಊಟ!
ಬಳ್ಳಾರಿ: ಹಂಪಿ ಉತ್ಸವಕ್ಕೆ ಬಂದವರಿಗೆ ರು. 5ಕ್ಕೆ ಒಂದು ಊಟದ ವ್ಯವಸ್ಥೆ ಮಾಡಲಾಗಿತ್ತು. ಉತ್ಸವದ ಮೊದಲ ದಿನಕ್ಕೆ ಐದು ಸಾವಿರ ಜನಕ್ಕೆ ಅಡುಗೆ ಮಾಡಲಾಗಿ     ತ್ತು. ಆದರೆ, ಮೊದಲ ದಿನ ಜನ ಕಡಿಮೆ ಬಂದಿದ್ದರಿಂದ ಕೇವಲ ಎರಡುವರೆ ಸಾವಿರ ಜನರು ಊಟ ಮಾಡಿದ್ದು, ಉಳಿದಿದ್ದು ವ್ಯರ್ಥವಾಗಿತು.
ಎರಡನೇ ದಿನ ಸುಮಾರು ಏಳೂವರೆ ಸಾವಿರ ಜನರು ಊಟ ಮಾಡಿದ್ದರು. ಹಂಪಿಗೆ ಆಗಮಿಸಿದ ಜನರು ಮಧ್ಯಾಹ್ನದಿಂದಲೇ ಊಟದ ವ್ಯವಸ್ಥೆ ಮಾಡಬೇಕೆಂದು ಒತ್ತಾಯಿಸಿದ ಹಿನ್ನೆಲೆಯಲ್ಲಿ ಎರಡನೇ ದಿನದಿಂದಲೇ ಮಧ್ಯಾಹ್ನ ಊಟಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಸಂಜೆ 5 ಗಂಟೆಯಿಂದಲೇ ದೂರದ ಊರುಗಳಿಂದ ಹಂಪಿ ಉತ್ಸವಕ್ಕೆ ಬಂದ ಜನರಿಗೆ ಊಟದ ವ್ಯವಸ್ಥೆ ಮಾಡಬೇಕೆಂದು ನಿಶ್ಚಿಯಿಸಿ, ಹಂಪಿ ಉತ್ಸವ ಸಮಿತಿಯು ಅಕ್ಕ-ತಂಗಿಯ ಬೆಟ್ಟದ ಸಮೀಪದಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಆರಂಭ ದಿನ ಸಂಜೆ 5 ಸಾವಿರ ಜನರಿಗೆ ರು. 5ಗೆ ಊಟದ ವ್ಯವಸ್ಥೆ ಮಾಡಿತ್ತು. ಆದರೆ, ನಿರೀಕ್ಷೆಯಂತೆ ಆರಂಭದ ದಿನ ಜನ ಬಾರದ ಹಿನ್ನೆಲೆಯಲ್ಲಿ ಹಂಪಿ ಉತ್ಸವ ಸಮಿತಿಗೆ ಇರುಸುಮುರುಸಿಗೆ ಕಾರಣವಾಗಿತ್ತು. ಇನ್ನು ಶನಿವಾರ ಹಾಗೂ ಭಾನುವಾರ ಸಾಲಿನಲ್ಲಿ ನಿಂತು, ಟಿಕೆಟ್ ಪಡೆದು ಊಟ ಮಾಡುವಷ್ಟರ ಮಟ್ಟಿಗೆ ಜನರು ಸೇರಿದ್ದರು. ಉತ್ಸವದ ಎರಡನೇ ದಿನವಾದ ಶನಿವಾರ ಊಟಕ್ಕೆ ಅನ್ನ, ಸಾಂಬರ್ ಮತ್ತು ಒಂದು ಬಾಳೆಹಣ್ಣಿನ ವ್ಯವಸ್ಥೆ ಮಾಡಲಾಗಿತ್ತು.

-ಭೀಮಣ್ಣ ಗಜಾಪುರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.