ಸುದ್ದಿ ಸಂಕ್ಷೇಪ
ಸಂಕ್ರಾಂತಿ: ಹುಲಿಗೆಮ್ಮ ದೇವಿ ದರ್ಶನ
ಮುನಿರಾಬಾದ್: ಮಕರ ಸಂಕ್ರಾಂತಿ ಪ್ರಯುಕ್ತ ಇಲ್ಲಿನ ಪ್ರಸಿದ್ಧ ಪುಣ್ಯಕ್ಷೇತ್ರವಾದ ಶ್ರೀ ಹುಲಿಗೆಮ್ಮ ದೇವಸ್ಥಾನದಲ್ಲಿ ಸುಮಾರು 30 ಸಾವಿರಕ್ಕೂ ಅಧಿಕ ಜನ ಭಕ್ತರು ಅಮ್ಮನ ದರ್ಶನ ಪಡೆದರು. ಬೆಳಗ್ಗೆಯಿಂದಲೇ ದೇವಸ್ಥಾನದತ್ತ ಭಕ್ತ ಸಮೂಹ ಹರಿದು ಬಂತು. ಕೊಪ್ಪಳ, ಹೊಸಪೇಟೆ, ಗದಗ, ಕೊಪ್ಪಳ, ರಾಯಚೂರು, ಹುಬ್ಬಳ್ಳಿ ಹಾಗೂ ಗಂಗಾವತಿಯಿಂದ ಭಕ್ತರು ರೈಲು ಹಾಗೂ ವಾಹನಗಳ ಮೂಲಕ ದೇವಸ್ಥಾನಕ್ಕೆ ಆಗಮಿಸಿ ಅಮ್ಮನ ದರ್ಶನ ಪಡೆದರು. ಐದು ಗಂಟೆ ವೇಳೆಗೆ ದೇವಸ್ಥಾನಕ್ಕೆ ಆಗಮಿಸಿದ ಭಕ್ತರ ಸಂಖ್ಯೆ 30 ಸಾವಿರ ದಾಟಿತೆಂದು ದೇವಸ್ಥಾನದ ಮೂಲಗಳು ತಿಳಿಸಿವೆ. ಅನೇಕ ಜನಾ ಭಕ್ತರು ದೇವಸ್ಥಾನದ ಸಮೀಪ ಹರಿಯುತ್ತಿರುವ ತುಂಗಾ ನದಿಯಲ್ಲಿ ಪವಿತ್ರ ಸ್ನಾನ ಮಾಡಿದರು. ತಾವು ತಂದ ಬುತ್ತಿ ಊಟ ಮಾಡಿದರು. ಹಬ್ಬದ ಪ್ರಯುಕ್ತ ದೇವಿಗೆ ಸುವರ್ಣ ಅಲಂಕಾರ ಮಾಡಲಾಗಿತ್ತು.
ರೋಗ: ರೈತರಿಗೆ ಸಲಹೆ
ಕೊಪ್ಪಳ: ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಇತ್ತೀಚೆಗೆ ನಡೆಸಿದ ಸಮೀಕ್ಷೆಯಲ್ಲಿ ಪಪ್ಪಾಯ ಬೆಳೆ ನಂಜಾಣು ರೋಗಕ್ಕೆ ತುತ್ತಾಗಿದ್ದು, ಕಂಡು ಬಂದಿದೆ. ತೋಟಗಾರಿಕಾ ಉಪನಿರ್ದೇಶಕರ ಕಚೇರಿ ಜಿಪಂ ಕೊಪ್ಪಳದಿಂದ ಕೆಲವು ಸಲಹೆಯನ್ನು ರೈತರಿಗೆ ನೀಡಿದೆ. ಚೆನ್ನಾಗಿ ನೀರು ಬಸಿದು ಹೋಗುವ ಜಮೀನಿನ ಆಯ್ಕೆ, ಕೀಟ ಹಾಗೂ ರೋಗರಹಿತ ತಳಿಗಳನ್ನು ನಾಟಿ ಮಾಡುವುದು. ಕುಂಬಳ ಜಾತಿಯ ಬೆಳೆಗಳು ಹತ್ತಿರದಲ್ಲಿರದಂತೆ ನೋಡಿಕೊಳ್ಳುವುದು, ಹಸಿರು ಮನೆಗಳಲ್ಲಿ ನೆಟ್ನ ಅಡಿಯಲ್ಲಿ ಬೆಳೆಸಿದ ಸಸಿಗಳನ್ನೆ ನಾಟಿ ಮಾಡಲು ಉಪಯೋಗಿಸುವುದು. ರೋಗಗ್ರಸ್ತ ಗಿಡಗಳನ್ನು ಬೇರು ಸಮೇತ ಕಿತ್ತು ಸುಟ್ಟು ಹಾಕುವುದು, ಶಾಖೆಗಳನ್ನು ಕತ್ತರಿಸಿ ಗಿಡಗಳು ನೇರವಾಗಿ ಬೆಳೆಯುವಂತೆ ನೋಡಿಕೊಳ್ಳುವುದು, ವಯಸ್ಸಾದ, ಒಣಗಿದ ರೋಗಗ್ರಸ್ತ ಗಿಡದ ಭಾಗ ನಾಶಪಡಿಸುವುದು, ವಿಕಾರಗೊಂಡ ಹಣ್ಣುಗಳನ್ನು ನಾಶಪಡಿಸುವುದು. ಇದರಿಂದ ರೋಗ ಹರಡುವುದನ್ನು ತಡೆಗಟ್ಟಬಹುದು. ರಸಹೀರುವ ಕೀಟಗಳಾದ ಕರಿಹೇನು, ಬಿಳಿ ನೊಣಗಳನ್ನು ಸಮಗ್ರ ಕೀಟ ನಿರ್ವಹಣಾ ಪದ್ಧತಿ ಅನುಸರಿಸಿ ನಿಯಂತ್ರಿಸುವುದು ಅವುಗಳಲ್ಲಿ ಹಳದಿ ಗ್ರೀಸ್ ಹಚ್ಚಿದ ಹಲಗೆಗಳು, ಅಂಟು ದ್ರಾವಣ ಹಚ್ಚಿದ ಹಳದಿ ಕಾರ್ಡ್ಗಳ ಬಳಕೆ ಇದರಿಂದಾಗಿ ಪ್ರೌಢ ಕೀಟಗಳನ್ನು ನಿಯಂತ್ರಿಸಬಹುದು, ಧೂಪ ಹಾಕುವುದು ಹಾಗೂ ದೀಪಾಕರ್ಷಣ ಬಲೆಗಳ ಅಳವಡಿಕೆಯಿಂದ ರಸಹೀರುವ ಹಾನಿಕಾರಕ ಕೀಟಗಳನ್ನು ನಿಯಂತ್ರಿಸಬಹುದು, ಸೂಕ್ಷ್ಮ ಪೋಷಕಾಂಶಗಳಾದ ಸತು ಮತ್ತು ಬೋರಾನ್ನನ್ನು 3-5 ಬಾರಿ ಸಿಂಪರಿಸುವುದರಿಂದ ಹೂವುಗಳ ಸಂಖ್ಯೆ ಹೆಚ್ಚಿ ಹಣ್ಣಿನ ವಿಕಾರತೆಗಳು ದೂರವಾಗುತ್ತವೆ ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಕಸಮುಕ್ತ ತೋಟ, ಸಾಮೂಹಿಕವಾಗಿ ಸಸ್ಯ ಸಂರಕ್ಷಣಾ ಕ್ರಮ ಕೈಗೊಳ್ಳುವುದು ರಾಸಾಯನಿಕಗಳಾದ ಡೈಮೆಥೋಯೆಟ್ 2 ಮಿಲಿ ಅಥವಾ ಫಾಸ್ಟಾಮೀಡಾನ್ 1 ಮಿಲೀ ಅಥವಾ ಮೆಟಾಸಿಸ್ಟಾಕ್ಸ್ 1 ಮಿಲೀ ಒಂದು ಲೀಟರ್ ನೀರಿನಲ್ಲಿ ಬೆರೆಸಿ ಸಿಂಪರಿಸಬೇಕು. ಈ ಎಲ್ಲ ಕ್ರಮಗಳನ್ನು ಅಳವಡಿಸುವುದರಿಂದ ಗುಣಮಟ್ಟದ, ರೋಗರಹಿತ ಹಣ್ಣು ಪಡೆಯಬಹುದು. ಆದ್ದರಿಂದ ಪಪ್ಪಾಯ ಬೆಳೆಗಾರರು ಕಡ್ಡಾಯವಾಗಿ ಈ ಅಂಶಗಳನ್ನು ಪಾಲಿಸಬೇಕೆಂದು ಅಧಿಕಾರಿಗಳು ಸಲಹೆ ನೀಡಿದ್ದಾರೆ. ಹೆಚ್ಚಿನ ಮಾಹಿತಿಗೆ ಆಯಾ ತಾಲೂಕು ಕಚೇರಿ, ಸಲಹಾ ಕೇಂದ್ರ ಕೊಪ್ಪಳ ಮೊ. 9482672039 ಅವರನ್ನು ಸಂಪರ್ಕಿಸಬಹುದು.
ಸಂಭ್ರಮದ ಉಜ್ಜಿನಿ ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವ
ಕಂಪ್ಲಿ: ಪಟ್ಟಣಕ್ಕೆ ಸಮೀಪದ ಬುಕ್ಕಸಾಗರದಲ್ಲಿ ಉಜ್ಜಿನಿ ಪೀಠದ ಸಿದ್ಧಲಿಂಗರಾಜ ದೇಶಿಕೇಂದ್ರ ಶಿವಾಚಾರ್ಯರ ಅಡ್ಡಪಲ್ಲಕ್ಕಿ ಉತ್ಸವ ಮತ್ತು ಬುಕ್ಕಸಾಗರದ ಕರಿಸಿದ್ಧೇಶ್ವರ ಸಂಸ್ಥಾನಮಠದ ಲಿಂ. ಕರಿಸಿದ್ಧೇಶ್ವರ ಶಿವಾಚಾರ್ಯರ ಭಾವಚಿತ್ರದ ಮೆರವಣಿಗೆ ಮಂಗಳವಾರ ಸಂಜೆ ಸಂಭ್ರಮದಿಂದ ಜರುಗಿತು.
ಗ್ರಾಮದ ಆಂಜನೇಯಸ್ವಾಮಿ ದೇವಸ್ಥಾನದಿಂದ ಆರಂಭವಾದ ಮಹೋತ್ಸವ ಹಾಗೂ ಭಾವಚಿತ್ರದ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸಂಸ್ಥಾನ ಮಠದ ಆವರಣದಲ್ಲಿ ಸಮಾವೇಶಗೊಂಡಿತು.
ಮೆರವಣಿಗೆಯಲ್ಲಿ ಸಂಸ್ಥಾನ ಮಠದ ಕರಿಸಿದ್ಧೇಶ್ವರ ವಿಶ್ವಾರಾಧ್ಯ ಶಿವಾಚಾರ್ಯರು, ಚಳಗೇರಿ ವಿರೂಪಾಕ್ಷಲಿಂಗ ಸ್ವಾಮೀಜಿ, ಎಮ್ಮಿಗನೂರು ವಾಮದೇವ ಮಹಾಂತ ಸ್ವಾಮೀಜಿ, ರೌಡಕುಂದ ಮರಿಸಿದ್ಧಲಿಂಗ ಸ್ವಾಮೀಜಿ, ಹೆಬ್ಬಾಳು ನಾಗಭೂಷಣ ಸ್ವಾಮೀಜಿ, ಹರಗಿನಡೋಣಿ ಅಭಿನವ ಸಿದ್ಧಲಿಂಗ ಸ್ವಾಮೀಜಿ, ಕುರುಗೋಡು ರಾಘವಾಂಕ ಸ್ವಾಮೀಜಿ, ರಾಂಪುರ ವಿಶ್ವೇಶ್ವರ ಹಾಲ ಸ್ವಾಮೀಜಿ, ಶಿರಕೋಳ ಗುರುಸಿದ್ದೇಶ್ವರ ಶಿವಾಚಾರ್ಯರು, ರಾಮಘಟ್ಲ ರೇವಣಸಿದ್ಧ ಶಿವಾಚಾರ್ಯರು, ಸುಳ್ಯ ಮಹಾಂತ ಶಿವಾಚಾರ್ಯ ಸ್ವಾಮೀಜಿ, ಬೆಣ್ಣೆಹಳ್ಳಿ ಪಂಚಾಕ್ಷರಿ ಸ್ವಾಮೀಜಿ, ಗುಡುದೂರು ನೀಲಕಂಠಯ್ಯ ತಾತ, ಹಗರಿಬೊಮ್ಮನಹಳ್ಳಿ ಹಾಲಶಂಕರ ಸ್ವಾಮೀಜಿ, ನಂದೀಪುರದ ಮಹೇಶ್ವರ ಸ್ವಾಮೀಜಿ, ಹೆಬ್ಬಾಳು ಶಿವಪ್ರಕಾಶ ಶರಣರು, ಹಂಚಿನಾಳ ಕ್ಯಾಂಪ್ ವೇ. ಶಿವಲಿಂಗಯ್ಯ ತಾತನವರು, ಕಂಪ್ಲಿ ಸಾಂಗತ್ರಯ ಸಂಸ್ಕೃತ ಪಾಠ ಶಾಲೆ ಪ್ರಾಚಾರ್ಯ ಎಂ.ಎಸ್. ಶಶಿಧರಶಾಸ್ತ್ರಿಗಳು, ಸಿಡೇನೂರು ನೀಲಕಂಠಶಾಸ್ತ್ರಿಗಳು, ನಂದಿಕೋಲು, ತಾಷಾರಾಂಡೋಲ್, ಡೊಳ್ಳು, ಮಂಗಳವಾದ್ಯ, ಬುಕ್ಕಸಾಗರ, ವಿವಿಧ ಊರುಗಳ ಭಕ್ತರು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

