ಬಳ್ಳಾರಿ

ಕಾಮಗಾರಿ ವಾಸ್ತವ ಸ್ಥಿತಿ ಅರಿಯಲಿ

Published On :

ಬಳ್ಳಾರಿ: ಬಹುಕೋಟಿ ವೆಚ್ಚದ ಕುಡಿಯುವ ನೀರಿನ ಯೋಜನೆಯ ಪೈಪ್‌ಲೈನ್ ಕಾಮಗಾರಿ ಅಧಿಕಾರಿಗಳ ನಿರ್ಲಕ್ಷದಿಂದಾಗಿ ಕುಂಠಿತಗೊಂಡಿದ್ದು, ಜಿಲ್ಲಾ ಉಸ್ತುವಾರಿ ಸಚಿವರು ಕೂಡಲೆ ಕಾಮಗಾರಿಯ ಜಾಕ್‌ವಾಲ್ವ್ ಹಾಗೂ ಸಂಗನಕಲ್ಲು ಗ್ರಾಮದ ನೀರು ಶುದ್ಧೀಕರಣ ಘಟಕಕ್ಕೆ ಭೇಟಿ ನೀಡಿ ವಾಸ್ತವ ಸ್ಥಿತಿ ಅರಿಯಬೇಕೆಂದು ವಿಧಾನಪರಿಷತ್ ಸದಸ್ಯ ಮೃತ್ಯುಂಜಯ ಜಿನಗಾ ಆಗ್ರಹಿಸಿದ್ದಾರೆ.
ತಾಲೂಕಿನ ಮೋಕಾ ಪೈಪ್‌ಲೈನ್ ಕಾಮಗಾರಿ ಮತ್ತು ನೀರೆತ್ತುವ ಯಂತ್ರಗಳನ್ನು ವೀಕ್ಷಿಸಿ, ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಳ್ಳಾರಿ ನಗರಕ್ಕೆ ಕುಡಿವ ನೀರು ಪೂರೈಕೆ ಮಾಡುವ ಅಲ್ಲೀಪುರ ಕೆರೆ ಕುಸಿದು ಸಮರ್ಪಕವಾಗಿ ದುರಸ್ತಿಯಾಗದೆ ಅಲ್ಪ ಪ್ರಮಾಣದಲ್ಲಿ ನೀರು ಸಂಗ್ರಹವಾಗಿತ್ತು. ಈ ಬಗ್ಗೆ ತಾವು ವಿಧಾನಮಂಡಲ ಅಧಿವೇಶನದಲ್ಲಿ ಪ್ರಸ್ತಾಪಿಸಿ ಸರ್ಕಾರದ ಗಮನ ಸೆಳೆದಿದ್ದೆವು. ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಅವರು ಜ. 26ರ ಒಳಗೆ ಪೂರ್ಣಗೊಳಿಸುವುದಾಗಿ ತಿಳಿಸಿದ್ದರಿಂದ ಇಂದು ತಾವು ಭೇಟಿ ನೀಡಿ ಕಾಮಗಾರಿ ಪರಿಶೀಲನೆ ನಡೆಸಿರುವುದಾಗಿ ತಿಳಿಸಿದರು.
ಅನುಮಾನಕ್ಕೆಡೆ: ಬಿಜೆಪಿ ಸರ್ಕಾರ ಈ ಕಾಮಗಾರಿಯನ್ನು ಕೈಗೆತ್ತಿಕೊಂಡಿತ್ತು. ರು. 114 ಕೋಟಿ ವೆಚ್ಚದ ಈ ಕಾಮಗಾರಿ ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವ ಸಿದ್ಧತೆಯೂ ನಡೆದಿತ್ತು. ಇದೀಗ ಕಾಮಗಾರಿ ಕುರಿತ ಅಧಿಕಾರಿಗಳ ಹಾಗೂ ಗುತ್ತಿಗೆದಾರರ ಹೇಳಿಕೆಗಳು ಅನುಮಾನಕ್ಕೆಡೆ ಮಾಡಿಕೊಡುತ್ತಿವೆ. ಜಾಕ್‌ವಾಲ್ವ್‌ನಿಂದ ಸಂಗನಕಲ್ಲು ಗ್ರಾಮದವರೆಗೆ 1200 ಎಂಎಂ ವ್ಯಾಸದ ಪೈಪ್‌ಲೈನ್ ಕಾಮಗಾರಿ ಮುಗಿದಿದ್ದು, ತಾತ್ಕಾಲಿಕವಾಗಿ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಕೋಲ್ಕತ್ತಾದ 3 ವಿಟಿ ಪಂಪ್ ಮೋಟಾರ್‌ಗಳನ್ನು ಅಳವಡಿಸಿ 20 ಎಂಎಲ್‌ಡಿ ಪ್ರಮಾಣದಲ್ಲಿ ನಾರಾಯಣ ಪಾರ್ಕ್‌ವರೆಗೆ ನೀರು ಪೂರೈಸಲಾಗುತ್ತಿದೆ ಎಂದು  ಅಧಿಕಾರಿಗಳು ಹೇಳುತ್ತಿದ್ದಾರೆ.
ಹೋರಾಟ ಅನಿವಾರ್ಯ: ಬಂಡ್ ಕೆಲಸ ಮುಗಿದ ಬಳಿಕ 45 ದಿನಗಳವರೆಗೆ ಎಚ್‌ಎಲ್‌ಸಿಯಿಂದ ಅಲ್ಲಿಪುರ ಕೆರೆಗೆ ನೀರು ಸಂಗ್ರಹಿಸಲಾಗುತ್ತದೆ. ಬಳಿಕ ಏಪ್ರಿಲ್‌ನಲ್ಲಿ ಕೆರೆಯಿಂದ ನಗರಕ್ಕೆ ನೀರು ಪೂರೈಸುವುದಾಗಿ ಅಧಿಕಾರಿಗಳು ಹೇಳುತ್ತಾರೆ.
ಇದೀಗ ಪೂರೈಕೆಯಾಗುತ್ತಿರುವ ನೀರು ಸರಬರಾಜು ತಾತ್ಕಾಲಿಕ ಕಾರ್ಯ 45 ದಿನದೊಳಗೆ ಸರಿಪಡಿಸಬೇಕು. ಇಲ್ಲದೆ ಹೋದರೆ ಹೋರಾಟ ಮಾಡಲು ಹಿಂಜರಿಯುವುದಿಲ್ಲ ಎಂದು ಎಚ್ಚರಿಸಿದರು. ಎಲ್‌ಎಲ್ ಕಾಲುವೆಯಿಂದ ನೇರವಾಗಿ ನೀರು ಸಂಗ್ರಹಿಸುವ ಕಾಮಗಾರಿ ವೀಕ್ಷಿಸಿದ ಜಿನಗಾ, ಬಂಡ್ ಕೆಲಸವನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಸಕಾಲಕ್ಕೆ ಜನರಿಗೆ ನೀರು ತಲುಪಿಸುವುದು ಮಹಾನಗರ ಪಾಲಿಕೆ ಮತ್ತು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕರ್ತವ್ಯ. 4-5 ದಿನಗಳಲ್ಲಿ ನೀರು ಪೂರೈಕೆಗೆ ಸಂಬಂಧಿಸಿದ ಸಮಸ್ಯೆ ಇತ್ಯರ್ಥವಾಗದೆ ಹೋದರೆ ಬೃಹತ್ ಪ್ರತಿಭಟನೆ ಮಾಡುವುದಾಗಿ ಹೇಳಿದರು. ಮಹಾನಗರ ಪಾಲಿಕೆ ಮಾಜಿ ಮೇಯರ್ ಇಬ್ರಾಹಿಂ ಬಾಬು, ಜಿಪಂ ಸದಸ್ಯ ಗೋನಾಳ್ ರಾಜಶೇಖರಗೌಡ, ಬಿಎಸ್ಸಾರ್ ಮುಖಂಡ ಶ್ರೀಧರಗಡ್ಡೆ ಎರ್ರಿಸ್ವಾಮಿ, ಮೋಕಾ ಗ್ರಾಪಂ ಅಧ್ಯಕ್ಷ ಶ್ರೀನಿವಾಸ್, ಪಾಲಿಕೆ ಎಇ ಖಾಜಾ ಮೊಯಿನುದ್ದೀನ್, ಕೆಯುಐಡಿಎಫ್‌ಸಿ ಅಭಿಯಂತರ ಮಧುಸೂದನ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.