ಅನುದಾನ ಬಳಕೆಗೆ ಜೈಲು ಅಡ್ಡಿ
ಶಶಿಧರ ಮೇಟಿ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಜು.12
ಬೇಲೆಕೇರಿ ಅದಿರು ನಾಪತ್ತೆ ಪ್ರಕರಣದ ಅಡಿ ಜೈಲಿಗೆ ಹೋಗಿರುವ ಶಾಸಕರ ಅನುದಾನ ಬಳಕೆಯ ಬಗ್ಗೆ ಕೇಳುವಂತಿಲ್ಲ, ಹೇಳುವಂತಿಲ್ಲ.
ಕಂಪ್ಲಿ ಕ್ಷೇತ್ರದ ಶಾಸಕ ಟಿ.ಎಚ್. ಸುರೇಶ್ ಬಾಬು ನಯಾ ಪೈಸೆ ಅನುದಾನ ಬಳಕೆ ಮಾಡಿಲ್ಲ. ಜೈಲಿಗೆ ಹೋಗುವ ಪೂರ್ವದಲ್ಲಿ ವಿಜಯನಗರ ಕ್ಷೇತ್ರದ ಶಾಸಕ ಆನಂದ ಸಿಂಗ್ ರು. 20.78 ಲಕ್ಷ ಕ್ರಿಯಾಯೋಜನೆ ನೀಡಿ, ರು. 15 ಲಕ್ಷ ಖರ್ಚು ಮಾಡಿದ್ದರೆ, ಕೂಡ್ಲಿಗಿ ಶಾಸಕ ಬಿ. ನಾಗೇಂದ್ರ ರು. 40 ಲಕ್ಷ ಕ್ರಿಯಾ ಯೋಜನೆ ಸಲ್ಲಿಸಿ ರು. 15 ಲಕ್ಷ ಖರ್ಚು ಮಾಡಿದ್ದಾರೆ. ಜೈಲಿಗೆ ಹೋದಾಗಿನಿಂದಲೂ ಅವರ ಅನುದಾನ ಬಳಕೆಯೇ ಆಗಿಲ್ಲ. ಈಗ ಅನುದಾನ ಬಳಕೆಗೆ ಸಿಬಿಐ ಅಸ್ತು ಎಂದಿದೆ. ಅನುದಾನ ಬಳಕೆಗೆ ಶಾಸಕರು ಉತ್ಸುಕತೆ ತೋರಬೇಕಾಗಿದೆ.
ಬಳ್ಳಾರಿ ಜಿಲ್ಲೆಯಲ್ಲಿ 9 ವಿಧಾನಸಭೆ ಕ್ಷೇತ್ರಗಳಿದ್ದು, ಕಂಪ್ಲಿ ಕ್ಷೇತ್ರದ ಟಿ.ಎಚ್. ಸುರೇಶ್ಬಾಬು, ವಿಜಯನಗರ ಕ್ಷೇತ್ರದ ಬಿ.ಎಸ್. ಆನಂದಸಿಂಗ್ ಹಾಗೂ ಕೂಡ್ಲಿಗಿ ಕ್ಷೇತ್ರದ ಶಾಸಕ ಬಿ. ನಾಗೇಂದ್ರ ಬೆಲೆಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಆರೋಪಿಗಳಾಗಿ ಜೈಲು ಸೇರಿದ್ದರಿಂದ ಈ ಮೂರು ಕ್ಷೇತ್ರಗಳ ಶಾಸಕರು ಅನುದಾನ ಬಳಕೆಯಲ್ಲಿ ತೀರಾ ಹಿಂದುಳಿದಿದ್ದಾರೆ. ಇವರಿಗೂ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ ಅಡಿಯಲ್ಲಿ ರು. 2 ಕೋಟಿ ಅನುದಾನ ಬಂದಿದೆ. ಬಳಕೆ ಮಾತ್ರ ಅಷ್ಟಕ್ಕಷ್ಟೇ ಎನ್ನುವಂತಾಗಿದೆ.
ನಯಾ ಪೈಸೆ ಬಳಕೆ ಇಲ್ಲ: ಶಾಸಕರಾದ ಕೆಲವೇ ದಿನಗಳಲ್ಲಿ ಕಂಪ್ಲಿ ಕ್ಷೇತ್ರದ ಶಾಸಕ ಟಿ.ಎಸ್. ಸುರೇಶ್ಬಾಬು ಜೈಲಿಗೆ ಹೋಗಿರುವುದರಿಂದ ಅನುದಾನ ಬಳಕೆ ಸಾಧ್ಯವಾಗಿಲ್ಲ. ಆದರೆ ಜೈಲಿಗೆ ಹೋಗುವ ಪೂರ್ವದಲ್ಲೇ ಬಿ. ನಾಗೇಂದ್ರ ಹಾಗೂ ಬಿ.ಎಸ್. ಆನಂದ್ಸಿಂಗ್ ಒಂದಿಷ್ಟು ಅನುದಾನ ಬಳಕೆ ಮಾಡಲು ಮುಂದಾಗಿದ್ದಾರೆ. ಆದರೆ ಕಂಪ್ಲಿ ಶಾಸಕರು ತಮ್ಮ ಅನುದಾನಕ್ಕೆ ಕ್ರಿಯಾ ಯೋಜನೆಯನ್ನೇ ಸಲ್ಲಿಸಿಲ್ಲ. ಶಾಸಕರಿದ್ದಾರೆ, ಅನುದಾನವೂ ಇದೆ. ಬಳಕೆ ಮಾತ್ರ ಆಗುತ್ತಿಲ್ಲ ಎಂಬ ಕೊರಗು ಕಂಪ್ಲಿ ಕ್ಷೇತ್ರದ ಜನರದ್ದಾಗಿದೆ. ಅನುದಾನ ಬಳಕೆಗೆ ಸಿಬಿಐ ಈಗ ಸಮ್ಮತಿ ನೀಡಿದ್ದರಿಂದ ಈಗಲಾದರೂ ಅನುದಾನ ಬಳಕೆಗೆ ಕ್ರಿಯಾ ಯೋಜನೆಯನ್ನು ಶಾಸಕರು ಸಲ್ಲಿಸುತ್ತಾರೋ ಎಂದು ಕಾದುನೋಡಬೇಕಾಗಿದೆ.
ರು. 15 ಲಕ್ಷ ಬಳಕೆ: ವಿಜಯನಗರ ಕ್ಷೇತ್ರದ ಶಾಸಕ ಬಿ.ಎಸ್. ಆನಂದಸಿಂಗ್ ಜೈಲಿಗೆ ಹೋಗುವ ಮುನ್ನ ರು. 20.78 ಲಕ್ಷದ ಕ್ರಿಯಾ ಯೋಜನೆ ಸಲ್ಲಿಸಿದ್ದಾರೆ. ಅದರಲ್ಲಿ ರು. 15.59 ಲಕ್ಷ ಮಾತ್ರ ಬಳಕೆ ಮಾಡಿಕೊಂಡಿದ್ದು, 6 ಕಾಮಗಾರಿಗಳಲ್ಲಿ ಪ್ರಗತಿಯಲ್ಲಿವೆ. ಸೆ. 17ರಂದು ಕೊನೆಯದಾಗಿ ಕ್ರಿಯಾ ಯೋಜನೆ ಸಲ್ಲಿಸಿದ್ದಾರೆ. ಆಮೇಲೆ ಜೈಲಿಗೆ ಹೋಗಿದ್ದರಿಂದ ಅನುದಾನ ಬಳಕೆಯಲ್ಲಿ ಹಿಂದುಳಿದಿದ್ದಾರೆ. ಕ್ರಿಯಾ ಯೋಜನೆ ಸಲ್ಲಿಸಿರುವ ಕಾಮಗಾರಿಯಲ್ಲಿ ರಸ್ತೆ ಅಭಿವೃದ್ಧಿಗೆ ಆದ್ಯತೆ ನೀಡಿದ್ದಾರೆ. ಈಗಲಾದರೂ, ಕ್ಷೇತ್ರದ ಬಗ್ಗೆ ಶಾಸಕರು ಆಲೋಚಿಸಿ, ಜೈಲಿನಲ್ಲೇ ಕುಳಿತು ಕ್ರಿಯಾ ಯೋಜನೆ ತಯಾರಿಸಿ, ಜಿಲ್ಲಾಧಿಕಾರಿಗಳಿಗೆ ಸಲ್ಲಿಸುವರೆಂದು ಜನತೆ ನಿರೀಕ್ಷಿಸಿದ್ದಾರೆ.
ಅನುದಾನ ಬಳಕೆಯಲ್ಲೂ ಹಿಂದೆ: ಕೂಡ್ಲಿಗಿ ಕ್ಷೇತ್ರದ ಶಾಸಕ ಬಿ. ನಾಗೇಂದ್ರ ನ. 7, 2013ರ ಪೂರ್ವದಲ್ಲಿ 3 ಕಾಮಗಾರಿಗೆ ರು. 40 ಲಕ್ಷ ಕ್ರಿಯಾ ಯೋಜನೆ ಸಲ್ಲಿಸಿದ್ದಾರೆ. ಅದರಲ್ಲಿ ರು. 15 ಲಕ್ಷ ಮಾತ್ರ ವೆಚ್ಚ ಮಾಡಲಾಗಿದೆ. ಮೂರು ಕಾಮಗಾರಿಗಳಿಗೆ ಕ್ರಿಯಾ ಯೋಜನೆ ಸಲ್ಲಿಸಿದ್ದು, ಎರಡು ಕಾಮಗಾರಿಗಳು ಪ್ರಗತಿಯಲ್ಲಿವೆ. ಇನ್ನೊಂದು ಕಾಮಗಾರಿಗೆ ಅನುಷ್ಠಾನಾಧಿಕಾರಿಗಳು ಎಸ್ಟಿಮೇಟ್ ನೀಡಿಲ್ಲ. ಇನ್ನುಳಿದ ರು. 160 ಲಕ್ಷ ಅನುದಾನ ಬಳಕೆ ಮಾಡಿಕೊಳ್ಳಬೇಕಾಗಿದೆ. ಜೈಲಿನಲ್ಲಿರುವ ಶಾಸಕ ಬಿ. ನಾಗೇಂದ್ರ ಕ್ರಿಯಾಯೋಜನೆ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಸಿಬಿಐಗೆ ಪತ್ರ ಬರೆದ ಹಿನ್ನೆಲೆಯಲ್ಲಿ ಅನುದಾನ ಬಳಕೆಗೆ ಸಿಬಿಐ ಅಸ್ತು ನೀಡಿದ್ದಾರೆ.
ಅನುದಾನ ಬಳಕೆಗೆ ಮುಂದಾಗಲಿ: ಶಾಸಕರು ಜೈಲಿಗೆ ಹೋಗಿರುವುದರಿಂದ ಅವರ ಅನುಪಸ್ಥಿತಿಯಲ್ಲಿ ಕ್ಷೇತ್ರಗಳು ಅನಾಥವಾಗುತ್ತಿವೆ. ಅನುದಾನ ಬಳಕೆಗೆ ಈಗ ಅವಕಾಶ ಸಿಕ್ಕಿದ್ದರಿಂದ ಪ್ರತಿ ವರ್ಷದ ರು. 2 ಕೋಟಿ ಅನುದಾನವನ್ನು ಸಮರ್ಥವಾಗಿ ಬಳಸಿಕೊಳ್ಳುವ ಮೂಲಕ ಜೈಲಿನಲ್ಲಿಯೇ ಇದ್ದು ಕ್ಷೇತ್ರವನ್ನು ಅಭಿವೃದ್ಧಿಪಡಿಸಲು ಮುಂದಾಗಬೇಕಾಗಿದೆ. ಈ ಮೂಲಕವಾದರೂ ಕ್ಷೇತ್ರದ ಜನ ಶಾಸಕರನ್ನು ನೆನೆಸಿಕೊಳ್ಳುವಂತಾಗಲಿ. ಕೂಡಲೇ ಶಾಸಕರು ಕ್ರಿಯಾ ಯೋಜನೆ ಸಲ್ಲಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

