ಲೋಕಾಯುಕ್ತ ವರದಿ ತಲೆ ಮೇಲಿಟ್ಟು ಬೆಂಗಳೂರಿಗೆ ಪಾದಯಾತ್ರೆ: ಗಣೇಶ್
ಬಳ್ಳಾರಿ: ಅಂತಾರಾಜ್ಯ ಗಡಿ ಸರ್ವೆಯನ್ನು ಸರ್ವೆ ಆಫ್ ಇಂಡಿಯಾದವರು ಮಾಡುತ್ತಾರೆ. ಆದರೆ ಗಡಿಗೆ ಹೊಂದಿಕೊಂಡಿರುವ ಕೆಲವೊಂದು ಗಣಿ ಕಂಪನಿಗಳು ಮಾಡಿರುವ ಅಕ್ರಮ ಗಣಿಗಾರಿಕೆ ಕುರಿತು ಲೋಕಾಯುಕ್ತ 2ನೇ ವರದಿಯಲ್ಲಿ ಉಲ್ಲೇಖಿಸಲಾಗಿದ್ದು, ಶೀಘ್ರ ತನಿಖೆ ನಡೆಸಬೇಕು. ಇಲ್ಲದಿದ್ದರೆ ಬಳ್ಳಾರಿಯಿಂದ ಬೆಂಗಳೂರುವರೆಗೆ ಲೋಕಾಯುಕ್ತ ವರದಿ ತಲೆಮೇಲೆ ಇಟ್ಟುಕೊಂಡು ಪಾದಯಾತ್ರೆ ನಡೆಸುವುದಾಗಿ ಗಣಿ ಉದ್ಯಮಿ ಟಪಾಲ್ ಗಣೇಶ್ ಹೇಳಿದ್ದಾರೆ.
ಗುರುವಾರ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಉದ್ದೇಶದಿಂದ ಮಾತ್ರವೇ ಗಣಿಗಾರಿಕೆ ವಿರುದ್ಧ ಹೋರಾಟ ಮಾಡಿದರು, ಬೆಂಗಳೂರಿನಿಂದ ಬಳ್ಳಾರಿ ವರೆಗೆ ಪಾದಯಾತ್ರೆ ಮಾಡಿದರು. ಉಗ್ರಪ್ಪ ನೇತೃತ್ವದ ಸತ್ಯಶೋಧನಾ ಸಮಿತಿ ಬಂದು ವರದಿ ತಯಾರಿಸಿತು, ಇದೆಲ್ಲದರ ಫಲವಾಗಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಕಾರಣವಾಯಿತು. ಆದರೆ ಈಗ ಕಾಂಗ್ರೆಸ್ ಅಕ್ರಮ ಗಣಿಗಾರಿಕೆ ವಿರುದ್ಧ ತನಿಖೆ ಮಾಡದಿರುವುದನ್ನು ನೋಡಿದರೆ, ಅವರ ಹೋರಾಟ ನೈಜವಲ್ಲ ಎಂದು ಕಾಣುತ್ತಿಲ್ಲ ಎಂದು ಹೇಳಿದರು. ಲೋಕಾಯುಕ್ತ ವರದಿ ಆಧಾರದ ಮೇಲೆ, ಕೆಲವೊಂದು ಎಂಬಿಟಿ, ಎಚ್ಟಿ, ಎನ್ಆರ್ ಕಂಪನಿಗಳು ಕೂಡಿಕೊಂಡು ಅಕ್ರಮ ಗಣಿಗಾರಿಕೆ ಮಾಡಿವೆ ಎಂದು ಹೇಳಿದರೂ, ಈ ವರೆಗೆ ತನಿಖೆಗೆ ರಾಜ್ಯ ಸರ್ಕಾರ ಮುಂದಾಗುತ್ತಿಲ್ಲ. ಈ ಕಂಪನಿಗಳು ಕಾಂಗ್ರೆಸ್ ಪ್ರಭಾವಿ ಮುಖಂಡರಿಗೆ ಸೇರಿರುವುದರಿಂದ ಕಾಂಗ್ರೆಸ್ ಸರ್ಕಾರದ ಮೇಲೆ ಒತ್ತಡ ತಂದಿದ್ದಾರೆ ಎಂಬ ಅನುಮಾನವಿದೆ. ಲೋಕಾಯುಕ್ತ ವರದಿ ಪ್ರಕಾರವಾಗಿಯೇ ರಾಜ್ಯ ಸರ್ಕಾರ ತನಿಖೆಗೆ ಮುಂದಾಗಬೇಕು, ಗಡಿ ಗುರುತು ಸರ್ವೆ ಮಾಡುವುದು ಸರ್ವೆ ಆಫ್ ಇಂಡಿಯಾದ ಕೆಲಸವೇ ಹೊರತು, ಅಕ್ರಮ ತನಿಖೆ ಮಾಡುವ ಕೆಲಸ ಅವರದಲ್ಲ. ಸರ್ಕಾರವೇ ತನಿಖೆ ಮಾಡಬೇಕೆಂದು ಆಗ್ರಹಿಸಿದರು. ರಾಜ್ಯ ಸರ್ಕಾರ ತನಿಖೆಗೆ ಎಸ್ಐಟಿಯನ್ನು ನೇಮಕ ಮಾಡಿದ್ದು, ಬಳ್ಳಾರಿಯಲ್ಲಿ ಎಸ್ಐಟಿ ಕಚೇರಿ ಇದ್ದರೂ, ಒಬ್ಬ ಅಧಿಕಾರಿ ಅಲ್ಲಿಲ್ಲ. ಕೂಡಲೇ ಗಡಿಭಾಗದಲ್ಲಿರುವ ಕೆಲವೊಂದು ಕಂಪನಿಗಳು ನಡೆಸಿರುವ ಅಕ್ರಮದ ಬಗ್ಗೆ ತನಿಖೆ ಶೀಘ್ರವೇ ಕೈಗೊಳ್ಳಬೇಕು, ಇಲ್ಲದಿದ್ದರೆ ಅಂದು ಕಾಂಗ್ರೆಸ್ನವರು ಬೆಂಗಳೂರಿನಿಂದ ಬಳ್ಳಾರಿ ವರೆಗೆ ಪಾದಯಾತ್ರೆ ನಡೆಸಿದಂತೆ, ತಲೆ ಮೇಲೆ ಲೋಕಾಯುಕ್ತ ವರದಿಯನ್ನಿಟ್ಟುಕೊಂಡು ಬಳ್ಳಾರಿಯಿಂದ ಬೆಂಗಳೂರು ವರೆಗೆ ಸೆಪ್ಟೆಂಬರ್ ಬಳಿಕ ಪಾದಯಾತ್ರೆ ಮಾಡಲಾಗುತ್ತದೆ ಎಂದು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

