ನಕಲಿ ಬೀಜ ಮಾರಾಟ ತಡೆಗೆ ಕ್ರಮವಹಿಸಿ: ಅಧಿಕಾರಿಗಳಿಗೆ ಸೂಚನೆ
ಕನ್ನಡಪ್ರಭ ವಾರ್ತೆ, ಹಗರಿಬೊಮ್ಮನಹಳ್ಳಿ, ಜೂ. 6
ನಕಲಿ ಬಿತ್ತನೆ ಬೀಜ, ರಸಗೊಬ್ಬರ ಮಾರಾಟ ತಡೆಗೆ ತೀವ್ರ ನಿಗಾ ವಹಿಸಬೇಕು. ಗ್ರಾಮಗಳಲ್ಲಿ ಸಾವಯವ ಗೊಬ್ಬರದ ಹೆಸರಿನಲ್ಲಿ ನಕಲಿ ಸಾವಯವ ಗೊಬ್ಬರ ಮಾರಾಟ ಮಾಡುತ್ತಿರುವ ಬಗ್ಗೆ ರೈತರಿಂದ ಸಾಕಷ್ಟು ದೂರುಗಳು ಬಂದಿವೆ. ಈ ಕುರಿತಂತೆ ಈ ಕ್ಷಣದಿಂದಲೇ ಇಲಾಖೆ ವತಿಯಿಂದ ಹಳ್ಳಿಗಳಲ್ಲಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಕೃಷಿಕ ಸಮಾಜದ ಹಗರಿಬೊಮ್ಮನಹಳ್ಳಿ ತಾಲೂಕಾಧ್ಯಕ್ಷ ಕೆ.ಪಿ. ದೇವರಾಜ ಹನಸಿ ಕೃಷಿ ಇಲಾಖೆ ಅಧಿಕಾರಿಗಳಿಗಳಿಗೆ ಸೂಚಿಸಿದ್ದಾರೆ.
ಶುಕ್ರವಾರ ತಮ್ಮ ಅಧ್ಯಕ್ಷತೆಯಲ್ಲಿ ಹಗರಿಬೊಮ್ಮನಹಳ್ಳಿ ಪಟ್ಟಣದ ಕೃಷಿ ಇಲಾಖೆ ಕಚೇರಿ ಸಭಾಂಗಣದಲ್ಲಿ ಜರುಗಿದ ತಾಲೂಕು ಕೃಷಿಕ ಸಮಾಜದ ಸಭೆಯನ್ನುದ್ದೇಶಿಸಿ ಮಾತನಾಡಿದರು. ಬಿತ್ತನೆ ಕಾರ್ಯ ಆರಂಭವಾಗುತ್ತಿದ್ದಂತೆ ನಕಲಿ ಬೀಜ, ಗೊಬ್ಬರದ ಹಾವಳಿ ಶುರುವಾಗುತ್ತದೆ. ಮುಖ್ಯವಾಗಿ ಹಳ್ಳಿಗಾಡಿನ ರೈತರೆ ಈ ವಂಚನೆಗೆ ಬಲಿಯಾಗುತ್ತಿದ್ದಾರೆ. ಆದ್ದರಿಂದ ಆರಂಭದಿಂದಲೇ ಇಲಾಖೆ ಎಚ್ಚರ ವಹಿಸಿದರೆ ಈ ನಕಲಿ ಮಾರಾಟ ತಡೆಯಲು ಸಾಧ್ಯವಿದೆ. ಆ ನಿಟ್ಟಿನಲ್ಲಿ ಕಾರ್ಯಾಪ್ರವೃತ್ತರಾಗಬೇಕೆಂದರು.
ಮಾರಾಟದ ಮೇಲೆ ನಿಗಾ: ರೈತರು ಕಡಿಮೆ ಬೆಲೆ ಆಸೆಗೆ ಸಿಕ್ಕ, ಸಿಕ್ಕ ಬಿತ್ತನೆ ಬೀಜ, ರಸಗೊಬ್ಬರ ಖರೀದಿಸಬಾರದು. ಖರೀದಿಸಿದ್ದಕ್ಕೆ ಅಧಿಕೃತ ರಸೀದಿ ಪಡೆದು ಅದನ್ನು ಜೋಪಾನವಾಗಿಟ್ಟುಕೊಂಡಿರಬೇಕು. ಒಂದು ವೇಳೆ ಬೀಜ ಹುಟ್ಟದಿದ್ದರೆ ಅಂತಹ ಬೀಜದ ಕಂಪನಿಯ ಮೇಲೆ ಪ್ರಕರಣ ದಾಖಲಿಸಲು ಸಾಧ್ಯವಾಗುತ್ತದೆ. ತಾಲೂಕಿನಲ್ಲಿ ನಕಲಿ ಬೀಜ, ಗೊಬ್ಬರ ಮಾರಾಟದ ಕುರಿತಂತೆ ತಾವು ಈಗಾಗಲೇ ನಿಗಾ ವಹಿಸಿದ್ದೇವೆ ಎಂದು ಪ್ರಭಾರಿ ಸಹಾಯಕ ಕೃಷಿ ನಿರ್ದೇಶಕ ನಾಗರಾಜ ಸಭೆಗೆ ಉತ್ತರಿಸಿದರು.
ಎಂಆರ್ಪಿ ಬೆಲೆ: ಬಿತ್ತನೆ ಬೀಜ, ಗೊಬ್ಬರವನ್ನು ಎಂಆರ್ಪಿ ಬೆಲೆಗೆ ಮಾರಾಟ ಮಾಡಬೇಕು. ಕೆಲ ಅಂಗಡಿಗಳಲ್ಲಿ ಮೂಲ ಬೆಲೆಗಿಂತಲೂ ಹೆಚ್ಚಿನ ಬೆಲೆಗೆ ಗೊಬ್ಬರ ಮಾರಾಟ ಮಾಡುತ್ತಿರುವ ದೂರುಗಳು ಬಂದಿವೆ ಎಂದು ಸದಸ್ಯ ವೈ. ಮಲ್ಲಿಕಾರ್ಜುನ ಸಭೆ ಗಮನಕ್ಕೆ ತಂದರು.
ಎಂಆರ್ಪಿ ಬೆಲೆಗೆ ಮಾರಾಟ ಮಾಡುವಂತೆ ಕೂಡಲೆ ಎಲ್ಲ ಅಂಗಡಿಗಳಿಗೆ ಈ ಸಂಬಂಧವಾಗಿ ತಿಳಿವಳಿಕೆ ನೊಟೀಸ್ ಜಾರಿ ಮಾಡುವಂತೆ ಕೃಷಿ ಅಧಿಕಾರಿಗೆ ಸೂಚಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

