ಬಳ್ಳಾರಿ

ತರಕಾರಿ ವಾಣಿಜ್ಯ ಮಳಿಗೆಗಳ ಹರಾಜು

Published On :

ಸಿರುಗುಪ್ಪ: ಸಿರುಗುಪ್ಪ ಪುರಸಭೆಯ ತರಕಾರಿ ಮಾರುಕಟ್ಟೆಯಲ್ಲಿ 2010-11ನೇ ಸಾಲಿನ ಮುಖ್ಯಮಂತ್ರಿಗಳ ಸಣ್ಣ ಮತ್ತು ಮದ್ಯಮ ಪಟ್ಟಣಗಳ ಅಭಿವೃದ್ಧಿ ಯೋಜನೆಯಲ್ಲಿ ರು. 50 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ 15 ವಾಣಿಜ್ಯ ಮಳಿಗೆಗಳ ಬಹಿರಂಗ ಹರಾಜು ಪ್ರಕ್ರಿಯೆಯು ಶುಕ್ರವಾರ ಸಾರ್ವಜನಿಕರ ಹಾಗೂ ಆಡಳಿತರೂಢ ಸದಸ್ಯರ ತೀವ್ರ ವಿರೋಧದ ನಡುವೆ ಸಿರುಗುಪ್ಪ ಪುರಸಭೆಯ ಕಾರ್ಯಾಲಯದಲ್ಲಿ ನಡೆಯಿತು.
15 ಮಳಿಗೆಗಳಲ್ಲಿ ಪ.ಜಾ.ಯವರಿಗೆ ಒಂದು ಮಳಿಗೆ, ಪ.ಪಂ.ಕ್ಕೆ ಒಂದು ಮಳಿಗೆ, ಅಂಗವಿಕಲರಿಗೆ ಒಂದು ಮಳಿಗೆ, ಇತರರಿಗೆ 12 ಮಳಿಗೆಗಳನ್ನು ಹರಾಜು ನಡೆಸಲಾಯಿತು. ಪರಿಶಿಷ್ಟ ಪಂಗಡದವರಿಗೆ ಮೀಸಲಿರಿಸಿದ ವಾಣಿಜ್ಯ ಮಳಿಗೆಯನ್ನು ಉದ್ದೇಶಪೂರ್ವಕವಾಗಿ ಹಿಂಬದಿಯಲ್ಲಿ ಕಾಯ್ದಿರಿಸಲಾಗಿದೆ ಎಂದು ಆರೋಪಿಸಿದ ಮುಖಂಡ ಬಿ. ವೆಂಕಟೇಶ ಅವರು, ವಾಣಿಜ್ಯ ಮಳಿಗೆಗಳ ಕಾಮಗಾರಿ ಅಪೂರ್ಣವಾಗಿದ್ದು, ಯಾವುದೇ ಮೂಲಭೂತ ಸೌಲಭ್ಯಗಳು ಕಲ್ಪಿಸದೇ ಪುರಸಭೆ ಸದಸ್ಯರ, ಸಾರ್ವಜನಿಕರ ಗಮನಕ್ಕೂ ತರದೇ ತರಾತುರಿಯಲ್ಲಿ ಹರಾಜು ಪ್ರಕ್ರಿಯೆಗೆ ಚಾಲನೆ ಕೊಟ್ಟಿರುವುದು ಸರಿಯಲ್ಲ ಎಂದು ಟೀಕಿಸಿದರು.
ಮಳಿಗೆಗಳನ್ನು ಸಂಪೂರ್ಣವಾಗಿ ನಿರ್ಮಿಸುವವರೆಗೂ ಹರಾಜು ಪ್ರಕ್ರಿಯೆಗೆ ಚಾಲನೆ ನೀಡಬಾರದು, ಪರಿಶಿಷ್ಟ ಪಂಗಡದವರಿಗೆ ಮೀಸಲಿರಿಸಿದ ಮಳಿಗೆಯನ್ನು ಮುಂಭಾಗದ ಪರಿಶಿಷ್ಟ ಜಾತಿಯವರಿಗೆ ಮೀಸಲಿರಿಸಿದ ವಾಣಿಜ್ಯ ಮಳಿಗೆಯ ಪಕ್ಕದಲ್ಲಿಯೇ ಮೀಸಲಿರಿಸಬೇಕೆಂದು ಬಿ. ವೆಂಕಟೇಶ ಮುಖ್ಯಾಧಿಕಾರಿಯನ್ನು ಒತ್ತಾಯಿಸಿದರು.
ಪುರಸಭೆ ಸದಸ್ಯರಾದ ಗಣೇಶ, ಅಬ್ದುಲ್ಲಾ, ಮಲ್ಲಿಕಾರ್ಜುನ, ಕುಂಟ್ನಾಳ್ ಮಲ್ಲಿಕಾರ್ಜುನ ಸ್ವಾಮಿ, ಕೆ. ವೆಂಕಟರಾಮರೆಡ್ಡಿ, ಎನ್. ಸತೀಶ, ಪ್ಯಾಟೆಪ್ಪ, ಮುಖಂಡರಾದ ಪೂಜಾರಿ ಮಲ್ಲಿಕಾರ್ಜುನ ಮುತ್ಯಾಲಯ್ಯಶೆಟ್ಟಿ, ಕರಿಬಸಪ್ಪ ಬಹಿರಂಗ ಹರಾಜು ಅವಸರದಿಂದ ಕೂಡಿದೆ ಎಂದು ವಿರೋಧ ವ್ಯಕ್ತಪಡಿಸಿದರು.
ಪುರಸಭೆ ಮುಖ್ಯಾಧಿಕಾರಿ ಹಾಜಿಬಾಬ ಮಾತನಾಡಿ, ಬಳ್ಳಾರಿ ಸಹಾಯಕ ಆಯುಕ್ತ ಪಿ. ಅನಿರುದ್ಧ್ ಶ್ರವಣ್ ಅವರ ಮಾರ್ಗದರ್ಶನದಲ್ಲಿ ಈ ಬಹಿರಂಗ ಹರಾಜನ್ನು ಹಾಕಲಾಗಿದೆ. ಇದರಿಂದ ಪುರಸಭೆಗೆ ಹೆಚ್ಚಿನ ಆದಾಯ ಬರುತ್ತದೆ ಎಂದು ಸದಸ್ಯರಿಗೆ ಹಾಗೂ ಸಾರ್ವಜನಿಕರಿಗೆ ತಿಳಿಸಿದರು. ಈ ವೇಳೆ ಪುರಸಭೆಯ ಅಧ್ಯಕ್ಷೆ ಮಹಾರಾಜ ಬೇಗಂ, ಉಪಾಧ್ಯಕ್ಷೆ ರಾಜೇಶ್ವರಿ ವೀರೇಶ ಉಪಸ್ಥಿತರಿದ್ದರು.
ಮಳಿಗೆಗಳ ದರ: 1ರಿಂದ 6 ಸಂಖ್ಯೆಯ ವಾಣಿಜ್ಯ ಮಳಿಗೆಗಳಿಗೆ ಕನಿಷ್ಠ ಬಾಡಿಗೆ ತಿಂಗಳಿಗೆ ರು. 6000 ಮುಂಗಡ ಠೇವಣಿ ರು. 2 ಲಕ್ಷ ನಿಗದಿಪಡಿಸಲಾಗಿದೆ. 7 ಮತ್ತು 8 ಮಳಿಗೆಗಳಿಗೆ ತಿಂಗಳಿಗೆ ರು. 16,800 ಮುಂಗಡ ಠೇವಣಿ ರು. 17 ಲಕ್ಷ ನಿಗದಿಪಡಿಸಲಾಗಿದೆ. 9ನೇ ಮಳಿಗೆ ತಿಂಗಳ ಬಾಡಿಗೆ ರು. 9600 ಮುಂಗಡ ಠೇವಣಿ ರು. 2 ಲಕ್ಷ, 10ರಿಂದ 15ನೇ ಮಳಿಗೆವರೆಗೂ ತಿಂಗಳ ಬಾಡಿಗೆ ರು. 4,800, ರು. 2 ಲಕ್ಷ ಮುಂಗಡ ಠೇವಣಿ ಮೊತ್ತವನ್ನು ನಿಗದಿಪಡಿಸಿದರೂ ಸಾರ್ವಜನಿಕರಿಂದ ಮಳಿಗೆಗಳ ಹರಾಜಿಗೆ ಉತ್ತಮ ಪ್ರತಿಕ್ರಿಯೆ ದೊರೆಯಿತು. ಹರಾಜು ಪ್ರಕ್ರಿಯೆ ಸುಗಮವಾಗಿ ಸಾಗಲು ಪಿ.ಎಸ್.ಐ. ಯಶವಂತ್ ಬಿಸ್ನಳ್ಳಿ, ಪಿ.ಎಸ್.ಐ. ವೆಂಕಟೇಶುಲು ಹಾಗೂ ಸಿಬ್ಬಂದಿ ಸೂಕ್ತ ಬಂದೋಬಸ್ತ್ ಒದಗಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.