ಸೈಬರ್ ಸೆಕ್ಯೂರಿಟಿ ಕೋರ್ಸ್ಗಿಲ್ಲ ಬೇಡಿಕೆ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಜೂ. 19
ಹೆಚ್ಚಿನ ಉದ್ಯೋಗ ಸೃಷ್ಟಿಸುವ ಸೈಬರ್ ಸೆಕ್ಯೂರಿಟಿ ಕೋರ್ಸ್ನ್ನು ಬಳ್ಳಾರಿಯ ವಿಎಸ್ಕೆ ವಿವಿಯಲ್ಲಿ ಆರಂಭಿಸಿ ವರ್ಷ ಕಳೆದರೂ ದಾಖಲಾತಿಗೆ ವಿದ್ಯಾರ್ಥಿಗಳು ಆಸಕ್ತಿ ವಹಿಸುತ್ತಿಲ್ಲ. ರಾಜ್ಯದಲ್ಲಿರುವ ವಿಶ್ವವಿದ್ಯಾಲಯಗಳಲ್ಲಿ ಈ ಡಿಪ್ಲೊಮಾ ಕೋರ್ಸ್ ಇರುವುದು ಬಹು ವಿರಳ.
ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಸೈಬರ್ ಕ್ರೈಂಗಳ ಸಂಖ್ಯೆಯನ್ನು ಪರಿಗಣಿಸಿ, ವಿಶ್ವವಿದ್ಯಾಲಯದಲ್ಲಿ ಸೈಬರ್ ಸೆಕ್ಯೂರಿಟಿ ಕೋರ್ಸ್ ಆರಂಭಿಸಿದೆ. ಪಠ್ಯಕ್ರಮವನ್ನೂ ಸಿದ್ಧಪಡಿಸಿದೆ. ಕಳೆದ ವರ್ಷ ಕೋರ್ಸ್ಗೆ ಅರ್ಜಿ ಆಹ್ವಾನಿಸಲಾಗಿತ್ತು. ಆದರೆ ವಿದ್ಯಾರ್ಥಿಗಳು ಆಸಕ್ತಿ ವಹಿಸಿಲ್ಲ, ಅರ್ಜಿ ಸಲ್ಲಿಸಿಯೂ ಇಲ್ಲ.
ಸೈಬರ್ ಕೋರ್ಸ್ ಅಗತ್ಯ
ಇಂಟರ್ನೆಟ್ ಯುಗ ಬೆಳೆದಂತೆ ಪೊಲೀಸರಿಗೆ ಬರುವ ದೂರುಗಳಲ್ಲಿ ಸೈಬರ್ ಕ್ರೈಮ್ಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಇವುಗಳನ್ನು ತಡೆಗಟ್ಟುವುದು ಅಗತ್ಯವಾಗಿದೆ. ಸೈಬರ್ ಸೆಕ್ಯೂರಿಟಿ ಕೋರ್ಸ್ ಮಾಡಿದರೆ ಸೈಬರ್ ಕ್ರೈಮ್ಗಳನ್ನು ಪತ್ತೆ ಹಚ್ಚಲು ಸಾಧ್ಯವಾಗುತ್ತದೆ. ಯಾವುದೋ ದೇಶ, ರಾಜ್ಯದಲ್ಲಿ ಕುಳಿತು ಸೈಬರ್ ಕ್ರೈಂ ಮಾಡುವುದರಿಂದ ಅದನ್ನು ತಡೆಗಟ್ಟುವುದು, ಆರೋಪಿಗಳನ್ನು ಪತ್ತೆ ಹಚ್ಚುವುದು ಕಷ್ಟಸಾಧ್ಯ. ಪೊಲೀಸ್ ಇಲಾಖೆಗೂ ಸೈಬರ್ ಕ್ರೈಂ ತಡೆಯಲು ಕೋರ್ಸ್ ಮಾಡಿದವರ ಅಗತ್ಯವಿದೆ.
ಕೋರ್ಸ್ಗಿರುವ ವಿದ್ಯಾರ್ಹತೆ
ಬಿಎಸ್ಸಿಯಲ್ಲಿ ಗಣಿತ ಓದಿದ ಅಥವಾ ಬಿಇ ಮುಗಿಸಿದ ವಿದ್ಯಾರ್ಥಿಗಳು ಸೈಬರ್ ಸೆಕ್ಯೂರಿಟಿ ಕೋರ್ಸ್ಗೆ ದಾಖಲಾಗಬಹುದು. ಬಿಇ ಮಾಡಿದವರೆಲ್ಲ ಕೆಲಸ ಅರಸುತ್ತ ಹೋಗುವ ಮನೋಭಾವನೆ ಇದ್ದರೆ, ಬಿಎಸ್ಸಿ ಮಾಡಿದವರು ಎಂಎಸ್ಸಿ ಕಡೆಗೆ ಆಸಕ್ತಿ ವಹಿಸುತ್ತಾರೆ. ಆದರೆ, ಕೇವಲ 1 ವರ್ಷದ ಸೈಬರ್ ಸೆಕ್ಯೂರಿಟಿ ಕೋರ್ಸ್ ಮಾಡುವುದರಿಂದ ಹೆಚ್ಚಿನ ಉದ್ಯೋಗಾವಕಾಶ ಲಭ್ಯ. ಸಾಫ್ಟ್ವೇರ್ ದಿಗ್ಗಜ ಕಂಪನಿಗಳಲ್ಲಿ ಈ ಕೋರ್ಸ್ ಪೂರೈಸಿದವರಿಗೆ ಉತ್ತಮ ಬೇಡಿಕೆ ಇದೆ.
ಕಳೆದ ವರ್ಷದಿಂದ ವಿಶ್ವವಿದ್ಯಾಲಯದಲ್ಲಿ ಕೋರ್ಸ್ ಆರಂಭವಾಗಿದ್ದು, ಪ್ರತಿ ವರ್ಷ 25 ಸೀಟುಗಳ ದಾಖಲಾತಿ ವ್ಯವಸ್ಥೆ ಮಾಡಲಾಗಿದೆ. ಆದರೂ ಕೋರ್ಸ್ ಬಗ್ಗೆ ವಿದ್ಯಾರ್ಥಿಗಳು ಆಸಕ್ತಿ ವಹಿಸಿಲ್ಲ. ಈವರೆಗೆ ಎರಡು ಅರ್ಜಿಗಳು ಮಾತ್ರ ಬಂದಿವೆ. ವಿಶ್ವವಿದ್ಯಾಲಯದ ಗಣಿತ ಮತ್ತು ಕಂಪ್ಯೂಟರ್ ವಿಭಾಗದ ಸಿಬ್ಬಂದಿಯೇ ಇಲ್ಲೂ ಬೋಧಕರಾಗಿದ್ದಾರೆ.
ಉದ್ಯೋಗಾವಕಾಶ ಜಾಸ್ತಿ
ಸೈಬರ್ ಕ್ರೈಂಗಳನ್ನು ದೃಷ್ಟಿಯಲ್ಲಿರಿಸಿಕೊಂಡು ವರ್ಷದ ಹಿಂದೆ ವಿವಿಯಲ್ಲಿ ಸೈಬರ್ ಸೆಕ್ಯೂರಿಟಿ ಕೋರ್ಸ್ ಆರಂಭಿಸಲಾಗಿದೆ. ಕೋರ್ಸ್ನಿಂದ ಹೆಚ್ಚಿನ ಉದ್ಯೋಗಾವಕಾಶ ಸಿಗುತ್ತವೆ. ನಿರುದ್ಯೋಗ ಸಮಸ್ಯೆಯನ್ನು ಕೊಂಚ ಮಟ್ಟಿಗೆ ಹೋಗಲಾಡಿಸಬಹುದು, ಪಠ್ಯಕ್ರಮವೂ ಸಿದ್ಧವಾಗಿದೆ. ಪೋಷಕರು ಹಾಗೂ ವಿದ್ಯಾರ್ಥಿಗಳು ಇದರ ಲಾಭವನ್ನು ಪಡೆದುಕೊಳ್ಳಬೇಕು.
- ಡಾ ಮಂಜಪ್ಪ ಡಿ. ಹೊಸಮನಿ,
ವಿಎಸ್ಕೆ ವಿವಿ ಕುಲಪತಿ
-ಶಶಿಧರ ಮೇಟಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

