ಬಳ್ಳಾರಿ

ಪೊಲೀಸ್ ಮೈದಾನದಲ್ಲಿ ವಸತಿಗೃಹ ನಿರ್ಮಾಣಕ್ಕೆ ವಿರೋಧ

Published On :

ಹಗರಿಬೊಮ್ಮನಹಳ್ಳಿ: ಪೊಲೀಸ್ ಮೈದಾನದಲ್ಲಿ ಸಿಬ್ಬಂದಿ ವಸತಿ ಗೃಹ ನಿರ್ಮಿಸುವುದನ್ನು ವಿರೋಧಿಸಿ ಹಾಗೂ ಸಾರ್ವಜನಿಕ ಸಭೆ, ಸಮಾರಂಭಗಳ ಬಳಕೆಗೆ ಮೈದಾನವನ್ನು ಮೀಸಲಿಡುವಂತೆ ಒತ್ತಾಯಿಸುವ ಮನವಿ ಪತ್ರವನ್ನು  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಹಗರಿಬೊಮ್ಮನಹಳ್ಳಿ ತಾಲೂಕಿನ ತಂಬ್ರಹಳ್ಳಿ ಗ್ರಾಮಸ್ಥರು ಸಲ್ಲಿಸಿದ್ದಾರೆ.  ಗ್ರಾಮದ ಶ್ರೀಗುರು ಕೊಟ್ಟೂರೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಈ ಸಂಬಂಧ ಶುಕ್ರವಾರ ಮಧ್ಯಾಹ್ನ ಸಭೆ ನಡೆಸಿದ ಗ್ರಾಮಸ್ಥರು, ಮೈದಾನದಲ್ಲಿ ವಸತಿಗೃಹಗಳನ್ನು ನಿರ್ಮಿಸುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸುವ ಹಾಗೂ ಹಾಲಿ ವಸತಿಗೃಹಗಳಿರುವ ಸ್ಥಳದಲ್ಲಿಯೇ ಈಗ ನೂತನವಾಗಿ ಮಂಜೂರಾಗಿರುವ ಸಿಬ್ಬಂದಿ ವಸತಿಗೃಹಗಳನ್ನು ನಿರ್ಮಿಸುವಂತೆ ಒತ್ತಾಯಿಸುವ  ನಿರ್ಣಯವನ್ನು ಒಕ್ಕೂರಲಿನಿಂದ ಅಂಗೀಕರಿಸಿ, ನಂತರ ಸ್ಥಳೀಯ ಪೊಲೀಸ್ ಠಾಣೆಯ ಪಿಎಸ್‌ಐ ನಾಗಪ್ಪ ಅವರಿಗೆ ಮನವಿ ಅರ್ಪಿಸಿದರು.  ಈ ವೇಳೆ ಮಾತನಾಡಿದ ಜಿಪಂ ಮಾಜಿ ಸದಸ್ಯ ಅಕ್ಕಿ ತೋಟೇಶ,  ತಂಬ್ರಹಳ್ಳಿ ಗ್ರಾಮ ತಾಲೂಕಿನಲ್ಲಿಯೇ ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ. ಬೆಳೆಯುತ್ತಿರುವ ಗ್ರಾಮಕ್ಕೆ  ಇಲ್ಲಿನ ಪೊಲೀಸ್ ಠಾಣೆ ಎದುರಿಗೆ ಇರುವ ಇಲಾಖೆಗೆ ಸೇರಿದ ವಿಶಾಲವಾದ ಮೈದಾನ, ಸ್ವಾತಂತ್ರ್ಯೋತ್ಸವ, ಗಣರಾಜ್ಯೋತ್ಸವ, ಕ್ರೀಡೆ, ನಾಟಕ, ಕಲೆ, ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳು ಸೇರಿದಂತೆ ಸಾರ್ವಜನಿಕ ಬಳಕೆಯ ಉದ್ದೇಶಕ್ಕಾಗಿ ಅಗತ್ಯವಿದ್ದು, ಗ್ರಾಮಕ್ಕೆ ಕೇಂದ್ರ ಸ್ಥಾನದಂತಿರುವ ಮೈದಾನವನ್ನು ನಾಗರಿಕರ ಬಳಕೆಗೆ ಮೀಸಲಿಡಬೇಕೆಂದು ಆಗ್ರಹಿಸಿದರು. ವಸತಿ ಗೃಹ ನಿರ್ಮಿಸಲು ಮಂಜೂರಾತಿ ಸಿಕ್ಕಿರುವುದು ಸಂತಸದ ವಿಷಯ, ಗ್ರಾಮದ ಹಾಲಿ ಪೊಲೀಸ್ ವಸತಿಗೃಹಗಳಿರುವ ಸ್ಥಳದಲ್ಲಿಯೇ ಇನ್ನು ವಿಶಾಲವಾದ ಜಾಗವಿದ್ದು ಅಲ್ಲಿಯೇ ಸಿಬ್ಬಂದಿ ವಸತಿಗೃಹಗಳನ್ನು ನಿರ್ಮಿಸಿ, ಠಾಣೆ ಎದುರಿಗಿರುವ ಮೈದಾನವನ್ನು ಸಾರ್ವಜನಿಕ ಸಭೆ, ಸಮಾರಂಭಗಳ ಬಳಕೆಗೆ ಮೀಸಲಿಡುವಂತೆ ಮನವಿ ಮಾಡಿಕೊಂಡರು.   ಗ್ರಾಪಂ. ಅಧ್ಯಕ್ಷೆ ಬಡಿಗೇರ ನಿಂಗಮ್ಮ, ಪೀಕಾರ್ಡ್ ಬ್ಯಾಂಕ್ ನಿರ್ದೇಶಕ ಪಟ್ಟಣಶೆಟ್ಟಿ ಸುರೇಶ, ಮಾಜಿ ಅಧ್ಯಕ್ಷ ಬಣಕಾರ ಕೊಟ್ರೇಶ್, ಮಾಬುಸಾಬ್, ಸದಸ್ಯರಾದ ಮರಿಯಜ್ಜ, ಶಶಿಧರ, ಗ್ರಾಮದ ಮುಖಂಡರಾದ ಗೌರಜ್ಜನವರ ಬಸವರಾಜಪ್ಪ, ಪರಗಿ ವಿರೂಪಾಕ್ಷಪ್ಪ, ವಿಶ್ವನಾಥ, ಎಚ್.ಬಿ. ಗಂಗಾಧರಗೌಡ, ಮಡಿವಾಳರ ಕೊಟ್ರೇಶ್, ತರುಣಿ ಬಸವರಾಜ, ತಾಪಂ ಮಾಜಿ ಸದಸ್ಯ ಶರೀಫ್‌ಸಾಬ್, ಕಡ್ಡಿ ಚನ್ನಪ್ಪ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.