ಬಳ್ಳಾರಿ

ಗ್ರಾಪಂ ಪುನರ್ ರಚನೆ: ನಂಜಯ್ಯನಮಠ

Published On :

ಕೊಟ್ಟೂರು: ರಾಜ್ಯದಲ್ಲಿನ ಗ್ರಾಮ ಪಂಚಾಯಿತಿಗಳನ್ನು ಪುನರ್ ವಿಂಗಡಿಸುವ ಕ್ರಿಯೆಗೆ ಸರ್ಕಾರ ಮುಂದಾಗಿದ್ದು, ಲೋಕಸಭಾ ಚುನಾವಣೆ ನಂತರ ಈ ಪ್ರಕ್ರಿಯೆಗೆ ಚಾಲನೆ ದೊರಕಲಿದೆ ಎಂದು ಗ್ರಾಮ ಪಂಚಾಯಿತಿ ಪುನರ್ ವಿಂಗಡಣಾ ಸಮಿತಿ ಅಧ್ಯಕ್ಷ ಎಸ್.ಜಿ. ನಂಜಯ್ಯನ ಮಠ ತಿಳಿಸಿದರು.
ಪಟ್ಟಣದಲ್ಲಿ ಭಾನುವಾರ ಮಾತನಾಡಿ, ಹಾಲಿ 5629 ಗ್ರಾಪಂಗಳು ಅಸ್ತಿತ್ವದಲ್ಲಿವೆ. ಇವುಗಳನ್ನು ರಚಿಸಿದ ಗಳಿಗೆಯಿಂದ ಜನಸಂಖ್ಯೆ ಹೆಚ್ಚಳವಾಗಿದೆ. ಈ ಕಾರಣಕ್ಕಾಗಿಯೇ ಗ್ರಾಮ ಪಂಚಾಯಿತಿಗಳನ್ನು ಪುನರ್ ರಚಿಸಲು ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಇದೀಗ ತೊಡಗಿಸಿಕೊಂಡು ಇದರ ಸಮಗ್ರ ಅಧ್ಯಯನ ನಡೆಸಲು ತಮ್ಮ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಿದೆ. 6 ಜನ ಅಧಿಕಾರೇತರ ಸದಸ್ಯರು ಸಮಿತಿಯಲ್ಲಿದ್ದಾರೆ ಎಂದರು.
ಗ್ರಾಪಂತಿಗಳ ಜನಸಂಖ್ಯೆಯನ್ನು 7 ಸಾವಿರಕ್ಕೆ ಮಿತಿಗೊಳಿಸಲಾಗಿದೆ. ಈ ಜನಸಂಖ್ಯೆ ದಾಟಿದ ಗ್ರಾಪಂಗಳನ್ನು ಪುನರ್ ರಚಿಸಲಾಗುವುದು. ಗ್ರಾಮಗಳ ಸಮಗ್ರ ಬೆಳವಣಿಗೆಗೆ ಪೂರಕವಾಗಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಕಾರಣಕ್ಕಾಗಿ ಈ ತೆರನಾಗಿ ರಚಿಸಲಾಗುತ್ತದೆ ಎಂದ ಅವರು ಗ್ರಾಪಂಗಳ ಪುನರ್ ರಚನೆಗೆ ತಮ್ಮ ನೇತೃತ್ವದಲ್ಲಿ ರಚಿಸಿರುವ ಸಮಿತಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ವಿಸ್ತೃತವಾಗಿ ಸಂಚರಿಸಿ ವರದಿ ತಯಾರು ಮಾಡಲಿದೆ. ತಮ್ಮ ನೇತೃತ್ವದ ಸಮಿತಿಯನ್ನು ರಾಜ್ಯ ಸರ್ಕಾರ ಮಾರ್ಚ್ 4ರಂದು ರಚಿಸಿ ಆದೇಶ ಹೊರಡಿಸಿದೆ. ಮಾರ್ಚ್ 5ರಿಂದ ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಗೆ ಬಂದ ಹಿನ್ನೆಲೆಯಲ್ಲಿ ಸಮಿತಿ ಕಾರ್ಯಾರಂಭಕ್ಕೆ ವಿಳಂಬ ಬಂದೊದಗಿದೆ ಎಂದ ಅವರು ಸರ್ಕಾರ ಸಮಿತಿಯ ವರದಿಯನ್ನು ಆಗಸ್ಟ್ ತಿಂಗಳೊಳಗೆ ಸಲ್ಲಿಸುವಂತೆ ಸೂಚಿಸಿದೆ. ಆದರೆ ಈ ತಿಂಗಳೊಳಗೆ ವರದಿ ಸಲ್ಲಿಸುವುದು ಸಾಧ್ಯವಾಗಲಾರದು. ಸಮಿತಿಯ ಕಾಲಾವಧಿ ವಿಸ್ತರಣೆಗೊಳ್ಳುವ ಸಾಧ್ಯತೆಗಳು ಬಹಳ ಇವೆ ಎಂದು ಅವರು ಹೇಳಿದರು.
ಮುಂದಿನ ಗ್ರಾಪಂಗಳ ಚುನಾವಣೆಯನ್ನು ತಮ್ಮ ನೇತೃತ್ವದ ಸಮಿತಿ ವರದಿ ನೀಡಿ ಗ್ರಾಪಂಗಳನ್ನು ಪುನರ್ ರಚಿಸಿದ ಆಧಾರದ ಮೇಲೆಯೇ ನಡೆಸಲು ಈಗಾಗಲೇ ಸರ್ಕಾರ ಸಿದ್ಧತೆ ಕೈಗೊಂಡಿದೆ. ಯಾವುದೇ ಕಾರಣಕ್ಕೂ ಹಳೆ ಮಾನದಂಡ ಬಳಸದೇ ಪುನರ್ ವಿಂಗಡಣೆಯ ಆಧಾರವನ್ನೇ ಬಳಸಲಾಗುತ್ತದೆ ಎಂದು ತಿಳಿಸಿದರು.
ಗೆಲವು: ಲೋಕಸಬಾ ಚುನಾವಣೆಯಲ್ಲಿ ಕಾಂಗ್ರೆಸ್ 17ರಿಂದ 18 ಸ್ಥಾನಗಳನ್ನು ರಾಜ್ಯದಲ್ಲಿ ಗಳಿಸುವುದು ಸ್ಪಷ್ಟವಾಗಿದೆ. ಹಗರಣ, ಸಿದ್ದರಾಮಯ್ಯ ನೇತೃತ್ವದ ಸರ್ಕಾರ ವಿವಾದ ರಹಿತ ಸರ್ಕಾರವಾಗಿದ್ದು, ಜನತೆ ಈ ಪಕ್ಷದ ಬಗ್ಗೆ ಒಲವು ವ್ಯಕ್ತಪಡಿಸಿದ್ದಾರೆ. ಇದರ ಖಾತರಿ ಲೋಕಸಭಾ ಚುನಾವಣೆ ಸ್ಪಷ್ಟಪಡಿಸುತ್ತದೆ ಎಂದು ಮಾಜಿ ಶಾಸಕರೂ ಆದ ಎಸ್.ಜಿ. ನಂಜಯ್ಯನಮಠ ವಿಶ್ವಾಸ ವ್ಯಕ್ತಪಡಿಸಿದರು.
ಮುಖಂಡ ಎಂ.ಎಂ.ಜೆ. ಸತ್ಯಪ್ರಕಾಶ್, ಕೊಟ್ಟೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ.ಎಂ. ಗುರುಪ್ರಸಾದ್, ಪಿ. ದೇವೇಂದ್ರಗೌಡ, ಎಂ.ಎಂ.ಜೆ. ಮೂಗಣ್ಣ, ಪ್ರಭುಲಿಂಗಯ್ಯ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.