ಚುನಾವಣೆ ಕಾರ್ಯಕ್ಕೆ ವಾಹನ ಪರವಾನಗಿ ಕಡ್ಡಾಯ: ಬಿಸ್ವಾಸ್
ಬಳ್ಳಾರಿ: ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣೆ ಕಾರ್ಯಗಳಿಗೆ ಬಳಸುವ ಹಳದಿ ಬೋರ್ಡ್ಗಳುಳ್ಳ ಆಟೋಗಳು, ಮ್ಯಾಕ್ಸಿಕ್ಯಾಬ್, ಟ್ರ್ಯಾಕ್ಸ್ಗಳು, ಕಾರುಗಳು, ಬಸ್ಸುಗಳು ಮತ್ತಿತರ ವಾಹನಗಳ ಮಾಲೀಕರು ಕಡ್ಡಾಯವಾಗಿ ಸಕ್ಷಮ ಪ್ರಾಧಿಕಾರದಿಂದ ಪರವಾನಗಿ ಪಡೆಯಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಅಮ್ಲಾನ್ ಆದಿತ್ಯ ಬಿಸ್ವಾಸ್ ಆದೇಶ ಹೊರಡಿಸಿದ್ದಾರೆ.
ಪರವಾನಗಿಯನ್ನು ಆಯಾ ವಾಹನಗಳಿಗೆ ಸ್ಪಷ್ಟವಾಗಿ ಕಾಣುವಂತೆ ಪ್ರದರ್ಶಿಸಬೇಕು. ಶಾಲಾ ವಾಹನಗಳಿಗೆ ಹೊರತುಪಡಿಸಿ ಸಂಬಂಧಿಸಿದವರಿಗೆಲ್ಲ ಈ ಆದೇಶವನ್ನು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ರವಾನಿಸಬೇಕು. ಸೂಚನೆಗಳು ಜಾರಿಯಾದ ಮೂರು ದಿನಗಳಲ್ಲಿ ಅನುಸರಣಾ ವರದಿ ಸಲ್ಲಿಸಬೇಕು. ನೀತಿಸಂಹಿತೆಯನ್ನು ಅತಿ ಜಾಗೃತಿಯಿಂದ ನಿರ್ವಹಿಸಿ ಸಾರ್ವತ್ರಿಕ ಚುನಾವಣೆ ಮತದಾನ ಮುಕ್ತ ಮತ್ತು ನ್ಯಾಯಸಮ್ಮತವಾಗಿ ನಡೆಯುವಂತೆ ಚುನಾವಣಾ ಆಯೋಗದ ಸೂಚನೆಗಳನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು. ಆದೇಶ ಜಾರಿಗೊಳಿಸದಿರುವವರ ವಿರುದ್ಧ ಕ್ರಮ ಜರುಗಿಸಿ, ವಾಹನಗಳನ್ನು ಜಪ್ತಿ ಮಾಡಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.
ಜಾಹೀರಾತು ಪ್ರಕಟಿಸಿದರೆ ಕ್ರಮ: ಗ್ರಾಮ ಪಂಚಾಯಿತಿಗಳು ಚುನಾವಣೆ ಸಂದರ್ಭದಲ್ಲಿ ತಮ್ಮ ಸಾಧನೆಗಳ ಬಗ್ಗೆ ಸರ್ಕಾರಿ ವೆಚ್ಚದಲ್ಲಿ ಜಾಹೀರಾತುಗಳನ್ನು ಹೊರಡಿಸಿದಲ್ಲಿ ಕಠಿಣ ಕ್ರಮಕೈಗೊಳ್ಳಲಾಗುವುದು. ಚುನಾವಣೆ ಸಂದರ್ಭದಲ್ಲಿ ಜಾಹೀರಾತುಗಳನ್ನು ಹೊರಡಿಸುವುದು ನಿಯಮ ಬಾಹಿರವಾಗಿರುತ್ತದೆ. ಗ್ರಾಮ ಮಟ್ಟದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು ಹೊಣೆಗಾರರನ್ನಾಗಿಸಲಾಗುವುದು. ಎಲ್ಲಾ ತಾಲೂಕು ಪಂಚಾಯಿತಿಗಳ ಕಾರ್ಯನಿರ್ವಾಹಕ ಅಧಿಕಾರಿಗಳು ಎಲ್ಲಾ ಗ್ರಾಮ ಪಂಚಾಯಿತಿಗಳ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿ, ಯಾವುದೆ ಪ್ರಕರಣಗಳಾಗದಂತೆ ಜಾಗೃತಿ ವಹಿಸಬೇಕೆಂದು ಅವರು ಆದೇಶಿಸಿದ್ದಾರೆ.
ಗೋಡೆ ಬರಹ ಅಳಿಸಲು ಸೂಚನೆ: ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿವಿಧೆಡೆ ಗೋಡೆಗಳಲ್ಲಿ, ಸಾರ್ವಜನಿಕ ಪ್ರದೇಶಗಳಲ್ಲಿ ರಾಜಕೀಯ ಮತ್ತು ಸಂಘಟನೆಗಳ ಹೆಸರನ್ನು ಬರೆದಿರುವ ಸಂಭವವಿದ್ದು, ಸಂಬಂಧಿಸಿದ ಸುಣ್ಣ, ಬಣ್ಣವನ್ನು ಬಳಿಸುವ ಮೂಲಕ ಅವುಗಳನ್ನು ಅಳಿಸಬೇಕು. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗ್ರಾಮ ಅಭಿವೃದ್ಧಿ ಅಧಿಕಾರಿಗಳು ಇದಕ್ಕೆ ತಗಲುವ ವೆಚ್ಚವನ್ನು ಆಯಾ ಗ್ರಾಪಂಗಳ ಸಾಮಾನ್ಯ ಆಡಳಿತ ನಿಧಿಯಲ್ಲಿ ಭರಿಸಲು ಅಗತ್ಯ ಆದೇಶ ಹೊರಡಿಸಿಕೊಂಡು ಗೋಡೆ ಬರಹಗಳನ್ನು ಅಳಿಸಲು ಕ್ರಮ ಕೈಗೊಳ್ಳಬೇಕೆಂದು ಎಂದು ಸೂಚಿಸಿದ್ದಾರೆ.
ಸ್ತ್ರೀ ಶಕ್ತಿ ಸಂಘಗಳ ಸಭೆ ನಿಷೇಧ: ಲೋಕಸಭಾ ಚುನಾಣೆಯ ನೀತಿಸಂಹಿತೆ ಹಿನ್ನೆಲೆಯಲ್ಲಿ ಅಂಗನವಾಡಿ ಕೇಂದ್ರಗಳನ್ನು ಮಧ್ಯಾಹ್ನ 4 ಗಂಟೆಗೆ ಮುಚ್ಚುವಂತೆ ಕ್ರಮಕೊಳ್ಳಬೇಕು. ಅಲ್ಲದೆ ಯಾವುದೆ ಸ್ತ್ರೀ ಶಕ್ತಿ ಸಂಘಗಳು ಸಭೆ ನಡೆಸದಂತೆ ಕ್ರಮ ಕೈಗೊಳ್ಳಲು ಸಂಬಂಧಿಸಿದಂತೆ ಆದೇಶಗಳನ್ನು ಹೊರಡಿಸಿ, ಉಲ್ಲಂಘನೆಯಾದರೆ ಶಿಸ್ತು ಕ್ರಮ ಕೈಗೊಳ್ಳುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಕಲಾದಗಿ ಅವರಿಗೆ ಜಿಲ್ಲಾಧಿಕಾರಿಗಳೂ ಆಗಿರುವ ಜಿಲ್ಲಾ ಚುನಾವಣಾಧಿಕಾರಿ ಎ.ಎ. ಬಿಸ್ವಾಸ್ ತಿಳಿಸಿದ್ದಾರೆ.
ಧಾರ್ಮಿಕ ಸ್ಥಳದಲ್ಲಿ ಮತಯಾಚನೆ ಇಲ್ಲ
ಬಳ್ಳಾರಿ: ಜಿಲ್ಲೆಯಲ್ಲಿರುವ ದೇವಸ್ಥಾನ ಹಾಗೂ ಮತ್ತಿತರ ಯಾವುದೆ ಧಾರ್ಮಿಕ ಸ್ಥಳಗಳಲ್ಲಿ ರಾಜಕೀಯ ಚಟುವಟಿಕೆಗಳನ್ನು ನಡೆಸುವಂತಿಲ್ಲ ಎಂದು ಜಿಲ್ಲಾ ಚುನಾವಣಾಧಿ ಅಮ್ಲಾನ್ ಆದಿತ್ಯ ಬಿಸ್ವಾಸ್ ಆದೇಶಿಸಿದ್ದಾರೆ.
ಲೋಕಸಭಾ ಚುನಾವಣೆ 2014ರ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದ್ದು, ರಾಜಕೀಯ ವ್ಯಕ್ತಿಗಳು ತಮ್ಮ ವ್ಯಾಪ್ತಿಯ ದೇವಸ್ಥಾನಗಳಿಗೆ ಭೇಟಿ ನೀಡಿದಾಗ ಧಾರ್ಮಿಕ, ದೇವಸ್ಥಾನದ ಆವರಣದಲ್ಲಿ ಸಭೆ, ಸಮಾರಂಭ ಅಥವಾ ಇನ್ನಿತರೆ ಯಾವುದೆ ರಾಜಕೀಯ ಚಟುವಟಿಕೆಗಳನ್ನು ನಡೆಸಲು ಅವಕಾಶವಿರುವುದಿಲ್ಲ. ಚುನಾವಣಾಧಿಕಾರಿಗಳ ಈ ಆದೇಶವನ್ನು ಧಿಕ್ಕರಿಸಿ ರಾಜಕೀಯ ಚಟುವಟಿಕೆಗೆ ಅವಕಾಶ ಕಲ್ಪಿಸಿದವರನ್ನು ದಿ ರಿಲಿಜಿಯಸ್ ಇನ್ಸಿಟಿಟ್ಯೂಷನ್ ಆಕ್ಟ್ 1988ರ ಪ್ರಕಾರ ಶಿಕ್ಷೆಗೊಳಪಡಿಸಲಾಗುವುದು.
ಸದರಿ ಕಾಯ್ದೆಯನ್ವಯ ದೇವಸ್ಥಾನದ ಕೊಠಡಿಗಳು, ಕಲ್ಯಾಣ ಮಂಟಪ, ಸಮುದಾಯ ಭವನ, ಖಾಲಿ ಜಾಗ, ದೇವಸ್ಥಾನದ ಆವರಣ, ಇತರೆ ಧಾರ್ಮಿಕ ಸ್ಥಳಗಳನ್ನು ರಾಜಕೀಯ ಚಟುವಟಿಕೆಗಳಿಗೆ ಬಳಸುವಂತಿಲ್ಲ. ದೇವಸ್ಥಾನದ ಆವರಣದಲ್ಲಿ ರಾಜಕೀಯ ವ್ಯಕ್ತಿಗಳಿಂದ ಅನಾವಶ್ಯಕ ಕಾರ್ಯಕ್ರಮ ಆಯೋಜಿಸಿ ಊಟದ ವ್ಯವಸ್ಥೆ ಮಾಡಿ ಹಂಚುವಂತಿಲ್ಲ. ದೇವಸ್ಥಾನದ ಧ್ವನಿವರ್ಧಕಗಳನ್ನು ರಾಜಕೀಯ ಚಟುವಟಿಕೆಗೆ ಬಳಸುವಂತಿಲ್ಲ ಎಂದು ಅವರು ಸೂಚಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

