ಜಿಲ್ಲಾದ್ಯಂತ ಮತದಾನ ಜಾಗೃತಿ ಕಾರ್ಯ
ಬಳ್ಳಾರಿ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಮನೆ ಮನೆಗೆ ಭೇಟಿ ನೀಡುವ ಮೂಲಕ ಮತದಾನ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಪಾಟೀಲ್ ತಿಳಿಸಿದ್ದಾರೆ. ಜಿಲ್ಲೆಯ ಎಲ್ಲ ಆಡಳಿತ ವೈದ್ಯಾಧಿಕಾರಿಗಳು, ತಾಲೂಕು ಆರೋಗ್ಯ ಅಧಿಕಾರಿಗಳು, ಕಿರಿಯ ಆರೋಗ್ಯ ಸಹಾಯಕರು (ಪುರುಷ, ಮಹಿಳಾ) ಹಾಗೂ ಆಶಾ ಕಾರ್ಯಕರ್ತೆಯರನ್ನು ಈ ಕಾರ್ಯಕ್ಕೆ ತೊಡಗಿಸಿಕೊಳ್ಳಲಾಗುತ್ತಿದೆ. ಲೋಕಸಭಾ ಚುನಾವಣೆ ಪ್ರಯುಕ್ತ ಮನೆ ಮನೆಗೆ ಭೇಟಿ ನೀಡಿ ಮತದಾನ ಕುರಿತು ಜಾಗೃತಿ ಮೂಡಿಸುವ ಕಾರ್ಯ ಕೈಗೊಳ್ಳಬೇಕೆಂದು ತಮ್ಮ ವ್ಯಾಪ್ತಿಯಲ್ಲಿ ಬರುವ ಕಿರಿಯ ಆರೋಗ್ಯ ಸಹಾಯಕರು (ಪುರುಷ, ಮಹಿಳಾ) ಹಾಗೂ ಆಶಾ ಕಾರ್ಯಕರ್ತೆಯರಿಗೆ ಜಿಲ್ಲೆಯ ಎಲ್ಲ ಆಡಳಿತ ವೈದ್ಯಾಧಿಕಾರಿಗಳು ಮತ್ತು ತಾಲೂಕು ಆರೋಗ್ಯ ಅಧಿಕಾರಿಗಳು ಸೂಚಿಸಬೇಕು. ಲಾರ್ವ ಸಮೀಕ್ಷೆ ನಡೆಸುವ ಹಾಗೂ ಆರೋಗ್ಯ ಶಿಕ್ಷಣ ಕಾರ್ಯಕ್ರಮ ಜರುಗಿಸುವ ಸಂದರ್ಭಗಳಲ್ಲಿ ತಪ್ಪದೆ ಮತ ಚಲಾಯಿಸುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು. ಮತದಾರರ ಯಾದಿಯಲ್ಲಿ ಹೆಸರು ನೋಂದಣಿಯಾಗದಿರುವುದಕ್ಕೆ ಕಾರಣ ತಿಳಿದು ಕಂದಾಯ ಇಲಾಖೆ ಅಥವಾ ಗ್ರಾಮ ಪಂಚಾಯಿತಿ ಅಧಿಕಾರಿಗಳನ್ನು ಭೇಟಿಯಾಗಿ ನೋಂದಣಿ ಮಾಡಿಸುವ ವ್ಯವಸ್ಥೆ ಮಾಡಬೇಕೆಂದು ಸೂಚಿಸಿದ್ದಾರೆ.
ಸಮುದಾಯ ಆರೋಗ್ಯ ಕೇಂದ್ರ, ಸಾರ್ವಜನಿಕ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಒಪಿಡಿ ಚೀಟಿಗಳ ಮೇಲೆ ಮತದಾನ ಪ್ರತಿಯೊಬ್ಬರ ಹಕ್ಕು, ಅದನ್ನು ಕಡ್ಡಾಯವಾಗಿ ಚಲಾಯಿಸಿ ಎಂಬ ಬಗ್ಗೆ ಒಂದು ರಬ್ಬರ್ ಮೊಹರು ಮಾಡಿಸಿ ಪ್ರತಿದಿನ ಹಾಕುವ ವ್ಯವಸ್ಥೆಯನ್ನು ಅತಿ ಜರೂರಾಗಿ ಮಾಡಬೇಕು. ಚುನಾವಣೆ ಮುಗಿಯುವವರೆಗೆ ಚುನಾವಣೆ ಸಮಿತಿ ನೀಡುವ ಸಿಡಿಗಳನ್ನು ಆಸ್ಪತ್ರೆಯಲ್ಲಿರುವ ಟಿವಿ ಗಳಲ್ಲಿ ಬಿತ್ತರಿಸುವ ವ್ಯವಸ್ಥೆ ಮಾಡಬೇಕೆಂದು ತಿಳಿಸಿದ್ದಾರೆ.
--
ಯುಗಾದಿ: ಪ್ರಾಣಿ ಬೇಟೆ ನಿಷೇಧ
ಬಳ್ಳಾರಿ: ಯುಗಾದಿ ಹಬ್ಬವನ್ನು ಯಾವುದೆ ವನ್ಯಜೀವಿ ಹತ್ಯೆ ಮಾಡದೇ ಶಾಂತಿಯುತವಾಗಿ ಆಚರಿಸುವ ಸಲುವಾಗಿ ಜಿಲ್ಲಾದ್ಯಂತ ವನ್ಯಜೀವಿ ಬೇಟೆಯನ್ನು ನಿಷೇಧಿಸಿ ಜಿಲ್ಲಾಧಿಕಾರಿ ಎ.ಎ. ಬಿಸ್ವಾಸ್ ಅವರು ಆದೇಶ ಹೊರಡಿಸಿದ್ದಾರೆ. ಜಿಲ್ಲೆಯಲ್ಲಿರುವ ಅರಣ್ಯ ಮತ್ತು ವನ್ಯಜೀವಿ ವಲಯಗಳಲ್ಲಿ ವನ್ಯಜೀವಿ ಬೇಟೆಯಾಡುವ ಸಂಭವವಿರುವುದರಿಂದ ಈ ನಿಷೇಧಾಜ್ಞೆ ಹೊರಡಿಸಲಾಗಿದ್ದು, ಮಾ. 28, 2014ರಿಂದ ಏ. 4, 2014ರ ವರೆಗೂ ಈ ಆದೇಶ ಜಾರಿಯಲ್ಲಿರುತ್ತದೆ. ಈ ಅವಧಿಯಲ್ಲಿ ಅರಣ್ಯ ಮತ್ತು ವನ್ಯಜೀವಿಗಳ ವಲಯದಲ್ಲಿ ಜನ ಸಂಚಾರ ಹಾಗೂ ಗುಂಪುಗೂಡಿ ತಿರುಗಾಡುವುದನ್ನು ಸಂಪೂರ್ಣವಾಗಿ ಪ್ರತಿಬಂಧಿಸಲಾಗಿದೆ. ಈ ಆದೇಶದ ಪ್ರಕಾರ ಶಸ್ತ್ರ, ಬಡಿಗೆ, ಬರ್ಚಿ, ಗದೆ, ಬಂದೂಕು, ಚೂರಿ, ಸ್ಫೋಟಕ ವಸ್ತು, ಶರೀರಕ್ಕೆ ಗಾಯ ಮಾಡಲು ಉಪಯೋಗಿಸಬಹುದಾದ ಯಾವುದೆ ವಸ್ತುಗಳನ್ನು ಒಯ್ಯುವಂತಿಲ್ಲ ಹಾಗೂ ಪ್ರಾಣಿಗಳ ಮೃತದೇಹ ಅಥವಾ ಅವುಗಳ ಆಕೃತಿಯನ್ನು ಪ್ರದರ್ಶನ ಮಾಡುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

