ಬಳ್ಳಾರಿ

ಕಾರ್ಮಿಕರ ಹೋರಾಟ ತ್ಯಾಗ ಸಂಕೇತ

Published On :

ಹೂವಿನಹಡಗಲಿ: ತಾಲೂಕಿನ ಹಿರೇಹಡಗಲಿಯಲ್ಲಿ ಗ್ರಾಮೀಣ ಕೂಲಿ ಕಾರ್ಮಿಕರ ಮತ್ತು ರೈತ ಸಂಘಟನೆಗಳು ವಿಶ್ವ ಕಾರ್ಮಿಕ ದಿನ ಆಚರಣೆ ಮಾಡಿದರು.
ತಾಲೂಕು ಎಸ್ಯುಸಿಐ ಕಾರ್ಯದರ್ಶಿ ರೆಹಮತ್ ಬೀರಬ್ಬಿ ಮಾತನಾಡಿ, ಸಾವಿರಾರು ಕಾರ್ಮಿಕರು ಮತ್ತು ರೈತರ ಹೋರಾಟವು ತ್ಯಾಗ, ಬಲಿದಾನಗಳ ಸಂಕೇತವಾಗಿದೆ. ಚಿಕಾಗೋದಲ್ಲಿ ನಡೆದ ಹೋರಾಟದ ಕಥೆಯನ್ನು ವಿವರಿಸುತ್ತಾ, ಕಾರ್ಮಿಕರು ತಮ್ಮ ಮನಸ್ಸಿನಲ್ಲಿನ ಸ್ವಾರ್ಥ, ಗುಲಾಮಗಿರಿ ಮನೋಭಾವನೆ ಕಿತ್ತು ಹಾಕಿ ಎಲ್ಲರೂ ಒಂದೇ ಎನ್ನುವ ಭಾವನೆಯಿಂದ ಒಗ್ಗಟ್ಟಾಗಿ ನಿರಂತರ ಹೋರಾಟ ಮಾಡಲು ಕರೆ ನೀಡಿದರು.
ಇಂದು ದೇಶದಲ್ಲಿ ಅನೇಕ ಸಮಸ್ಯೆಗಳ ಜತೆಗೆ ಭ್ರಷ್ಟಾಚಾರ, ಮೋಸ, ವಂಚನೆ, ಅನೀತಿ, ಬಂಡವಾಳ ಶಾಹಿ ಯೋಜನೆಗಳಿಗೆ ಮನ್ನಣೆ ದೊರೆತಿದ್ದು, ಅವುಗಳನ್ನು ಕಿತ್ತು ಹಾಕಿ, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಹೋರಾಟ ಅನಿವಾರ್ಯ ಎಂದರು. ಒಗ್ಗಟ್ಟಿನ ಹೋರಾಟದ ಮುಖಾಂತರವೇ ಹೆಣ್ಣು ಮಕ್ಕಳ ಶೋಷಣೆಗೆ ಪರಿಹಾರ, ಉದ್ಯೋಗ, ಜೀವನ, ಆಹಾರ, ಶಿಕ್ಷಣ ವಸತಿ ಭದ್ರತೆ, ಮೂಲಭೂತ ಹಕ್ಕುಗಳನ್ನು ಪಡೆಯಲು ಸಾಧ್ಯ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹಾಲಸ್ವಾಮೀಜಿ, ನಮ್ಮ ಜೀವನ ಸಂಘರ್ಷದಿಂದ ಕೂಡಿದೆ, ಈ ಸಂಘರ್ಷ ಒಗ್ಗಟ್ಟಾಗಿ ಮಾಡಿದರೆ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಒಗ್ಗಟ್ಟಿನ ಹೋರಾಟಕ್ಕೆ ನಿರಂತರ ಹೋರಾಟ ಮಾಡಿದರೆ ಜಯ ಖಂಡಿತ ಎಂದರು.
ಮಹಮ್ಮದ್ ಅಲಿ ಮಾತನಾಡಿ, ಕಟ್ಟಡ ಕಾರ್ಮಿಕರು ಲಭ್ಯವಿರುವ ಅನೇಕ ಸವಲತ್ತುಗಳ ಬಗ್ಗೆ ವಿವರಿಸಿದರು. ಕೆ.ಅನಸೂಯಾ ಅಧ್ಯಕ್ಷತೆ ವಹಿಸಿದ್ದರು. ಸುಭಾಷ್, ಷಬ್ಬೀರ್ ಬಾಷಾ ಬೇಲ್ದಾರ ನಿರೂಪಿಸಿದರು. ಎಂ.ಎಂ.ಪೂರ್ಣಿಮಾ ಪ್ರಾರ್ಥಿಸಿದರು. ಸುರೇಶ್ ವಂದಿಸಿದರು. ನಿಂಗಪ್ಪ ತೊಗರಿಕಟ್ಟಿ ನಿರ್ವಹಿಸಿದರು.
ಇದಕ್ಕೂ ಮುನ್ನ ನಡೆಸಲಾದ ಮೆರವಣಿಗೆಯಲ್ಲಿ ರೈತ, ಕಟ್ಟಡ ಕಾರ್ಮಿಕ, ಬಡಗಿ, ಕಮ್ಮಾರ, ಕುಂಬಾರ, ಕೊರವ, ಟೈಲರ್, ಚಾಲಕ, ಚಮ್ಮಾರ, ದನಗಾಹಿ, ಹಮಾಲಿ, ಬೀಡಿ ಕಟ್ಟುವವರು, ಸುಣ್ಣಗಾರ, ಬಣಗಾರ, ಪೇಂಟರ್, ಹಡಪದ ಹೀಗೆ ವಿವಿಧ ವೇಷಗಳಲ್ಲಿ ಕಾರ್ಮಿಕರು ಹಾಗೂ ಕೂಲಿ ಕಾರ್ಮಿಕರ ಮಕ್ಕಳು ಭಾಗವಹಿಸಿದ್ದರು.

ಕಾರ್ಮಿಕರಿಗೆ ಸಮಾನ ವೇತನ ನೀಡುತ್ತಿಲ್ಲ
ಬಳ್ಳಾರಿ: ಜಿಲ್ಲೆಯ ಹಲವು ನಗರಸಭೆ ಮತ್ತು ಮಹಾನಗರ ಪಾಲಿಕೆಗಳಲ್ಲಿ ಕೆಲಸ ಮಾಡುತ್ತಿರುವ ಗುತ್ತಿಗೆ ಪೌರ ಕಾರ್ಮಿಕರಿಗೆ ಸಮಾನ ವೇತನ ನೀಡದೆ, ತಾರತಮ್ಯ ಮಾಡಲಾಗಿದೆ ಎಂದು ರಾಜ್ಯ ಪೌರ ಕಾರ್ಮಿಕರ ಮಹಾಸಂಘದ ರಾಜ್ಯಾಧ್ಯಕ್ಷ ನಾರಾಯಣ ಆರೋಪಿಸಿದರು. ಸ್ಲಂ ಜನಾಂದೋಲನ ಕರ್ನಾಟಕ ಸಂಘಟನೆ ಸ್ಥಳೀಯ ಗಾಂಧಿಭವನದಲ್ಲಿ ಗುರುವಾರ ಏರ್ಪಡಿಸಿದ್ದ ಕಾರ್ಮಿಕ ದಿನಾಚರಣೆಯ ದಿನಗೂಲಿ, ಪೌರಕಾರ್ಮಿಕರ ರಾಜ್ಯಮಟ್ಟದ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ನಗರಸಭೆ, ಮಹಾನಗರ ಪಾಲಿಕೆ, ಪುರಸಭೆ, ಪಪಂಗಳಲ್ಲಿ 35 ಸಾವಿರ ಪೌರ ಕಾರ್ಮಿಕರು ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ. ರಾಜ್ಯದ ಯಾವ ಜಿಲ್ಲೆಗಳಲ್ಲೂ ಕಾರ್ಮಿಕರಿಗೆ ಸಮರ್ಪಕ, ಸಮಾನ ವೇತನ ನೀಡುತ್ತಿಲ್ಲ. ರು. 3000, ರು. 4000, ರು. 6000 ವೇತನ ನೀಡುತ್ತಿದ್ದು, ತಾರತಮ್ಯ ಮಾಡಲಾಗುತ್ತಿದೆ. ಜೀವನ ಭದ್ರತೆ, ಆರೋಗ್ಯ ವಿಮೆಯಂತಹ ಸೌಲಭ್ಯಗಳನ್ನು ನೀಡದೆ, ಕಾರ್ಮಿಕರ ಶೋಷಣೆ ಮಾಡಲಾಗುತ್ತಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.