ಬಳ್ಳಾರಿ

ಚಿಂತ್ರಪಳ್ಳಿ ಪುರಸಭೆ ಕನಸು ಸಿದ್ದು ಈಡೇರಿಸುವರೇ?

Published On :

ಕನ್ನಡಪ್ರಭ ವಾರ್ತೆ, ಹಗರಿಬೊಮ್ಮನಹಳ್ಳಿ, ಮೇ 5
ಹಗರಿಬೊಮ್ಮನಹಳ್ಳಿ ತಾಲೂಕು ಕೇಂದ್ರ ಸ್ಥಾನವನ್ನು ಒಳಗೊಂಡು ಕಾರ್ಯನಿರ್ವಹಿಸುತ್ತಿರುವ ಚಿಂತ್ರಪಳ್ಳಿ ಗ್ರಾಮ ಪಂಚಾಯ್ತಿಯ ಪುರಸಭೆಯ ಕನಸು ಸಿದ್ದು ಸರ್ಕಾರದಲ್ಲಾದರೂ ನನಸಾಗುವುದೇ? ಇಂತಹದೊಂದು ಪ್ರಶ್ನೆ ಈಗ ಪಟ್ಟಣದಲ್ಲಿ ನಾಗರಿಕರಲ್ಲಿ ಬೆಳೆದು ನಿಂತಿದೆ.
ಗ್ರಾಮ ಪಂಚಾಯ್ತಿಯನ್ನು ಪುರಸಭೆಗೆ ಏರಿಸಬೇಕು ಎಂಬ ಹಗರಿಬೊಮ್ಮನಹಳ್ಳಿ ಬೇಡಿಕೆ ಎರಡು ದಶಕದ್ದು. ಆದರೆ, ರಾಜ್ಯದಲ್ಲಿ ಇಲ್ಲಿಯವರೆಗೂ ಯಾವುದೇ ಸರ್ಕಾರಗಳು ಈ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಹೀಗಾಗಿ ತಾಲೂಕು ಹಾಗೂ ವಿಧಾನಸಭಾ ಕೇಂದ್ರ ಸ್ಥಾನವನ್ನು ಹೊಂದಿದ್ದರೂ ಕೂಡ ಗ್ರಾಮ ಪಂಚಾಯ್ತಿಯಿಂದ ಮೇಲೆರಿಲ್ಲ.
ಈ ಮಧ್ಯೆ ಇಪ್ಪತ್ತು ಸಾವಿರದಷ್ಟು ಜನಸಂಖ್ಯೆ ಹೊಂದಿರುವ ಗ್ರಾಮ ಪಂಚಾಯ್ತಿಗಳನ್ನು ಮೇಲ್ದರ್ಜೆಗೇರಿಸುವ ಹೇಳಿಕೆಯೊಂದು ಇತ್ತೀಚಿಗೆ ನಗರಾಭಿವೃದ್ಧಿ ಸಚಿವಾಲಯದಿಂದ ಹೊರಬಂದಿದೆ. ಈ ಹೇಳಿಕೆ ಪ್ರಕಟವಾದ ಮೇಲೆ ಚಿಂತ್ರಪಳ್ಳಿ ಗ್ರಾಪಂನ್ನು ಪುರಸಭೆ ಮೇಲ್ದರ್ಜೆಗೇರಿಸುವ ಕಾರ್ಯ ಚಟುವಟಿಕೆಗಳು ಪಟ್ಟಣದಲ್ಲಿ ಬಿರುಸಾಗಿವೆ.
ಪುರಸಭೆ ಅಗತ್ಯವಿದೆ
ಗ್ರಾಮ ಪಂಚಾಯ್ತಿ ಇತಿ-ಮಿತಿ ಒಳಗಡೆ ನಾವು ಜನರ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನಿಸುತ್ತಿದ್ದೇವೆ. ಮುಖ್ಯವಾಗಿ ಆರ್ಥಿಕ ಅನುದಾನ ನಮ್ಮನ್ನು ಕಾಡುತ್ತಿದೆ. ನಮ್ಮದು ದೊಡ್ಡ ಪಂಚಾಯ್ತಿಯಾಗಿದ್ದರೂ ರಾಜ್ಯದ ಇತರೆ ಪಂಚಾಯ್ತಿಗಳಿಗೆ ನೀಡುವಂತೆ ವಾರ್ಷಿಕವಾಗಿ ರು. 12-14 ಲಕ್ಷ ಅನುದಾನವನ್ನು ಸರ್ಕಾರ ನೀಡುತ್ತದೆ. ಆದರೆ, ಈ ಅನುದಾನ ಯಾತಕ್ಕೂ ಸಾಲದು. ಹೀಗಾಗಿ ಪುರಸಭೆ ರಚಿಸಿದರೆ ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ ಎನ್ನುತ್ತಾರೆ ಚಿಂತ್ರಪಳ್ಳಿ ಗ್ರಾಪಂ ಅಧ್ಯಕ್ಷ ಎಂ.ಆನಂದ್.
ಪ್ರಯತ್ನಗಳು
ವೀರಪ್ಪ ಮೊಯ್ಲಿ ಸಿಎಂ ಆಗಿದ್ದ ವೇಳೆ ಅಂದಿನ ಶಾಸಕ ಎನ್.ಟಿ. ಬೊಮ್ಮಣ್ಣ ಹಗರಿಬೊಮ್ಮನಹಳ್ಳಿ ಪುರಸಭೆಗೆ ಪ್ರಯತ್ನ ಮಾಡಿದ್ದರು. ನಂತರ 1994ರಲ್ಲಿ ಅಂದಿನ ಸಚಿವದ್ವಯರಾಗಿದ್ದ ಎಂ.ಪಿ. ಪ್ರಕಾಶ ಹಾಗೂ  ಎನ್.ಎಂ. ನಬೀ, ಆ ಮೇಲೆ 2001ರಲ್ಲಿ ಶಾಸಕರಾಗಿದ್ದ ಸಿರಾಜಶೇಖ್, 2004ರಲ್ಲಿ ಜಿ. ಕರುಣಾಕರರೆಡ್ಡಿ, 20010ರಲ್ಲಿ ಶಾಸಕರಾಗಿದ್ದ ಕೆ. ನೇಮಿರಾಜನಾಯ್ಕ, ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಜನಾರ್ದನರೆಡ್ಡಿ ಮೂಲಕ ಸರ್ಕಾರದ ಮೇಲೆ ಒತ್ತಡ ಹೇರುವ ಕೆಲಸ ಮಾಡಿದ್ದರು. ಕ್ಷೇತ್ರದ ಹಾಲಿ ಶಾಸಕ ಎಸ್. ಭೀಮಾನಾಯ್ಕ ಬೆಳಗಾವಿ ಅಧಿವೇಶನದಲ್ಲಿ ನಗರಾಭಿವೃದ್ಧಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸುವ ಮೂಲಕ ಹಗರಿಬೊಮ್ಮನಹಳ್ಳಿಗೆ ಪುರಸಭೆ ಸ್ಥಾನಮಾನ ಕಲ್ಪಿಸಲು ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸಿದ್ದಾರೆ.
ಗ್ರಾಪಂ ವ್ಯಾಪ್ತಿಗೆ ಹಳ್ಳಿಗಳನ್ನು ಹೊರತುಪಡಿಸಿದರೆ ಪಟ್ಟಣವೊಂದರ ಜನಸಂಖ್ಯೆಯೇ ಹತ್ತಿರ, ಹತ್ತಿರ 40 ಸಾವಿರದಷ್ಟಿದೆ. ಇನ್ನೂ ಉಳಿದ ಹಳ್ಳಿಗಳ ಜನಸಂಖ್ಯೆ ಹತ್ತು ಸಾವಿರದಷ್ಟಿದೆ. ಅಲ್ಲಿಗೆ ಚಿಂತ್ರಪಳ್ಳಿ ಗ್ರಾಮ ಪಂಚಾಯ್ತಿ ಜನಸಂಖ್ಯೆ 50 ಸಾವಿರ ದಾಟುತ್ತದೆ. ಒಂದು ಪುರಸಭೆ ರಚಿಸಲು ಇಷ್ಟು ಜನಸಂಖ್ಯೆ ಸಾಕು. ದೊಡ್ಡ ಪಂಚಾಯ್ತಿ ಚಿಂತ್ರಪಳ್ಳಿ ಗ್ರಾಪಂದಲ್ಲಿ 55 ಸದಸ್ಯರಿದ್ದು, ರಾಜ್ಯದಲ್ಲಿ ಅತಿಹೆಚ್ಚು ಸದಸ್ಯರನ್ನು ಹೊಂದಿರುವ ಅತಿದೊಡ್ಡ ಹತ್ತು ಗ್ರಾಮ ಪಂಚಾಯ್ತಿಗಳಲ್ಲಿ ಒಂದು. ವಾರ್ಷಿಕವಾಗಿ ಹತ್ತಿರ, ಹತ್ತಿರ ಒಂದೂವರೆ ಕೋಟಿ ರು. ತೆರಿಗೆ ಸಂಗ್ರಹವಾಗುತ್ತದೆ.


ಚಿಂತ್ರಪಳ್ಳಿ ಗ್ರಾಪಂ ವ್ಯಾಪ್ತಿ
ಹಗರಿಬೊಮ್ಮನಹಳ್ಳಿ ಪಟ್ಟಣದ ರಾಮನಗರ, ರೈತರ ಓಣಿ, ರಥಬೀದಿ, ಮಿಲ್ಟ್ರಿಬಯಲು, ಅರಳಿಹಳ್ಳಿ, ಕುರದಗಡ್ಡಿ, ಹೌಸಿಂಗ್ ಬೋರ್ಡ್ ಕಾಲೋನಿ, ಸೋನಿಯಾನಗರ, ಟೀಚರ್ಸ್ ಕಾಲೋನಿ, ಸೋಮೇಶ್ವರನಗರ, ಕೆವಿಓಆರ್ ಕಾಲೋನಿ, ಸಿನಿಮಾ ವೃತ್ತ, ಕೂಡ್ಲಿಗಿ ವೃತ್ತ ಏರಿಯಾ, ಕಾಗಿಪಾರ್ಕ್, ಬಸವೇಶ್ವರ ಬಜಾರ್, ಮಂಡಕ್ಕಿಭಟ್ಟಿ ಏರಿಯಾ, ಭೋವಿ ಕಾಲೋನಿ, ರಾಮರಹೀಂ ನಗರ ಹಾಗೂ ಪಟ್ಟಣದಿಂದ ನಾಲ್ಕು ಕಿ.ಮೀ.ಅಂತರದಲ್ಲಿರುವ ತಾಲೂಕಿನ ಚಿಂತ್ರಪಳ್ಳಿ, ವಲ್ಲಭಾಪುರ, ಬಂಡಿಹಳ್ಳಿ, ಮುತ್ಕೂರು, ಬಲ್ಲಾಹುಣ್ಸಿ, ಕೆಚ್ಚಿನಬಂಡಿ ಗ್ರಾಮಗಳು ಗ್ರಾಪಂ ವ್ಯಾಪ್ತಿಗೆ ಬರುತ್ತವೆ.    


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.