ಬಳ್ಳಾರಿ

ತನಿಖೆಗೆ ಕಾಲ ಕೂಡಿ ಬಂದಿಲ್ಲವೆ?

Published On :

- ಚಂದ್ರು ಕೊಂಚಿಗೇರಿ
ಹೂವಿನಹಡಗಲಿ: ದಕ್ಷ, ಪ್ರಾಮಾಣಿಕ, ಪಾರದರ್ಶಕ ಆಡಳಿತಕ್ಕಾಗಿ ಮಾಜಿ ಉಫ ಮುಖ್ಯಮಂತ್ರಿ ಎಂ.ಪಿ. ಪ್ರಕಾಶ್ ಕನಸುಗಳನ್ನು ಸಾಕಾರಗೊಳಿಸಲು ಬಂದಿದ್ದೇನೆ. ಎಲ್ಲ ಇಲಾಖೆ ಅಧಿಕಾರಿಗಳಿಗೆ ಸಹಕಾರ ನೀಡುತ್ತೇವೆ. ಯಾವುದೇ ಅಕ್ರಮಗಳಿಗೆ ಅವಕಾಶ ಬೇಡ.
ಹೀಗೆಂದು ಅಧಿಕಾರ ಸಿಕ್ಕ ಆರಂಭದಲ್ಲಿ ಅಬ್ಬರಿಸುತ್ತಾ, ಅಧಿಕಾರಿ ವಲಯದಲ್ಲಿ ಎಚ್ಚರಿಕೆ ನೀಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ, ಅವರೇ ಆರೋಪ ಮಾಡಿರುವ ಹಾಗೆ ವಿವಿಧ ಇಲಾಖೆಗಳಲ್ಲಿ ನಡೆದಿದೆ ಎನ್ನಲಾಗುವ ಅವ್ಯವಹಾರಗಳನ್ನು ತನಿಖೆಗೆ ಇನ್ನು ಕಾಲ ಕೂಡಿ ಬಂದಿಲ್ಲವೇ?
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ಥಿತ್ವಕ್ಕೆ ಬಂದು ವರ್ಷವಾಯ್ತು, ವಿವಿಧ ಇಲಾಖೆಗಳಲ್ಲಿ ನಡೆದಿರುವ ಭ್ರಷ್ಟಾಚಾರವನ್ನು ಬಯಲು ಮಾಡಲು ನಿಮಗೇಕೆ ಭಯ. ಆರಂಭದಲ್ಲಿ ಜನರಿಗೆ ಕೊಟ್ಟ ಭರವಸೆಯಂತೆ ತನಿಖೆ ಮಾಡಿ ಅವ್ಯವಹಾರದಲ್ಲಿ ಭಾಗಿಯಾಗಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಜನರು ಒತ್ತಾಯಿಸುತ್ತಿದ್ದಾರೆ.
ವಿಪಕ್ಷ ಮತ್ತು ಆಡಳಿತದಲ್ಲಿದಾಗ ಕಾಂಗ್ರೆಸ್ ಘಟಕದಿಂದ ವಿವಿಧ ಇಲಾಖೆಗಳಲ್ಲಿನ ಅವ್ಯವಹಾರಗಳ ವಿರುದ್ಧ ಪ್ರತಿಭಟಿಸಿ ಜನರಲ್ಲಿ ಹೊಸ ಭರವಸೆಯೊಂದಿಗೆ ಸಚಿವರಾಗಿರುವ ಪಿ.ಟಿ. ಪರಮೇಶ್ವರ ನಾಯ್ಕ ಅಧಿಕಾರ ಬಂದಾಗ ಇಲಾಖೆಗಳ ತನಿಖೆ ಕುರಿತು ನೀಡಿರುವ ಭರವಸೆ ಮರೆತು ಬಿಟ್ಟಿದ್ದಾರೆ.
ತಪ್ಪಿತಸ್ಥರ ವಿರುದ್ಧ ಕ್ರಮವೇಕಿಲ್ಲ?
ಕೆರೆಗಳ ಅಭಿವೃದ್ಧಿ ಅನುದಾನದಲ್ಲಿ ಕೆರೆ ಹೂಳು ಎತ್ತುವುದು, ತೂಬು ನಿರ್ಮಾಣ, ಕಾಲುವೆ ಕಾಮಗಾರಿ ಸಮರ್ಪಕವಾಗಿಲ್ಲ. ಆಡಳಿತ ಪರ ಅಧಿಕಾರಿಗಳು ಕೆಲಸ ಮಾಡಿ ಬೋಗಸ್ ಬಿಲ್ ಮಾಡಿದ್ದಾರೆಂದು ಇದೇ ಸಚಿವರೇ ಈ ಹಿಂದೆ ಬಹಿರಂಗ ಪ್ರತಿಭಟನೆಯಲ್ಲಿ ತನಿಖೆ ಮಾಡಬೇಕೆಂದು ಒತ್ತಾಯಿಸಿದ್ದರು. ಆದರೆ ಪಿ.ಟಿ.ಪರಮೇಶ್ವರ ನಾಯ್ಕ ಸಚಿವರಾಗಿ ವರ್ಷವಾಯ್ತು, ಅಧಿಕಾರಿಗಳ ಸಭೆಯಲ್ಲಿ ತನಿಖೆ ಮಾಡಿಸಿ ತಪ್ಪಿಸ್ಥರ ವಿರುದ್ಧ ಶಿಸ್ತಿನ ಕ್ರಮ ಜರುಗಿಸುತ್ತೇವೆ ಎಂಬ ಭರವಸೆ ಈವರೆಗೂ ಈಡೇರಿಲ್ಲ. ತಾಲೂಕಿನ ಹಿರೇಹಡಗಲಿ ಕೆರೆ ಅಭಿವೃದ್ಧಿಗೆ ಬಂದ ರು. 68 ಲಕ್ಷ ಕಾಮಗಾರಿ ಕಳಪೆಯಾಗಿದೆ ಎಂದು ತಾಪಂ ಸಾಮಾನ್ಯ ಸಭೆಯಲ್ಲಿ ಸದಸ್ಯ ಶಾಂತಯ್ಯ ಸಾಕಷ್ಟು ಬಾರಿ ಪ್ರಸ್ತಾಪ ಮಾಡಿ ತನಿಖೆಗೆ ಒತ್ತಾಯಿಸಿದ್ದರು. ಆಗ ತಾಪಂ ಇಓ ತಂಡ ರಚನೆ ಮಾಡಿ ಕ್ರಮ ಕೈಗೊಳ್ಳುವ ಭರವಸೆ ಈಡೇರಿಲ್ಲ.
ಸ್ವತಃ ಸಚಿವರೇ ಕೆರೆ ಕಾಮಗಾರಿ ಕಳಪೆಯಾಗಿದೆ, ಆದಷ್ಟು ಶೀಘ್ರದಲ್ಲೇ ತನಿಖೆ ಮಾಡಿಸುತ್ತೇವೆ. ಸಂಬಂಧಪಟ್ಟ ಗುತ್ತಿಗೆದಾರರು ಮತ್ತು ಅಧಿಕಾರಿಗಳ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳುತ್ತೇನೆಂದು ನೀಡಿದ್ದ ಭರವಸೆ ಈಡೇರಿಲ್ಲ.
ಜಾರಿಯಾಗದ ಆದೇಶಗಳು: ಇಲ್ಲಿನ ತಾಪಂ ಮಲ್ಲಿಗೆ ಸಭಾಂಗಣದಲ್ಲಿ ನಡೆದ ಮೊದಲ ಅಧಿಕಾರಿಗಳ ಸಭೆಯಲ್ಲಿ ಸಚಿವರು ಆದೇಶಗಳು ಇಂದಿಗೂ ಜಾರಿಯಾಗಿಲ್ಲ. ರಾಜ್ಯ ಹೆದ್ದಾರಿ, ಜಿಲ್ಲಾ ಮುಖ್ಯ ರಸ್ತೆ ಸೇರಿದಂತೆ ಗ್ರಾಮೀಣ ರಸ್ತೆಗಳ ತಗ್ಗು ಗುಂಡಿಗಳನ್ನು ಮುಚ್ಚಿ ಎಂದು ಅಧಿಕಾರಿಗಳಿಗೆ ಸೂಚನೆ ಇನ್ನೂ ಪಾಲನೆಯಾಗಿಲ್ಲ. ಹದಗೆಟ್ಟ ರಸ್ತೆಯಲ್ಲಿ ಸಂಚರಿಸುವ ಜನತೆ ನಿತ್ಯ ಹಿಡಿ ಶಾಪ ಹಾಕುತ್ತಿದ್ದಾರೆ.
ಅಧಿಕಾರ ಬಂದು ವರ್ಷ ಕಳೆದರೂ ಈವರೆಗೂ ತಾಲೂಕಿನಲ್ಲಿ ಸಮಸ್ಯೆಗಳ ಬಗ್ಗೆ ಸಚಿವರು ಅಧಿಕಾರಿಗಳ ಸಭೆ ಕರೆದಿಲ್ಲ. ಇನ್ನು ಹಳ್ಳಿ ಗಾಡಿನ ರಸ್ತೆಯ ತಗ್ಗು ಗುಂಡಿಗಳನ್ನು ಮುಚ್ಚದ ಕಾರಣ  ಕೆಲವು ಗ್ರಾಮಗಳಿಗೆ ಬಸ್ ಸೌಕರ್ಯವಿಲ್ಲ. ಇದರಿಂದ ಪ್ರಯಾಣಿಕರು ಪರದಾಡುವ ಪರಿಸ್ಥಿತಿ ಬಂದೋದಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.